ಹಿಂದುಯೇತರರು ಮಿಂದೆದ್ದರೆ ಅಪವಿತ್ರವಾದೀತೆ ಗಂಗೆ?

ಹಿಂದೂಗಳ ಸರ್ವಶ್ರೇಷ್ಠ ನದಿ ಗಂಗಾ, ಹಿಮಾಲಯದಿಂದ ಬಂಗಾಳಕೊಲ್ಲಿಯವರೆಗಿನ ತನ್ನ 2,525 ಕಿ.ಮೀ. ಹಾದಿಯಲ್ಲಿ ಹಿಂದೂಯೇತರರು ಮುಳುಗಿದರೆ, ಅದು ಧಾರ್ಮಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆಯೇ?;

Update: 2025-09-06 01:30 GMT
ಹಿಂದುಯೇತರ ವ್ಲಾಗರ್ ಜಾಸ್ಮಿನ್ ಜಾಫರ್ ಅವರು ದೇಗುಲದ ಪವಿತ್ರ ಕೊಳದಲ್ಲಿ ಕಾಲಿಟ್ಟು ವಿಡಿಯೊ ಮಾಡಿದರೆಂಬ ಕಾರಣಕ್ಕೆ ಕೇರಳದ ಗುರುವಾಯೂರು ದೇಗುಲದಲ್ಲಿ ಇತ್ತೀಚೆಗೆ ಶುದ್ಧೀಕರಣ ವಿಧಿ ವಿಧಾನವನ್ನು ನಡೆಸಿದರು.
Click the Play button to listen to article

ಗುರುವಾಯೂರ್ ದೇವಸ್ಥಾನವು ಹಿಂದೂಯೇತರರು ಕೊಳದಲ್ಲಿ ಸ್ನಾನ ಮಾಡಿದ್ದಕ್ಕೆ ತೋರಿದ ಪ್ರತಿಕ್ರಿಯೆ, ಅನ್ಯಧರ್ಮೀಯರ ಬಗ್ಗೆ ಕಂಚಿ ಮಠವು ಅಂದು ಐತಿಹಾಸಿಕವಾಗಿ ತೋರಿದ ಸಹಿಷ್ಣುತೆಗೆ ತದ್ವಿರುದ್ಧವಾಗಿದೆ.

ಇದು ನಡೆದದ್ದು 1920ರಲ್ಲಿ. ಆಧುನಿಕ ಭಾರತದ ಅತ್ಯಂತ ಗೌರವಾನ್ವಿತ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ ಚಂದ್ರಶೇಖರೇಂದ್ರ ಸರಸ್ವತಿಯವರು ಕಂಚಿ ಮಠದ ಜವಾಬ್ದಾರಿಯನ್ನು ವಹಿಸಿಕೊಂಡು ಕೇವಲ ಏಳು ವರ್ಷಗಳಾಗಿದ್ದವು. ಅವರು ತಮ್ಮ ಮೊದಲ ತಮಿಳುನಾಡು ಪ್ರವಾಸದಲ್ಲಿದ್ದಾಗ, ಒಬ್ಬ ಮುಸ್ಲಿಂ ವ್ಯಕ್ತಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಬಯಸಿದರು.

ಯತಿವರ್ಯರ ಆಹ್ವಾನದ ಮೇರೆಗೆ, ಆ ಮುಸ್ಲಿಂ ವ್ಯಕ್ತಿ ಮಾಯವರಂನಲ್ಲಿ (ಈಗ ಮೈಲಾದುತುರೈ) ಸಂಜೆ ಒಂದು ಸ್ಥಳಕ್ಕೆ ಬಂದರು, ಅಲ್ಲಿ ವಿದ್ವಾಂಸರೆಲ್ಲ ಸೇರಿ ಹಿಂದೂ ಧರ್ಮದ ಬಗ್ಗೆ ಬಹಿರಂಗವಾಗಿ ಚರ್ಚಿಸುತ್ತಿದ್ದ ಸಂದರ್ಭದಲ್ಲಿ, ದೊಡ್ಡ ಜನಸಮೂಹದ ನಡುವೆ ಆ ಯತಿಗಳು ಕುಳಿತಿದ್ದರು.

