ಅಮೀನ್ ಸಯಾನಿ ಅವರಿಗೆ ಪ್ರಧಾನಿ ಗೌರವ ಸಲ್ಲಿಕೆ

ಪ್ರತಿಸಂಸ್ಕೃತಿ; ಅಂದು ಮತ್ತು ಇಂದು

Update: 2024-02-25 08:20 GMT

ದಂತಕತೆ ರೇಡಿಯೊ ನಿರೂಪಕ ಅಮೀನ್‌ ಸಯಾನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ ನ ಪೋಸ್ಟ್‌ ನಲ್ಲಿ,ʻ91 ವರ್ಷದ ಈ ಐಕಾನ್ 'ರೇಡಿಯೋ ಜಾಕಿ' ಎಂಬ ಪದ ಫ್ಯಾಶನ್ ಆಗುವ ಮುನ್ನವೇ ಕಾರ್ಯಕ್ರಮದ ಪ್ರಸ್ತುತಿ ಆರಂಭಿಸಿದ್ದರು. ತಮ್ಮ ಮೋಡಿ ಮಾಡುವ ಮತ್ತು ಆರ್ದ್ರ ಧ್ವನಿಯಿಂದಾಗಿ ಹಲವು ಪೀಳಿಗೆಗಳ ಜನರು ಅವರನ್ನು ಇಷ್ಟಪಟ್ಟರುʼ ಎಂದು ಬರೆದಿದ್ದರು. 

ʻತಮ್ಮ ಕೆಲಸದ ಮೂಲಕ ಸಯಾನಿ ಅವರು ಭಾರತೀಯ ಪ್ರಸಾರ ಕ್ಷೇತ್ರದಲ್ಲಿ ಕ್ರಾಂತಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೇಳುಗರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದರು. ಅವರ ನಿಧನದಿಂದ ದುಃಖವಾಗಿದೆ…ʼ ಎಂದು ಹೇಳಿದ್ದರು. 

ಪ್ದಂರಧಾನಿ ತಪ್ಪಾಗಿ ʻಕ್ರಾಂತಿʼ ಎಂಬ ಪದವನ್ನು ಬಳಸಿದರು. ಏಕೆಂದರೆ, ಸಮಕಾಲೀನ ಭಾರತದಲ್ಲಿ ಕಂಡುಬರುತ್ತಿರುವ ರಾಜ್ಯ ನಿಯಂತ್ರಣ ಮತ್ತು ಪ್ರಸಾರ ಮತ್ತು ಮುಕ್ತ ಅಭಿವ್ಯಕ್ತಿಯ ನಿಗ್ರಹಿಸುವ ಅದೇ ಪ್ರವೃತ್ತಿ ಕಂಡುಬರುತ್ತಿರುವುದು ಕಾಕತಾಳೀಯವೇನಲ್ಲ.

ಸುಮಧುರ ಮತ್ತು ಆಕರ್ಷಕ ಧ್ವನಿ: ಬಹುಪಾಲು ಭಾರತೀಯರಿಗೆ ಸಯಾನಿ ಅವರ ಜೀವನ ಮತ್ತು ಹಿಂದಿ ಸಿನಿಮಾ ಸಂಗೀತವನ್ನು ಜನಪ್ರಿಯಗೊಳಿಸುವಲ್ಲಿ ಅವರ ಪಾತ್ರದ ಬಗ್ಗೆ ಸಂಪೂರ್ಣ ಅರಿವಿಲ್ಲ.ತಮ್ಮ ಸುಮಧುರ ಮತ್ತು ಆಕರ್ಷಕ ಧ್ವನಿಯಿಂದ ದೇಶ ಮತ್ತು ಭಾರತೀಯರು ವಾಸಿಸುವ ದೇಶಗಳಲ್ಲಿ ನೂರಾರು ದಶಲಕ್ಷ ಜನರನ್ನು ಹೇಗೆ ರೇಡಿಯೋದೆಡೆಗೆ ಸೆಳೆದರು ಎಂಬುದು ಹೆಚ್ಚಿನವರಿಗೆ ತಿಳಿದಿದೆ. 

