ಕ್ವೀರ್ ಸಮುದಾಯದ ವಿವಾಹ ಹಕ್ಕು ಬೇಡಿಕೆ:‌ ಶಾಸಕಾಂಗಕ್ಕೆ ವಹಿಸಿದ ಸುಪ್ರೀಂಕೋರ್ಟ್

Update: 2024-02-05 06:30 GMT

ಕ್ವೀರ್ ಸಮುದಾಯದ ವಿವಾಹ ಹಕ್ಕು ಬೇಡಿಕೆ:‌ ಶಾಸಕಾಂಗಕ್ಕೆ ವಹಿಸಿದ ಸುಪ್ರೀಂಕೋರ್ಟ್‌ 

-ಪ್ರವೀಣ ಯಳ್ಳಿಗುತ್ತಿ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎನ್ನುವುದು ಕ್ವೀರ್ ಸಂಗಾತಿಗಳ ಬಹುದಿನದ ಬೇಡಿಕೆಯಾಗಿತ್ತು, ಆದರೆ ಇದೀಗ ಸುಪ್ರೀಂಕೋರ್ಟ್ ಅದನ್ನು ಸಂಸತ್ತಿನ ಅಂಗಳಕ್ಕೆ ಹಾಕಿದೆ. ಇದು ಎಲ್‌ಜಿಬಿಟಿಕ್ಯು ಸಮುದಾಯದ ಕೆಲವರಿಗೆ ಬೇಸರ ತರಿಸಿದರೆ, ಇನ್ನೂ ಕೆಲವರು ತಮಗೆ ಮದುವೆ ಮಾನ್ಯತೆಗಿಂತ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಕಾನೂನು ಜಾರಿಯಾಗಬೇಕು ಎಂದು ಹೇಳುತ್ತಿದ್ದಾರೆ.

ಸುಪ್ರೀಂಕೋರ್ಟ್ ಹೇಳಿದ್ದೇನು?

ಅ.17ರಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ಸಲಿಂಗ ವಿವಾಹಕ್ಕೆ ಸಂಸತ್ತು ಮಾತ್ರ ಮಾನ್ಯತೆಯನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ. ಮದುವೆಯು ಮೂಲಭೂತ ಹಕ್ಕು ಆಗಿರದ ಕಾರಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಸ್ವಾತಂತ್ರ್ಯದ ಅರ್ಥವೆಂದರೆ ವ್ಯಕ್ತಿ ತಾನು ಬಯಸಿದ ಬದುಕನ್ನು ಬದುಕುವುದಾಗಿದೆ. ಕ್ವೀರ್ (LGBTIQA+ ಅಂದರೆ lesbian, gay, bisexual, transgender, intersex, queer/questioning, asexual ಸಮುದಾಯವನ್ನು ಒಟ್ಟಾಗಿ ವಿವರಿಸುವ ಪದ) ಎಂಬುವುದು ಯುಗಯುಗಾಂತರಗಳಿಂದ ತಿಳಿದಿರುವ ನೈಸರ್ಗಿಕ ವಿದ್ಯಮಾನವಾಗಿದೆ. ಸಲಿಂಗ ಆಸಕ್ತಿ ಎಂಬುವುದು ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಮೇಲ್ವರ್ಗಗಳಿಗೆ ಸೀಮಿತವಾಗಿಲ್ಲ ಎಂದು ಕೋರ್ಟ್ ಹೇಳಿದೆ.

ಸಲಿಂಗ ವಿವಾಹದ ಕುರಿತು ನ್ಯಾಯಾಲಯ ಕಾನೂನು ರೂಪಿಸಲು ಸಾಧ್ಯವಿಲ್ಲ. ಆದರೆ ರೂಪಿಸಿದ ಕಾನೂನನ್ನು ವ್ಯಾಖ್ಯಾನಿಸಬಹುದು. ವಿಶೇಷ ವಿವಾಹ ಕಾಯಿದೆಯಲ್ಲಿನ ಬದಲಾವಣೆಯನ್ನು ಸಂಸತ್ತು ನಿರ್ಧರಿಸಬೇಕು. ಈ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸಮುದಾಯದ ಕುರಿತಂತೆ ತಾರತಮ್ಯ ಮಾಡಬಾರದು. ಲಿಂಗದ ಗುರುತಿನ ಬಗ್ಗೆ ವಿಚಾರಿಸಲೆಂದು ಠಾಣೆಗೆ ಬರಲು ಹೇಳಿ ಎಲ್‌ಜಿಬಿಟಿ ಸಮುದಾಯಕ್ಕೆ ಯಾವುದೇ ಕಿರುಕುಳ ನೀಡಬಾರದು. ತಮ್ಮ ಹೆತ್ತವರ ಕುಟುಂಬಕ್ಕೆ ಮರಳುವಂತೆ ಕ್ವೀರ್ ಸಮುದಾಯದವರಿಗೆ ಪೊಲೀಸರು ಬಲವಂತಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.

’ಸಲಿಂಗ ಸಂಗಾತಿಗಳು ಮದುವೆಯಾಗುವ ಹಕ್ಕನ್ನು ನ್ಯಾಯಾಂಗ ಗುರುತಿಸುವುದಿಲ್ಲ ಮತ್ತು ಈ ವಿಷಯದ ಬಗ್ಗೆ ಕಾನೂನು ರೂಪಿಸುವುದು ಸಂಸತ್ತು ಅಥವಾ ರಾಜ್ಯ ಶಾಸಕಾಂಗಕ್ಕೆ ಬಿಟ್ಟದ್ದು’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಂವಿಧಾನ ಪೀಠವು ತೀರ್ಪು ನೀಡಿದೆ.

