ಪ್ರಜ್ವಲ್ ಲೈಂಗಿಕ ಹಗರಣ | ಸರ್ಕಾರದ ವೈಫಲ್ಯ ಪ್ರಶ್ನಿಸಿ ಸಿಎಂಗೆ ಪ್ರಜ್ಞಾವಂತರ ಬಹಿರಂಗ ಪತ್ರ

ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿ ತನಿಖೆ ಕಾಲಮಿತಿಯಲ್ಲಿ ನಡೆಯಬೇಕು, ಕೂಡಲೇ ಪ್ರಜ್ವಲ್‌ ಬಂಧನವಾಗಬೇಕು, ಯಾವ ಭೀತಿ ಇಲ್ಲದೆ ಸಂತ್ರಸ್ತೆಯರು ದೂರು ನೀಡುವ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂಬುದೂ ಸೇರಿದಂತೆ 16 ಬೇಡಿಕೆಗಳನ್ನು ನಾಡಿನ ಪ್ರಜ್ಞಾವಂತರು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ.

Update: 2024-05-14 08:08 GMT
ಪ್ರಜ್ವಲ್ ಲೈಂಗಿಕ ಹಗರಣ | ಸರ್ಕಾರದ ವೈಫಲ್ಯ ಪ್ರಶ್ನಿಸಿ ಸಿಎಂಗೆ ಪ್ರಜ್ಞಾವಂತರ ಬಹಿರಂಗ ಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಚಳವಳಿ ಆರಂಭಿಸಿದ್ದಾರೆ.
Click the Play button to listen to article

ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ಎಚ್. ಡಿ. ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ರಾಜ್ಯ ಸರ್ಕಾರ ನಿರ್ವಹಿಸುತ್ತಿರುವ ವಿಧಾನದ ಬಗ್ಗೆ ರಾಜ್ಯದ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ವಿಷಯದಲ್ಲಿ ರಾಜ್ಯ ಸರ್ಕಾರ ಆರಂಭದಿಂದಲೂ ಕೆಲವು ಲೋಪಗಳನ್ನು ಎಸಗಿದೆ ಮತ್ತು ಈಗಲೂ ಸಂತ್ರಸ್ತೆಯರಿಗೆ ಧೈರ್ಯ ತುಂಬಿ ದೂರು ನೀಡಲು ಮುಂದೆ ಬರುವಂತಹ ವಾತಾವರಣ ನಿರ್ಮಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ನಾಡಿನ ನೂರಾರು ಲೇಖಕರು, ಕಲಾವಿದರು, ರಂಗಕರ್ಮಿಗಳು, ಹಿರಿಯ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು, ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಸದ್ಯ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿ ತನಿಖೆ ಕಾಲಮಿತಿಯಲ್ಲಿ ನಡೆಯಬೇಕು, ಕೂಡಲೇ ಪ್ರಜ್ವಲ್‌ ಬಂಧನವಾಗಬೇಕು, ಯಾವ ಭೀತಿ ಇಲ್ಲದೆ ಸಂತ್ರಸ್ತೆಯರು ದೂರು ನೀಡುವ ಮುಕ್ತ ವಾತಾವರಣ ನಿರ್ಮಾಣವಾಗಬೇಕು ಎಂಬುದೂ ಸೇರಿದಂತೆ 16 ಬೇಡಿಕೆಗಳನ್ನು ನಾಡಿನ ಪ್ರಜ್ಞಾವಂತರು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ.

ವೈರಲ್‌ ಆಗಿರುವ ಪತ್ರದಲ್ಲಿ ಏನಿದೆ?

ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಅವನ ತಂದೆ ಮತ್ತು ಶಾಸಕ ಎಚ್. ಡಿ. ರೇವಣ್ಣ ಅವರುಗಳು ನಡೆಸಿದ್ದಾರೆನ್ನಲಾದ ವಿಕೃತ ಲೈಂಗಿಕ ಸಮೂಹ ಅತ್ಯಾಚಾರ ಹಗರಣವು ಅತ್ಯಂತ ಹೇಯವೂ, ನಾಗರಿಕ ಸಮಾಜ ತಲೆತಗ್ಗಿಸುವಂತಹದೂ ಆಗಿದೆ. ಈ ಲೈಂಗಿಕ ಕ್ರಿಯೆಗಳನ್ನು ಸುಮಾರು 2900 ವಿಡಿಯೋಗಳು ಮತ್ತು ಫೋಟೋಗಳಲ್ಲಿ ದಾಖಲಿಸಿ ಇಟ್ಟುಕೊಂಡಿರುವುದು, ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು, ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣವನ್ನು ಮಾಹಿತಿ ಇರುವ ಯಾರೊಬ್ಬರೂ ಕಾನೂನು ಪಾಲಕರಿಗೆ ತಿಳಿಸದೆ ಮುಚ್ಚಿಟ್ಟಿರುವುದು ಘೋರ ಅಪರಾಧವಾಗಿದೆ.

ಜಗತ್ತಿನಲ್ಲಿ ಹಿಂದೆಂದೂ ಕೇಳರಿಯದಂತಹ ಈ ಹಗರಣವನ್ನು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ, ಚುನಾವಣೆಯ ಲಾಭಕ್ಕಾಗಿ ಬಳಸುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ರಾಜಕೀಯ ಶಕ್ತಿಗಳ ಈ ಬೇಜವಾಬ್ದಾರಿ ನಡವಳಿಕೆಯು ಮೂಲ ಅಪರಾಧ ಮತ್ತು ಅದರಿಂದ ಆಗಲಿರುವ ಪರಿಣಾಮಗಳನ್ನು ಗೌಣ ಮಾಡುತ್ತಿದೆ.

ಪ್ರಜ್ವಲ್ ರೇವಣ್ಣನ ತಾತ, ತಂದೆ, ತಾಯಿ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಇವರುಗಳು ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಂಪುಟ ದರ್ಜೆ ಸಚಿವರು, ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ, ವಿಧಾನ ಪರಿಷತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯತ್ವ- ಹೀಗೆ ಪ್ರಜಾಪ್ರಭುತ್ವದ ಎಲ್ಲ ಹುದ್ದೆಗಳನ್ನು, ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ. ರಾಜ್ಯದಲ್ಲೇ ಇಂತಹ ಮತ್ತೊಂದು ರಾಜಕೀಯ ಕುಟುಂಬ ಇರಲಿಕ್ಕಿಲ್ಲ. ಇಂಥಹ ಕುಟುಂಬದ ಈ ಹಗರಣವು ನಮ್ಮನ್ನು 19ನೇ ಶತಮಾನದ ಊಳಿಗಮಾನ್ಯ, ಪಾಳೇಗಾರಿ, ಮಹಿಳಾ ವಿರೋಧಿ, ಪಿತೃಪ್ರಧಾನ ಸಮಾಜದ ದಿನಗಳಿಗೆ ಕೊಂಡೊಯ್ಯುತ್ತದೆ. ಈ ಕುರಿತು ಬರುತ್ತಿರುವ ತಳಮೂಲದ ಮಾಧ್ಯಮ ವರದಿಗಳು ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬಸ್ಥರು ಪ್ರಜಾಪ್ರಭುತ್ವದ ಮುಸುಕಿನೊಳಗೆ, ಪ್ರಜಾಪ್ರತಿನಿಧಿಗಳೆಂಬ ವೇಷ ಧರಿಸಿ ನಡೆಸಿರುವ ಪಾಳೇಗಾರಿ ಆಡಳಿತದ ವಿವರಗಳನ್ನು ಬಯಲು ಮಾಡುತ್ತಿವೆ.

