ಕರ್ನಾಟಕದಲ್ಲಿ ಕಾಂಗ್ರೆಸ್ 'ಸ್ವಯಂ ವಿನಾಶʼಕ್ಕೆ ಮುಂದಾಗಿದೆಯೇ?

ರಾಜ್ಯ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಹನಿಟ್ರ್ಯಾಪ್ ಆರೋಪವು ಕಾಂಗ್ರೆಸ್ ಸರ್ಕಾರವನ್ನು ಬೇರೆ ಯಾವ ರೀತಿಯಲ್ಲೂ ಸಾಧ್ಯವಾಗದಂತೆ ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.;

Update: 2025-03-26 08:50 GMT

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಸುಮಾರು ಎರಡು ವರ್ಷಗಳು ಕಳೆದಿವೆ. ಅನಿರೀಕ್ಷಿತ ಹಾಗೂ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿದ ಈ ಪಕ್ಷವು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ದೀರ್ಘಕಾಲದ ಆಡಳಿತದತ್ತ ಗಮನ ಹರಿಸುತ್ತದೆ ಎಂದು ಎಲ್ಲರೂ ಭಾವಿಸಿರಬಹುದು.

ರಾಜ್ಯ ಸಚಿವರೊಬ್ಬರ ಸ್ಫೋಟಕ ಹನಿಟ್ರ್ಯಾಪ್ ಆರೋಪ ಮಾಡಿದ ತಕ್ಷಣ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸ್ಥಿರತೆ ಕಳೆದುಕೊಂಡಂತೆ ಭಾಸವಾಗಿದೆ. ಸರ್ಕಾರದೊಳಗಿನ ಅಲುಗಾಟ ಜೋರಾಗಿದೆ. ಇದು ಗ್ಯಾರಂಟಿ ಯೋಜನೆಗಳ ಜಾರಿಯಂತಹ ಅದರ ಮೂಲ ಉದ್ದೇಶಗಳ ಮೇಲೂ ಪರಿಣಾಮ ಬೀರುತ್ತಿದೆ.

ಈ ಹನಿಟ್ರ್ಯಾಪ್ ಹಗರಣದ ಆರೋಪವನ್ನು ರಾಜ್ಯ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ವಿಧಾನಸಭೆಯ ಒಳಗೆಯೇ ಮಾಡಿದರು. ವಿರೋಧ ಪಕ್ಷದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸುವಾಗ ಈ ಆರೋಪ ಮಾಡಿದರು. ರಾಜಣ್ಣನಂತಹ ಹಿರಿಯ ಸಚಿವರು, ತಾವೇ ಭಾಗವಾಗಿರುವ ಸರ್ಕಾರವನ್ನು ಅಸ್ಥಿರಗೊಳಿಸುವ ಅಪಾಯದಲ್ಲೂ ಈ ಆರೋಪವನ್ನು ಸಾರ್ವಜನಿಕವಾಗಿ ವಿವರಿಸಿದ್ದು ಏಕೆ ಎಂಬುದೇ ಸದ್ಯದ ಪ್ರಶ್ನೆ.

ವಿಧಾನಸಭೆಯಲ್ಲೇ ಆರೋಪ ಏಕೆ?

ಈ ಹಗರಣವು ಕರ್ನಾಟಕ ಕಾಂಗ್ರೆಸ್ ಪಕ್ಷದೊಳಗೆ ಆಳವಾಗಿ ಬೇರೂರಿರುವ ಆಂತರಿಕ ಕಚ್ಚಾಟದ ಮುಂದುವರಿದ ಭಾಗ. ಸಚಿವರೊಬ್ಬರು ಇಂತಹ ದೊಡ್ಡ ಆರೋಪವನ್ನು ವಿಧಾನಸಭೆಯಲ್ಲಿ ಮಾಡುವುದು ಸಾಮಾನ್ಯ ವಿಷಯವಲ್ಲ. ರಾಜಣ್ಣ ಅವರು ಸುಮಾರು 48 ಜನ ರಾಜಕಾರಣಿಗಳು ಈ ಹನಿಟ್ರ್ಯಾಪ್ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾರೆ ಎಂದೂ ಹೇಳಿದ್ದಾರೆ. ಇದರಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳು, ಪ್ರಾದೇಶಿಕ ಮತ್ತು ರಾಷ್ಟ್ರ ನಾಯಕರೂ ಸೇರಿಕೊಂಡಿದ್ದಾರೆ ಎಂದು ಹೇಳಿರುವ ಅವರು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಈ ಜಾಲವನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಿದ್ದಾರೆ.