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕು ಎತ್ತಿಹಿಡಿದ ಸುಪ್ರೀಂ;

ಸುಪ್ರೀಂಕೋರ್ಟಿನ ಸಂವಿಧಾನ ಪೀಠವು 3:2ರ ಬಹುಮತದ ತೀರ್ಪು ಕೊಟ್ಟಿತು. ಬಹುಮತದ ಅನುಸಾರ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನಿರಾಕರಿಸಿದರೂ, ಲಿಂಗತ್ವ ಅಲ್ಪಸಂಖ್ಯಾತರು ಭಿನ್ನಲಿಂಗೀಯ ವ್ಯಕ್ತಿಗಳನ್ನು ಮದುವೆಯಾಗುವ ಹಕ್ಕನ್ನು ಸುಪ್ರೀಂಕೋರ್ಟ್ ಮಂಗಳವಾರ ಗುರುತಿಸಿದೆ.

“ಭಿನ್ನಲಿಂಗೀಯ ಸಂಬಂಧದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಮದುವೆಯಾಗುವ ಹಕ್ಕು ಹೊಂದಿದ್ದಾರೆ” ಎಂದು ಪೀಠ ಹೇಳಿತು.

ತೀರ್ಪು ಸಮುದಾಯವನ್ನು ಅನುಕಂಪವಿಲ್ಲದ ಶಾಸಕಾಂಗಕ್ಕೆ ತಳ್ಳಿದೆ

ಪ್ರಕರಣದ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಲ್ಲಿ ಒಬ್ಬರಾದ ವಕೀಲ ರೋಹಿನ್ ಭಟ್ ಅವರು, ಈ ತೀರ್ಪು ಸಮುದಾಯವನ್ನು ʼಅನುಕಂಪವಿಲ್ಲದʼ ಶಾಸಕಾಂಗಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ.

ಮೂಲಭೂತ ಹಕ್ಕುಗಳ ಸಮಸ್ಯೆಯೇ ಬಗೆಹರಿದಿಲ್ಲ: ರೂಮಿ ಹರೀಶ್

ಅಂಕಣಕಾರ, ಕವಿ, ಹೋರಾಟಗಾರ ಹಾಗೂ ರಂಗಕರ್ಮಿ, ಕ್ವೀರ್ ವ್ಯಕ್ತಿಯಾಗಿರುವ ರೂಮಿ ಹರೀಶ್ ಅವರು, ʻಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆ ಇಡುವುದು ಅಷ್ಟು ಸೂಕ್ತವಲ್ಲ. ಏಕೆಂದರೆ ಅದು ಅತ್ಯಂತ ತುರ್ತು ಅಥವಾ ಅನಿವಾರ್ಯವೂ ಅಲ್ಲ, ನಮಗೆ ಬೇಕಿರುವುದು ಮೂಲಭೂತವಾದ ಹಕ್ಕುಗಳು. ನಾವು ಅವುಗಳ ಬಗ್ಗೆ ಹೆಚ್ಚು ಮಾತನಾಡಬೇಕಿದೆ. ಎಲ್ಲವೂ ಸರಿಯಾದ ಬಳಿಕ ವಿವಾಹ ಮಾನ್ಯತೆ ಕುರಿತು ಮಾತನಾಡುವುದು ಸೂಕ್ತʼ ಎಂದು ಅಭಿಪ್ರಾಯಪಟ್ಟರು.

ಸಂಕೀರ್ಣವಾದ ತೀರ್ಪು: ಅರವಿಂದ ನಾರಾಯಣ್

ತೀರ್ಪಿನ ವಿಚಾರವಾಗಿ ವಕೀಲರು ಮತ್ತು ಪಿಯುಸಿಎಲ್ ರಾಜ್ಯಾಧ್ಯಕ್ಷ ಅರವಿಂದ ನಾರಾಯಣ್ ಮಾತನಾಡಿದ್ದು, “ನ್ಯಾಯಾಂಗವು ಸಂವಿಧಾನದ ಹಕ್ಕುಗಳನ್ನು ಎಲ್ಲರಿಗೂ ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ. ಆದರೆ ಇಂತಹ ವಿಚಾರವಾಗಿ ಸಂಸತ್ತಿನಲ್ಲಿ ಬಹುಮತ ಇರುವವರ ಕೈಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಕೊಡುವುದು ಸರಿಯಲ್ಲ. ಏಕೆಂದರೆ ಅವರು ಬಹುಸಂಖ್ಯಾತರ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ. ಆದರೆ ನಾವು ಅಲ್ಪಸಂಖ್ಯಾತರು. ಹಾಗಾಗಿ ನಮ್ಮ ಹಕ್ಕುಗಳು ಅಲ್ಲಿ ಮಾನ್ಯವಾಗುವುದು ಕಷ್ಟ. ರಾಜ್ಯ ಸರ್ಕಾರಗಳಿಗೂ ಕಾನೂನು ಮಾಡಲು ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಮ್ಮ ರಾಜ್ಯದಲ್ಲಿ ಪ್ರಗತಿಪರ ಸರ್ಕಾರ ಇದೆ ಎಂದು ಹೇಳುತ್ತಾರಲ್ವಾ, ಅವರಾದರೂ ಈ ಕಾನೂನು ಮಾಡಬೇಕು” ಎಂದು ಹೇಳಿದರು.


Similar News