1950 ರ ದಶಕದ ಆರಂಭಗೊಂಡು 990 ರ ದಶಕದ ಆರಂಭದವರೆಗೆ, ಆನಂತರ ಸ್ವಲ್ಪ ವಿರಾಮದ ನಂತರ ಎಫ್‌ಎಂ ರೇಡಿಯೋ ಮೂಲಕ ವಾಪಸಾದರು. ಪ್ರತಿ ಬುಧವಾರ ರಾತ್ರಿ 8 ರಿಂದ 'ಸಯಾನಿ ಸಮಯ' ಆರಂಭವಾಗುತ್ತಿತ್ತು.1952 ರಿಂದ ರೇಡಿಯೊ ಸಿಲೋನ್‌ನ ಹಿಂದಿ ಸೇವೆಯಲ್ಲಿ ಪ್ರಾರಂಭವಾದ ಬಿನಾಕಾ ಗೀತಮಾಲಾ, 1988 ರವರೆಗೆ ಅಡೆತಡೆಯಿಲ್ಲದೆ ಮುಂದುವರಿಯಿತು. ಆನಂತರ ಅದು ಇನ್ನೂ ಆರು ವರ್ಷ ಆಕಾಶವಾಣಿಯ ವಿವಿಧ್ ಭಾರತಿಗೆ ಸ್ಥಳಾಂತರಗೊಂಡಿತು. ಸ್ವಲ್ಪ ವಿರಾಮದ ನಂತರ ಆಲ್‌ ಇಂಡಿಯಾ ರೇಡಿಯೋದ ರಾಷ್ಟ್ರೀಯ ಸೇವೆಗೆ ಹಿಂದಿರುಗಿತು. 

ರೇಡಿಯೋ ಸಿಲೋನ್ ನಿಂದ ಹಿಂದಿ ಸಂಗೀತ ಏಕೆ?: ಆಲ್‌ ಇಂಡಿಯಾ ರೇಡಿಯೋಗೆ ಪೈಪೋಟಿ ಒಡ್ಡಲು ಭಾರತ ಸರ್ಕಾರವು ರೇಡಿಯೊ ಸಿಲೋನ್ ಹಿಂದಿ ಸೇವೆ ಮತ್ತು ಈ ನಿರ್ದಿಷ್ಟ ಕಾರ್ಯಕ್ರಮವನ್ನು ಪ್ರಾರಂಭಿಸಲು ಏಕೆ ಬೆಂಬಲಿಸಿತು ಎಂಬುದು ಗೊತ್ತಿಲ್ಲ. ಆದರೆ, ಸಮೂಹ ಮಾಧ್ಯಮದ ವಿಷಯವನ್ನು ನಿಯಂತ್ರಿಸುವಲ್ಲಿ ಪ್ರಸ್ತುತ ಸರ್ಕಾರದ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳಲು ಇದನ್ನು ಮತ್ತೊಮ್ಮೆ ತಿಳಿಸಿಕೊಡುವ ಅಗತ್ಯವಿದೆ. 1950 ರ ದಶಕಕ್ಕೆ ಮುನ್ನ ಭಾರತ ಮತ್ತು ಸಿಲೋನ್‌ನಲ್ಲಿ ರೇಡಿಯೊದ ಆದಾಯದ ಮಾದರಿ ಅಸ್ಪಷ್ಟವಾಗಿತ್ತು (1972 ರವರೆಗೆ ಶ್ರೀಲಂಕಾ ಬ್ರಿಟಿಷರ ಹಿಡಿತದಲ್ಲಿತ್ತು). ಇಂಥ ಸಂದರ್ಭದಲ್ಲಿ ಶ್ರೀಲಂಕಾ 1952 ರಲ್ಲಿ ನೂತನ ಸಾಪ್ತಾಹಿಕ ಹಾಡುಗಳ ಪ್ರದರ್ಶನದಲ್ಲಿ ಹೂಡಿಕೆ ಮಾಡುವುದನ್ನು ಹಾಗೂ ಅದನ್ನು ವರ್ಷಗಟ್ಟಲೆ ನಡೆಸಲು ಪ್ರೇರೇಪಿಸಿದ್ದು ಏನು? 

