ವಾಲ್ಮೀಕಿ ನಿಗಮ ಹಗರಣ | ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ?
ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಜಾರಿ ನಿರ್ದೇಶನಾಲಯದ ಬಂಧನ ಭೀತಿಯಿಂದಾಗಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.;
ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED)ದಿಂದ ಬಂಧನ ಭೀತಿ ಎದುರಿಸುತ್ತಿರುವ ನಿಗಮದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಶುಕ್ರವಾರ ವಿಚಾರಣೆ ಸಂಬಂಧ ಎಸ್ಐಟಿ ಮುಂದೆ ಹಾಜರಾಗಿದ್ದ ದದ್ದಲ್, ನಂತರ ಬೆಂಗಳೂರಿನ ನಿವಾಸಕ್ಕೆ ಬಂದೇ ಇಲ್ಲ. ಕುಟುಂಬಸ್ಥರ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಯಲಹಂಕದ ಕೋಗಿಲು ಬಳಿ ಇರುವ ಬಸನಗೌಡ ದದ್ದಲ್ ವಿಲ್ಲಾದಲ್ಲಿ ಸದ್ಯ ಇಬ್ಬರು ಮನೆ ಕೆಲಸದವರು ಮಾತ್ರ ಇದ್ದಾರೆ. ದದ್ದಲ್ ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮನೆ ಕೆಲಸದವರು ಮಾಹಿತಿ ನೀಡಿದ್ದಾರೆ. ಯಾವಾಗ ವಾಪಸ್ ಬರುತ್ತಾರೆ ಎಂದು ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಹಗರಣ ಸಂಬಂಧ ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಿಸುತ್ತಿರುವ ದದ್ದಲ್, ತಮ್ಮನ್ನು ಬಂಧಿಸುವಂತೆ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಬಳಿ ಶುಕ್ರವಾರ ಮನವಿ ಮಾಡಿದ್ದರು. ಈ ಮೂಲಕ ಇಡಿ ಬಂಧನದಿಂದ ತಪ್ಪಿಸಿಕೊಳ್ಳಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಎಸ್ಐಟಿ ಅವರನ್ನು ಬಂಧಿಸಿಲ್ಲ. ಇದಾದ ನಂತರ ಅವರು ಅಜ್ಞಾತ ತಳಕ್ಕೆ ತೆರಳಿದ್ದಾರೆ.
ವಾಲ್ಮೀಕಿ ನಿಗಮದ ಹಗರಣದ ಮಧ್ಯೆಯೇ ಶಾಸಕ ಬಸನಗೌಡ ದದ್ದಲ್ 4 ಎಕರೆ 31 ಗುಂಟೆ ಜಮೀನು ಖರೀದಿಸಿದ್ದಾರೆಂಬ ಆರೋಪವಿದೆ. ಇಡಿ ದಾಳಿ ಬಳಿಕ ಭೂಮಿ ಖರೀದಿ ವಿಚಾರ ಬಯಲಾಗಿದ್ದು, ಪುತ್ರ ತ್ರಿಶೂಲ್ ಕುಮಾರ್ ನಾಯಕ್ ಹೆಸರಿನಲ್ಲಿ ರಾಯಚೂರು ಜಿಲ್ಲೆಯ ಗುಣದಿನ್ನಿ ಗ್ರಾಮದಲ್ಲಿ ದದ್ದಲ್ ತಂದೆ ಸಿದ್ದನಗೌಡರಿಂದ ಭೂಮಿ ಖರೀದಿಸಲಾಗಿದೆಯಂತೆ. ಇದೇ ಭೂಮಿಯನ್ನು ಜೂನ್27ರಂದು ಮ್ಯೂಟೇಶನ್ ಮಾಡಿಸಿಕೊಳ್ಳಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದರು. ಪ್ರಕರಣ ಸಂಬಂಧ ಮಂಗಳವಾರವಷ್ಟೇ ಬಸನಗೌಡ ದದ್ದಲ್ ಎಸ್ಐಟಿ ವಿಚಾರಣೆ ಎದುರಿಸಿದ್ದರು. ಬುಧವಾರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರನ್ನು ಇಡಿ ಬಂಧಿಸಿತ್ತು.