ಆ ಕಾರ್ಯಕ್ರಮ ಮುಗಿದ ಬಳಿಕ ಸ್ವಾಮೀಜಿ ಆ ವ್ಯಕ್ತಿಯನ್ನು ಕರೆದು ಇಸ್ಲಾಂ ಧರ್ಮದ ಬಗ್ಗೆ ಮಾತನಾಡುವಂತೆ ಕೇಳಿಕೊಂಡರು.

ಎಲ್ಲಾ ಧರ್ಮದ ಪಥಗಳು ದೇವರ ಕಡೆಗೆ ಸಾಗುತ್ತವೆ ಮತ್ತು ಚಂದ್ರಶೇಖರೇಂದ್ರ ಸರಸ್ವತಿಯವರಲ್ಲಿ ನಾನು ಪರಮ ದೈವತ್ವವನ್ನು ಕಾಣುತ್ತೇನೆ ಎಂದು ಆತ ವಿವರಿಸಿದರು. ಇದನ್ನು ಕೇಳಿದ ಸಭೆಯಲ್ಲಿದ್ದ ಅನೇಕ ಹಿಂದೂಗಳು ಆ ಮುಸ್ಲಿಂ ವ್ಯಕ್ತಿಯ ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ತೀವ್ರವಾಗಿ ಪ್ರಭಾವಿತರಾದರು.

ಅದಾಗಿ ಮುಂದಿನ ವರ್ಷವೂ ತಮ್ಮ ಪ್ರವಾಸವನ್ನು ಮುಂದುವರೆಸಿದ್ದ ಆ ಯತಿವರ್ಯರು, ಕುಂಭಕೋಣಂನಲ್ಲಿ ನಡೆದ ಮಹಾಮಹಂ ಉತ್ಸವಕ್ಕೆ ಹಾಜರಾದರು. ಆ ಪಟ್ಟಣಕ್ಕೆ ಬಂದ ಸಾವಿರಾರು ಭಕ್ತರಲ್ಲಿ, ಮದ್ರಾಸ್ ಮೂಲದ ಸುಮಾರು 300 ಮಂದಿ ಮುಸ್ಲಿಂ ಯುವಕ ಸಂಘದ ಸದಸ್ಯರೂ ಇದ್ದರು. ಹಿಂದೂ ಕಾರ್ಯಕ್ರಮಕ್ಕೆ ಅವರ ಕೊಡುಗೆಯನ್ನು ಕಂಡ ಸ್ವಾಮೀಜಿ, ಅವರನ್ನು ಶ್ಲಾಘಿಸಿದರು ಮತ್ತು ಮೆಚ್ಚುಗೆಯ ಸಂಕೇತವಾಗಿ ಅವರಿಗೆ ಬಹುಮಾನವನ್ನೂ ನೀಡಿದರು.

ವ್ಲಾಗರ್ ಜಾಸ್ಮಿನ್ ಜಾಫರ್ ಪ್ರಕರಣ

ಒಂದು ಶತಮಾನದ ಬಳಿಕ ಈಗ ನಾವು ದೇಶದ ಅತ್ಯಂತ ಪವಿತ್ರ ವಿಷ್ಣು ದೇಗುಲಗಳಲ್ಲಿ ಒಂದಾದ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಇದು ಹಿಂದೂಯೇತರ ವ್ಲಾಗರ್ ಒಬ್ಬರು ದೇವಾಲಯದ ಪವಿತ್ರ ಕೊಳದಲ್ಲಿ ಕಾಲಿಟ್ಟು ಅದರ ವಿಡಿಯೋ ಮಾಡಿದ ಪ್ರಕರಣ ನಡೆದಿದೆ. ಈ ಘಟನೆಯಿಂದ ಕುಪಿತರಾದ ಅನೇಕ ಭಕ್ತರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ದೇಗುಲವು ಶುದ್ಧೀಕರಣದ ವಿಧಿಗಳನ್ನು ಆಯೋಜಿಸಿದೆ.