ರಾಜಣ್ಣ ಅವರು ಈ ವಿಷಯವನ್ನು ಗುಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸರ್ಕಾರಕ್ಕೆ ಎದುರಾಗುವ ಮುಜುಗರದಿಂದ ರಕ್ಷಿಸಬಹುದಿತ್ತು. ಆದರೆ ಅವರು ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ದಾರಿ ಕಂಡುಕೊಂಡರು.

ತಾವು ಮತ್ತು ಗೃಹ ಸಚಿವ ಪರಮೇಶ್ವರ ಸಂಭವನೀಯ ಬಲಿಪಶುಗಳಾಗಬಹುದು ಎಂಬ ಕಾರಣವೊಡ್ಡಿ ರಾಜಣ್ಣ ಅವರು ವಿಧಾಸಭೆಯಲ್ಲೇ ಆರೋಪ ಮಾಡಿದ್ದರು. ರಾಜಣ್ಣ ಅವರ ಭಾವನಾತ್ಮಕ ಆರೋಪವು ಕಾಂಗ್ರೆಸ್ ಸರ್ಕಾರವನ್ನು ಅಪಾಯಕ್ಕೆ ತಳ್ಳಿದೆ.

ಅನಿಶ್ಚಿತತೆ ವಾತಾವರಣ

ವಿಪರ್ಯಾಸ ಎಂದರೆ , ಕಾಂಗ್ರೆಸ್​ ಪಕ್ಷವು ತನ್ನ ಪೂರ್ಣ ಅವಧಿಯನ್ನು ಸುಲಭವಾಗಿ ಪೂರೈಸಬಹುದಾದ ಬಹುಮತ ಹೊಂದಿದೆ. ಒಟ್ಟು 224 ಸೀಟುಗಳಲ್ಲಿ 137 ಸ್ಥಾನದೊಂದಿಗೆ ದೃಢವಾಗಿದೆ. ಆದಾಗ್ಯೂ, ಅನಿಶ್ಚಿತತೆಯ ವಾತಾವರಣದಲ್ಲಿ ಸದಾ ಸಿಲುಕಿದೆ. ಚುನಾವಣೆಗೆ ಮೊದಲು ನೀಡಿದ ಭರವಸೆಗಳ ಮೇಲೆ ಗಮನ ಕೊಡುವ ಬದಲು, ಆಂತರಿಕ ಜಗಳಗಳೇ ಹೆಚ್ಚಿವೆ. ಎಲ್ಲದರ ಮಧ್ಯೆ ಹನಿಟ್ರ್ಯಾಪ್ ಆರೋಪ ಹೆಚ್ಚು ಆಘಾತಕಾರಿಯಾಗಿದೆ.

ಕರ್ನಾಟಕದ ಮತದಾರರು 2023ರ ಮೇ ತಿಂಗಳಲ್ಲಿ ಕಾಂಗ್ರೆಸ್‌ಗೆ ಅಧಿಕಾರವನ್ನು ನೀಡಿದರು. ಹಿಂದಿನ ಬಿಜೆಪಿ ಸರ್ಕಾರದ ಗೊಂದಲಗಳಿಂದ ಬೇಸತ್ತಿದ್ದ ಜನರು ಈ ಬದಲಾವಣೆಯನ್ನು ಬಯಸಿದ್ದರು. ಆಂತರಿಕ ಅಧಿಕಾರದ ಹೋರಾಟ, ಭ್ರಷ್ಟಾಚಾರದ ಆರೋಪಗಳು ಮತ್ತು ಸಮುದಾಯ ಧ್ರುವೀಕರಣವು ಬಿಜೆಪಿಯ ಸೋಲಿಗೆ ಕಾರಣವಾಯಿತು.

ಅಧಿಕಾರಕ್ಕಾಗಿ ಅನಪೇಕ್ಷಿತ ಕಚ್ಚಾಟ 

ಚುನಾವಣೆ ಗೆದ್ದ ಬಳಿಕ ಕಾಂಗ್ರೆಸ್ ವರ್ತನೆ ಬದಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಈಗ ಅವರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವಿನ ಅಧಿಕಾರದ ಹೋರಾಟವು ಪಕ್ಷಕ್ಕೆ ಮತ ಚಲಾಯಿಸಿದವರಿಗೆ ಮುಜುಗರ ತಂದಿತು. ಕೆಲವು ದಿನಗಳ ನಂತರ ರಾಜಿಗೆ ಒಪ್ಪಿಕೊಂಡು ಇಬ್ಬರೂ ತಮ್ಮ ಸ್ಥಾನಗಳಲ್ಲಿ ಕಾರ್ಯಪ್ರವೃತ್ತರಾದಾಗ, ಅವರಿಬ್ಬರೂ ಆಡಳಿತದತ್ತ ಗಮನ ಹರಿಸುತ್ತಾರೆ ಎಂದು ಭಾವಿಸಿದ್ದರು.

