ರಾಜ್ಯಸಭಾ ಚುನಾವಣೆ: ಮತದಾನಕ್ಕೆ ಮುನ್ನಾ ದಿನ ಸಿಎಂ- ಡಿಸಿಎಂ ಭೇಟಿ ಮಾಡಿ ಸಂಚಲನ ಮೂಡಿಸಿದ ʼಗಾಲಿʼ
ಶಾಸಕ ಗಾಲಿ ಜನಾರ್ದನ ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.;
ರಾಜ್ಯಸಭಾ ಚುನಾವಣೆಗೆ ಇನ್ನು ಒಂದೇ ದಿನ ಬಾಕಿ. ಚುನಾವಣಾ ಮುನ್ನಾ ದಿನ ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿವೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್ ಪಿಪಿ)ದ ನಾಯಕ, ಶಾಸಕ ಗಾಲಿ ಜನಾರ್ದನ ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಕಣದಲ್ಲಿರುವ ತನ್ನ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌ಗೆ ಒಟ್ಟು 135ಮತಗಳು ಬೇಕಿದೆ. ಅದರ ಒಟ್ಟು ಸದಸ್ಯಬಲ ಕೂಡ 135ಇತ್ತು. ಆದರೆ, ಎರಡು ದಿನಗಳ ಹಿಂದೆ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದಾಗಿ ಪಕ್ಷ ಇಕ್ಕಟ್ಟಿಗೆ ಸಿಲುಕಿದೆ. ಹಾಗಾಗಿಯೇ ಕಾಂಗ್ರೆಸ್ ನಾಯಕರು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ, ಗೌರಿ ಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ, ಲತಾ ಮಲ್ಲಿಕಾರ್ಜುನ್ ಮತ್ತು ಕೆಆರ್‌ಪಿಪಿ ಶಾಸಕ ಜನಾರ್ದನ ರೆಡ್ಡಿಯವರ ಮತಗಳನ್ನು ಖಾತರಿಮಾಡಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದಾರೆ.
ಒಂದು ಕಡೆ ತಮ್ಮ ಪಕ್ಷದ ಶಾಸಕರು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ತನ್ನ ಹೆಚ್ಚುವರಿ ಅಭ್ಯರ್ಥಿಗೆ ಅಗತ್ಯವಿರುವ ಐದು ಮತಗಳಿಗಾಗಿ ಬೀಸುತ್ತಿರುವ ಬಲೆಗೆ ಸಿಲುಕದಂತೆ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು, ಮತ್ತೊಂದು ಕಡೆ ತನಗೆ ಕೊರತೆ ಬೀಳುವ ಮತಗಳನ್ನು ತುಂಬಿಕೊಳ್ಳಲು ಪಕ್ಷೇತರ ಶಾಸಕರು ಜೆಡಿಎಸ್-ಬಿಜೆಪಿ ಕಡೆ ವಾಲದಂತೆ ನೋಡಿಕೊಳ್ಳುವುದು. ಈ ಎರಡು ಸವಾಲುಗಳು ಕಾಂಗ್ರೆಸ್ ಮುಂದಿದೆ.
ಜೊತೆಗೆ ಬಿಜೆಪಿ, ಜೆಡಿಎಸ್ ಕಡೆಯಿಂದ ಸಾಧ್ಯವಾದಷ್ಟು ಶಾಸಕರ ಮತಗಳನ್ನು ಸೆಳೆಯುವ ಮೂಲಕ ತನ್ನ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚು ಮತಗಳಿಂದ ಗೆಲ್ಲಿಸುವುದು ಹಾಗೂ ಅದರೊಂದಿಗೆ ಎದುರಾಳಿ ಮೈತ್ರಿ ಪಕ್ಷಗಳ ನಡುವೆ ಒಡಕು ಮೂಡುವಂತೆ ಮಾಡುವ ತಂತ್ರಗಾರಿಕೆಯನ್ನು ಕೂಡ ಕಾಂಗ್ರೆಸ್ ನಾಯಕರು ಆರಂಭಿಸಿದ್ದಾರೆ.
