Chess Olympiad | ಗುಕೇಶ್, ಪ್ರಗ್ನಾನಂದ, ವೈಶಾಲಿ, ಶ್ರೀನಾಥ್ ಗೆ ಅದ್ಧೂರಿ ಸ್ವಾಗತ

ಹಂಗರಿಯಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ 2024ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ತಮ್ಮ ಚೊಚ್ಚಲ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದವು.;

Update: 2024-09-24 08:11 GMT

ಒಲಿಂಪಿಯಾಡ್‌ನಲ್ಲಿ ಇತಿಹಾಸ ನಿರ್ಮಿಸಿದ ಚೆಸ್ ತಂಡಗಳ ಸದಸ್ಯರನ್ನು ಚೆನ್ನೈನಲ್ಲಿ ಮಂಗಳವಾರ (ಸೆಪ್ಟೆಂಬರ್ 24) ಅಭಿಮಾನಿಗಳು, ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರು ಸಂಭ್ರಮದಿಂದ ಸ್ವಾಗತಿಸಿದರು.

ಡಿ. ಗುಕೇಶ್, ಆರ್. ಪ್ರಗ್ನಾನಂದ, ಆರ್. ವೈಶಾಲಿ ಮತ್ತು ಪುರುಷರ ತಂಡದ ನಾಯಕ ಶ್ರೀನಾಥ್ ನಾರಾಯಣನ್ ಅವರು ಮಂಗಳವಾರ ಮುಂಜಾನೆ ಚೆನ್ನೈಗೆ ಆಗಮಿಸಿದರು.

ಹಂಗರಿಯಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ದೇಶದ ಪುರುಷರ ಮತ್ತು ಮಹಿಳಾ ತಂಡಗಳು ತಮ್ಮ ಚೊಚ್ಚಲ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿವೆ.

ಭಾರತ - ಹೊಸ ಚೆಸ್ ಶಕ್ತಿಕೇಂದ್ರ: ಈ ಅಸಾಧಾರಣ ಗೆಲುವಿನಿಂದ ಭಾರತವು ಹೊಸ ಚೆಸ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಪಂದ್ಯಾ ವಳಿಯಲ್ಲಿ ಪುರುಷರ ತಂಡ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುಕೇಶ್, ವೈಯಕ್ತಿಕ ಮತ್ತು ತಂಡದ ಚಿನ್ನದ ಪದಕಗಳನ್ನು ಪ್ರದರ್ಶಿಸಿದರು.

ಏಪ್ರಿಲ್‌ನಲ್ಲಿ ನಡೆದ ಕ್ಯಾಂಡಿಡೇಟ್ಸ್ ಟೂರ್ನಮೆಂಟಿನಲ್ಲಿ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್‌ ಶಿಪ್‌ ಗೆ ಅತ್ಯಂತ ಕಿರಿಯ ಸವಾಲುಗಾರನಾದ ಗುಕೇಶ್( 18)‌, ನವೆಂಬರ್‌ನಲ್ಲಿ ಚೀನಾದ ಡಿಂಗ್ ಲಿರೆನ್ ವಿರುದ್ಧದ ವಿಶ್ವ ಚಾಂಪಿಯನ್‌ಶಿಪ್‌ ಗೆ ಸಜ್ಜಾಗುತ್ತಿದ್ದಾರೆ. 

ʻಇದು ತುಂಬಾ ವಿಶೇಷ. ಏಕೆಂದರೆ, ಎರಡೂ ತಂಡಗಳು ಚಿನ್ನ ಗೆದ್ದಿವೆ,ʼ ಎಂದು ಗುಕೇಶ್ ಹೇಳಿದರು.

ಹೂಮಾಲೆ, ಗುಚ್ಛ, ಕಳಸದೊಂದಿಗೆ ಸ್ವಾಗತ: ಅಭಿಮಾನಿಗಳು ಹೂಮಾಲೆ, ಹೂಗುಚ್ಛಗಳು ಮತ್ತು ಶಾಲು ಹೊದಿಸಿ ಸ್ವಾಗತಿಸಿದರು. 

ʻಮೊದಲ ಬಾರಿಗೆ ಚಿನ್ನ ಗೆದ್ದಿರುವುದಕ್ಕೆ ತುಂಬಾ ಸಂತೋಷವಾಗಿದೆ. ಇಲ್ಲಿಯವರೆಗೆ ಕಂಚು ಮಾತ್ರ ಗೆದ್ದಿದ್ದೆವು. ಎರಡೂ ವಿಭಾಗಗಳಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಹೆಮ್ಮೆಯ ಕ್ಷಣ,ʼ ಎಂದು ಪ್ರಗ್ನಾನಂದ ಹೇಳಿದರು. ʻನಾವು ಉತ್ತಮವಾಗಿ ಆಡಿ, ಅತ್ಯುತ್ತಮ ತಂಡ ಎಂದು ತೋರಿಸಿಕೊಟ್ಟಿದ್ದೇವೆ. ಒಲಿಂಪಿಯಾಡ್ ನಾವು ದೇಶಕ್ಕಾಗಿ ತಂಡವಾಗಿ ಆಡುವ ಏಕೈಕ ಪಂದ್ಯಾವಳಿ,ʼ ಎಂದು ಹೇಳಿದರು. 

