SCSP, TSP ಹಣ | ಮಧ್ಯಪ್ರದೇಶದ ಉದಾಹರಣೆ ಕೊಟ್ಟು ಸಿಎಂಗೆ ಟಾಂಗ್ ಕೊಟ್ಟ ಎಚ್.ಡಿ.ಕುಮಾರಸ್ವಾಮಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಇರಿಸಲಾಗಿದ್ದ ಹಣವನ್ನು ಲೂಟಿ ಮಾಡಿರುವ ಈ ಸರಕಾರ ಆ ಜನರ ಬೆನ್ನಿಗೆ ಚೂರಿ ಹಾಕಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ ಇರಿಸಲಾಗಿದ್ದ ಹಣವನ್ನು ಲೂಟಿ ಮಾಡಿರುವ ಈ ಸರಕಾರ ಆಯಾ ಜನರ ಬೆನ್ನಿಗೆ ಚೂರಿ ಹಾಕಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಒಂದೆಡೆ ಎಸ್ಸಿ, ಎಸ್ಟಿ ಜನರ ಹಣವನ್ನು ಪಕ್ಷದ ರಾಜ್ಯಗಳಿಗೆ ಸಾಗಿಸಿ ಲಪಟಾಯಿಸಿದ್ದಾರೆ. ಇನ್ನೊಂದು ಕಡೆ 2024-2025ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (SCSP) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (TSP) ಅಡಿಯಲ್ಲಿ ₹39,121.46 ಕೋಟಿ ವೆಚ್ಚ ಮಾಡುವ ಕ್ರಿಯಾ ಯೋಜನೆ ಪ್ರಸ್ತಾವನೆಗೆ SCSP -TSP ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚು ಹಣವನ್ನು ಎಸ್ಸಿ ಎಸ್ಟಿ ಜನರಿಗೆ ಅಲ್ಲಿನ ಸರ್ಕಾರಗಳು ಮೀಸಲಿಟ್ಟಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಧ್ಯಪ್ರದೇಶದ ಉದಾಹರಣೆ ಕೊಟ್ಟ ಸಚಿವರು
ಮಧ್ಯಪ್ರದೇಶದಲ್ಲಿ ₹3,65,000 ಕೋಟಿಯಷ್ಟು ಬಜೆಟ್ ನಲ್ಲಿ ₹40,000 ಕೋಟಿಯಷ್ಟು ಹಣವನ್ನು ಎಸ್‌ಸಿಎಸ್ಪಿ, ಎಸ್ ಟಿ ಪಿ ಯೋಜನೆಗೆ ಮೀಸಲು ಇಟ್ಟಿದ್ದಾರೆ. ನೀವು ಒಬ್ಬರೇ ಅಲ್ಲ ಎಸ್‌ಸಿಎಸ್ಪಿ, ಎಸ್ಟಿಪಿಗೆ ಹಣ ಇಟ್ಟಿರುವುದು. ಇಂದು ಕಡೆ ಎಲ್ಲಾ ಕಡೆ ಬೆಲೆ ಏರಿಕೆ ಮಾಡುತ್ತಾರೆ, ಇನ್ನೊಂದು ಕಡೆ ಹಣ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇದು ಯಾವ ಸೀಮೆ ನ್ಯಾಯ ಎಂದು ಅವರು ಪ್ರಶ್ನೆ ಮಾಡಿದರು.
ಈ ಕಾರ್ಯಕ್ರಮಕ್ಕೆ ಬೇರೆ ಯಾವ ರಾಜ್ಯದಲ್ಲಿಯೂ, ಅದರಲ್ಲಿಯೂ ಬಿಜೆಪಿ ಆಡಳಿತ ಇರುವ ಯಾವ ರಾಜ್ಯದಲ್ಲಿಯೂ ಅನುದಾನ ನೀಡಿಲ್ಲ ಎಂದು ಸಿಎಂ ಹೇಳಿದ್ದಾರೆ. ಇದರ ಬಗ್ಗೆ ಮಾಹಿತಿ ತರಿಸಿಕೊಂಡು ನೋಡಬೇಕು ಮುಖ್ಯಮಂತ್ರಿಗಳು. ಏನೋ ನಾವು ಮಾತ್ರವೇ ಕೊಟ್ಟಿದ್ದೇವೆ ಎಂದು ಬೆನ್ನು ತಟ್ಟಿಕೊಂಡಿದ್ದೀರಲ್ಲ, ಇದು ಸುಳ್ಳು ಎಂದು ಕೇಂದ್ರ ಸಚಿವರು ಹೇಳಿದರು
ಗ್ಯಾರಂಟಿಗಳಿಗೆ ಹಣ ಬೇಕು ಎಂದು ಈ ಸರ್ಕಾರ ಅನೇಕ ಜನ ವಿರೋಧಿ ಕೆಲಸಗಳನ್ನು ಮಾಡುತ್ತಿದೆ. ಹಾಲಿನ ದರ ಏರಿಕೆ ಮಾಡಿದ್ದಾರೆ. ಆದರೆ ಆ ಬಗ್ಗೆ ಜನರಿಗೆ ಸ್ಪಷ್ಟತೆ ಇಲ್ಲ. ಹಾಲಿನ ಪ್ರಮಾಣ ಹೆಚ್ಚಿಸಿ ದರ ಏರಿಕೆ ಮಾಡಿ ಎಂದು ಜನರು ಇವರನ್ನು ಕೇಳಿದ್ದರೇ? ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಈಗ ಹಾಲಿನ ದರ ಕೂಡ ಏರಿಕೆ ಮಾಡಿದ್ದಾರೆ. ಹನಿ ನೀರಾವರಿ ಪದ್ದತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ ಇತ್ತು. 48 ಪರ್ಸೆಂಟ್ ಇದ್ದ ಸಬ್ಸಿಡಿಯನ್ನು 18 ಪರ್ಸೆಂಟ್ ಗೆ ಇಳಿಸಿದ್ದಾರೆ ಇವರು. ಇವರು ರೈತರಿಗೆ ಎಷ್ಟು ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಇದರಿಂದಲೇ ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವರು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.
ಜಮೀನಿನಲ್ಲಿ ಹೊಸ ವಿದ್ಯುತ್ ಸಂಪರ್ಕಕ್ಕೆ ಟಿಸಿ ತೆಗೆದುಕೊಳ್ಳಲು ರೈತರು ₹2.5 ಲಕ್ಷ ದುಡ್ಡು ಕೊಡಬೇಕು. ನಿರಂತರವಾಗಿ ಜನರ ಮೇಲೆ ಗ್ಯಾರಂಟಿಗಳ ಹೆಸರಿನಲ್ಲಿ ತೆರಿಗೆಭಾರ ಹೊರೆಸುತ್ತಿದ್ದಾರೆ.