ಲೈಂಗಿಕ ದೌರ್ಜನ್ಯ ಪ್ರಕರಣ | ಡಾ.ಸೂರಜ್‌ ರೇವಣ್ಣಗೆ ಇನ್ನು 2 ದಿನ ಪೊಲೀಸ್‌ ಕಸ್ಟಡಿ

ವ್ಯಕ್ತಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸಿಐಡಿ ಬಂಧಿಸಿರುವ ಜೆಡಿಎಸ್‌ ಎಂಎಲ್‌ಸಿ ಸೂರಜ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ.;

Update: 2024-07-02 09:01 GMT
ಸೂರಜ್‌ ರೇವಣ್ಣ
Click the Play button to listen to article

ವ್ಯಕ್ತಿಯೊಬ್ಬನಿಗೆ ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಿಐಡಿ ಪೊಲೀಸರ ವಶದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ. ಈ ಬಗ್ಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯವು ಸೋಮವಾರ ಆದೇಶ ಹೊರಡಿಸಿದೆ. 

ಎಂಟು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಸೂರಜ್ ಅವರನ್ನು ಸೋಮವಾರ ಮಧ್ಯಾಹ್ನ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪೊಲೀಸ್ ಕಸ್ಟಡಿಯನ್ನು ಆರು ದಿನಗಳ ಕಾಲ ವಿಸ್ತರಿಸುವಂತೆ ಸಿಐಡಿ ಪೊಲೀಸರ ಪರ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ನ್ಯಾಯಾಧೀಶರು ಅದನ್ನು ಜುಲೈ 3 ರವರೆಗೆ ಅನುಮತಿಸಿದರು. ರಾಜ್ಯ ಸರ್ಕಾರ ಅಶೋಕ್ ನಾಯಕ್ ಮತ್ತು ಬಿಎನ್ ಜಗದೀಶ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿದೆ. 

ಮೂಲಗಳ ಪ್ರಕಾರ, ಪೊಲೀಸರು ಈಗಾಗಲೇ ಸೂರಜ್‌ನನ್ನು ದೂರು ನೀಡಿರುವ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆಯೇ ಎಂದು ಕಂಡುಹಿಡಿಯಲು ಮುಖ್ಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಿಐಡಿ ಅಧಿಕಾರಿಗಳು  ಧ್ವನಿ ಮಾದರಿಗಳನ್ನು ಸಂಗ್ರಹಿಸಲು, ದೂರುದಾರರನ್ನು ಒಳಗೊಂಡಿರುವ ಕರೆ ರೆಕಾರ್ಡಿಂಗ್‌ಗಳೊಂದಿಗೆ ಹೋಲಿಸಬೇಕಾಗಿದೆ. ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋರೆನ್ಸಿಕ್ ವಿಶ್ಲೇಷಣೆಗಾಗಿ ಪೊಲೀಸರು ಅವರ ಕೂದಲಿನ ಮಾದರಿಗಳನ್ನು ಸಂಗ್ರಹಿಸಬೇಕಾಗಿದೆ. ಫಾರ್ಮ್‌ಹೌಸ್‌ನಲ್ಲಿ ಮಹಜರ್‌ ಸಮಯದಲ್ಲಿ ಹಲವಾರು ಕೂದಲಿನ ಎಳೆಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ ತಮ್ಮ ಕಸ್ಟಡಿಯನ್ನು ವಿಸ್ತರಿಸುವಂತೆ ಸಿಐಡಿ ಪೊಲೀಸ್‌ ಪರ ಅಶೋಕ್ ನಾಯಕ್ ಅವರು ನ್ಯಾಯಾಲಕ್ಕೆ ಮನವಿ ಸಲ್ಲಿಸಿದರು. ಇದನ್ನು ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೂರಜ್‌ ರೇವಣ್ಣ ಅವರನ್ನು ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿತು.

ಈ ಮಧ್ಯೆ ಸೂರಜ್‌  ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದರು. ಹೊಸ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಐಪಿಸಿ ಸೆಕ್ಷನ್ 377 ಗೆ ಸಮಾನವಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅದಕ್ಕೆ ತತ್ಸಮಾನ ಸೆಕ್ಷನ್ ಇಲ್ಲದಿರುವುದರಿಂದ ಸೂರಜ್‌ಗೆ ಜಾಮೀನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸೂರಜ್‌ ರೇವಣ್ಣ ವಿರುದ್ದ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ಅಸಹಜ ಲೈಂಗಿಕ ದೌರ್ಜನ್ಯಕ್ಕೆ ಒತ್ತಾಯಿಸಿದರು ಎಂದು ಸೂರಜ್‌ ವಿರುದ್ದ ಇಬ್ಬರು ದೂರು ನೀಡಿದ್ದಾರೆ. ಈ ಕುರಿತು ಹೊಳೆನರಸೀಪುರ ಠಾಣೆ ಪೊಲೀಸರು ಕಳೆದ ತಿಂಗಳೇ ಸೂರಜ್‌ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಆನಂತರ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಪೊಲೀಸರು ಸೂರಜ್‌ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Similar News