ಅಭೂತಪೂರ್ವ ಬಿಕ್ಕಟ್ಟಿನಲ್ಲಿ ನೇಪಾಳ: ಸ್ಥಿರತೆ ನೆಲೆಸೀತೆ ಬೇಗ?
ನೇಪಾಳದಲ್ಲಿ ಮಂಗಳವಾರ ನಡೆದ ನಾಟಕೀಯ ಬೆಳವಣಿಗೆಗಳು, 2008ರಲ್ಲಿ ರಾಜಪ್ರಭುತ್ವವನ್ನು ಕಿತ್ತೊಗೆದ ನಂತರ ಸ್ಥಾಪನೆಗೊಂಡ ಗಣರಾಜ್ಯದ 17 ವರ್ಷಗಳ ಸಂಕಷ್ಟದ ಅಸ್ತಿತ್ವಕ್ಕೆ ಮುಕ್ತಾಯ ಹಾಡಿದವು;
ಇಂತಹುದೊಂದು ಅಭೂತಪೂರ್ವವಾದ ಹೋರಾಟವನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಕೆ.ಪಿ. ಶರ್ಮಾ ಓಲಿ ನೇತೃತ್ವದ ನೇಪಾಳದ ಗಣರಾಜ್ಯ ಸರ್ಕಾರ ಮತ್ತು ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರ ಉಚ್ಛಾಟನೆಗೆ ಕಾರಣವಾದ ಈ ಕ್ಷಿಪ್ರ ಹಾಗೂ ತೀವ್ರತರದ ಹೋರಾಟದಿಂದಾಗಿ ಕೆಲವೇ ಗಂಟೆಗಳಲ್ಲಿ, ನೇಪಾಳದಲ್ಲಿ ಅತಿದೊಡ್ಡ ಅಧಿಕಾರ ಶೂನ್ಯತೆ ನಿರ್ಮಾಣವಾಯಿತು.
ದೇಶದ ಅರ್ಧದಷ್ಟು ಜನಸಂಖ್ಯೆ, ಅದರಲ್ಲೂ ವಿಶೇಷವಾಗಿ ಯುವಕರು ಅಥವಾ Gen Z ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಈ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು. ಜೊತೆಗೆ ಕಳೆದ ಕೆಲವು ತಿಂಗಳುಗಳಿಂದ, ಆಡಳಿತ ವರ್ಗದ ಮಕ್ಕಳನ್ನು 'ನೆಪೋ ಕಿಡ್ಸ್' ಎಂದು ಲೇವಡಿ ಮಾಡಿ, ಅವರು ಹೇಗೆ ವಿದೇಶಗಳಲ್ಲಿ ಹಣ ಪೋಲು ಮಾಡುತ್ತಿದ್ದಾರೆ ಮತ್ತು ತಮ್ಮ ಈ ಸಾಹಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಪೋಸ್ಟ್ ಮಾಡುತ್ತಿದ್ದಾರೆ ಎಂಬ ಕಥೆಗಳು ಹರಿದಾಡುತ್ತಿದ್ದವು. ಇವೆಲ್ಲಾ ಸೇರಿ, ಈ ಜನಪ್ರಿಯ ಆಂದೋಲನಕ್ಕೆ ನಾಂದಿ ಹಾಡಿತು.
ಬಡತನದಿಂದ ತತ್ತರಿಸುತ್ತಿರುವ ಮತ್ತು ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನ ವಿದೇಶದಲ್ಲಿ ದುಡಿದು ಹಣ ಕಳುಹಿಸುವ ಮೂಲಕ ದೇಶಕ್ಕೆ ಅತ್ಯಮೂಲ್ಯವಾದ ವಿದೇಶಿ ವಿನಿಮಯವನ್ನು ತರುತ್ತಿರುವ ನೇಪಾಳದಂತಹ ದೇಶದಲ್ಲಿ, ಇಂತಹ ಅಖಂಡ ಭ್ರಷ್ಟಾಚಾರ ಕಣ್ಣಿಗೆ ರಾಚುವಂತಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಬಗ್ಗೆ ಹೆಚ್ಚೆಚ್ಚು ಸಾಕ್ಷ್ಯಗಳು ಲಭ್ಯವಾದಾಗ, ಭ್ರಷ್ಟಾಚಾರದ ವಿರುದ್ಧದ ಜನರ ಆಕ್ರೋಶ ಮುಗಿಲು ಮುಟ್ಟಿತು. ಆಡಳಿತ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬರು 'ಹಿಟ್ ಅಂಡ್ ರನ್' ಅಪಘಾತದಲ್ಲಿ ಭಾಗಿಯಾದಾಗ, ಜನರ ಕೋಪ ಅಕ್ಷರಶಃ ಕೆಂಡ ಸ್ವರೂಪಿಯಾಯಿತು.
