ಅಂಬೇಡ್ಕರ್‌ ಜಯಂತಿ ದಿನದಂದೇ ಬಿಜೆಪಿ ಪ್ರಣಾಳಿಕೆ ಬಿಡುಗಡೆ

ದೆಹಲಿಯಲ್ಲಿ ಭಾನುವಾರ (ಏ.14) ಪ್ರಧಾನ ಕಚೇರಿಯಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಪಕ್ಷದ ಲೋಕಸಭಾ ಚುನಾವಣಾ ಪ್ರಣಾಳಿಕೆ- ಸಂಕಲ್ಪ ಪತ್ರ ಬಿಡುಗಡೆ ಮಾಡಿದರು.;

Update: 2024-04-14 11:47 GMT
ಜನತಾ ಪಕ್ಷ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
Click the Play button to listen to article

ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ ಹ್ಯಾಟ್ರಿಕ್‌ ಸಾಧಿಸುವ ಉತ್ಸಾಹದಲ್ಲಿರುವ ಭಾರತ ಜನತಾ ಪಕ್ಷ ಭಾನುವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಪ್ರಣಾಳಿಕೆಗೆ ʼಸಂಕಲ್ಪ ಪತ್ರʼ ಎಂದು ಹೆಸರಿಟ್ಟಿದೆ. ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದರು.

ಸಂಕಲ್ಪ ಪತ್ರ ಬಿಡುಗಡೆ ಮಾಡಿ ಮಾತನಾಡಿದ ನರೇಂದ್ರ ಮೋದಿ,‘ಇದು ಅತ್ಯಂತ ಪವಿತ್ರವಾದ ದಿನ. ದೇಶದ ಹಲವು ರಾಜ್ಯಗಳು ಇಂದು ಹೊಸ ವರ್ಷವನ್ನು (ವಿಷು) ಆಚರಿಸುತ್ತಿವೆ. ನವರಾತ್ರಿಯ ಆರನೇ ದಿನವಾದ ಇಂದು ನಾವು ಕಾತ್ಯಾಯನಿ ಮಾತೆಯನ್ನು ಪ್ರಾರ್ಥಿಸುತ್ತೇವೆ. ಕಾತ್ಯಾಯಿನಿ ಮಾತೆಯ ಎರಡೂ ಕೈಗಳಲ್ಲಿ ಕಮಲವಿದೆ. ಕಾಕತಾಳೀಯ ಎಂದರೆ ಇಂದು ಅಂಬೇಡ್ಕರ್ ಜಯಂತಿಯೂ ಆಗಿದೆ. ಇಡೀ ದೇಶವೇ ಬಿಜೆಪಿಯ ‘ಸಂಕಲ್ಪ ಪತ್ರ’ಕ್ಕಾಗಿ ಕಾಯುತ್ತಿದೆ ಎಂದರು.

ಈ ‘ಸಂಕಲ್ಪ ಪತ್ರ’ ಅಭಿವೃದ್ಧಿ ಹೊಂದಿದ ಭಾರತದ ಎಲ್ಲಾ 4 ಬಲವಾದ ಸ್ತಂಭಗಳನ್ನು ಸಶಕ್ತಗೊಳಿಸುತ್ತದೆ. ಯುವಕರು, ಮಹಿಳೆಯರು, ಬಡವರು ಮತ್ತು ರೈತರು ಎಂದರು.ಜೀವನದ ಘನತೆ, ಜೀವನದ ಗುಣಮಟ್ಟ ಮತ್ತು ಹೂಡಿಕೆಯ ಮೂಲಕ ಉದ್ಯೋಗಗಳ ಮೇಲೆ ನಮ್ಮ ಗಮನವಿದೆ ಎಂದ ಪ್ರಧಾನಿ ಮೋದಿ, ಉಚಿತ ಪಡಿತರ ಯೋಜನೆ ಮುಂದಿನ 5 ವರ್ಷಗಳ ಕಾಲ ಮುಂದುವರಿಯಲಿದೆ ಎಂಬುದು ಮೋದಿಯ ಗ್ಯಾರಂಟಿ ಎಂದು ಘೋಷಿಸಿದರಲ್ಲದೇ, ಬಡವರಿಗೆ ನೀಡುವ ಆಹಾರವು ಪೌಷ್ಟಿಕ, ತೃಪ್ತಿಕರ ಮತ್ತು ಕೈಗೆಟಕುವ ದರದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ ಭಾಗಿಯಾಗಿದ್ದರು.

ಪ್ರಣಾಳಿಕೆ ಬಿಡುಗಡೆಗೂ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, 2024ರಿಂದ ಹೇಗೆ ದೇಶದ ಸೇವೆ ಮಾಡಲಿದ್ದೇವೆ ಎಂಬುದು ಪ್ರಣಾಳಿಕೆಯಲ್ಲಿದೆ. ಸಾಮಾಜಿಕ ನ್ಯಾಯಕ್ಕಾಗಿ ಅಂಬೇಡ್ಕರ್ ಹೋರಾಟ ನಡೆಸಿದ್ರು. ಅದೇ ಮಾರ್ಗದಲ್ಲಿ ಬಿಜೆಪಿ ಕೂಡ ಹೋರಾಟ ನಡೆಸುತ್ತಿದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಬಿಜೆಪಿ ಹೋರಾಟ ಮಾಡಿದೆ. ನಮ್ಮ ಸರ್ಕಾರ ಬಡವರಿಗೆ ಮೀಸಲಾಗಿದೆ. ಬಿಜೆಪಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮರ್ಪಿತ ಎಂದಿದ್ದರು ಮೋದಿ. ಅದೇ ರೀತಿ ನಡೆದುಕೊಂಡಿದ್ದೇವೆ ಎಂದರು.

ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

ಉಚಿತ ಪಡಿತರ ಯೋಜನೆ ಮುಂದಿನ 5 ವರ್ಷಗಳವರೆಗೆ ಮುಂದುವರಿಕೆ

ಮುದ್ರಾ ಯೋಜನೆಯಡಿ ₹20 ಲಕ್ಷದವರೆಗೆ ಸಾಲ

ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ

75 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯನ್ನು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ತರಲಾಗುವುದು.

ತೃತೀಯಲಿಂಗಿ ಸಮುದಾಯಕ್ಕೆ ಆಯುಷ್ಮಾನ್ ಭಾರತ್ ಯೋಜನೆ

1) ಸಾಮಾಜಿಕ ಮೂಲಸೌಕರ್ಯ, 2) ಡಿಜಿಟಲ್ ಮೂಲಸೌಕರ್ಯ, 3) ಭೌತಿಕ ಮೂಲಸೌಕರ್ಯ - ಮೂರು ರೀತಿಯ ಮೂಲಸೌಕರ್ಯಗಳ ಮೂಲಕ ಬಿಜೆಪಿ 21 ನೇ ಶತಮಾನದ ಭಾರತದ ಅಡಿಪಾಯವನ್ನು ಬಲಪಡಿಸಲಿದೆ.

ಹೊಸ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು, ಭೌತಿಕ ಮೂಲಸೌಕರ್ಯದ ಅಡಿಯಲ್ಲಿ ದೇಶದಾದ್ಯಂತ ಹೆದ್ದಾರಿಗಳು, ರೈಲ್ವೆಗಳು, ವಾಯುಮಾರ್ಗಗಳು ಮತ್ತು ಜಲಮಾರ್ಗಗಳನ್ನು ಆಧುನೀಕರಣ.

ಡಿಜಿಟಲ್ ಮೂಲಸೌಕರ್ಯದ ಅಡಿಯಲ್ಲಿ 5G ನೆಟ್‌ವರ್ಕ್ಗಳ ವಿಸ್ತರಣೆ

ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಯೋಜನೆಯ ಗ್ಯಾರಂಟಿ

ರೈತರಿಗೆ ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ಹಣ ವರ್ಗಾವಣೆ ಮುಂದುವರಿಕೆ

ದೇಶಾದ್ಯಂತ ಡೇರಿ ಸಹಕಾರ ಸಂಘಗಳನ್ನು ಹೆಚ್ಚಿಸಲಾಗುವುದು

ಕ್ರೀಡೆಯಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಲು ಹೊಸ ಯೋಜನೆ

ತಮಿಳು ಭಾಷೆಯ ವೈಶಿಷ್ಟ್ಯ ಸಾರಲು ಆದ್ಯತೆ

ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯ

ಸಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ

ಹೊಯ್ಸಳ ದೇವಾಲಯಗಳು ಸೇರಿ ಪಾರಂಪರಿಕ ಸ್ಥಳಗಳನ್ನು ವಿಶ್ವದ ಟೂರಿಸಂ ಜತೆ ಜೋಡಣೆ

ವಿಶೇಷ ಮೀನು ಸಾಕಣೆ, ಮುತ್ತು ಕೃಷಿಗೆ ವಿಶೇಷ ಆದ್ಯತೆ

ಕೃಷಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಮೀನುಗಾರರಿಗೆ ಯೋಜನೆ

ಇ-ಶ್ರಮ್ ಮೂಲಕ ಕಲ್ಯಾಣ ಯೋಜನೆಯ ಪ್ರಯೋಜನ

ಪ್ರತಿ ಕ್ಷೇತ್ರದಲ್ಲೂ ಒಬಿಸಿ-ಎಸ್‌ಸಿ-ಎಸ್‌ಟಿಗೆ ಗೌರವ, ಜಾಗತಿಕ ಉತ್ಪಾದನಾ ಕೇಂದ್ರ ರಚಿಸಲು ಸಿದ್ಧತೆ

ಪ್ರಪಂಚದಾದ್ಯಂತ ರಾಮಾಯಣ ಹಬ್ಬ, ಅಯೋಧ್ಯೆಯ ಅಭಿವೃದ್ಧಿ

ಒಂದು ರಾಷ್ಟ್ರ, ಒಂದು ಚುನಾವಣೆ

AI, ಸೆಮಿಕಂಡಕ್ಟರ್ ಮತ್ತು ಬಾಹ್ಯಾಕಾಶ ವಲಯದಲ್ಲಿ ಅಭಿವೃದ್ಧಿ

ಒಂದು ದೇಶ, ಒಂದು ಚುನಾವಣೆ

ದೇಶದಲ್ಲಿ ಈಗಾಗಲೇ ಒಂದು ದೇಶ, ಒಂದು ಚುನಾವಣೆ ನಡೆಸುವ ಕುರಿತು ಪರ ಹಾಗೂ ವಿರೋಧಗಳ ಚರ್ಚೆ ನಡೆಯುತ್ತಿದೆ. ಹಣ, ಸಮಯ ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸುವ ಚಿಂತನೆಗಳು ಮುನ್ನೆಲೆಗೆ ಬರುತ್ತಿವೆ. ಇದರ ಬೆನ್ನಲ್ಲೇ, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ತಜ್ಞರ ಸಮಿತಿ ರಚಿಸಿ, ಸಮಿತಿಯ ಶಿಫಾರಸುಗಳೊಂದಿಗೆ ಒಂದು ದೇಶ, ಒಂದು ಚುನಾವಣೆ ಯೋಜನೆ ಜಾರಿಗೊಳಿಸಲಾಗುವುದು ಎಂಬುದಾಗಿ ಬಿಜೆಪಿಯು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ.

Tags:    

Similar News