ಸಂವಿಧಾನ ನಾಗರಿಕರಿಗೆ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ನೀಡಿದೆ. ಹಾಗಾಗಿ ಸಂಸತ್ ಏಕರೂಪ ನಾಗರಿಕ ಸಂಹಿತೆಯನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ ಎಂದು ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ವಂಚಿತ್ ಬಹುಜನ್ ಅಘಾಡಿಯ ನಾಯಕ ಪ್ರಕಾಶ್ ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ.
ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ನಡೆಸಿರುವ ಸಿದ್ಧತೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳಬೇಕೇ? ಬೇಡವೇ? ಎಂಬುದನ್ನು ಆ ರಾಜ್ಯದ ಜನತೆ ತೀರ್ಮಾನಿಸಬೇಕು. ಅವರು ಬಯಸಿದರೆ ತಮ್ಮ ಧರ್ಮದ ಅನುಸಾರ ಜನರು ಉತ್ತರಾಖಂಡದಲ್ಲಿ ಜೀವಿಸಬಹುದು. ರಾಜ್ಯವೊಂದಕ್ಕೆ ಈ ರೀತಿ ಸಾಂವಿಧಾನಿಕವಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವಿದೆಯೇ? ಎಂಬುದು ನನ್ನ ಪ್ರಶ್ನೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನದ 25 ಹಾಗೂ 26ನೇ ಅನುಚ್ಛೇದ ದೇಶದ ನಾಗರಿಕರಿಗೆ ಅವರ ಧಾರ್ಮಿಕ ಆಚರಣೆಗಳಂತೆ ಬದುಕಲು ಅವಕಾಶ ಕಲ್ಪಿಸಿದೆ. ಆದರೆ ಅವರ ಬದುಕುವ ರೀತಿ ಸಂವಿಧಾನದ ಮೂಲಭೂತ ಹಕ್ಕುಗಳ ಚೌಕಟ್ಟಿನಲ್ಲಿರಬೇಕು ಎಂದರು.
ಅಷ್ಟೇ ಅಲ್ಲ, ಸಂವಿಧಾನಕ್ಕೆ ಅಮೂಲಾಗ್ರ ತಿದ್ದುಪಡಿ ತರದೆ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರವಿಲ್ಲ. ದೇಶದ ಜನರು ಈಗ ಒಂದು ರೀತಿಯ ಗೊಂದಲದಲ್ಲಿ ಸಿಲುಕಿದ್ದಾರೆ. ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳಬೇಕೇ? ಅಥವಾ ತಮ್ಮ ಧರ್ಮದ ಅನುಸಾರ ಬದುಕಬೇಕೆ? ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ ಎಂದರು.