ತಿರುಗುಬಾಣವಾದ ಸರ್ಕಾರದ ನಿರ್ಧಾರ
ಪ್ರತಿಭಟನೆಗಳು ಮಿತಿಮೀರುತ್ತಿದ್ದಂತೆ, ಓಲಿ ಸರ್ಕಾರವು ಫೇಸ್ಬುಕ್ ಮತ್ತು ವಾಟ್ಸಾಪ್ ಸೇರಿದಂತೆ 26 ಜನಪ್ರಿಯ ಸಾಮಾಜಿಕ ಮಾಧ್ಯಮ ಜಾಲತಾಣಗಳನ್ನು ನಿರ್ಬಂಧಿಸಲು ಯತ್ನಿಸಿತು. ಹೀಗೆ ಮಾಡುವುದರಿಂದ ಜನರ ಆಕ್ರೋಶಕ್ಕೆ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು. ಆದರೆ ಅದು ತಿರುಗುಬಾಣವಾಯಿತು. ಈ ನಿರ್ಧಾರದಿಂದಾಗಿ ಉಂಟಾದ ಪ್ರತಿಭಟನೆಯನ್ನು ನಿಯಂತ್ರಿಸುವುದೇ ದುಸ್ತರವಾಗಿ ಹೋಯಿತು. ಅದರ ಪರಿಣಾಮ ಪೊಲೀಸರ ಗುಂಡಿಗೆ 19 ಪ್ರತಿಭಟನಾಕಾರರು ಬಲಿಯಾದರು.
ಈ ಯುವಕರ ಆಕ್ರೋಶ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಈ ಹಿಂದೆ ನಡೆದ ಘಟನೆಗಳನ್ನು ನೆನಪಿಸುವಂತಿತ್ತು. ಅವರು ಆಡಳಿತ ವರ್ಗವನ್ನು ಪದಚ್ಯುತಗೊಳಿಸಿ ಅಕ್ಷರಶಃ ಬೀದಿಗೆ ತಂದು ನಿಲ್ಲಿಸಿದರು. ಸಂಸತ್ ಭವನಕ್ಕೇ ಬೆಂಕಿ ಹಚ್ಚಿದ ಕಾರಣ, ದೇಶದಲ್ಲಿ ಅಧಿಕಾರ ಶೂನ್ಯತೆ ಉಂಟಾಯಿತು. ಸಶಸ್ತ್ರ ಪಡೆಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದರೂ, ದೇಶವು ಯಾವ ದಿಕ್ಕಿಗೆ ಸಾಗಲಿದೆ ಎಂಬುದನ್ನು ಊಹಿಸುವುದೇ ಕಷ್ಟವಾಗಿದೆ.
ನೇಪಾಳದಲ್ಲಿ ಮಂಗಳವಾರ ನಡೆದ ನಾಟಕೀಯ ಬೆಳವಣಿಗೆಗಳು, 2008ರಲ್ಲಿ ರಾಜಪ್ರಭುತ್ವವನ್ನು ಕಿತ್ತೊಗೆದ ನಂತರ ಸ್ಥಾಪನೆಗೊಂಡ ಗಣರಾಜ್ಯದ 17 ವರ್ಷಗಳ ಸಂಕಷ್ಟದ ಅಸ್ತಿತ್ವಕ್ಕೆ ಮುಕ್ತಾಯ ಹಾಡಿದವು.. ಗಣರಾಜ್ಯದ ಸಂವಿಧಾನವನ್ನು ರಚಿಸಲು ಮಾಡಿದ ಹಲವು ಪ್ರಯತ್ನಗಳು, ನೇಪಾಳಿ ಕಾಂಗ್ರೆಸ್ ಮತ್ತು ಎರಡು ಪ್ರಮುಖ ಕಮ್ಯುನಿಸ್ಟ್ ಪಕ್ಷಗಳ ನಡುವಿನ ನಿರಂತರ ಬಿಕ್ಕಟ್ಟು ಮತ್ತು ಇತರ ಸಮಸ್ಯೆಗಳಿಂದ ಈ ದೇಶ ಸಾಗಿ ಬಂದ ಹಾದಿ ಅತ್ಯಂತ ಕಠಿಣವಾಗಿತ್ತು.
