ಕಾಂಗ್ರೆಸ್ ತೊರೆದ ಬಂಗಾಳದ ಕೌಸ್ತವ್ ಬಾಗ್ಚಿ ; ಬಿಜೆಪಿ ಸೇರುವ ಸುಳಿವು
ಕಾಂಗ್ರೆಸ್ ಉನ್ನತ ನಾಯಕತ್ವವು ಪಶ್ಚಿಮ ಬಂಗಾಳ ಘಟಕಕ್ಕೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಂಡು ಉಳಿಯಲು ಬಯಸುವುದಿಲ್ಲ ಎಂದು ಕೌಸ್ತವ್ ಬಾಗ್ಚಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಘಟಕದ ಬಗ್ಗೆ ಕಾಂಗ್ರೆಸ್ ನಾಯಕತ್ವದ ಉದಾಸೀನತೆ ಮತ್ತು ʻಭ್ರಷ್ಟ ಟಿಎಂಸಿʼ ಜೊತೆಗಿನ ಮೈತ್ರಿಯನ್ನು ವಿರೋಧಿಸಿ, ಕಾಂಗ್ರೆಸ್ ನಾಯಕ ಕೌಸ್ತವ್ ಬಾಗ್ಚಿ ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಆತ್ಮಗೌರವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧದ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬಾಗ್ಚಿ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದಾರೆ.
ಪಕ್ಷದ ರಾಜ್ಯ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಮತ್ತು ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಅವರಿಗೂ ಪ್ರತಿಗಳನ್ನು ಕಳುಹಿಸಿದ್ದಾರೆ.
ʻಜನರು ನನ್ನನ್ನು ಪಕ್ಷ ವಿರೋಧಿ ಎಂದು ಕರೆಯುತ್ತಾರೆ. ಆದರೆ ಭ್ರಷ್ಟ ಟಿಎಂಸಿಯೊಂದಿಗೆ ಕಾಂಗ್ರೆಸ್ ಕೈಜೋಡಿಸುವುದನ್ನು ನಾನು ವಿರೋಧಿಸುತ್ತೇನೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದೇನೆʼ ಎಂದು ಬಾಗ್ಚಿ ಮಾಧ್ಯಮಗಳಿಗೆ ತಿಳಿಸಿದರು.
"ಕಾಂಗ್ರೆಸ್ ಉನ್ನತ ನಾಯಕತ್ವವು ಪಶ್ಚಿಮ ಬಂಗಾಳ ಘಟಕಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಹಾಗಾಗಿ, ನನ್ನ ಸ್ವಾಭಿಮಾನವನ್ನು ರಾಜಿ ಮಾಡಿಕೊಳ್ಳಲು ಮತ್ತು ಅದರಲ್ಲಿ ಉಳಿಯಲು ನಾನು ಬಯಸುವುದಿಲ್ಲ" ಎಂದು ಅವರು ಹೇಳಿದರು.
ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಅವರು ಬಿಜೆಪಿ ಸೇರುವ ಸುಳಿವು ನೀಡಿದರು. "ನೀವು ಒಂದು ಅಥವಾ ಎರಡು ದಿನ ಕಾಯಬೇಕು. ಎಲ್ಲವೂ ಸ್ಪಷ್ಟವಾಗುತ್ತದೆ ... ಆದರೆ ಈ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಪಶ್ಚಿಮ ಬಂಗಾಳದಿಂದ ಕಿತ್ತೊಗೆಯುವುದು ಬಿಜೆಪಿಯ ಸುವೇಂದು ಅಧಿಕಾರಿ ಮಾತ್ರ ಎಂದು ನಾನು ಹೇಳಲು ಬಯಸುತ್ತೇನೆ" ಎಂದು ಅವರು ಹೇಳಿದರು.
ಕಳೆದ ವರ್ಷ ಮಾರ್ಚ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಾಗ್ಚಿ ಕೇಶಮುಂಡನ ಮಾಡಿಸಿಕೊಂಡಿದ್ದು, ಮಮತಾ ಬ್ಯಾನರ್ಜಿ ಸರ್ಕಾರವು ರಾಜ್ಯದಲ್ಲಿ ಅಧಿಕಾರದಲ್ಲಿರುವವರೆಗೂ ಕೂದಲು ಬೆಳೆಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.