ಮಹುವಾ ಮೊಯಿತ್ರಾ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದೇ?

ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿದೆ. ʻಇದು ಕಾಂಗರೂ ನ್ಯಾಯಾಲಯದ ನ್ಯಾಯ. ಇನ್ನೂ 30 ವರ್ಷ ಬಿಜೆಪಿ ವಿರುದ್ಧ ಹೋರಾಡುವೆʼ ಎಂದು ಮಹುವಾ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆ ಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಮಹುವಾ ಅವರನ್ನು ಬೆಂಬಲಿಸಿವೆ. ಪ್ರಶ್ನೆ ಏನೆಂದರೆ, ಲೋಕಸಭೆ ನೀತಿ ಸಮಿತಿಯ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಪ್ರಕರಣ ನಿಲ್ಲುವುದೇ?

Update: 2024-02-05 06:30 GMT

ಮಹುವಾ ಮೊಯಿತ್ರಾ ಪ್ರಕರಣ ನ್ಯಾಯಾಲಯದಲ್ಲಿ ನಿಲ್ಲುವುದೇ?

-ಬಿಶ್ವಜಿತ್ ಭಟ್ಟಾಚಾರ್ಯ

ಬ್ಲರ್ಬ್..


ಅಂದುಕೊಂಡಂತೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 8, 2023 ರಂದು ಸಂಸತ್ ಸದಸ್ಯ ಸ್ಥಾನದಿಂದ ಉಚ್ಚಾಟಿಸಲಾಗಿದೆ. ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಹಣ ಪಡೆದಿದ್ದಾರೆ ಎಂದು ಸೂಚಿಸುವ ಸಾಕ್ಷ್ಯಾಧಾರಗಳಿದ್ದು, ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ(ಎಫ್‌ಸಿಆರ್‌ಎ, 2010)ಯನ್ನು ಉಲ್ಲಂಘಿಸಿದ ಆರೋಪ ಮಹುವಾ ಅವರ ಮೇಲಿದೆ. ಆದರೆ, ಈ ಕಾಯಿದೆ ಉಲ್ಲಂಘನೆಯ ಆರೋಪವನ್ನು ಹೆಚ್ಚು ಜನರು ಎದುರಿಸುತ್ತಿದ್ದಾರೆ.

ಹೀರಾನಂದನಿ ಅವರ ಲಿಖಿತ ಹೇಳಿಕೆಯನ್ನು ವಿಚಾರಣೆಗೆ ಒಳಪಡಿಸಿದರೆ, ಶಿಕ್ಷೆಯನ್ನು ತಪ್ಪಿಸಬಹುದೇ? ದೇಶದ ಪ್ರಸ್ತುತ ಕಾನೂನುಗಳ ಅಡಿಯಲ್ಲಿ ಲಂಚ ನೀಡುವ ಯಾರಾದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದೇ? ಒಂದುವೇಳೆ ನ್ಯಾಯಾಲಯ ಅವನನ್ನು ಅಪರಾಧದಲ್ಲಿ ಭಾಗಿ ಎಂದು ಪರಿಗಣಿಸಿದರೆ ಅಥವಾ ಅವನ ಹೇಳಿಕೆಯನ್ನು ನಿಜವೆಂದು ಒಪ್ಪಿಕೊಂಡರೆ, ನಿರಪರಾಧಿ ಎಂದು ಘೋಷಿಸಬಹುದೇ? ನ್ಯಾಯಾಲಯ ಅವನ ಹೇಳಿಕೆಯನ್ನು ನಂಬದಿದ್ದರೆ ಏನಾಗುತ್ತದೆ? ಅವರನ್ನು ಆರೋಪಿ ಎಂದು ಪರಿಗಣಿಸಬೇಕಾಗುತ್ತದೆ. ಅದು ಕಾನೂನು.