ಭಾರತ-ಚೀನಾ ಪ್ರಭಾವಳಿ
ದುರದೃಷ್ಟವಶಾತ್, ನೇಪಾಳವು ತನ್ನ ಎರಡು ದೈತ್ಯ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಭಾರತದ ನಡುವೆ ಸಿಕ್ಕಿಹಾಕಿಕೊಂಡಿದೆ. ಇದು ಹಿಮಾಲಯದ ಈ ಪುಟ್ಟ ರಾಷ್ಟ್ರದ ರಾಜಕೀಯವನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಈ ಎರಡೂ ರಾಷ್ಟ್ರಗಳು ಹಲವಾರು ವರ್ಷಗಳಿಂದ ತಮ್ಮ ಪ್ರಭಾವವನ್ನು ಸ್ಥಾಪಿಸಲು ಪ್ರಯತ್ನಿಸುತ್ತಲೇ ಇವೆ.
ಈ ದಿಢೀರ್ ಹೋರಾಟದ ಹಿಂದೆ ನೆರೆಯ ರಾಷ್ಟ್ರಗಳ ಕೈವಾಡ ಇದೆಯೇ ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಪದಚ್ಯುತ ಪ್ರಧಾನಿ ಓಲಿ ಚೀನಾಕ್ಕೆ ಹತ್ತಿರದವರು ಎಂದು ಪರಿಗಣಿಸಲಾಗಿತ್ತು. ಈ ಕಾರಣಕ್ಕೆ, ಮೋದಿ ಸರ್ಕಾರ ಅವರನ್ನು ಕಡೆಗಣಿಸಿತ್ತು.
ಓಲಿ ಅಧಿಕಾರ ವಹಿಸಿಕೊಂಡ ಸರಿಸುಮಾರು ಒಂದು ವರ್ಷದ ಬಳಿಕ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಸರ್ಕಾರವು ಆಹ್ವಾನ ನೀಡಿತ್ತು. ಭಾರತ ಮತ್ತು ಚೀನಾ ನಡುವೆ ಇತ್ತೀಚೆಗೆ ಸಂಬಂಧ ಸುಧಾರಿಸಿದ ಹಿನ್ನೆಲೆಯಲ್ಲಿ ಈ ಆಹ್ವಾನ ಬಂದಿತ್ತು. ಮೇಲ್ನೋಟಕ್ಕೆ, ಓಲಿಯವರ ನಿರ್ಗಮನವು ಭಾರತಕ್ಕೆ ಅನುಕೂಲಕರವಾಗಿ ಕಾಣುತ್ತದೆ. ಆದರೆ, ಈಗ ಸೃಷ್ಟಿಯಾದ ಅಧಿಕಾರ ಶೂನ್ಯತೆ ಮತ್ತು ಅಸ್ಥಿರತೆಯು ಭಾರತಕ್ಕೆ ಒಂದು ಸವಾಲಾಗಿ ಪರಿಣಮಿಸಬಹುದು.
ಚೀನಾದ ಕ್ಷಿ ಜಿನ್ಪಿಂಗ್ ಆಡಳಿತವೂ ಸುಲಭವಾಗಿ ಬಿಟ್ಟುಕೊಡುವ ಇರಾದೆಯದಲ್ಲ. 2016ರಲ್ಲಿ ಮೋದಿ ಸರ್ಕಾರ ವಿಧಿಸಿದ ಕುಪ್ರಸಿದ್ಧ ಆರ್ಥಿಕ ನಿರ್ಬಂಧಗಳ ನಂತರದ ಒಂದು ದಶಕದಿಂದ, ಚೀನಾ ಕೂಡ ನೇಪಾಳದಲ್ಲಿ ತನ್ನ ಹಿತಾಸಕ್ತಿಗಳನ್ನು ಗಟ್ಟಿಯಾಗಿ ನೆಲೆಗೊಳಿಸಿದೆ. ಆದ್ದರಿಂದ, ನೇಪಾಳದ ನಿಯಂತ್ರಣಕ್ಕಾಗಿ ಭಾರತ ಮತ್ತು ಚೀನಾ ನಡುವೆ ಬಿಗಿಯಾದ ಹಗ್ಗಜಗ್ಗಾಟ ನಡೆಯಲಿದೆ.