ಈ ವಿವಾದ ತೀವ್ರವಾಗುತ್ತಿದ್ದಂತೆ ಜಾಸ್ಮಿನ್ ಜಾಫರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಆ ರೀಲನ್ನು ತಕ್ಷಣವೇ ತೆಗೆದುಹಾಕಿದರು ಮತ್ತು ಸಾರ್ವಜನಿಕವಾಗಿ ಕ್ಷಮೆಯನ್ನೂ ಯಾಚಿಸಿದರು. ಹಿಂದೂಯೇತರರಿಗೆ ಮತ್ತು ವಿಡಿಯೋ ಚಿತ್ರೀಕರಣಕ್ಕೆ ಇರುವ ನಿರ್ಬಂಧಗಳ ಬಗ್ಗೆ ತಮಗೆ ತಿಳಿದಿರಲಿಲ್ಲ ಮತ್ತು ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವ ಉದ್ದೇಶ ತಮಗಿರಲಿಲ್ಲ ಎಂದೂ ಅವರು ಸಮಜಾಯಿಷಿಯನ್ನೂ ಅವರು ಕೊಟ್ಟರು.

ಈ ವಿಚಾರದಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ, ಜಾಸ್ಮಿನ್ ಅವರು ಹಿಂದೂಯೇತರರಿಗೆ ನಿರ್ಬಂಧಿಸಲಾಗಿರುವ ಪ್ರದೇಶವನ್ನು ಪ್ರವೇಶಿಸಿದ್ದರು ಮತ್ತು ಮದುವೆ ಸಮಾರಂಭಗಳು ಹಾಗೂ ಧಾರ್ಮಿಕ ಉತ್ಸವಗಳನ್ನು ಹೊರತುಪಡಿಸಿ, ಹೊರ ಆವರಣದಲ್ಲಿ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸುವ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿದ್ದರು. ಈ ವಿಚಾರದಲ್ಲಿ, ಅವರು ತಪ್ಪು ಮಾಡಿದ್ದರು.

ಹಿಂದೂ ದೇವಾಲಯಗಳು, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ, ಯಾವುದೇ ಭಕ್ತರನ್ನು ಗರ್ಭಗುಡಿಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಈ ನಿಯಮವು ಹಿಂದೂಯೇತರ ಭಕ್ತರಿಗೆ ನಿರ್ದಿಷ್ಟವಾಗಿ ನಿರ್ಬಂಧವಿಲ್ಲದ ದೇವಾಲಯಗಳಲ್ಲಿಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ.

ಧಾರ್ಮಿಕ ಚೈತನ್ಯ ಕಳೆದುಕೊಳ್ಳುವುದೇ ಗಂಗಾ ನದಿ?

ನನ್ನನ್ನು ಚಕಿತಗೊಳಿಸಿದ ವಿಷಯವೆಂದರೆ, ಜಾಸ್ಮಿನ್ ಅವರ ಕಾರ್ಯದಿಂದಾಗಿ ಗುರುವಾಯೂರಿನ ರುದ್ರತೀರ್ಥಂ ಎಂಬ ಪವಿತ್ರ ಕೊಳವು "ಅಶುದ್ಧ"ವಾಯಿತು ಎಂಬ ವರದಿ.

ಹಾಗಾದರೆ ಹಿಂದೂಯೇತರರು ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಏನಾಗುತ್ತದೆ?

ನಿಜಕ್ಕೂ ದಿಗ್ಬ್ರಮೆಗೆ ಒಳಗಾದ ನಾನು ನನ್ನನ್ನೇ ಕೇಳಿಕೊಂಡೆ; ಹಿಂದೂಗಳ ಪಾಲಿನ ಸರ್ವಶ್ರೇಷ್ಠ ಪವಿತ್ರ ನದಿಯಾಗಿರುವ ಗಂಗಾ, ಹಿಮಾಲಯದಿಂದ ಬಂಗಾಳಕೊಲ್ಲಿಯವರೆಗಿನ ತನ್ನ 2,525 ಕಿ.ಮೀ. ಹಾದಿಯಲ್ಲಿ ಹಿಂದೂಯೇತರರು ಅದರ ನೀರಿನಲ್ಲಿ ಮುಳುಗಿದರೆ, ಅದು ತನ್ನ ಧಾರ್ಮಿಕ ಚೈತನ್ಯವನ್ನು ಕಳೆದುಕೊಳ್ಳುತ್ತದೆಯೇ?

ಅದೇ ರೀತಿ, ಅಮೃತಸರದ ಸುವರ್ಣ ದೇಗುಲದ ಪವಿತ್ರ ಕೊಳವಾದ ಅಮೃತ್ ಸರೋವರದಲ್ಲಿ ಸಿಖ್ ಅಲ್ಲದವರು ಸ್ನಾನ ಮಾಡಿದರೆ, ಅದು ತನ್ನ ಧಾರ್ಮಿಕ ಪ್ರಭೆಯನ್ನು ಕಳೆದುಕೊಳ್ಳುತ್ತದೆಯೇ?