ಭಿನ್ನಮತ ಇನ್ನೂ ಮಾಯವಾಗಿಲ್ಲ. ಮತ್ತೆ ಮತ್ತೆ ಉದ್ಭವಿಸುತ್ತಿವೆ. ಕಾಂಗ್ರೆಸ್ ಶಾಸಕಾಂಗ ಪಕ್ಷದೊಳಗೆ ಸಿದ್ದರಾಮಯ್ಯರ ಬೆಂಬಲಿಗರು ಅಥವಾ ಡಿ ಕೆ ಶಿವಕುಮಾರ್ ಅವರ ಬೆಂಬಲಿಗರೆನ್ನರುವ ಗುಂಪು ಶುರುವಾಯಿತು. ಗಮನಿಸಿ, ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ದೇಶದ ಬೇರೆಡೆ ಹೀನಾಯ ಸೋಲುಗಳನ್ನು ಕಂಡಿದೆ. ಬಿಜೆಪಿ ರಾಜ್ಯ ಕಾಂಗ್ರೆಸ್​ನ ಬೆನ್ನು ಬಿದ್ದಿದ್ದು, ಎಡವಿದಾಗ ಬಲೆ ಹಾಕಲು ಕಾಯುತ್ತಿದೆ.

ಸ್ವಯಂಕೃತ ಅಪರಾಧ?

ಕರ್ನಾಟಕದಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣ ಸೇರಿದಂತೆ ಹಲವು ಭ್ರಷ್ಟಾಚಾರ ಆರೋಪಗಳ ತನಿಖೆಗೆ ಕೇಂದ್ರದ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ಇಳಿದಿದೆ. ಈ ನಡುವೆ, ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ತಮ್ಮೆಲ್ಲ ಅನುಭವವನ್ನೆಲ್ಲ ಬಳಸಿ ರಾಜಕೀಯ ಶತ್ರುಗಳನ್ನು ಹಿಮ್ಮೆಟ್ಟಿಸಿದ್ದಾರೆ.

ಅಂತಿಮವಾಗಿ ಸರ್ಕಾರ ತನ್ನ ಕೆಲಸದಲ್ಲಿ ತೊಡಗಿದೆ ಎಂದು ತೋರಿದ ತಕ್ಷಣ, ಹನಿಟ್ರ್ಯಾಪ್ ಆರೋಪದ ರೂಪದಲ್ಲಿ ಧುತ್ತೆಂದು ಎದ್ದು ನಿಂತಿದೆ. ಇದು ಸ್ವಯಂ ಹಾನಿಯೊ ಅಥವಾ ಸಂಭವನೀಯ ಸ್ವಯಂ-ನಾಶವೋ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಹನಿಟ್ರ್ಯಾಪ್​ ಆರೋಪ ಸಾಬೀತಾಗಬೇಕಾದ ಅಗತ್ಯವಿದೆ. ಆದರೆ, ರಾಜಣ್ಣನಂತಹ ಹಿರಿಯ ಸಚಿವರು ವಿಧಾನಸಭೆಯ ಅಧಿವೇಶನದಲ್ಲಿ ಇದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಇದರಲ್ಲಿ ಏನೋ ಸತ್ಯವಿದೆ ಎಂದು ಕಂಡುಕೊಳ್ಳಬಹುದು. ಬೆಂಕಿಯಾಡದೇ ಹೊಗೆ ಕಾಣಿಸಿದು!

ಬಿಜೆಪಿಗೆ ವರದಾನ

ಕಾಂಗ್ರೆಸ್‌ನ ಆಂತರಿಕ ಜಗಳವು ಬಿಜೆಪಿಗೆ ಪುಷ್ಕಳ ಅವಕಾಶವಾಗಿದೆ. ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ತವಕದಿಂದ ಕಾಯುತ್ತಿದೆ. ಸಿದ್ದರಾಮಯ್ಯ ಮತ್ತು ತಂಡ ಇದುವರೆಗೆ ಅನುಭವ ಬಳಸಿ ಬಚಾವಾಗಿದೆ. ಏಕೆಂದರೆ ರಾಜ್ಯ ಬಿಜೆಪಿಯೊಳಗೂ ತೀವ್ರ ಭಿನ್ನಮತವಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಂತಹ ತ್ರಿಮೂರ್ತಿಗಳಿಗೂ ರಾಜ್ಯ ಬಿಜೆಪಿಯ ಒಳಗಿನ ಜಗಳವನ್ನು ಶಮನಗೊಳಿಸಲು ಸಾಧ್ಯವಾಗಿಲ್ಲ ಎಂದು ವಾಸ್ತವ.

