ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ

"ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಒಂದು ಮತದ ಮುನ್ನಡೆ ಸಾಧಿಸಿದದೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಪ್ರದೀಪ್ ಈಶ್ವ‌ರ್ ಸವಾಲು ಹಾಕಿದ್ದರು.;

Update: 2024-06-05 07:42 GMT
ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್
Click the Play button to listen to article

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ.ಸುಧಾಕರ್ ಗೆಲುವು ಸಾಧಿಸಿದ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ.

"ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಒಂದು ಮತದ ಮುನ್ನಡೆ ಸಾಧಿಸಿದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ" ಎಂದು ಪ್ರದೀಪ್ ಈಶ್ವ‌ರ್ ಚುನಾವಣಾ ಪ್ರಚಾರದ ವೇಳೆ ಸವಾಲು ಹಾಕಿದ್ದರು. ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಡಾ ಕೆ.ಸುಧಾಕರ್ ಜಯ ಗಳಿಸಿದ್ದು, ಇದರ ಬೆನ್ನಲ್ಲೇ ಮಂಗಳವಾರ(ಜೂ.4) ರಾತ್ರಿ ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿರುವ ಪ್ರದೀಪ್ ಈಶ್ವರ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ಎಎಸ್ಪಿ ಎಸ್. ಶಿವಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಮಂಜುನಾಥ ಹಾಗೂ ಸಿಬ್ಬಂದಿ ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಪ್ರದೀಪ್ ಈಶ್ವರ್ ಅವರ ಸಹೋದರ ಚೇತನ್, ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದ ಕಾರಣ ಅವರ ಬೆಂಬಲಿಗರೆ ಕೃತ್ಯ ಎಸಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಶಾಸಕರಾದ ಪ್ರದೀಪ್ ಈಶ್ವರ್ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣ ಸಂಬಂಧ ಮನೆಯ ಸಿಬ್ಬಂದಿ ಮುನಿಕೃಷ್ಣ ಮಾಹಿತಿ ನೀಡಿ, ರಾತ್ರಿ 10.15 ಸಮಯದಲ್ಲಿ ನಾಲ್ಕು ಜನ ಹುಡುಗರು ಕಲ್ಲು ತೂರಾಟ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಸೆನ್ಸರ್ ಆನ್ ಆಗ್ತಿದ್ದಂತೆ ಹುಡುಗರು ಓಡಿ ಹೋದರು. ನಾಲ್ಕೈದು ಕಲ್ಲುಗಳನ್ನು ಎಸೆದಿದ್ದಾರೆ. ಮನೆಯ ಕಿಟಕಿ ಪುಡಿ ಪುಡಿ ಆಗಿದೆ. ಕಲ್ಲಿನ ಶಬ್ದ ಕೇಳಿ ಆಚೆ ಬಂದೆವು. ಇಲ್ಲಿ ಮನೆ ಮಾಡಿ ಒಂದು ವರ್ಷ ಆಗಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಡಾ ಕೆ.ಸುಧಾಕರ್‌ ಅವರು ಕಾಂಗ್ರೆಸ್ ನ ರಕ್ಷಾ ರಾಮಯ್ಯ ಅವರನ್ನು 1,12,866 ಮತಗಳ ಅಂತರದಿಂದ ಸೋಲಿಸಿ ಜಯ ಸಾಧಿಸಿದ್ದಾರೆ.

Tags:    

Similar News