ಇಲ್ಲಿ ಯಾವುದೇ ಧಾರ್ಮಿಕ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ಅಥವಾ ಅರಿವಿಲ್ಲದೆ ಧಾರ್ಮಿಕ ಅಥವಾ ಕಾನೂನು ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದೇ (ಅಥವಾ ಕ್ಷಮಿಸುವುದು) ಒಂದು ವಿಷಯವಾದರೆ, ಒಂದು ನಿರ್ದಿಷ್ಟ ಧರ್ಮಕ್ಕೆ ಸೇರದ ಜನರ ಸ್ಪರ್ಶದಿಂದ ಪವಿತ್ರ ನೀರು ಅಶುದ್ಧವಾಗುತ್ತದೆ ಎಂದು ಆರೋಪಿಸುವುದು ಸಂಪೂರ್ಣ ಭಿನ್ನ ಸಂಗತಿ.

ಉತ್ತರ ಭಾರತದ ಬಹಳಷ್ಟು ಸಣ್ಣ ಮತ್ತು ಮಧ್ಯಮ ಗಾತ್ರದ ದೇವಾಲಯಗಳಲ್ಲಿ ಭಕ್ತರು ದೇವರನ್ನು ಮುಕ್ತವಾಗಿ ಸ್ಪರ್ಶಿಸುತ್ತಾರೆ. ಅಲ್ಲಿ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ, ಇದಕ್ಕೆ ತದ್ವಿರುದ್ಧವಾಗಿ, ದಕ್ಷಿಣ ಭಾರತದಲ್ಲಿ ಇದು ಸಂಪೂರ್ಣ ನಿಷಿದ್ಧ. ಕೇರಳದ ಹಿಂದೂ ದೇವಾಲಯಗಳಲ್ಲಿ, ಭಕ್ತರು ಮತ್ತು ಅರ್ಚಕರ ನಡುವೆ ಅತಿ ಸಣ್ಣ ದೈಹಿಕ ಸ್ಪರ್ಶಕ್ಕೂ ಅವಕಾಶವಿರುವುದಿಲ್ಲ.

ಕರ್ನಾಟಕದ ಶೃಂಗೇರಿ ಮತ್ತು ತಮಿಳುನಾಡಿನ ಕಂಚಿಯ ಗೌರವಾನ್ವಿತ ಮಠಗಳ ಮುಖ್ಯಸ್ಥರಾಗಿದ್ದ ಸಂತರು ಹಿಂದೂಯೇತರ ಭಕ್ತರನ್ನು ಮುಕ್ತವಾಗಿ ಸ್ವೀಕರಿಸಿ ಆಶೀರ್ವದಿಸುತ್ತಿದ್ದ ಕಾಲಕ್ಕೆ ವ್ಯತಿರಿಕ್ತವಾಗಿ, ಈಗ ಅನೇಕ ಹಿಂದೂ ದೇವಾಲಯಗಳನ್ನು ನಿರ್ವಹಿಸುತ್ತಿರುವವರು ಅನ್ಯಧರ್ಮೀಯರ ಬಗ್ಗೆ ತಮ್ಮ ವರ್ತನೆಯಲ್ಲಿ ಸಂಕುಚಿತ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ.

ಯೇಸುದಾಸ್ ಹಾಡು ತಕ್ಕ ಉದಾಹರಣೆ

ಖ್ಯಾತ ಮಲಯಾಳಂ ಗಾಯಕ ಕೆ.ಜೆ. ಯೇಸುದಾಸ್ ಅವರ ಅನುಭವಕ್ಕಿಂತ ಬೇರೆ ದೊಡ್ಡ ಉದಾಹರಣೆ ಬೇಕಾಗಿಲ್ಲ ಅನಿಸುತ್ತದೆ. ಶಬರಿಮಲೆ ದೇವಾಲಯದಲ್ಲಿ ಅವರು ಹಾಡಿದ 'ಹರಿವರಾಸನಂ' ಭಕ್ತಿಗೀತೆಯನ್ನು ದೇವಸ್ಥಾನದ ಬಾಗಿಲು ಮುಚ್ಚುವಾಗ ಪ್ರತಿದಿನ ರಾತ್ರಿ ನುಡಿಸಲಾಗುತ್ತದೆ. ಇತರ ಸ್ಥಳಗಳಲ್ಲಿಯೂ ಈ ಪರಿಪಾಠವಿದೆ.

ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕ ಮತ್ತು ಹಿನ್ನೆಲೆ ಗಾಯಕ, ಗಾನ-ಗಂಧರ್ವ ಎಂದೇ ಜನಪ್ರಿಯರಾದವರು ಯೇಸುದಾಸ್. ಅವರು ಅಯ್ಯಪ್ಪನ ಕಟ್ಟಾ ಭಕ್ತ ಕೂಡ ಹೌದು. ಅವರು ಹಾಡಿರುವ ಅಯ್ಯಪ್ಪನ ಹಾಡುಗಳಿಗೆ ಲೆಕ್ಕವಿಲ್ಲ. ಆದರೆ, ಕೇರಳದಲ್ಲಿ ಅವರ ಕ್ರಿಶ್ಚಿಯನ್ ಮೂಲವು ಅವರಿಗೆ ಸಾಕಷ್ಟು ತೊಂದರೆಗಳನ್ನು ತಂದಿದೆ ಎಂಬುದನ್ನು ಮರೆಯುವಂತಿಲ್ಲ. ಕ್ರಿಶ್ಚಿಯನ್ ಮತ್ತು ಹಿಂದೂ ಸಮುದಾಯಗಳಿಂದಲೂ ಅವರು ಸಮಸ್ಯೆಯನ್ನು ಎದುರಿಸಬೇಕಾಯಿತು.

ಅವರು ಮೊದಲ ಬಾರಿಗೆ ಶಬರಿಮಲ ದೇಗುಲಕ್ಕೆ ಭೇಟಿ ನೀಡಿದಾಗ ಅವರ ಸಮುದಾಯದ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಅವರು ವಿಚಲಿತರಾಗಲಿಲ್ಲ. ಹಿಂದೂ ಧರ್ಮದ ಬಗ್ಗೆ ಅವರಿಗೆ ಅಪಾರ ಭಕ್ತಿ ಇದ್ದರೂ ಕೂಡ ಹಿಂದೂ ದೇವಾಲಯಗಳ ಪ್ರವೇಶಕ್ಕೆ ಅವರಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದು ನಾಚಿಕೆಗೇಡಿನ ಸಂಗತಿಯಲ್ಲವೇ?

ಯೇಸುದಾಸ್ ಅವರು ಶಬರಿಮಲ ದೇಗುಲಕ್ಕೆ ಅನೇಕ ಬಾರಿ ಭೇಟಿ ನೀಡಿದ್ದರೂ, ಕರ್ನಾಟಕದ ಕೊಲ್ಲೂರು ಮುಕಾಂಬಿಕಾ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿದ್ದರೂ, ತಿರುವನಂತಪುರದ ಪ್ರಸಿದ್ಧ ಶ್ರೀ ಪದ್ಮನಾಭ ಸ್ವಾಮಿ ಮಂದಿರಕ್ಕೆ ಮೊದಲ ಬಾರಿಗೆ ಪ್ರವೇಶ ಸಿಕ್ಕಿದ್ದು 2017ರಲ್ಲಿ. ಅದೂ ಕೂಡ ತಾವು ಹಿಂದೂ ಧರ್ಮದ ಅನುಯಾಯಿ ಎಂದು ಅವರು ಲಿಖಿತವಾಗಿ ಬರೆದುಕೊಟ್ಟ ಬಳಿಕವೇ.

ಹಿಂದೂ ದೇವರು ಮತ್ತು ದೇವತೆಗಳ ಸ್ತುತಿಗೀತೆಗಳನ್ನು ಹಾಡುತ್ತ, ಆ ಹಾಡುಗಳಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಅತ್ಯಂತ ಗೌರವಾನ್ವಿತ ಗಾಯಕ ಯೇಸುದಾಸ್ ಅವರು ಹಿಂದೂ ದೇವಾಲಯವನ್ನು ಪ್ರವೇಶಿಸಲು ಕನಿಷ್ಠ ಲಿಖಿತ ರೂಪದಲ್ಲಾದರೂ ತಮ್ಮ ಧರ್ಮವನ್ನು ಬದಲಿಸಿಕೊಳ್ಳಬೇಕಾಯಿತು ಎಂಬುದು ನಾಚಿಕೆಗೇಡಿನ ಸಂಗತಿಯಲ್ಲವೇ?