ಈ ಹಗರಣ ಬಯಲಾದ ಕೂಡಲೆ ಹಾಸನ ಕ್ಷೇತ್ರದ ಚುನಾವಣೆಯನ್ನು ಸ್ಥಗಿತಗೊಳಿಸದೆ ಆರೋಪಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಒದಗಿಸಿದ್ದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಮಾಡಿದ ಅಪಚಾರವಾಗಿದೆ. ಹಗರಣ ಬಯಲಾದರೂ ಐದು ದಿನಗಳು (ಏ.22ರಿಂದ 26ರವರೆಗೆ) ಆರೋಪಿಯು ಸ್ವತಂತ್ರವಾಗಿ ಇರಲು ಬಿಟ್ಟಿದ್ದು, ಅವನ ಚಲನವಲನದ ಮೇಲೆ ಕಣ್ಗಾವಲು ಹಾಕದೆ ಇದ್ದಿದ್ದು ನೋಡಿದರೆ ಈ ಸಮಾಜದಲ್ಲಿ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಹಿಳೆಯರು ಸುರಕ್ಷಿತವಾಗಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಬೇರೆ ಬೇರೆ ವರ್ಗಗಳು, ವೃತ್ತಿಗಳು, ಪ್ರದೇಶಗಳಿಗೆ ಸೇರಿದ ನೂರಾರು ಜನ ಮಹಿಳೆಯರ ಮೇಲೆ ಜನಪ್ರತಿನಿಧಿಗಳು ನಡೆಸಿರುವ ಈ ಅಪರಾಧದ ಗಹನತೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಸರ್ಕಾರಕ್ಕೆ, ರಾಜಕೀಯ ನಾಯಕರಿಗೆ ಅರ್ಥವಾಗಿಲ್ಲವೇ ಎಂಬ ಅನುಮಾನ ಮೂಡುತ್ತದೆ.

ಈಗ ಪ್ರತಿದಿನದ ಆರೋಪ-ಪ್ರತ್ಯಾರೋಪಗಳು, ಜಾತಿ ಆಧರಿತ ಹೇಳಿಕೆಗಳು, ರಾಜಕೀಯ ನಾಯಕರ ಲಿಂಗತ್ವ ಸೂಕ್ಷ್ಮತೆ ಇಲ್ಲದ ಹೇಳಿಕೆಗಳು, ಸಂತ್ರಸ್ತರನ್ನೇ ಅಪರಾಧಿಗಳಂತೆ ಬಿಂಬಿಸುವ ಸಮೂಹ ಮಾಧ್ಯಮಗಳ ವರದಿಗಳು ಸಾಮಾಜಿಕ ಸ್ವಾಸ್ಥ್ಯ ವನ್ನು, ಮಾನಸಿಕ ನೆಮ್ಮದಿಯನ್ನು ಹಾಳುಮಾಡಿವೆ. ಸಂತ್ರಸ್ತರ ಘನತೆಯನ್ನು ಕುಂದಿಸುತ್ತಿವೆ. ಸಂತ್ರಸ್ತರು ಈಗ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದು ದೂರು ಕೊಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಸರೀಕರ ಎದುರು ಕಾಣಿಸಿಕೊಳ್ಳುವುದು ಕಷ್ಟವಾಗಿದೆ. ಗುರುತು ಬಯಲಾದ ಸಂತ್ರಸ್ತರ ಕುಟುಂಬಗಳು ತೀವ್ರ ಮಾನಸಿಕ ಯಾತನೆಗೆ ಗುರಿಯಾಗಿವೆ. ಕುಟುಂಬ ಸದಸ್ಯರು ಮತ್ತು ಮಕ್ಕಳು ಈ ಪರಿಸ್ಥಿತಿಯನ್ನು ಅರ್ಥೈಸಲಾಗದೆ ಕ್ಷೋಭೆಗೆ ತುತ್ತಾಗಿದ್ದಾರೆ. ಹಲವಾರು ಕುಟುಂಬಗಳು ಮನೆ ಮತ್ತು ಊರು ತೊರೆದಿವೆ ಎನ್ನಲಾಗಿದೆ. ಮೂರ‍್ನಾಲ್ಕು ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸಿದ ವರದಿಗಳು ಕೇಳಿಬಂದಿವೆ.

ಆ ವಿಡಿಯೋಗಳು ಲಕ್ಷಾಂತರ ಜನರನ್ನು ತಲುಪಿರುವುದರಿಂದ ಅವು ಯುವಜನರು, ಕಾಮುಕರು ಮತ್ತು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮ ಘೋರವಾಗಲಿದೆ. ಇದೊಂದು ಗಂಭೀರ ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಯಾಗುತ್ತಿದೆ.