ಕದನ ಕುತೂಹಲ
ಅಮೆರಿಕ ಭಾರತದ ಮೇಲೆ ದಂಡನಾರ್ಹವಾದ ಸುಂಕಗಳನ್ನು ವಿಧಿಸಿದ ನಂತರ ಮತ್ತು ಮೋದಿ ಸರ್ಕಾರ ಚೀನಾದೊಂದಿಗೆ ಸೌಹಾರ್ದ ಸಂಬಂಧ ಬೆಳೆಸಲು ಮುಂದಾದ ಕಾರಣ, ಭಾರತ ಮತ್ತು ಚೀನಾಗಳ ಶೀತಲ ಹಾಗೂ ವೈಮನಸ್ಸಿನ ಸಂಬಂಧದಲ್ಲಿ ಹೊಸ ರೀತಿಯ ಸಹಜ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ರಾಷ್ಟ್ರಗಳ ನಡುವಿನ ಸಮರ ಕುತೂಹಲ ಮೂಡಿಸಿದೆ.
ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ನೇಪಾಳ ತಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿಸುವುದನ್ನು ಬಯಸುವುದಿಲ್ಲ. ಇದರಿಂದ, ಕಠ್ಮಂಡುವಿನಲ್ಲಿ ಆದಷ್ಟು ಬೇಗ ಪರಿಸ್ಥಿತಿ ಸ್ಥಿರಗೊಳ್ಳುವ ಸಾಧ್ಯತೆ ಅಧಿಕ.
ಗಣರಾಜ್ಯದ ಸ್ವರೂಪ ಪಡೆದಂದಿನಿಂದ, ನೇಪಾಳ ಕಾಂಗ್ರೆಸ್ನ ಶೇರ್ ಬಹದ್ದೂರ್ ದೇವುಬಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳದ ಎರಡು ಗುಂಪುಗಳಾದ ಪ್ರಚಂಡ ನೇತೃತ್ವದ ಮಾವೋವಾದಿ ಬಣ ಮತ್ತು ಕೆ.ಪಿ. ಶರ್ಮಾ ಓಲಿ ನೇತೃತ್ವದ ಕಮ್ಯುನಿಸ್ಟ್ ಯುನೈಟೆಡ್ ಮಾರ್ಕ್ಸ್ವಾದಿ-ಲೆನಿನಿಸ್ಟ್ ಪಕ್ಷದ ನಡುವೆ ಅಧಿಕಾರ ಹಂಚಿಕೆಯಾಗಿದೆ. ಆದರೆ, ಈ ಯಾವುದೇ ಒಕ್ಕೂಟ ಸರ್ಕಾರಗಳು ಪೂರ್ಣಾವಧಿ ಉಳಿಯಲು ಸಾಧ್ಯವಾಗಿಲ್ಲ.
ಸತತ ಅಧಿಕಾರಕ್ಕೆ ಬಂದ ಸರ್ಕಾರಗಳು ದೇಶದ ಅಭಿವೃದ್ಧಿಯಲ್ಲಿ ವಿಫಲವಾದ ಕಾರಣ, ಜನಸಂಖ್ಯೆಯ ಒಂದು ಭಾಗವು ಮತ್ತೆ ರಾಜಪ್ರಭುತ್ವವನ್ನು ತರುವಂತೆ ಒತ್ತಾಯಿಸಲು ಪ್ರಾರಂಭಿಸಿತ್ತು. ಅಧಿಕೃತ ಮಾಹಿತಿಗಳ ಪ್ರಕಾರ, ನೇಪಾಳದಲ್ಲಿ ನಿರುದ್ಯೋಗ ದರ ಸುಮಾರು ಶೇ.21ರಷ್ಟಿದೆ. ಇದರಿಂದಾಗಿ ಅನೇಕರು ಉದ್ಯೋಗಕ್ಕಾಗಿ ವಿದೇಶಕ್ಕೆ ವಲಸೆ ಹೋಗುವುದು ಅನಿವಾರ್ಯವಾಗಿದೆ.
ಆಡಳಿತ ವರ್ಗದ ಮಕ್ಕಳಿಂದ ವೈಭವೋಪೇತ ಜೀವನಶೈಲಿಯ ಪ್ರದರ್ಶನವು 'ನೆಪೋ ಕಿಡ್ಸ್' ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪ ಪ್ರಮಾಣದಲ್ಲಿ ಪ್ರಚಾರಗೊಂಡಿತು. ಇದು ಆಕ್ರೋಶಕ್ಕೆ ಕಾರಣವಾಗಿ, ಓಲಿ ಸರ್ಕಾರದ ಪತನಕ್ಕೆ ನಾಟಕೀಯ ಬೆಳವಣಿಗೆಗೆ ದಾರಿಯಾಯಿತು.