'ಕೊಳಕು ರಹಸ್ಯ ':  ಸಯಾನಿ ಅವರಿಗೆ ಪ್ರಧಾನಿ ಸಲ್ಲಿಸಿದ ಗೌರವವು ನೆಹರೂ ಖಳನಾಗಿರುವ ಇಂದಿನ ಭಾರತದಲ್ಲಿ ʻಕೊಳಕು ರಹಸ್ಯ'ವೊಂದನ್ನು ನೆನಪಿ ಸುವುದೇಕೆ? ಇದನ್ನು ಅರ್ಥಮಾಡಿಕೊಳ್ಳಬೇಕೆಂದರೆ ಹಿಂದಿ ಚಲನಚಿತ್ರ ಸಂಗೀತ ಪ್ರೇಮಿಗಳು ಇರುವ ಪ್ರದೇಶಗಳಲ್ಲಿ ಸಯಾನಿ ಅವರು ಮನೆಮಾತಾ ಗಲು ಏನು ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕೌಟುಂಬಿಕ 'ಸಂಪರ್ಕ'ಗಳ ಮೂಲಕ ಅವರಿಗೆ ಈ ʻಕೆಲಸʼ ಸಿಕ್ಕಿದ್ದು ನಿಜ; ಆದರೆ, ಅವರಲ್ಲಿ ಅಪಾರ ಪ್ರತಿಭೆ ಇತ್ತು. ಅವರಿಗೆ ಅವಕಾಶ ನೀಡುವುದು ಅಂದಿನ ಸರ್ಕಾರದ ನಿರ್ಧಾರವಾಗಿತ್ತು. ಆದರೆ, ಅದನ್ನು ಇಂದಿನ ಆಡಳಿತಗಾರರು ಟೀಕಿಸುವುದಿಲ್ಲ. ಅದೇಕೆ?

ಕೇಸ್ಕರ್ ಅವರ ವಿಧಾನ: ಸಯಾನಿಯವರ ಖ್ಯಾತಿ ಮತ್ತು ಬಿನಾಕಾ ಗೀತಮಾಲಾದ ಮೂಲ ಇರುವುದು ಬಿ.ವಿ. ಕೇಸ್ಕರ್ ಎಂಬ ಮಾಹಿತಿ ಮತ್ತು ಪ್ರಸಾರ ಸಚಿವ(1952 ರಿಂದ 1962 ರವರೆಗೆ ಸಚಿವರಾಗಿದ್ದರು). ಆಗ ದೂರದರ್ಶನ ಇರಲಿಲ್ಲ. ಭಾರತೀಯರು ರೇಡಿಯೊ ಅಥವಾ ಸಿನಿಮಾಗಳಲ್ಲಿ ಏನನ್ನು ಕೇಳುತ್ತಾರೆ ಅಥವಾ ವೀಕ್ಷಿಸುತ್ತಾರೆ ಎಂಬುದನ್ನು ನಿರ್ಧರಿಸಲು, ಸುದ್ದಿಗಳನ್ನು ವರದಿ ಮಾಡುವುದು ಮತ್ತು ಪ್ರಕಟಿಸುವುದು ಹೇಗೆ ಎಂಬುದನ್ನು ನಿರ್ಧರಿಸಲು ನೆಹರೂ, ತಮ್ಮ ಆಧುನಿಕ ದೃಷ್ಟಿಕೋನಕ್ಕೆ ಸರಿಹೊಂದದ ಕೇಸ್ಕರ್‌ ಅವರನ್ನು ಆಯ್ಕೆ ಮಾಡಿಕೊಂಡರು. ಕೇಸ್ಕರ್‌ ಯಾವುದೇ ಸಮಾಲೋಚನೆ ನಡೆಸದೆ ಹಿಂದಿ ಚಲನಚಿತ್ರ ಗೀತೆಗಳು ಅಸಭ್ಯ ಮತ್ತು ಪಾಶ್ಚಿಮಾತ್ಯೀಕರಣಗೊಂಡಿವೆ ಎಂದು ನಿರ್ಧರಿಸಿದರು. 