ಬೇಡಿಕೆಗಳೇನು?

1. ಆರೋಪಿ ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಕೂಡಲೇ ಬಂಧಿಸಬೇಕು. ಐಟಿ ಕಾಯಿದೆ, ಐಪಿಸಿ ಕಾಯಿದೆಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು.

2. ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ರಾಜ್ಯದ ಮುಖ್ಯಸ್ಥರಾಗಿ ತಾವು ಸಂತ್ರಸ್ತ ಮಹಿಳೆಯರನ್ನು ಉದ್ದೇಶಿಸಿ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕು. ಸಂತ್ರಸ್ತರಿಗೆ ತೊಂದರೆ ಕೊಡುವ, ದೂರು ನೀಡದಂತೆ ತಡೆಯೊಡ್ಡುವ, ದೂರು ಹಿಂತೆಗೆದುಕೊಳ್ಳುವಂತೆ ಒತ್ತಡ ತರುವ, ಸಂತ್ರಸ್ತರ ಕುರಿತು ಅವಹೇಳನ-ಅಪಪ್ರಚಾರ ಮಾಡುವ, ಸಂತ್ರಸ್ತರ ಮಕ್ಕಳು ಹಾಗೂ ಕುಟುಂಬದವರಿಗೆ ತೊಂದರೆ ನೀಡುವ ಯಾರದೇ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಾವು ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಬೇಕು. ಈ ಭರವಸೆ ತುಂಬುವ ಹೇಳಿಕೆಯನ್ನು ವಿಡಿಯೋ ಮೂಲಕವೂ ಬಿಡುಗಡೆ ಮಾಡಬೇಕು.

3. ಹಗರಣ ಕುರಿತು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕರ ನಡವಳಿಕೆಗೆ ನೀವು ಕಡಿವಾಣ ಹಾಕಬೇಕು. ಹಗರಣವನ್ನು ಗಂಭೀರವಾಗಿ ಪರಿಗಣಿಸಿ, ಸಮರ್ಥ ತನಿಖೆಗೆ ಅವಕಾಶ ಮಾಡಿಕೊಡುವಂತೆ ರಾಜಕೀಯ ನಾಯಕರಿಗೆ ಸೂಚನೆ ನೀಡಬೇಕು.

4. ಎಸ್‌ಐಟಿ ತನಿಖೆಯು ಕಾಯಿದೆಯ ಅನುಸಾರ ಕಾಲಮಿತಿಯೊಳಗೆ ನಡೆಯಬೇಕು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 173ಕ್ಕೆ 2018ರಲ್ಲಿ ತಂದಿರುವ ತಿದ್ದುಪಡಿಯು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳ ಒಳಗೆ ಮುಗಿಸಬೇಕು ಎನ್ನುತ್ತದೆ. ಹಾಗೂ 60 ದಿನಗಳ ಒಳಗಾಗಿ ತನಿಖೆ ಮುಗಿಯದಿದ್ದಲ್ಲಿ ಆರೋಪಿಯ ಜಾಮೀನು ಪಡೆಯಲು ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಕಾಲಮಿತಿಯ ತನಿಖೆಯನ್ನು ಪ್ರಕಟಿಸಬೇಕು.

5. ಈ ಲೈಂಗಿಕ ಕೃತ್ಯಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಜೊತೆಗೆ ಭಾಗಿ ಆಗಿರಬಹುದಾದವರನ್ನು ಪತ್ತೆಮಾಡಿ ಮೊಕದ್ದಮೆ ಹೂಡಬೇಕು.

6. ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹಲವಾರು ತಿಂಗಳುಗಳಿಂದ ಹೇಳುತ್ತಿರುವ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್‌ನನ್ನು ಕೂಡಲೇ ಬಂಧಿಸಬೇಕು.

7. ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹೇಳಿದ ಬಿಜೆಪಿ ನಾಯಕ ಬಿ. ದೇವರಾಜೇಗೌಡ ಮತ್ತು ಕಾರ್ತಿಕ್ ವಿರುದ್ದ ಈ ಕೆಳಗಿನ ಕೃತ್ಯಗಳಿಗಾಗಿ ಗಂಭೀರ ಪ್ರಕರಣಗಳನ್ನು ದಾಖಲಿಸಬೇಕು: (1) ಈ ಹಗರಣವನ್ನು ಮುಚ್ಚಿಟ್ಟಿದ್ದಕ್ಕೆ, (2) ಆರೋಪಿಯು ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದ್ದಕ್ಕೆ, (3) ಕಾನೂನು ಪಾಲಕರ ಕೈತಪ್ಪಿಸಿ ವಿಡಿಯೋಗಳು ಸಮಾಜಘಾತುಕರ ಕೈಗೆ ಸಿಗುವಂತೆ ಮಾಡಿದಕ್ಕೆ, (4) ನೂರಾರು ಮಹಿಳೆಯರ ಮತ್ತು ಅವರ ಕುಟುಂಬದವರ ಬದುಕಿನ ಘನತೆಗೆ ಕುಂದು ತಂದಿರುವುದಕ್ಕೆ, (5) ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಕ್ಕೆ (6) ಚುನಾವಣೆಯ ಮೇಲೆ ಈ ಹಗರಣವು ಪ್ರತಿಕೂಲ ಪರಿಣಾಮ ಬೀರುವಂತೆ ಸಂಚು ರೂಪಿಸಿದ್ದಕ್ಕೆ ಸೂಕ್ತ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು

8. ವಿಡಿಯೋಗಳನ್ನು ಸಾರ್ವಜನಿಕರಿಗೆ ಹಂಚಿದವರ ವಿರುದ್ಧ ಮಾನವಹಕ್ಕುಗಳಿಗೆ ಧಕ್ಕೆ ತಂದಿರುವುದು, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವುದು, ಚುನಾವಣೆಯನ್ನು ಸ್ಯಾಬೊಟೇಜ್ ಮಾಡಲು ಸಂಚು ಮಾಡಿರುವ ಆರೋಪದ ಮೇಲೆ ಮೊಕದ್ದಮೆ ಹೂಡಬೇಕು

9. ವಿಡಿಯೋಗಳ ಕುರಿತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯ ಅಧ್ಯಕ್ಷರಿಗೆ ಬಿ.ದೇವರಾಜೇಗೌಡ ಬರೆದಿರುವುದಾಗಿ ಹೇಳುತ್ತಿರುವ ಪತ್ರಗಳನ್ನು ಆಧರಿಸಿ, ಆ ಇಬ್ಬರು ರಾಜಕೀಯ ನಾಯಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿಲ್ಲದೆ ಇರುವುದಕ್ಕೆ ಅವರುಗಳನ್ನೂ ಸಂಚಿನ ಭಾಗವಾಗಿ ಪರಿಗಣಿಸಬೇಕು.

10. ಕೆಲವು ವಿಡಿಯೋಗಳು ಐದಾರು ವರ್ಷಗಳಷ್ಟು ಹಳೆಯವು ಎಂದು ಎಚ್ ಡಿ ರೇವಣ್ಣ ಹೇಳಿರುವುದು ವರದಿಯಾಗಿದೆ. ಅಷ್ಟು ವರ್ಷಗಳಿಂದ ನಡೆಯುತ್ತಿರುವ ಈ ಲೈಂಗಿಕ ವಿಕೃತಿಯನ್ನು ಮುಂದುವರೆಯಲು ಬಿಟ್ಟಿರುವುದರಿಂದ ಅವರ ಕುಟುಂಬದ ಎಲ್ಲ ಸದಸ್ಯರನ್ನು ಈ ಕೃತ್ಯದ accomplice ಗಳೆಂದು ಪರಿಗಣಿಸಿ ಅವರ ಮೇಲೆಯೂ ಮೊಕದ್ದಮೆ ಹೂಡಬೇಕು. ತಂದೆ ಮತ್ತು ಮಗ ಇಬ್ಬರೂ ಭಾಗಿಯಾಗಿರುವುದರಿಂದ ಪ್ರಜ್ವಲ್‌ನ ತಾಯಿಯನ್ನೂ ವಿಚಾರಣೆಗೆ ಗುರಿಪಡಿಸಬೇಕು. ಸಂತ್ರಸ್ತರು ಅತ್ಯಾಚಾರ ನಡೆದಿದೆ ಎಂದು ಹೇಳಲಾದ ಮನೆಗಳಲ್ಲಿ ಅರೋಪಿಯ ತಾಯಿಯೂ ನೆಲೆಸಿದ್ದು, ಈ ಕೃತ್ಯ ಮೇಲಿಂದ ಮೇಲೆ ನಡೆದಿರುವುದರಿಂದ ತಾಯಿಯನ್ನು accomplice ಮಾಡಬೇಕು.