ಹೀರಾನಂದನಿ ಅವರ ಅಫಿಡವಿಟ್ ಅವಿವೇಕದಂತಿದೆ. ಅಕ್ಟೋಬರ್ 16, 2023 ರಂದು ಅವರ ಕಂಪನಿ ಸಾರ್ವಜನಿಕವಾಗಿ ಏನು ಹೇಳಿದೆ ಎಂಬುದನ್ನು ನ್ಯಾಯಾಲಯ ಪರಿಗಣಿಸಬಹುದು. 2023ರ ಅಕ್ಟೋಬರ್ 16 ಮತ್ತು ಅಕ್ಟೋಬರ್ 19/20 2023 ರ ನಡುವೆ ನಡೆದ ಘಟನೆಗಳನ್ನು ತನಿಖೆ ಮಾಡಬಹುದು. ಹೀರಾನಂದನಿಯ ಅಫಿಡವಿಟ್‌ಗೆ ಎಫ್‌ಸಿಆರ್‌ಎ ಅನ್ವಯಿಸಬಹುದೇ? ಎಫ್‌ಸಿಆರ್‌ಎ ಸೆಕ್ಷನ್ 3 (1), ʻವಿದೇಶಿ ಕೊಡುಗೆʼ ಪಡೆಯುವುದನ್ನು ಕಾನೂನುಬಾಹಿರಗೊಳಿಸುತ್ತದೆ. ʻವಿದೇಶಿ ಮೂಲʼ ಎಂಬ ಪದವನ್ನು ವಿಭಾಗ 2(1)(ಜೆ) ಯಲ್ಲಿ ವ್ಯಾಖ್ಯಾನಿಸಲಾಗಿದೆ ಮತ್ತು ವಿಭಾಗ 2(1)(ಎಚ್)ನಲ್ಲಿ ವಿವರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಯಾವುದೇ ವಿದೇಶಿ ಮೂಲವಿಲ್ಲದಿದ್ದರೆ ಎಫ್‌ಸಿಆರ್‌ಎ ಅನ್ವಯಿಸುವುದಿಲ್ಲ. ದರ್ಶನ್ ಹೀರಾನಂದಾನಿ ದುಬೈನಲ್ಲಿ ನೆಲೆಸಿದ್ದರೂ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವುದರಿಂದ ಅವರನ್ನು ವಿದೇಶಿ ಎಂದು ಪರಿಗಣಿಸಬೇಕಿಲ್ಲ. ಅಕ್ಟೋಬರ್ 19/20ರ ಅಫಿಡವಿಟ್‌ನಲ್ಲಿರುವ ಮಾಹಿತಿ ಎಫ್‌ಸಿಆರ್‌ಎಗೆ ಸಂಬಂಧಿಸಿಲ್ಲ. ಮೊಯಿತ್ರಾ ವಿರುದ್ಧ ಎಫ್‌ಸಿಆರ್‌ಎ ಅನ್ವಯಿಸುವಿಕೆ ನ್ಯಾಯವ್ಯಾಪ್ತಿಯನ್ನು ಮೀರುತ್ತದೆ .

ಭ್ರಷ್ಟಾಚಾರ ತಡೆ ಕಾಯಿದೆ 1988 ರ ಬಗ್ಗೆ ನೋಡೋಣ. ಕಾಯಿದೆಯ ಸೆಕ್ಷನ್ 1 (2) ಹೇಳುವಂತೆ, ಕಾಯಿದೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲೇ ನೆಲೆಸಿರಲಿ, ಎಲ್ಲ ಭಾರತೀಯರಿಗೆ ಈ ಕಾಯಿದೆ ಅನ್ವಯಿಸುತ್ತದೆ. ಸಿಬಿಐ ಮೊಯಿತ್ರಾ ಮತ್ತು ಹೀರಾನಂದಾನಿ ಇಬ್ಬರಿಗೂ ಸಮನ್ಸ್ ನೀಡಬೇಕು; ಹೀರಾನಂದನಿ ಅವರನ್ನು ಬಿಡುವಂತಿಲ್ಲ. ಲಂಚ ನೀಡಿದ ಹಾಗೂ ಪಡೆದ ಆರೋಪ ಹೊತ್ತಿರುವ ಇಬ್ಬರನ್ನೂ ವಿಚಾರಣೆಗೊಳಪಡಿಸಬೇಕಾಗುತ್ತದೆ. ಆದರೆ, ಸಿಬಿಐ ಈ ಕೆಲಸವನ್ನು ಮಾಡುವುದೇ ಎಂಬ ಪ್ರಶ್ನೆ ಬರುತ್ತದೆ. ಲೋಕಸಭೆಯ ನೀತಿ ಸಮಿತಿ ಪ್ರಕರಣದಲ್ಲಿ ನ್ಯಾಯಯುತ ಆಚರಣೆಗಳು ಅಥವಾ ತತ್ವಗಳನ್ನು ಅನುಸರಿಸಲಿಲ್ಲ; ಹೀರಾನಂದನಿ ಹೇಳಿಕೆಯನ್ನು ಆಧರಿಸಿದ ವರದಿಯನ್ನು ವಿಚಾರಿಸದೆ ಸ್ವೀಕರಿಸಿದರು. 6 ಸದಸ್ಯರು ಪರವಾಗಿ ಮತ್ತು 4 ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ವಿಚಾರಣೆ ವೇಳೆ ಪ್ರಮುಖ ಸಾಕ್ಷಿಯನ್ನು ಪ್ರಶ್ನಿಸಲು ಮೊಯಿತ್ರಾ ಅವರಿಗೆ ಅವಕಾಶ ನೀಡಲಿಲ್ಲ. ನ್ಯಾಯಾಲಯ ಇದನ್ನು ಖಂಡಿತವಾಗಿಯೂ ಪ್ರಶ್ನಿಸುತ್ತದೆ.

