ಚುನಾವಣಾ ಆಯೋಗದ ಮೇಲಿರುವುದು ಮತದಾರನ ಅನರ್ಹತೆ ಸಾಬೀತುಪಡಿಸುವ ಹೊಣೆ, ಪೌರತ್ವದ ತಂಟೆ ಅದಕ್ಕೆ ಬೇಡ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಮತದಾರ ಸಾಕ್ಷ್ಯ ತರಬೇಕು ಎಂದು ಕೇಳುವ ಬದಲು ಆತನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗವೇ ಸಾಕ್ಷ್ಯವನ್ನು ಒದಗಿಸಬೇಕು.;
ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾದ 65 ಲಕ್ಷ ಜನರ ಹೆಸರಿನ ಪಟ್ಟಿ ಮತ್ತು ಅದಕ್ಕೆ ಕಾರಣಗಳನ್ನು ಪ್ರಕಟಿಸಬೇಕು. ಜೊತೆಗೆ ಆಧಾರ್ ಕಾರ್ಡ್ ಅನ್ನು ಮಾನ್ಯವಾದ ಗುರುತಿನ ಪುರಾವೆಯಾಗಿ ಸ್ವೀಕರಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವು ಸಂಪೂರ್ಣ ಸ್ವಾಗತಾರ್ಹವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದೆ ಎನ್ನುವಾಗ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗ ನಿರ್ಧರಿಸಿತ್ತು. ಈಗ ಸುಪ್ರೀಂ ಕೋರ್ಟಿನ ನಿರ್ದೇಶನದಿಂದಾಗಿ ಪ್ರಜಾಪ್ರಭುತ್ವದ ಮೇಲಿನ ಅನಿಯಂತ್ರಿತ ದಾಳಿಯಿಂದ ರಕ್ಷಣೆ ಸಿಗಲಿದೆ.
ಹಾಗಿದ್ದೂ ತನ್ನದೇ ಆದ ಕಾರಣಗಳಿಂದಾಗಿ ನಾಗರಿಕರಲ್ಲ ಎಂದು ಪರಿಗಣಿಸುವವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಚುನಾವಣಾ ಆಯೋಗದ ಪ್ರಯತ್ನವು ಸಂಪೂರ್ಣ ತಳ್ಳಿಹಾಕಲಾಗಿದೆ ಎಂದು ಹೇಳುವಂತಿಲ್ಲ. ಭಾರತವು ಬ್ರಿಟನ್ ನಂತೆ ಅಲ್ಲ. ಅಲ್ಲಿನ ಚುನಾವಣೆಯಲ್ಲಿ ಆ ದೇಶದ ನಾಗರಿಕರು ಮಾತ್ರವಲ್ಲದೆ ಐರ್ಲೆಂಡ್ ಮತ್ತು ಇತರ ಕಾಮನ್-ವೆಲ್ತ್ ರಾಷ್ಟ್ರಗಳ ನಾಯಕರಿಗೂ ಮತ ಚಲಾಯಿಸುವ ಹಕ್ಕು ಇರುತ್ತದೆ. ಆದರೆ ಅವರು ಅದಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು ಹಾಗೂ ಯಾವುದೇ ಅಪರಾಧಕ್ಕಾಗಿ ಶಿಕ್ಷೆಗೆ ಒಳಗಾಗಿರಬಾರದು. ಭಾರತದಲ್ಲಿ ಕೇವಲ ನಾಗರಿಕರಿಗೆ ಮಾತ್ರ ಮತದಾನ ಮಾಡಲು ಅವಕಾಶವಿದೆ. ಇದು ಸಮಂಜಸವೂ ಹೌದು. ಇಲ್ಲಿರುವ ನಿಜವಾದ ಸಮಸ್ಯೆ ಏನೆಂದರೆ ಒಬ್ಬ ಮತದಾರನ ಪೌರತ್ವದ ಹಕ್ಕು ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬೇಕು?