ಈಗ ಐಪಿಎಲ್ ಋತುವಾಗಿರುವಾಗ , ಕ್ರಿಕೆಟ್ ಹೋಲಿಕೆ ಮಾಡುವುದು ಉತ್ತಮ. ಕಾಂಗ್ರೆಸ್‌ನ ಇಬ್ಬರು ಬ್ಯಾಟ್ಸ್‌ಮನ್‌ಗಳು ರನ್​ಗಾಗಿ ಓಡುವಾಗ ಒಂದೇ ಬದಿಯಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಬಾಲ್ ಹಿಡಿದು ರನ್​ಔಟ್ ಮಾಡುವುದಕ್ಕೆ ಬಿಜೆಪಿ ಬಳಿ ಫೀಲ್ಡರ್​ಗಳೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ, ಬ್ಯಾಟ್ಸ್‌ಮನ್ ಸುರಕ್ಷಿತವಾಗಿ ತನ್ನ ಬದಿಯ ವಿಕೆಟ್​​ಗೆ ಮರಳಬಹುದು ಅಥವಾ ಕೊನೇ ಪ್ರಯತ್ನವಾಗಿ ಬಿಜೆಪಿಯ ಫೀಲ್ಡರ್​ ರನ್​ಔಟ್ ಮಾಡಬಹುದು. ಯಾವುದು ಮೊದಲಾಗುತ್ತದೆ ಎಂಬುದನ್ನು ಕಾದು ನೋಡಬೇಕು. 

ಇತಿಹಾಸ ಪುನರಾವರ್ತನೆ?

ಇತಿಹಾಸವನ್ನು ಮರೆತವರು ಅದನ್ನು ಪುನರಾವರ್ತಿಸುತ್ತಾರೆ ಎಂಬ ಮಾತಿದೆ. ಸದ್ಯ ಕಾಂಗ್ರೆಸ್ ಅಂಥದ್ದೊಂದು ಸ್ಮರಣ ಶಕ್ತಿಯ ಕೊರತೆಯಿಂದ ಬಳಲುತ್ತಿದೆ. 1989ರಲ್ಲಿ ಕರ್ನಾಟಕದಲ್ಲಿ ಪಕ್ಷವು 224 ಸೀಟುಗಳಲ್ಲಿ 178 ಸ್ಥಾನಗಳನ್ನು ಗೆದ್ದು ದಾಖಲೆ ಬರೆದಿತ್ತು. ಅದೊಂದು ಒಂದು ಕನಸಿನ ವಿಜಯ .

ಆಗಲೂ ಉತ್ತಮ ಆಡಳಿತದ ಮೂಲಕ ಮತದಾರರ ವಿಶ್ವಾಸ ಗಳಿಸುವ ಬದಲು ನಾಯಕರು ಶೀತಲ ಸಮರ ಶುರು ಮಾಡಿದರು. ಮೊದಲಿಗೆ, ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ (ಲಿಂಗಾಯತ) ಅವರನ್ನು ಆಗಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಕುರ್ಚಿಯಿಂದ ಇಳಿಸಿದರು. ಇದಕ್ಕೆ ಬೆಲೆತೆತ್ತು ಪಕ್ಷವು ಲಿಂಗಾಯತ ಮತಗಳನ್ನು ಕಳೆದುಕೊಂಡಿತು.

ವೀರೇಂದ್ರ ಪಾಟೀಲ್ ಅವರ ನಿರ್ಗಮನದ ನಂತರೂ ಜಗಳ ಮುಂದುವರಿಯಿತು. ಶಾಸಕರ ಒಂದು ಬಣ ಉತ್ತರಾಧಿಕಾರಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರನ್ನುಕೆಳಕ್ಕೆ ಇಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿತು. ಅಂತಿಮವಾಗಿ ದೆಹಲಿಯ ಪಕ್ಷದ ನಾಯಕತ್ವ (ಪಿ. ವಿ. ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ) ಎಂ. ವೀರಪ್ಪ ಮೊಯಿಲಿಯನ್ನು ಅಧಿಕಾರಕ್ಕೇರಿಸಿದರು.