ಯುವ ರಾಷ್ಟ್ರದ ಸಾಂಸ್ಕೃತಿಕ ಬೆಳವಣಿಗೆಗೆ ಇವು ಅಡ್ಡಿಯಾಗುತ್ತವೆ ಎಂದು ಜನಪ್ರಿಯ ಸಂಗೀತದ ಬದಲು ಶಾಸ್ತ್ರೀಯ ಸಂಗೀತವನ್ನುಆಯ್ಕೆ ಮಾಡಿಕೊಂಡರು. ರಾಜ್ಯಗಳು ಮತ್ತು ಜಮೀನ್ದಾರರನ್ನು ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಿದ ನಂತರ ದುಸ್ಥಿತಿ ತಲುಪಿದ್ದ ಶಾಸ್ತ್ರೀಯ ಸಂಗೀತಗಾರರಿಗೆ ಇದು ಹಣಕಾಸಿನ ಬೆಂಬಲ ಮತ್ತು ವೇದಿಕೆ ನೀಡಿತು; ಚಲನಚಿತ್ರ ಸಂಗೀತ ಭಾರತದಿಂದ ನೆರೆಯ ದೇಶಕ್ಕೆ ವಲಸೆ ಹೋಯಿತು. 

ಕ್ಲಾಸಿಕಲ್ ವಿರುದ್ಧ ಜನಪ್ರಿಯ: ಹೊಸ ಪ್ರಕಾರದ ಸಂಗೀತವನ್ನು ಉತ್ತೇಜಿಸುವಾಗ ಶಾಸ್ತ್ರೀಯ ಪ್ರದರ್ಶನ ಕಲೆಗಳು ಮತ್ತು ಅದರ ಪ್ರದರ್ಶಕರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿತ್ತು. ಬದಲಿಗೆ, ಕೇಸ್ಕರ್ ಅವರು ʻದ ಹಿಂದೂʼ ದಿನಪತ್ರಿಕೆಯಲ್ಲಿಜುಲೈ 1953 ರಂದು ಪ್ರಕಟಗೊಂಡ ಲೇಖನದಲ್ಲಿ ಶಾಸ್ತ್ರೀಯ ಸಂಗೀತ ʻಅಳಿವಿನ ಹಂತದಲ್ಲಿದೆʼ ಎಂದು ವಾದಿಸಿದರು ಮತ್ತು ಇದಕ್ಕೆ ಆಲ್‌ ಇಂಡಿಯಾ ರೇಡಿಯೋ ಹೊಣೆಗಾರರನ್ನಾಗಿ ಮಾಡಿದರು.

ಅನೇಕ ವಿಧಗಳಲ್ಲಿ, ಕೇಸ್ಕರ್ ಇಂದಿನ ನೈತಿಕ ಪೊಲೀಸರನ್ನು ಹೋಲುತ್ತಾರೆ. ಚಿತ್ರಗೀತೆಗಳ ಸಾಹಿತ್ಯ ಉರ್ದುವಿನಲ್ಲಿದ್ದುದು ಅವರಿಗೆ ಸಮಸ್ಯೆಯಾಗಿತ್ತು. ರೇಡಿಯೊ ಇತಿಹಾಸಕಾರ ಡೇವಿಡ್ ಲೆಲಿವೆಲ್ಡ್ ಬರೆದಂತೆ ʻಸಾಮಾನ್ಯವಾಗಿ ಕಾಮಪ್ರಚೋದಕ ಆಗಿದ್ದವುʼ. ಚಲನಚಿತ್ರ ಗೀತೆಗಳನ್ನುಪ್ರಸಾರ ಮಾಡಿದರೆ, ಗಾಯಕನ ಹೆಸರನ್ನು ಮಾತ್ರ ಪ್ರಚಾರ ಮಾಡಬೇಕು ಎಂದು ಕೇಸ್ಕರ್‌ ಆದೇಶಿಸಿದರು.