ಅಪರಾಧಿ ಎಂದು ಸಾಬೀತುಮಾಡುವ ಹೊಣೆ
ಯಾವುದೇ ವ್ಯಕ್ತಿ ತಪ್ಪಿತಸ್ಥ ಎಂದು ಸಾಬೀತಾಗುವ ತನಕ ಆತ ನಿರಪರಾಧಿ ಎಂದು ಪರಿಗಣಿಸುವುದು ಸಾಮಾನ್ಯ ಕಾನೂನು ನ್ಯಾಯಶಾಸ್ತ್ರದ ಮೂಲತತ್ವ. ಅಮೆರಿಕದ ಕಾನೂನುಗಳ ರೀತಿಯಲ್ಲಿಯೇ ಭಾರತದ ಕಾನೂನನ್ನು ಕೂಡ ಇಂಗ್ಲಂಡಿನ ಸಾಮಾನ್ಯ ಕಾನೂನು ವ್ಯವಸ್ಥೆಯಿಂದ ಎರವಲು ಪಡೆದಿದ್ದಾಗಿದೆ. ಭಾರತದಲ್ಲಿ ಒಬ್ಬ ವ್ಯಕ್ತಿ ಅಪರಾಧ ಎಸಗಿದ್ದಾನೆ ಎಂಬುದನ್ನು ಸಾಬೀತುಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ.
ಒಂದು ವೇಳೆ ಆಪಾದಿತ ವ್ಯಕ್ತಿಯು ತಪ್ಪಿತಸ್ಥ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾದರೆ ಆರೋಪಿಯು ಬಂಧಮುಕ್ತನಾಗುತ್ತಾನೆ. ಪ್ರಧಾನಿ ಮತ್ತು ಗೃಹ ಮಂತ್ರಿಯಾದಿಯಾಗಿ ಇಂದು ಉನ್ನತ ಅಧಿಕಾರದಲ್ಲಿರುವ ಅನೇಕ ಮಂದಿ ಈ ಸಿದ್ಧಾಂತದ ಪ್ರಯೋಜನವನ್ನು ಪಡೆದವರೇ ಆಗಿದ್ದಾರೆ.
ಸಾಕ್ಷ್ಯಗಳನ್ನು ಒದಗಿಸುವ ಹೊಣೆಗಾರಿಕೆಯು ಯಾವತ್ತೂ ಆರೋಪಿಯ ಮೇಲಿರುವುದಿಲ್ಲ. ಬದಲಾಗಿ ಆರೋಪ ಮಾಡುವವರ ಮೇಲಿರುತ್ತದೆ. ಒಬ್ಬ ವ್ಯಕ್ತಿಯು ವಿದೇಶಿ ಪ್ರಜೆ ಎಂಬ ಕಾರಣಕ್ಕೆ ಮತಚಲಾಯಿಸಲು ಅರ್ಹತೆಯನ್ನು ಪಡೆದಿಲ್ಲ ಎಂಬ ಅನುಮಾನವಿದ್ದರೆ ಈ ಸಿದ್ಧಾಂತವನ್ನು ಅನುಸರಿಸಲು ಸಾಕಷ್ಟು ಕಾರಣಗಳಿವೆ. ಮತದಾರರ ಪಟ್ಟಿಯಿಂದ ಯಾವುದೇ ವ್ಯಕ್ತಿಯನ್ನು ಹೊರಗಿಡಲು ಆತ ಭಾರತೀಯ ಪ್ರಜೆಯಲ್ಲ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿಯು ಸರ್ಕಾರ ಅಥವಾ ಚುನಾವಣಾ ಆಯೋಗದ ಮೇಲಿರಬೇಕು.
ಮತದಾರ ಹೊಣೆಯಲ್ಲ
ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಬಿಹಾರದಲ್ಲಿ ನಡೆಯುತ್ತಿರುವ ಚುನಾವಣಾ ಪರಿಷ್ಕರಣೆಯಲ್ಲಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಮತದಾರರೇ ದಾಖಲೆಗಳನ್ನು ಸಲ್ಲಿಸಬೇಕು ಎಂಬುದು ಭಾರತದ ಸಾಮಾನ್ಯ ಕಾನೂನು ವ್ಯವಸ್ಥೆಯ ಪ್ರಧಾನ ತತ್ವಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ.
ಅರ್ಹತೆ ಇಲ್ಲದೇ ಇರುವವರು ಯಾರಾದರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಅಥವಾ ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವುದನ್ನು ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗವು ನಂಬಿದ್ದರೆ ತಮ್ಮ ವಾದವನ್ನು ಹಾಗೂ ಆ ವ್ಯಕ್ತಿಯ ಅನರ್ಹತೆಯನ್ನು ಸಾಬೀತುಮಾಡಲು ಅದು ಸೂಕ್ತವಾದ ಆಧಾರಗಳನ್ನು ನೀಡಬೇಕಾಗುತ್ತದೆ. ಅರ್ಹ ಮತದಾರನಾದವನು ತಾನು ಅರ್ಹ ಎಂದು ಸಾಬೀತುಪಡಿಸುವ ಅಗತ್ಯ ಇರುವುದಿಲ್ಲ.