ಆದರೆ ಮೊಯಿಲಿಗೂ ನೆಮ್ಮದಿಯಿಂದ ಆಡಳಿತ ನಡೆಸಲು ಅವಕಾಶ ಸಿಗಲಿಲ್ಲ. ಆಗಿನ ಸಭಾಧ್ಯಕ್ಷ ಎಸ್. ಎಂ. ಕೃಷ್ಣ ಮತ್ತು ಅವರ ಬೆಂಬಲಿಗರು ಮೊಯಿಲಿ ಅವರನ್ನು ಕೆಳಕ್ಕೆ ಇಳಿಸಲು ಪ್ರಯತ್ನಿಸಿದರು. ಕಾಂಗ್ರೆಸ್​ ತನ್ನ ಪೂರ್ಣ ಅವಧಿ ಪೂರೈಸಿದರೂ, 1994ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 34 ಸೀಟುಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿತು (178ರಿಂದ ಇಳಿದಿದ್ದು! ). ಜನತಾ ದಳ ಮತ್ತು ಬಿಜೆಪಿಗಿಂತಲೂ ಹಿಂದಕ್ಕೆ ಬಿದ್ದಿತ್ತು.

ಅಧಿಕಾರದಿಂದ ವಿಚಲಿತ

ಅಧಿಕಾರದಲ್ಲಿರುವಾಗ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ರಂತಹ ಬುದ್ಧಿವಂತ ಮತ್ತು ಅನುಭವಿ ರಾಜಕಾರಣಿಗಳು ಅಧಿಕಾರ ಉಳಿಸಿಕೊಳ್ಳುವ ಆಸೆಯಲ್ಲಿ ಎಲ್ಲವನ್ನೂ ಮರೆತಂತಿದೆ. ಕಾಂಗ್ರೆಸ್‌ಗೆ ಮತ ಚಲಾಯಿಸಿದ ಸಾಮಾನ್ಯ ಮತದಾರನಿಗೆ ಮುಖ್ಯಮಂತ್ರಿ ಯಾರೆಂಬುದು ಮುಖ್ಯವಲ್ಲ ಎಂಬುದು ಅವರಿಗೆ ತಿಳಿದಿಲ್ಲವೇನೋ ಅಥವಾ ಅಧಿಕಾರದ ಆಕರ್ಷಣೆಯಲ್ಲಿ ಅವರು ಮೈಮರೆತಿದ್ದಾರೆಯೇನೋ. ಆಯ್ಕೆ ಮಾಡಿದ ಪಕ್ಷ ಅಧಿಕಾರದಲ್ಲಿದ್ದು, ಒಗ್ಗಟ್ಟಿನಿಂದ ಇದ್ದು, ಜನರಿಗಾಗಿ ಕೆಲಸ ಮಾಡಿದರೆ ಸಾಕು ಎಂಬುದಷ್ಟೇ ಜನರ ನಿರೀಕ್ಷೆ.

ದುರದೃಷ್ಟವಶಾತ್, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮತದಾರರನ್ನು ನಾಯಕರು ಮರೆತುಬಿಡುತ್ತದೆ. ಮುಖ್ಯಮಂತ್ರಿಯಾಗಲು, ಸಚಿವ ಸ್ಥಾನ ಪಡೆಯಲು ಅಥವಾ ನಿಗಮ-ಮಂಡಳಿಗಳ ಅಧ್ಯಕ್ಷರಾಗಿ ನಾಮನಿರ್ದೇಶನ ಪಡೆಯಲು ಶಾಸಕರು ಜಗಳವಾಡುವಾಗ ಮುಜುಗರದ ಸನ್ನಿವೇಶ ಉಂಟಾಗುತ್ತದೆ.

ಇದು ಎಲ್ಲ ರಾಜಕೀಯ ಪಕ್ಷಗಳ ಸಮಸ್ಯೆಯೇ ಹೌದು. ವಿಶೇಷವಾಗಿ ಕರ್ನಾಟಕದಲ್ಲಿ ಜೋರು. ಆದರೆ ಈಗ ಆಡಳಿತ ಪಕ್ಷ ಕಾಂಗ್ರೆಸ್ ಸಾರ್ವಜನಿಕವಾಗಿ ತನ್ನ ಘನತೆಯನ್ನು ನಷ್ಟಮಾಡಿಕೊಳ್ಳುತ್ತಿದೆ. ಮತದಾರರು ಇದನ್ನೆಲ್ಲ ಗಮನಿಸುತ್ತಿದ್ದಾರೆ. ಅವರನ್ನು ನಿರಾಸೆಗೊಳಿಸಿದರೆ ಕ್ಷಮಿಸುವುದಿಲ್ಲ.

Tags:    

Similar News