ಸಿನೆಮಾ ಸಂಗೀತದ ಸೆನ್ಸಾರ್ಶಿಪ್:‌ ಇದು ನಿರ್ವಿವಾದವಾಗಿ ಚಲನಚಿತ್ರ ಸಂಗೀತದ ಸೆನ್ಸಾರ್‌ಶಿಪ್ ಆಗಿತ್ತು. ಸಯಾನಿ ಅವರ ಕಾರ್ಯಕ್ರಮ ಜನಪ್ರಿಯತೆ ಗಳಿಸಿದಂತೆ, ಆಲ್‌ ಇಂಡಿಯಾ ರೇಡಿಯೋ ವಾಣಿಜ್ಯ ಚಾನೆಲ್ ವಿವಿಧ್ ಭಾರತಿ ಆರಂಭಿಸಬೇಕಾಗಿ ಬಂದಿತು. ಚಲನಚಿತ್ರ ಹಾಡುಗಳನ್ನು ಸೆನ್ಸಾರ್ ಮಾಡಿದ ನಂತರ ಪ್ರಸಾರ ಮಾಡಿತು. ಅಂದಿನ ರಾಜಕೀಯ ನಾಯಕತ್ವವನ್ನು ಪ್ರಶ್ನಿಸಿದ ಹಾಗೂ ಸರ್ಕಾರದ ಬಗ್ಗೆ ಭ್ರಮನಿರಸನ ವ್ಯಕ್ತಪಡಿಸಿದ ಹಲವು ದಂತಕತೆ ಎನ್ನಬಹುದಾದ ಹಾಡುಗಳನ್ನು ಪ್ರಸಾರ ಮಾಡಲಿಲ್ಲ. 1950 ರ ದಶಕದ ಅನೇಕ ಪ್ರಸಿದ್ಧ ಹಾಡುಗಳನ್ನು ಏರ್‌ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇವುಗಳಲ್ಲಿ ಬಾಜಿ ಮತ್ತು ಶ್ರೀ 420 ಸಿನೆಮಾದ ತದ್ಬೀರ್ ಸೆ ಬಿಗ್ದಿ ಹುಯಿ ತಕ್ದೀರ್ ಬನಾ ಲೆ ಅಥವಾ ಮುರ್ ಕೆ ನಾ ದೇಖ್ ನಂಥ ಹಾಡುಗಳೂ ಸೇರಿವೆ.

ಹಾಡುಗಳ ನಿಷೇಧ: ನಿಷೇಧಿತ ಹಾಡುಗಳ ಪಟ್ಟಿಯಲ್ಲಿ ಸಾಹಿರ್ ಲುಧಿಯಾನ್ವಿ ಬರೆದು ಎಸ್.ಡಿ.ಬರ್ಮನ್‌ ಸಂಗೀತ ನೀಡಿರುವ ಗುರುದತ್ ಅವರ ಕ್ಲಾಸಿಕ್ ಚಿತ್ರ ಪ್ಯಾಸಾದ ʻಕಹಾ ಹೇ ಕಹಾ ಹೈ... ʼಹಾಡು ಕೂಡ ಸೇರಿದೆ. ಫಿರ್ ಸುಬಹ್ ಹೊಗಿ ಚಿತ್ರದಲ್ಲಿ ನಿರಾಶ್ರಿತ ನಾಯಕನ ವ್ಯಂಗ್ಯಭರಿತ ಹಾಡು- ಚೀನ್ ಒ ಅರಬ್ ಹಮಾರಾ, ಹಿಂದೂಸ್ತಾನ್ ಹಮಾರಾ, ರಹನೆ ಕೋ ಘರ್ ನಹೀ ಹೈ, ಸಾರಾ ಜಹಾ ಹಮಾರಾ, ಹಿಂದೂಸ್ತಾನ್ ಹಮಾರಾ (ಚೀನಾ ಮತ್ತು ಅರೇಬಿಯಾ ನಮ್ಮದು, ಹಿಂದೂಸ್ತಾನ್ ನಮ್ಮದು, ನಮಗೆ ಮನೆ ಇಲ್ಲ ವಾಸಿಸಲು. ಆದರೆ ಇಡೀ ಜಗತ್ತು ನಮ್ಮದು, ಹಿಂದೂಸ್ಥಾನ ನಮ್ಮದು). 1950 ರ ದಶಕದ ಉತ್ತರಾರ್ಧದಲ್ಲಿ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರು ಚುನಾವಣೆ ಸೋಲಿನ ನಂತರ ವೀಕ್ಷಿಸಲು ಹೋದ ಚಲನಚಿತ್ರ ಫಿರ್ ಸುಬಹ್ ಹೋಗಿ. 