ಪೌರತ್ವದ ದಾಖಲೆ ಎಂಬ ಗೊಂದಲ
ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗಗಳನ್ನು ಹೊರತುಪಡಿಸಿದರೆ ಉಳಿದ ಭಾಗಗಳಲ್ಲಿ ಉತ್ತಮ ಆಡಳಿತ ಹೊಂದಿಲ್ಲ. ಅದರ ಫಲವಾಗಿ ಅಲ್ಲಿನ ನಾಗರಿಕರು ತಮ್ಮ ಪೌರತ್ವದ ಬಗ್ಗೆ ದಾಖಲಾತಿಯ ಪುರಾವೆಯನ್ನು ಹೊಂದಿಲ್ಲ. ಜನನ ಮತ್ತು ಮರಣ ಸಮಗ್ರ ಸ್ವರೂಪದಲ್ಲಿ ನೋಂದಣಿಯಾಗಿಲ್ಲ. ಪಾಸ್-ಪೋರ್ಟ್ ಗಳನ್ನು ಹೊಂದಿದ ಜನರ ಸರಾಸರಿಯು ಏಕ ಅಂಕೆಯಲ್ಲಿದೆ. ಸುಮಾರು ಶೇ.ರಷ್ಟು ಜನರಿಗೆ ಮಾತ್ರ ಸಾರ್ವಜನಿಕ ವಲಯದ ಉದ್ಯೋಗವು ಸೀಮಿತವಾಗಿದೆ.
ಸಹಸ್ರಮಾನದ ಆರಂಭಕ್ಕೂ ಮುನ್ನ ಜನಿಸಿದವರ ಪಟ್ಟಿಯಲ್ಲಿ ಮೆಟ್ರಿಕ್ಯುಲೇಷನ್ ಸಾಮಾನ್ಯ ಸಂಗತಿಗಿಂತ ಸಾಕಷ್ಟು ದೂರದಲ್ಲಿದೆ. ಉನ್ನತ ಅಧ್ಯಯನ ಮಾಡುವವರು ಮತ್ತು ನಾಗರಿಕ ಸೇವಾ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣಪತ್ರಗಳನ್ನು ಪಡೆಯುತ್ತಾರೆ. ಇವರ ಪ್ರಮಾಣ ಅತ್ಯಲ್ಪ. ಭೂದಾಖಲೆಗಳು ಎಷ್ಟರ ಮಟ್ಟಿಗೆ ಗೊಂದಲಮಯವಾಗಿವೆ ಎಂದರೆ ಭೂಮಿಯ ಒಡೆತನವು ನಿಜವಾದ ಸ್ವಾಧೀನತೆಯನ್ನು ಖಾತರಿಪಡಿಸುವುದಿಲ್ಲ. ಅದೇ ರೀತಿ ನಿಜವಾದ ಸ್ವಾಧೀನತೆಯು ದಾಖಲಾದ ಒಡೆತನದಲ್ಲಿ ಕಾಣಿಸುವುದಿಲ್ಲ.
2011ರ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯ ಪ್ರಕಾರ ಶೇ.56ರಷ್ಟು ಭಾರತೀಯ ಕುಟುಂಬಗಳು ಹಾಗೂ ಬಿಹಾರದ ಸಂದರ್ಭದಲ್ಲಿ ಶೇ.71ರಷ್ಟು ಕುಟುಂಬಗಳು ಸ್ವಂತ ಭೂಮಿಯನ್ನೇ ಹೊಂದಿಲ್ಲ. ಜನಗಣತಿ ಪ್ರಾಧಿಕಾರವು ಸಿದ್ಧಪಡಿಸಿದ ಜಾತಿಗಳ ಪಟ್ಟಿಯಿಂದ ಆಯ್ಕೆಯನ್ನು ಮಾಡಿಕೊಳ್ಳುವ ಬಗ್ಗೆ ಕೇಳುವ ಬದಲು ಉತ್ತರ ನೀಡಿದವರನ್ನೇ ತಮ್ಮ ಜಾತಿಯನ್ನು ಗುರುತಿಸಲು ಬಿಟ್ಟಿದೆ ಎಂಬ ಟೀಕೆಯನ್ನು ಎದುರಿಸುತ್ತಿದೆ.
