ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್
ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ಮತ ಪತ್ರವನ್ನು ಚುನಾವಣಾ ಏಜೆಂಟ್ ಗೆ ತೋರಿಸಿದ್ದೇನೆ' ಎಂದು ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.;
ಇಂದು (ಫೆ.27) ಬೆಳಿಗ್ಗೆಯಿಂದಲೇ ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪರ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ. ಸೋಮಶೇಖರ್ ಅಡ್ಡ ಮತ ಚಲಾಯಿಸಿದ್ದಾರೆ' ಎಂದು ಬಿಜೆಪಿಯ ಚುನಾವಣಾ ಏಜೆಂಟರೊಬ್ಬರು ಖಚಿತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಸ್.ಟಿ. ಸೋಮಶೇಖರ್, ʼರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ಮತ ಪತ್ರವನ್ನು ಚುನಾವಣಾ ಏಜೆಂಟ್ ಗೆ ತೋರಿಸಿದ್ದೇನೆ' ಎಂದರು.
ಸೋಮಶೇಖರ್ ಅವರು ಅಡ್ಡ ಮತದಾನದ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ. ಆದರೆ, ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿರುವ ಸಾಧ್ಯತೆ ಇದೆ ಎಂಬ ಚರ್ಚೆ ಶಾಸಕರ ಮಧ್ಯೆ ನಡೆದಿದೆ.
ಮತ ಚಲಾಯಿಸುವ ಮೊದಲು ಮಾತನಾಡಿದ್ದ ಸೋಮಶೇಖರ್, 'ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಮಾಡಲು ಪ್ರಯತ್ನಿಸಿದ್ದೆ. ಆದರೆ ಅವರು ಕಾಲಾವಕಾಶ ನೀಡಲಿಲ್ಲ' ಎಂದು ದೂರಿದರು.
'ಅಭಿವೃದ್ಧಿಗೆ ಯಾರು ಅನುದಾನ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ' ಎಂದು ಹೇಳುವ ಮೂಲಕ ಅಡ್ಡಮತದಾನ ಮಾಡಿರುವುದನ್ನ ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.