ಲಾಗಿನ್ ಮಾಹಿತಿ ಹಂಚಿಕೊಳ್ಳುವುದು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಎಲ್ಲಾ ಸದಸ್ಯರು ಒಂದೇ ನಿಯಮ ಅಥವಾ ಕಾರ್ಯವಿಧಾನವನ್ನು ಅನುಸರಿಸಬೇಕು; ನಿಯಮಗಳನ್ನು ಸರಳೀಕರಿಸಬೇಕು ಮತ್ತು ಎಲ್ಲ ಸಂಸದರಿಗೆ ಇದನ್ನು ಸ್ಪಷ್ಟವಾಗಿ ವಿವರಿಸಬೇಕು ಮತ್ತು ನಿಯಮಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಅನುಸರಿಸಬೇಕು. ಈ ಕಠಿಣ ಜವಾಬ್ದಾರಿ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರಿಗೆ ಇದೆ. ನ್ಯಾಯಬದ್ಧ ಕಾನೂನು ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯನ್ನು ಯಾರೋ ಹೇಳಿದರು ಎಂಬ ಕಾರಣಕ್ಕೆ ಶಿಕ್ಷೆಗೆ ಗುರಿ ಪಡಿಸಲು ಆಗುವುದಿಲ್ಲ. ನ್ಯಾಯಾಲಯಗಳು ಇಂಥದ್ದನ್ನು ನಿಲ್ಲಿಸುವ ಅಧಿಕಾರವನ್ನು ಹೊಂದಿವೆ.

ಲಂಚ ನೀಡಿದ ಅಥವಾ ತೆಗೆದುಕೊಂಡ ವ್ಯಕ್ತಿ ತಪ್ಪಿತಸ್ಥನೆಂದುಕೊಂಡರೂ, ಅದು ಮುಖ್ಯವಾದ ಪ್ರಶ್ನೆಗಳನ್ನು ಅಪ್ರಸ್ತುತಗೊಳಿಸುವುದಿಲ್ಲ. ಮಹುವಾ ಅವರ ಪ್ರಶ್ನೆಗಳಿಗೆ ಉಚ್ಚಾಟಿಸಿದವರು ಉತ್ತರಿಸಬೇಕು. ಪ್ರಜಾಪ್ರಭುತ್ವದ ಶೃಂಗವಾದ ಸಂಸತ್ತಿನಲ್ಲಿ ಪ್ರಮುಖ ಭಿನ್ನ ಧ್ವನಿಗಳು ಕೇಳಿಸದೆ ಇರುವುದು, ಸರ್ಕಾರವನ್ನು ಪ್ರಶ್ನಿಸುವ ಅಥವಾ ಟೀಕಿಸುವುದನ್ನು ನಿರ್ಬಂಧಿಸುವುದು ಅಥವಾ ಸ್ಥಗಿತಗೊಳಿಸುವುದು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ದುರ್ಬಲಗೊಳಿಸುತ್ತದೆ. ಸಂವಿಧಾನದ 32ನೇ ವಿಧಿ ಇನ್ನೂ ಜಾರಿಯಲ್ಲಿದೆ ಮತ್ತು ಸದಾ ಕ್ರಿಯಾಶೀಲವಾಗಿರುತ್ತದೆ. ಸುಪ್ರೀಂ ಕೋರ್ಟ್‌ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಕಾವಲುಗಾರನಂತಿದೆ.

........

(ಲೇಖಕರು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಮತ್ತು ಹೆಚ್ಚುವರಿ ಸಾಲಿಸಿಟರ್‌ ಜನರಲ್‌, ಭಾರತ ಸರ್ಕಾರ. ಲೇಖನ ದ ಫೆಡರಲ್‌ನಲ್ಲಿ ನವೆಂಬರ್‌ 15, 2023ರಂದು ಪ್ರಕಟಗೊಂಡಿತ್ತು. ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು. ಅವು ಫೆಡರಲ್‌ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ.)

Similar News