ಕಂಚಿಮಠದ ಚಂದ್ರಶೇಖರೇಂದ್ರ ಸರಸ್ವತಿ ಅವರು ನಿಧನರಾಗಿದ್ದು 1994ರಲ್ಲಿ. 87 ವರ್ಷಗಳ ಕಾಲ ಕಂಚಿಮಠದ ಅಧ್ಯಕ್ಷರಾಗಿದ್ದ ಯತಿಗಳು ಯಾರನ್ನೂ ಯಾವುದೇ ಧರ್ಮಕ್ಕೆ ಮತಾಂತರ ಮಾಡುವುದನ್ನು ವಿರೋಧಿಸಿದ್ದರು. ಯಾವ ಧರ್ಮದಲ್ಲಿ ಹುಟ್ಟಿದ್ದಾರೋ ಅದೇ ಧರ್ಮದಲ್ಲಿಯೇ ಉಳಿಯಬೇಕು ಎಂಬುದು ಅವರ ವಾದವಾಗಿತ್ತು. ಅವರ ಜೀವಿತಾವಧಿಯಲ್ಲಿ ಅನೇಕ ಮಂದಿ ಹಿಂದುಯೇತರರು ಹಿಂದೂ ಧರ್ಮವನ್ನು ಸ್ವೀಕರಿಸಲು ಮುಂದೆ ಬಂದಿದ್ದರು. ‘ದೇವರು ನಿಮ್ಮನ್ನು ಆ ಧರ್ಮದಲ್ಲಿ ಹುಟ್ಟಿಸಿದ್ದರೆ ಅದಕ್ಕೆ ಸರಿಯಾದ ಕಾರಣವಿರುತ್ತದೆ. ಹಾಗಾಗಿ ಆ ಧರ್ಮವನ್ನೇ ಉಳಿಸಿಕೊಳ್ಳಿ’ ಎಂದು ಅವರು ಸಲಹೆ ನೀಡುತ್ತಿದ್ದರು.

ಕಂಚೀಶ್ರೀ ಹೇಳಿದ ಧರ್ಮದ ಮಾತು

"ಒಂದು ಪುಟ್ಟ ಮಗುವಿನಂತೆ, ನಿಜವಾದ ಧಾರ್ಮಿಕ ವ್ಯಕ್ತಿ ಒಂದು ಧರ್ಮ ಅಥವಾ ಧಾರ್ಮಿಕ ಪಂಗಡದ ದೇವರು ಮತ್ತು ಮತ್ತೊಂದು ದೇವರ ನಡುವೆ ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ" ಎಂದು ಆ ಸಂತರು ಹೇಳಿದ್ದರು.

"ಧರ್ಮದ ವಿಷಯದಲ್ಲಿ, ಯಾವತ್ತೂ ತಮ್ಮ ಪೂರ್ವಜರ ಧರ್ಮವನ್ನು ಅನುಸರಿಸಬೇಕು. ಒಂದು ಧರ್ಮವನ್ನು ಬಿಟ್ಟು ಇನ್ನೊಂದನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ತಮ್ಮ ಧರ್ಮಕ್ಕೆ ಸೇರುವಂತೆ ಆಹ್ವಾನಿಸುವುದು ಕೂಡ ದೇವರಿಗೆ ವಿರುದ್ಧವಾದುದು, ಅದೊಂದು ಪಾಪ ಕಾರ್ಯ. ಯಾಕೆಂದರೆ ಹಳೆಯ ಮತ್ತು ಹೊಸ ಎರಡೂ ಧರ್ಮಗಳಿಗೂ ದೇವರು ಸಾಮಾನ್ಯನಾಗಿದ್ದಾನೆ. ಎಲ್ಲಾ ಧರ್ಮಗಳು ಮತ್ತು ಎಲ್ಲಾ ಧರ್ಮ ಪಂಗಡಗಳ ದೇವರು ಒಬ್ಬನೇ" ಎಂದು ಚಂದ್ರಶೇಖರೇಂದ್ರ ಸರಸ್ವತಿ ಅವರು ಹೇಳಿದ್ದರು.