ಪ್ರತಿ-ಸಂಸ್ಕೃತಿ ಜೀವಂತ: ಆದರೆ, ಕೇಸ್ಕರ್ ಅವರ ಆದೇಶಗಳನ್ನು ಲೆಕ್ಕಿಸದೆ ಈ ಹಾಡುಗಳನ್ನು ಪ್ರಪಂಚದಾದ್ಯಂತದ ಜನ ಕೇಳಿದರು ಮತ್ತು ಅತ್ಯಂತ ಜನಪ್ರಿಯವಾದವು. ಇವು ಇಂದು ಕೂಡ ಹಲವು ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಲಭ್ಯವಿವೆ. ಪ್ರತಿ ಸಂಸ್ಕೃತಿಯನ್ನು ಜೀವಂತವಾಗಿ ಟ್ಟ ಸಯಾನಿಯವರ 'ಕ್ರಾಂತಿಕಾರಿ' ಪ್ರಯತ್ನಗಳಿಂದ ಈ ಹಾಡುಗಳು ಮನೆಮಾತಾದವು. ಪ್ರತಿ ಸಂಕಥನಗಳನ್ನು ಮುಲಾಜಿಲ್ಲದೆ ಹತ್ತಿಕ್ಕಿದರೂ, ಸಯಾನಿ ಅವರ ಸಾಧನೆಯನ್ನು ಮೋದಿ ಸ್ಮರಿಸದೆ ಇರಲಾಗಲಿಲ್ಲ. ಭಾರತದಲ್ಲಿ ನಿಷೇಧಗೊಂಡಿದ್ದ ಹಾಡು ಗಳು ರೇಡಿಯೋ ಸಿಲೋನ್ ನಲ್ಲಿ ಹೇಗೆ ಪ್ರಸಾರವಾಗುತ್ತಿದ್ದವು ಎಂಬುದರ ಹಿಂದಿನ ಕಥೆಯನ್ನು ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಮೋದಿ ಅವರು ಇಷ್ಟಪಡ್ಡು‌ ಹಲವು ಪ್ರಸಂಗಗಳಿವೆ. ಆದರೆ, ಅವರ ಅಧಿಕಾರ ಸ್ಥಾನದ ಅನಿವಾರ್ಯತೆಗಳು ಅವರಿಗೆ ಇಷ್ಟವಿಲ್ಲದೆ ಇರುವುದನ್ನೂ ಸ್ವೀಕರಿಸುವಂತೆ ಮಾಡುತ್ತವೆ. ಪ್ರಧಾನಿಯವರು ಸಯಾನಿ ಅವರ ಕಾರ್ಯಕ್ರಮದ ಅಭಿಮಾನಿಯಾಗಿರಬಹುದು. ಆದರೆ, ಆಗಿನ ನಿಷೇಧ ಮತ್ತು ಈಗಿನ ನಿಯಂತ್ರಣಗಳ ನಡುವಿನ ಸಾಮ್ಯತೆಗಳು ಅವರ ತೀಕ್ಷ್ಣಬುದ್ಧಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮತ್ತು, ಇದೊಂದು ದೊಡ್ಡ ವಿಪರ್ಯಾಸವಲ್ಲವೇ?

(ಲೇಖನದಲ್ಲಿನ ಮಾಹಿತಿ, ಆಲೋಚನೆಗಳು ಅಥವಾ ಅಭಿಪ್ರಾಯಗಳು ಲೇಖಕರದ್ದು.ಅವು ಫೆಡರಲ್‌ನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸಬೇಕೆಂದಿಲ್ಲ)

Tags:    

Similar News