ಹೀಗೆ ತಂತ್ರ- ಪ್ರತಿತಂತ್ರಗಳು ಬಿರುಸುಗೊಂಡಿರುವ ಹೊತ್ತಿನಲ್ಲಿ ಕೆ ಆರ್ ಪಿಪಿ ನಾಯಕ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ದಿಢೀರನೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಅವರ ಮತ ಕಾಂಗ್ರೆಸ್ ಅಭ್ಯರ್ಥಿಗೆ ಬೀಳುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ಜೊತೆಗೆ ಈಗಾಗಲೇ ದರ್ಶನ್ ಪುಟ್ಟಣ್ಣಯ್ಯ ಮತ್ತು ಪುಟ್ಟಸ್ವಾಮಿ ಗೌಡ ಈಗಾಗಲೇ ಕಾಂಗ್ರೆಸ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಇನ್ನುಳಿದ ಲತಾ ಮಲ್ಲಿಕಾರ್ಜುನ್ ಕೂಡ ತಮಗೇ ಮತ ಹಾಕಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್‌ಗೆ ಇದೆ.
ಈ ನಡುವೆ, ಕಾಂಗ್ರೆಸ್ ನಿರೀಕ್ಷೆಯಂತೆ ತನ್ನೆಲ್ಲಾ ಶಾಸಕರ ತಂಡವನ್ನು ಬೆಂಗಳೂರಿನ ಹೋಟೆಲ್ ಒಂದಕ್ಕೆ ಕರೆದೊಯ್ದಿದೆ. ಈಗಾಗಲೇ ಶಾಸಕರಿಗೆ ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕುವಂತೆ ವಿಪ್ ಜಾರಿಮಾಡಲಾಗಿದೆ ಎಂದು ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ, ಕಾಂಗ್ರೆಸ್ ತನ್ನ ಶಾಸಕರನ್ನು ಹೋಟೆಲ್‌ನಲ್ಲಿ ಉಳಿಸುತ್ತಿರುವುದಕ್ಕೆ ವ್ಯಂಗ್ಯವಾಡಿರುವ ಬಿಜೆಪಿ, ಅಡ್ಡ ಮತದಾನದ ಭಯದಿಂದ ಆಡಳಿತ ಪಕ್ಷ ತನ್ನ ಶಾಸಕರನ್ನು ಕೂಡಿಟ್ಟಿದೆ ಎಂದು ಹೇಳಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ನಮಗೆ ಅಡ್ಡಮತದಾನದ ಭೀತಿ ಇಲ್ಲ. ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಎಲ್ಲರನ್ನೂ ಹೋಟೆಲ್‌ನಲ್ಲಿ ಸೇರಿಸಿದ್ದೇವೆ. ಅಡ್ಡಮತದಾನದ ಭಯ ಇರುವವರು ಮಾತ್ರ ಹೀಗೆ ಟೀಕೆ ಮಾಡುತ್ತಾರೆ. ಮತದಾನದ ವೇಳೆ ಪಕ್ಷದ ಏಜೆಂಟರಿಗೆ ಮತ ಹಾಕಿರುವುದನ್ನು ತೋರಿಸಬೇಕಾದ್ದರಿಂದ ಯಾರೂ ಅಡ್ಡಮತದಾನ ಮಾಡುವುದಿಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಅವರು ತಮ್ಮ ಶಾಸಕ ಸ್ಥಾನವನ್ನೇ ಕಳೆದುಕೊಳ್ಳಲಿದ್ದಾರೆ. ಪಕ್ಷದಲ್ಲಿ ಇರಲು ಮನಸ್ಸಿಲ್ಲದೆ ಒಂದು ಕಾಲು ಹೊರಗಿಟ್ಟಿರುವ ಪ್ರತಿಪಕ್ಷಗಳ ಶಾಸಕರು ಈ ಅವಕಾಶವನ್ನು ಬಳಸಿಕೊಳ್ಳಲೂಬಹುದು ಎಂದು ಬಿಜೆಪಿಗೆ ಮಾರ್ಮಿಕ ತಿರುಗೇಟು ನೀಡಿದ್ದಾರೆ.