ಚಂದ್ರಶೇಖರೇಂದ್ರ ಸರಸ್ವತಿ ಅವರಂತಹ ಆಧ್ಯಾತ್ಮಿಕ ಅಗ್ರಗಣ್ಯರಿಗೆ ಹೋಲಿಸಿದರೆ, ಇಂದು ಹಿಂದೂ ದೇವಾಲಯಗಳನ್ನು ನಿರ್ವಹಿಸುವವರು ಕುಬ್ಜರಾಗಿ ಕಾಣುತ್ತಾರೆ. ಆದರೂ, ಈ ಪೂಜ್ಯರ ಬೋಧನೆಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಹಿಂದೂ ಧರ್ಮವನ್ನು ಉತ್ತಮವಾಗಿ ತಿಳಿದುಕೊಳ್ಳಲು ಬಯಸುವ ಹಿಂದೂಯೇತರರು ದೇವಾಲಯಗಳನ್ನು ಪ್ರವೇಶಿಸಲು ಬಯಸಿದರೆ ಹಿಂದೂ ಧರ್ಮವು ಹೇಗೆ ಕುಗ್ಗುತ್ತದೆ?

ಎಲ್ಲರಿಗೂ ಸೇರಿದ್ದು ಎಂಬ ಭಾವನೆ ಬರಲಿ

ಕಾನೂನು ಮತ್ತು ಧಾರ್ಮಿಕ ನಿಯಮಗಳನ್ನು ನಿಶ್ಚಿತವಾಗಿ ಅನುಸರಿಸಲೇಬೇಕು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಂತ ಹಿಂದೂಯೇತರರು ದೇವಾಲಯಗಳಿಗೆ ಭೇಟಿ ನೀಡುವ ಪ್ರಾಮಾಣಿಕ ಆಸೆ ವ್ಯಕ್ತಪಡಿಸಿದರೆ, ಅವರನ್ನು ಬರಮಾಡಿಕೊಳ್ಳಬೇಕು. ಅವರು ತಮ್ಮ ಧರ್ಮವನ್ನು ಬಿಡಬೇಕೆಂಬ ನಿರೀಕ್ಷೆ ಇಟ್ಟುಕೊಳ್ಳಬಾರದು. ಒಂದು ಬೆಟ್ಟ ಅಥವಾ ಪರ್ವತದ ಮೇಲೆ ಒಂದು ಪ್ರಾಚೀನ ಹಿಂದೂ ದೇವಾಲಯವಿದೆ ಎಂಬ ಕಾರಣಕ್ಕೆ ಅದು ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದು ಎಂದು ಹೇಳುವುದು ಹಾಸ್ಯಾಸ್ಪದ.

ನನ್ನ ಮಾಜಿ ಮುಸ್ಲಿಂ ಸಹೋದ್ಯೋಗಿಯೊಬ್ಬರಿಗೆ ಹಿಂದೂ ದೇವಾಲಯವನ್ನು ಪ್ರವೇಶಿಸುವ ತೀವ್ರ ಹಂಬಲವಿತ್ತು. ನಾನು ಅವರನ್ನು ದಕ್ಷಿಣ ಭಾರತದ ಒಂದು ದೇವಸ್ಥಾನಕ್ಕೆ ಕರೆದುಕೊಂಡು ಹೋದೆ. ಅವರು ಅತ್ಯಂತ ಉತ್ಸಾಹದಿಂದ ಆರತಿಯನ್ನು ಸ್ವೀಕರಿಸಿದರು ಮತ್ತು ನನ್ನನ್ನು ಅನುಕರಿಸುತ್ತಾ, ತಮ್ಮ ಹಣೆಗೆ ವಿಭೂತಿಯನ್ನು ಹಚ್ಚಿಕೊಂಡರು. ನಂತರ, ಅವರು ನನ್ನ ಜೊತೆಗೆ ಹರಿದ್ವಾರಕ್ಕೂ ಬಂದರು ಮತ್ತು ಅಲ್ಲಿ ಗಂಗಾ ನದಿಯನ್ನು ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ನಿಜ ಹೇಳಬೇಕೆಂದರೆ, ಆ ಎರಡು ಭೇಟಿಗಳು ಅವರಿಗೆ ಹಿಂದೂ ಧರ್ಮದ ಬಗ್ಗೆ ಗೊತ್ತಿಲ್ಲದ ಒಂದು ಭಾಗವನ್ನು ಪರಿಚಯಿಸಿತು ಎಂಬುದು ಸ್ಪಷ್ಟ. 

Tags:    

Similar News