ಮಹಿಳಾ ತಂಡದ ಗೆಲುವಿಗೆ ಅಡಿಪಾಯ ಹಾಕಿದ ವೈಶಾಲಿ, ʻಚೆನ್ನೈನಲ್ಲಿ ಕಳೆದ ಆವೃತ್ತಿಯಲ್ಲಿ ಚಿನ್ನವನ್ನು ಕಳೆದುಕೊಂಡಿರುವುದು ನೋವಿನ ಸಂಗತಿ,ʼ ಎಂದು ಹೇಳಿದರು. 

ʻಇದೊಂದು ಕನಸಿನ ಕ್ಷಣ. ಕಳೆದ ಬಾರಿ ಚೆನ್ನೈ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆಲ್ಲುವ ಸನಿಹದಲ್ಲಿದ್ದೆವು. ಕೊನೆಯ ಸುತ್ತಿನಲ್ಲಿ ಕಳೆದುಕೊಂಡೆವು. ಈ ಬಾರಿ ಸತತ ಆರು ಪಂದ್ಯಗಳನ್ನು ಗೆದ್ದೆವು. ಪೋಲೆಂಡ್ ವಿರುದ್ಧ ಸೋತು, ಅಮೆರಿಕ ವಿರುದ್ಧ ಡ್ರಾ ಮಾಡಿಕೊಂಡೆವು. ಕೊನೆಯ ಎರಡು ಪಂದ್ಯಗಳಲ್ಲಿ ಚಿನ್ನವನ್ನು ಖಚಿತಪಡಿಸಿಕೊಳ್ಳಬೇಕಿತ್ತು.ಎರಡೂ ತಂಡಗಳು ಚಿನ್ನ ಗೆದ್ದಿರುವುದು ಖುಷಿ ತಂದಿದೆ. ಇದೊಂದು ಐತಿಹಾಸಿಕ ಕ್ಷಣ,ʼ ಎಂದು ವೈಶಾಲಿ ಹೇಳಿದರು.

ವರ್ಷಗಳ ಪರಿಶ್ರಮದ ಫಲಿತಾಂಶ: ಶ್ರೀನಾಥ್ ನಾರಾಯಣನ್- ಪುರುಷರ ತಂಡದ ನಾಯಕ ನಾರಾಯಣನ್‌(30)ಗೆ ಈ ಚಿನ್ನ ಹಲವು ವರ್ಷಗಳ ಕಠಿಣ ಪರಿಶ್ರಮದ ಫಲವಾಗಿದೆ.

ʻಒಲಿಂಪಿಯಾಡ್ ಗೆದ್ದ ತಂಡದ ನಾಯಕ ನಾನು ಎನ್ನುವುದು ಸಂತೋಷ ತಂದಿದೆ. ಇದು ವರ್ಷಗಳ ಪ್ರಯತ್ನದ ಫಲಿತಾಂಶ. ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೆವು. ಹಲವು ಯಶಸ್ವಿ ಫಲಿತಾಂಶಗಳನ್ನು ಹೊಂದಿದ್ದು, ಚಿನ್ನದ ಪದಕದ ಬಳಿ ಬಂದಿದ್ದೆವು. ಗುಕೇಶ್, ಅರ್ಜುನ್ ಎರಿಗೇಸಿ, ವಿದಿತ್ ಗುಜರಾತಿ ಮತ್ತು ಪ್ರಗ್ನಾನಂದ ಸೇರಿದಂತೆ ಹೊಸ ತಲೆಮಾರಿನ ಆಟಗಾರರು ವಿಶ್ವ ಮಟ್ಟದ ಆಟಗಾರರು,ʼ ಎಂದು ಗ್ರ್ಯಾಂಡ್‌ಮಾಸ್ಟರ್ ಹೇಳಿದರು.

ʻನಾವು 2016 ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದೆವು. ಈ ಯುವ ಆಟಗಾರರ ವಿಶ್ವವನ್ನು ಸೋಲಿಸಬಲ್ಲರು. ಅದನ್ನು ಇಲ್ಲಿ ಮಾತ್ರವಲ್ಲದೆ ಇತರ ಪಂದ್ಯಾವಳಿಗಳಲ್ಲೂ ತೋರಿಸಿದ್ದಾರೆ,ʼ ಎಂದು ಹೇಳಿದರು.

ವಿಶ್ವ ಚಾಂಪಿಯನ್ ಶಿಪ್:‌ ʻವಿಶ್ವ ಚಾಂಪಿಯನ್ ಮುಂದಿನ ಗುರಿ. ವರ್ಷದ ಕೊನೆಯಲ್ಲಿ ಗುಕೇಶ್‌ ಅದನ್ನು ಸಾಧಿಸಬೇಕೆಂದು ಎಲ್ಲರೂ ಹುರಿದುಂಬಿಸುತ್ತಿದ್ದಾರೆ. ಒಲಿಂಪಿಯಾಡ್ ಚಿನ್ನದ ಬಳಿಕ ಭಾರತೀಯರೊಬ್ಬರು ವಿಶ್ವ ಚಾಂಪಿಯನ್ ಆಗಬೇಕೆಂಬುದು ನಮ್ಮೆಲ್ಲರ ಬಯಕೆ,ʼ ಎಂದು ಹೇಳಿದರು.

Tags:    

Similar News