ಮೊಂಬತ್ತಿ ನಂದಿಸಲಾಗದವರು...
ಕೇರಳ ಮತ್ತು ತಮಿಳು ನಾಡಿನಂತಹ ರಾಜ್ಯದಲ್ಲಿ ಹುಟ್ಟಿದ್ದಾಗಿ ಹೇಳಿಕೊಳ್ಳುವ ಜನರು ತಮ್ಮ ಜನನ ಪ್ರಮಾಣಪತ್ರವನ್ನು ಪುರಾವೆಯಾಗಿ ನೀಡುವಂತೆ ಕೇಳುವುದು ನ್ಯಾಯಸಮ್ಮತವಾಗಿರುತ್ತದೆ. ಆದರೆ ದೇಶದ ಇನ್ನಿತರ ಯಾವುದೇ ಭಾಗದಲ್ಲಿ ಹಾಗಿಲ್ಲ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಂತೂ ಇಲ್ಲವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗವು ತಮ್ಮ ಜನನ ಪ್ರಮಾಣಪತ್ರವನ್ನು ನೀಡಲು ಸಾಧ್ಯವಾಗದೇ ಇದ್ದವರಿಗೆ ತಮ್ಮ ಪೋಷಕರದ್ದಾದರೂ ಜನನ ಪ್ರಮಾಣಪತ್ರ ಒದಗಿಸಲು ಅನುಮತಿಯನ್ನು ನೀಡಿದೆ. ಒಂದು ಮೊಂಬತ್ತಿಯನ್ನು ನಂದಿಸಲು ನಿಮ್ಮಿಂದ ಸಾಧ್ಯವಾಗದೇ ಹೋದರೆ ಇಡೀ ಕಾಡಿಗೇ ಹಬ್ಬಿದ ಬೆಂಕಿಯನ್ನು ಆರಿಸಲು ಅರ್ಹರೆಂದು ಭಾವಿಸಲು ಸಾಧ್ಯವೇ?
ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು ಮತದಾರರಾಗಲು ಬಯಸುವ ವ್ಯಕ್ತಿಯು ತನ್ನ ಸದ್ಭಾವನೆಯನ್ನು ಸಾಬೀತುಪಡಿಸಲು ಚುನಾವಣಾ ಆಯೋಗವು ಕೇಳುವ ಪುರಾವೆಗಳ ಅರ್ಹತೆ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ, ಆಯೋಗವೇ ಆರಂಭಿಸಿದ ತಪ್ಪು ನಿರೂಪಣೆಯನ್ನೇ ಮೊದಲು ಕೈಗೆತ್ತಿಕೊಳ್ಳಲು ನಿರ್ಧರಿಸುತ್ತಾರೆ. ಅದೆಂದರೆ, ಒಬ್ಬ ವ್ಯಕ್ತಿಯು ವಿದೇಶಿ ಪ್ರಜೆ ಅಲ್ಲದೇ ಹೋದರೆ ಅದನ್ನು ಸಾಬೀತುಪಡಿಸುವುದು ಆತನ ಹೊಣೆಯಾಗಿರುತ್ತದೆ ಎಂಬುದು.
ಈ ಕೆಳಗಿನ ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ
ರಾಮಾಯಣವನ್ನು ನಿರೂಪಿಸುವಂತೆ ಯಾರನ್ನಾದರೂ ಕೇಳಲಾಗುತ್ತದೆ. ಅವರು ಆಗ ಶಂತನು ಮತ್ತು ಆತನ ಮಗ ದೇವವೃತನು ಭೀಷ್ಮನಾಗುವ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಅವರು ಭೀಷ್ಮನ ತಾಯಿಯನ್ನು ಸತ್ಯವತಿ ಎಂದು ಗುರುತಿಸುತ್ತಾರೆ. ಆದರೆ ಈ ಬಗ್ಗೆ ಜ್ಞಾನವನ್ನು ಹೊಂದಿರುವ ಪ್ರೇಕ್ಷಕರು ಭೀಷ್ಮನ ತಾಯಿ ಸತ್ಯವತಿಯಲ್ಲ ಗಂಗಾ ಎಂದು ತಿದ್ದುತ್ತಾರೆ.
ಇಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳು, ತಪ್ಪಾಗಿ ಗುರುತಿಸಿದ ಮಹಾಭಾರತದಲ್ಲಿನ ಒಂದು ಪಾತ್ರವನ್ನು ತಿದ್ದಿದ ಪ್ರೇಕ್ಷಕರಲ್ಲಿನ ಒಬ್ಬ ಜ್ಞಾನವಂತ ಸದಸ್ಯರಂತೆ ಕಾಣುತ್ತಾರೆ.
2003ರ ಪೌರತ್ಯ ಕಾನೂನಿನಲ್ಲಿ ತಿದ್ದುಪಡಿ ಮಾಡಿದ ಬಳಿಕ ಒಬ್ಬ ವ್ಯಕ್ತಿಯು ಭಾರತದಲ್ಲಿ ಜನಿಸಿದ್ದರೆ, ಭಾರತೀಯರನ್ನು ಪಾಲಕರಾಗಿ ಹೊಂದಿದ್ದರೆ ಮತ್ತು ಮಗುವಿನ ಜನನದ ಸಂದರ್ಭದಲ್ಲಿ ಇನ್ನೊಬ್ಬ ಪಾಲಕರು ಅಕ್ರಮ ವಲಸಿಗರಾಗಿರದೇ ಇದ್ದರೆ ಆ ವ್ಯಕ್ತಿಯನ್ನು ಭಾರತೀಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. 2003ರ ಚುನಾವಣಾ ಪಟ್ಟಿಯಲ್ಲಿರುವ ಎಲ್ಲರನ್ನೂ ಮತ್ತು ಅವರ ಸಂತತಿಯನ್ನು ಯಾವುದೇ ಪ್ರಶ್ನೆ ಇಲ್ಲದೆ ಅರ್ಹ ಮತದಾರರು ಎಂದು ಪರಿಗಣಿಸುವ ಚುನಾವಣಾ ಆಯೋಗದ ವಿಶಾಲವ್ಯಾಪ್ತಿಯ ಆಶ್ರಯವು ಅಷ್ಟೊಂದು ವಿಶಾಲವಾಗಿಯೇನೂ ಇಲ್ಲ.
ಒಬ್ಬರು 2003ರ ಬಳಿಕ ಮನೆಯಲ್ಲಿಯೇ ಜನಿಸಿದ್ದಾರೆ, ಐದನೇ ತರಗತಿಯ ನಂತರ ಶಾಲೆ ತೊರೆದಿದ್ದಾರೆ ಮತ್ತು ಆತ ಭೂರಹಿತ ಎಂದುಕೊಳ್ಳಿ. ಆತನಿಗೆ ಸರ್ಕಾರಿ ಹುದ್ದೆಯ ಕನಸು ಕೂಡ ಕಾಣಲು ಸಾಧ್ಯವಿಲ್ಲ. ಒಂದಲ್ಲ ಮೂರು ಬಾರಿ ಬಂದ ಪ್ರವಾಹ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಆತನ ಬಳಿ ಈಗ ಏನೇನೂ ಇಲ್ಲ-ಮನೆ ಕೂಡ. ಆದರೆ ಆಧಾರ್ ಮತ್ತು ಪಡಿತರ ಚೀಟಿ ಇದೆ. ಎಸ್ಐಆರ್-ನ ಮೂಲ ನಿಯಮಗಳ ಪ್ರಕಾರ ಆತನಿಗೆ ಮತ ಚಲಾಯಿಸಲು ಅರ್ಹತೆಯನ್ನು ನೀಡುವ ಹನ್ನೊಂದು ದಾಖಲೆಗಳಲ್ಲಿ ಯಾವೊಂದೂ ಇಲ್ಲ. ಇನ್ನೊಂದು ಕಡೆ ಸೂಕ್ತವಾದ ಕೆಲಸವೆಂದರೆ ಆತನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವುದು ಮತ್ತು ಯಾರಾದರೂ ಧನಾತ್ಮಕ ಪುರಾವೆಯೊಂದಿಗೆ ಬಂದರೆ ಆತನ ಹೆಸರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕುವುದು.
ನಿಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಲು ಇರುವ ಎರಡು ಸಿದ್ಧಾಂತಗಳೆಂದರೆ ಜಸ್ ಸೋಲಿ (ನೆಲದ ಹಕ್ಕು) ಮತ್ತು ಜಸ್ ಸಾಂಗ್ವಿನಿಸ್ (ರಕ್ತದ ಹಕ್ಕು). ನೀನು ಒಂದು ಪ್ರದೇಶದಲ್ಲಿ ಜನಿಸಿದರೆ ಆ ಪ್ರದೇಶದ ಪ್ರಜೆಯಾಗುವ ಹಕ್ಕು ಇರಬೇಕು. ಕೆಲವು ದೇಶಗಳು ವಂಶಪಾರಂಪರ್ಯವನ್ನು ಅನುಸರಿಸುತ್ತವೆ. ನೀವು ಎಲ್ಲಿ ಜನಿಸಿದ್ದರೂ ಕೂಡ ಆ ದೇಶದ ಪ್ರಜೆಗಳಾಗಿ ಜನಿಸಿದರೆ ಮಾತ್ರ ಅಲ್ಲಿನ ಪೌರತ್ವ ಸಿಗುತ್ತದೆ. ಒಂದು ಉದಾರವಾದಿ ಜಗತ್ತಿನಲ್ಲಿ ಈ ಎರಡರಲ್ಲಿ ಯಾವುದಾದರೂ ಒಂದು ಪರಸ್ಪರ ಪ್ರತ್ಯೇಕವಾಗಿರದೆ ಸಮಗ್ರವಾಗಿ ಒಬ್ಬ ವ್ಯಕ್ತಿಗೆ ಪೌರತ್ವವನ್ನು ನೀಡಬೇಕು.
ಅಮೆರಿಕದಲ್ಲಿರುವ ಒಬ್ಬ ಭಾರತೀಯ ಟೆಕ್ಕಿ ಮೆಕ್ಸಿಕೊದ ಅಕ್ರಮ ವಲಸಿಯೊಬ್ಬಳನ್ನು ಮದುವೆಯಾದರೆ ಅಮೆರಿಕದಲ್ಲಿ ಜನಿಸಿದ ಅವರ ಮಗು ಅಮೆರಿಕ ಪ್ರಜೆಯಾಗಿ ಬೆಳೆಯುತ್ತದೆ. ಈಗ ಟ್ರಂಪ್ ಅವರ ತಂಟೆಗೆ ಹೋಗಲು ನಿರ್ಧರಿಸಿದ್ದಾರೆ. ಅವರ ಜನನ ಹಕ್ಕಿನ ಪೌರತ್ವವನ್ನು ಕೊನೆಗೊಳಿಸಲು ಮುಂದಾಗಿದ್ದಾರೆ. ಒಂದು ಮಗುವಿನ ತಂದೆ ಅಥವಾ ತಾಯಿ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದರೆ ಆ ಮಗುವಿನ ಪೌರತ್ವಕ್ಕೆ ಕತ್ತರಿ ಹಾಕಲು ಪ್ರಯತ್ನ ನಡೆಸಿದ್ದಾರೆ. ಅಪ್ಪ-ಅಮ್ಮ ಇಬ್ಬರ ವಲಸೆ ಸ್ಥಾನಮಾನವು ತಾತ್ಕಾಲಿಕವಾಗಿ ಸರಿಯಿಲ್ಲ ಎಂಬ ಕಾರಣಕ್ಕೆ, ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಭಾರತೀಯ ಪಾಲಕರಿಗೆ ಹುಟ್ಟಿದ ಮಗುವಿಗೆ ಅಮೆರಿಕದ ಪೌರತ್ವವನ್ನು ನಿರಾಕರಿಸುವುದು ನ್ಯಾಯಯುತವೆಂದು ಎಷ್ಟು ಮಂದಿ ಭಾರತೀಯರು ಭಾವಿಸುತ್ತಾರೆ?
ಭಾರತದಲ್ಲಿ ಮತ ಚಲಾಯಿಸಲು ಒಬ್ಬ ವ್ಯಕ್ತಿಯ ಅರ್ಹತೆಗೆ ಇಂತಹ ಪರಿಗಣನೆಗಳು ಮುಖ್ಯವಲ್ಲ. ಯಾಕೆಂದರೆ ಯಾರಾದರೂ ಅನರ್ಹರು ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರಬೇಕು ಮತ್ತು ಹಾಗೆ ಇದೆ ಕೂಡ.