ಟೇಬಲ್ ಟೆನಿಸ್ ತೊರೆದ ಅರ್ಚನಾ ಕಾಮತ್
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವಲ್ಲಿ ವೈಫಲ್ಯ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಧ್ಯತೆ ಇಲ್ಲದ ಕಾರಣ ಅರ್ಚನಾ ಅವರು ಆಟವನ್ನು ತೊರೆಯುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.;
ಪ್ಯಾರಿಸ್ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಗೆಲುವು ಸಾಧಿಸಿದ್ದ ಅರ್ಚನಾ ಕಾಮತ್, ವೃತ್ತಿಪರ ಟೇಬಲ್ ಟೆನಿಸ್ ತ್ಯಜಿಸಲು ನಿರ್ಧರಿಸಿದ್ದಾರೆ.
ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್ ತಲುಪಿತ್ತು. ಆದರೆ, ಜರ್ಮನಿ ವಿರುದ್ಧ 1-3 ಅಂತರದಿಂದ ಸೋತಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋಲು ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಧ್ಯತೆ ಇಲ್ಲದೆ ಇರುವುದರಿಂದ, ಆಟವನ್ನು ತ್ಯಜಿಸಿ ವಿದೇಶದಲ್ಲಿ ಅಧ್ಯಯನ ಮುಂದುವರಿಸಲು ನಿರ್ಧರಿಸಿದ್ದಾರೆ.
ತರಬೇತುದಾರನೊಂದಿಗೆ ಮಾತುಕತೆ: ಪ್ಯಾರಿಸ್‌ನಿಂದ ಹಿಂದಿರುಗಿದ ಬಳಿಕ ಅರ್ಚನಾ, ತರಬೇತುದಾರ ಅನ್ಶುಲ್ ಗಾರ್ಗ್ ಅವರೊಂದಿಗೆ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆಸಿದ್ದರು.
ʻಅರ್ಚನಾ ವಿಶ್ವದ ಅಗ್ರ 100 ರ ಪಟ್ಟಿಯಲ್ಲಿ ಇಲ್ಲ.ಆದರೆ, ಕಳೆದ ಎರಡು ತಿಂಗಳುಗಳಲ್ಲಿ ತುಂಬಾ ಸುಧಾರಿಸಿದ್ದಾರೆ. ಆಕೆ ಆಟವನ್ನು ತೊರೆಯಲು ನಿರ್ಧರಿಸಿದ್ದಳು ಎಂದುಕೊಂಡಿದ್ದೇನೆ. ಆಕೆ ಒಮ್ಮೆ ಮನಸ್ಸು ಮಾಡಿದ ನಂತರ ಅದನ್ನು ಬದಲಿಸುವುದಿಲ್ಲ,ʼ ಎಂದು ಗಾರ್ಗ್ ತಿಳಿಸಿದರು.
ಅರ್ಚನಾ ಅವರಿಗೆ ಟಾಪ್ಸ್, ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಮತ್ತು ಇನ್ನಿತರ ಪ್ರಾಯೋಜಕರ ಬೆಂಬಲವಿದೆ. ಆದರೆ, ಇಲ್ಲಿಯವರೆಗೆ ಆಕೆಯನ್ನು ಪ್ರೇರೇಪಿಸಿದ್ದ ದೇಶಕ್ಕಾಗಿ ಒಲಿಂಪಿಕ್ ಪದಕವನ್ನು ಗೆಲ್ಲುವ ಹಂಬಲ. ಭವಿಷ್ಯದಲ್ಲಿ ಅದನ್ನು ಸಾಧಿಸುವ ಅವಕಾಶ ಮಸುಕಾಗಿರುವುದರಿಂದ, ಕ್ರೀಡೆಯನ್ನು ತೊರೆದು ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಸಹೋದರನ ಹಾದಿ ಹಿಡಿಯಲು ನಿರ್ಧಾರ: ʻನನ್ನ ಸಹೋದರ ನಾಸಾದಲ್ಲಿ ಕೆಲಸ ಮಾಡುತ್ತಾರೆ. ಅವನು ನನ್ನ ಆದರ್ಶ. ನಾನು ಅಧ್ಯಯನಗಳನ್ನು ಪೂರ್ಣಗೊಳಿಸಲು ಬಯಸುತ್ತೇನೆ,ʼ ಎಂದು ಅರ್ಚನಾ ಹೇಳಿದ್ದಾರೆ.
ʻಅರ್ಚನಾ ಅರ್ಥಶಾಸ್ತ್ರದಲ್ಲಿ ಪದವಿ ಬಳಿಕ ಅಂತಾರಾಷ್ಟ್ರೀಯ ಸಂಬಂಧಗಳು, ಕಾರ್ಯತಂತ್ರಗಳು ಮತ್ತು ಭದ್ರತೆಯಲ್ಲಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅಗತ್ಯವಿರುವುದನ್ನು ಪೂರೈಸಿದ್ದಾರೆ. 15 ವರ್ಷ ಆಟಕ್ಕೆ ಮುಡಿಪಾಗಿಟ್ಟು, ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ, ಕ್ರೀಡೆ ಮತ್ತು ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ, ನಂತರ ಈ ಕಠಿಣ ಹೆಜ್ಜೆ ಇಡುತ್ತಿದ್ದಾಳೆ,ʼ ಎಂದು ಅರ್ಚನಾ ಅವರ ತಂದೆ ಹೇಳಿದರು.
ಆಟದಿಂದ ಜೀವನ ನಿರ್ವಹಣೆ ಕಷ್ಟ: ಟೇಬಲ್ ಟೆನಿಸ್ ಫೆಡರೇಶನ್ ಕಾರ್ಯದರ್ಶಿ ಹಾಗೂ ಎಂಟು ಬಾರಿ ರಾಷ್ಟ್ರೀಯ ಚಾಂಪಿಯನ್ ಆದ ಕಮಲೇಶ್ ಮೆಹ್ತಾ, ʻಈಗ ಟೇಬಲ್ ಟೆನಿಸ್ ಗೆ ಸಾಕಷ್ಟು ಕಾರ್ಪೊರೇಟ್ ಬೆಂಬಲ ಸಿಗುತ್ತಿದೆ ಮತ್ತು ಆಟಗಾರರಿಗೆ ವೃತ್ತಿಪರ ಕ್ರೀಡಾ ಏಜೆನ್ಸಿಗಳು ಬೆಂಬಲ ನೀಡುತ್ತಿವೆ,ʼ ಎಂದು ಹೇಳುತ್ತಾರೆ.
ʻಆಟಗಾರರಿಗೆ ತರಬೇತಿ ಮತ್ತು ಸಲಕರಣೆಗಳಿಗೆ ಬೆಂಬಲ ಸಿಗುತ್ತಿದೆಯಾದರೂ, ಕ್ರೀಡೆಯಿಂದ ಜೀವನ ನಿರ್ವಹಣೆ ಕಷ್ಟ. ಇದರಿಂದ ಅರ್ಚನಾ ಅವರ ನಿರ್ಧಾರವು ಅರ್ಥಪೂರ್ಣ,ʼ ಎಂದು ಗಾರ್ಗ್ ಹೇಳುತ್ತಾರೆ.