11. ಏಪ್ರಿಲ್ 22, 2024ರಂದು ವಿಡಿಯೋಗಳು ಬಹಿರಂಗವಾಗಿವೆ. ಏಪ್ರಿಲ್ 25ಕ್ಕೆ ರಾಜ್ಯ ಮಹಿಳಾ ಆಯೋಗವು ತನಿಖೆಗೆ ಶಿಫಾರಸು ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಆದರೂ ಏಪ್ರಿಲ್ 27ರಂದು ಆರೋಪಿಯು ದೇಶ ಬಿಟ್ಟು ಪರಾರಿಯಾಗಿರುವುದು ಗೃಹ ಇಲಾಖೆಯ ಮತ್ತು ಇಂಟೆಲಿಜೆನ್ಸ್ ವಿಭಾಗದ ವೈಫಲ್ಯವನ್ನು ತೋರಿಸುತ್ತದೆ. ಆದ್ದರಿಂದ ಈ ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳನ್ನು ಈ ಕೂಡಲೇ ವಜಾ ಮಾಡಿ, ವಿಚಾರಣೆ ನಡೆಸಬೇಕು.

12. ಸುಮಾರು ಒಂದು ವರ್ಷದ ಹಿಂದೆಯೇ ಪ್ರಜ್ವಲ್ ರೇವಣ್ಣ 86 ಮಾಧ್ಯಮ ಸಂಸ್ಥೆಗಳು ಮತ್ತು ಮೂವರು ವ್ಯಕ್ತಿಗಳು ತನ್ನ ವಿರುದ್ಧ ಯಾವುದೇ ಮಾನಹಾನಿಕರ ವರದಿ, ವಿಡಿಯೋ, ಚಿತ್ರ ಪ್ರಸಾರ ಮಾಡಬಾರದೆಂದು ತಡೆಯಾಜ್ಞೆ ಪಡೆದಿದ್ದಾನೆ. ಒಬ್ಬ ಜನಪ್ರತಿನಿಧಿ ಹೀಗೆ ದೀರ್ಘಕಾಲದ ತಡೆಯಾಜ್ಞೆಯನ್ನು ಪಡೆಯುವುದು ಜನರ ಮಾಹಿತಿಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜನಪ್ರತಿನಿಧಿಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಜನಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅದನ್ನು ತಿಳಿದುಕೊಳ್ಳುವ ಹಕ್ಕು ಎಲ್ಲ ಪ್ರಜೆಗಳಿಗೆ ಇರುತ್ತದೆ. ತನ್ನ ವೈಯಕ್ತಿಕ ವ್ಯವಹಾರಗಳೂ ಕೂಡ ಜನರ ಹಿತಾಸಕ್ತಿಗೆ ಮಾರಕವಾಗದಂತೆ ಇಟ್ಟುಕೊಳ್ಳಬೇಕಾದ್ದು ಜನಪ್ರತಿನಿಧಿಯ ಕರ್ತವ್ಯ. ಹೀಗಿರುವಾಗ ತನ್ನ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಪಡೆದ ಈ ತಡೆಯಾಜ್ಞೆಯಿಂದ ಜನರ ಹಕ್ಕಿನ ಉಲ್ಲಂಘನೆಯಾಗಿದ್ದು ಜನರ ಹಕ್ಕುಗಳ ಸಂರಕ್ಷಕನಾಗಿರುವ (ಕಸ್ಟೋಡಿಯನ್) ರಾಜ್ಯ ಸರ್ಕಾರವು ಈ ಕುರಿತು ಮೊಕದ್ದಮೆ ದಾಖಲಿಸಬೇಕು. ಜನರ ಮಾಹಿತಿಯ ಹಕ್ಕನ್ನು ಎತ್ತಿ ಹಿಡಿಯಬೇಕು.

