ಲೋಕಸಭಾ ಚುನಾವಣೆ: ವಯನಾಡಿನಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಒತ್ತಾಯ
ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ಕೇಂದ್ರ ಚುನಾವಣಾ ಸಮಿತಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ.;
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನಿಂದ ಸ್ಪರ್ಧಿಸುವಂತೆ ಒತ್ತಾಯಿಸಲಾಗಿದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಬುಧವಾರ (ಫೆಬ್ರವರಿ 28) ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಅವರು, ʼʼರಾಹುಲ್ ಅವರ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ., ಪಕ್ಷದ ರಾಷ್ಟ್ರೀಯ ನಾಯಕತ್ವ ಮತ್ತು ಕೇಂದ್ರ ಚುನಾವಣಾ ಸಮಿತಿಯು ಈ ಬಗ್ಗೆ ನಿರ್ಧರಿಸುತ್ತದೆʼʼ ಎಂದು ಹೇಳಿದರು.
'ಕೇರಳದ ರಾಜಕೀಯ ಪರಿಸ್ಥಿತಿ ವಿಭಿನ್ನವಾಗಿದೆ'
ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸಬೇಕು ಎಂದು ಪಕ್ಷದ ರಾಜ್ಯ ಘಟಕವು ರಾಷ್ಟ್ರೀಯ ನಾಯಕತ್ವವನ್ನು ಒತ್ತಾಯಿಸಿದೆ. ಕಾಂಗ್ರೆಸ್ ಪಕ್ಷದ ಕೇರಳ ಘಟಕ, ಕೆಪಿಸಿಸಿ ಮಾತ್ರವಲ್ಲದೆ ಇಡೀ ಯುಡಿಎಫ್ ಅವರು ವಯನಾಡಿನಿಂದ ಸ್ಪರ್ಧಿಸಬೇಕೆಂದು ಒತ್ತಾಯಿಸಿದೆ ಎಂದು ಸತೀಶನ್ ಹೇಳಿದರು.
2019ರಲ್ಲಿ ರಾಹುಲ್‌ಗೆ ಭರ್ಜರಿ ಗೆಲುವು
ಕಾಂಗ್ರೆಸ್, ಡಿಎಂಕೆ, ಸಿಪಿಐ ಮತ್ತು ಸಿಪಿಐ(ಎಂ) ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಟ್ಟಾಗಿ ಹೋರಾಡಿದ್ದವು ಮತ್ತು ಇಬ್ಬರು ಮಾರ್ಕ್ಸ್‌ವಾದಿ ಪಕ್ಷದ ಸಂಸದರು ಸಹ ಅಲ್ಲಿ ರಾಹುಲ್ ಗಾಂಧಿಯವರ ಪೋಸ್ಟರ್‌ಗಳೊಂದಿಗೆ ಮತ ಕೇಳಿದ್ದಾರೆ.
"ತಮಿಳುನಾಡಿನಲ್ಲಿ ಇಂತಹ ಘಟನೆ ನಡೆದಿದ್ದರೆ, ಕೇರಳದಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳು ಅದೇ ಕೆಲಸವನ್ನು ಮಾಡುತ್ತಾರೆಯೇ?, ಇಲ್ಲಿ ವಿಷಯಗಳು ವಿಭಿನ್ನವಾಗಿವೆʼʼ ಎಂದು ಅವರು ಹೇಳಿದರು.
2019ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್‌ನಿಂದ ರಾಹುಲ್ ಗಾಂಧಿ ನಾಲ್ಕು ಲಕ್ಷಕ್ಕೂ ಹೆಚ್ಚು ಭಾರಿ ಬಹುಮತದಿಂದ ಗೆದ್ದಿದ್ದಾರೆ.