ಶಿವಮೊಗ್ಗದಲ್ಲಿ ಮಳೆ : 18 ಕುರಿ, 2 ಹಸು ಸಿಡಿಲಿಗೆ ಬಲಿ
ಬಿಸಿಲ ಬೇಗೆಯಿಂದ ಬಳಲಿದ್ದ ಮಲೆನಾಡ ಜನತೆಗೆ ಮಳೆ ತಂಪೆರೆದಿದೆ. ಅದಾಗ್ಯೂ, ಗುಡುಗು-ಸಿಡಿಲಿಗೆ ಹಲವಾರು ಜಾನುವಾರುಗಳು ಬಲಿಯಾಗಿವೆ.
ಬಿಸಿಲ ಬೇಗೆಯಿಂದ ಬಳಲಿದ್ದ ಮಲೆನಾಡ ಜನತೆಗೆ ಮಳೆ ತಂಪೆರೆಯುವುದರೊಂದಿಗೆ ಆಘಾತಗಳನ್ನೂ ನೀಡಿದೆ. ಶಿವಮೊಗ್ಗದ ಹಲವೆಡೆ ಭೀಕರ ಮಳೆ-ಸಿಡಿಲಿಗೆ ಹಲವಾರು ಜಾನುವಾರುಗಳು ಅಸುನೀಗಿವೆ.
ಶಿವಮೊಗ್ಗದ ಆಯನೂರು ಕೋಟೆಯಲ್ಲಿ ಶುಕ್ರವಾರ ಸಿಡಿಲು ಬಿಡಿದು 18 ಕುರಿಗಳು ಸಾವನ್ನಪ್ಪಿದ್ದ ಬೆನ್ನಲ್ಲೇ, ಇಂದು ಜಿಲ್ಲೆಯ ಹನುಮಂತಾಪುರ ಎಂಬಲ್ಲಿ ಮರದ ಕೆಳಗೆ ಕಟ್ಟಿದ್ದ ಎರಡು ದನಗಳು ಸಿಡಿಲು ಬಡಿದು ಸಾವನ್ನಪ್ಪಿವೆ.
ಶಿವಮೊಗ್ಗದ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು, ಆಯನೂರು ಬಳಿ ಮರವೊಂದು ಹೆದ್ದಾರಿಗೆ ಉರುಳಿ, ವಾಹನ ಸಂಚಾರ ವ್ಯತ್ಯಯವಾಗಿದೆ.
ಶುಕ್ರವಾರ, ಆಯನೂರು ಕೋಟೆ ಬಳಿ ಮೇಯಲು ಬಿಟ್ಟಿದ್ದ 18 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿದ್ದು, ಇದರಿಂದಾಗಿ ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎಂದು ಕುರಿಗಳ ಮಾಲೀಕ ಜಾಕೀರ್ ಹುಸೇನ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ವಿಪರೀತ ಏರಿಕೆ ಕಂಡಿದ್ದ ತಾಪಮಾನ, ಮಳೆಯಿಂದಾಗಿ ಕಡಿಮೆಗೊಂಡಿದೆ.
ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದರಿಂದ ತಾಪಮಾನ ಇಳಿಕೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.