13. ಎಚ್ ಡಿ ರೇವಣ್ಣ ಕುಟುಂಬವು ಹಾಸನ ಜಿಲ್ಲೆಯ ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಸಿಕೊಂಡು ಅನೇಕ ಭೂವ್ಯವಹಾರಗಳನ್ನು ನಡೆಸುತ್ತಿದೆ ಎಂಬ ಆರೋಪಗಳಿವೆ. ಅಂತಹ ಅಧಿಕಾರಿಗಳು ಅದೇ ಸ್ಥಾನದಲ್ಲಿ ಮುಂದುವರೆದರೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗುತ್ತಾರೆ. ಈ ಅಧಿಕಾರಿಗಳನ್ನು ಬಳಸಿಕೊಂಡು ಸಂತ್ರಸ್ತರು ದೂರು ನೀಡದಂತೆ ತಡೆಯುವ ಅಥವಾ ಬೆದರಿಸುವ ಸಾಧ್ಯತೆಗಳಿವೆ. ಆದ್ದರಿಂದ, ಎಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ನೇಮಕಗೊಂಡಿರುವ ಅಧಿಕಾರಿಗಳನ್ನು ಎಲ್ಲ ಈ ಕೂಡಲೆ ವರ್ಗಾವಣೆ ಮಾಡಬೇಕು.

14. ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್ ಡಿ ರೇವಣ್ಣ ಅವರ ವಿಧಾನಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು. ಇದು ಇದುವರೆಗೂ ನಡೆದಿಲ್ಲದಿರುವ ಹೇಯ ಪ್ರಕರಣವಾಗಿದ್ದು, ಇದರ ವಿಕೃತಿಯ ಪ್ರಮಾಣ ಮತ್ತು ಸಂತ್ರಸ್ತರ ಸಂಖ್ಯೆ ಬೃಹತ್ತಾಗಿದೆ. ಇಲ್ಲಿ ಸರ್ಕಾರದ ಸವಲತ್ತುಗಳ ದುರ್ಬಳಕೆ ಮತ್ತು ಸ್ಥಾನಮಾನದ ದುರ್ಬಳಕೆ ಗಂಭೀರವಾಗಿದೆ. ಹಾಗಾಗಿ ಇದನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನಿನ ವ್ಯಾಪ್ತಿಯಲ್ಲಿ ಮಾತ್ರ ಪರಿಗಣಿಸದೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜನಪ್ರತಿನಿಧಿಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಉಳಿಸಲು ಈ ಕ್ರಮ ಅತ್ಯಗತ್ಯವಾಗಿದೆ.

15. ಈ ಆರೋಪಿಗಳ ನಡೆಯು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಆ ನಿಟ್ಟಿನಲ್ಲಿ ಸಂವಿಧಾನಾತ್ಮಕ ಹುದ್ದೆಗೆ ಎಸಗಿದ ಅಪಚಾರಕ್ಕೆ, ಸರ್ಕಾರಿ ಬಂಗ್ಲೆಯನ್ನು ಅಪರಾಧಕ್ಕೆ ಕೃತ್ಯಕ್ಕೆ ಬಳಸಿರುವುದಕ್ಕೆ ಮೊಕದ್ದಮೆ ಹೂಡಬೇಕು ಮತ್ತು ಈ ಕುಟುಂಬಕ್ಕೆ ಒದಗಿಸಲಾಗಿರುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ಈ ಕೂಡಲೆ ಹಿಂದಕ್ಕೆ ಪಡೆಯಬೇಕು.

16. ಈ ಹಗರಣವು ಭುಗಿಲೆದ್ದಿರುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ತಾತ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಅವನ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮನ್ನು ಈ ಹಗರಣಕ್ಕೆ ತಳಕುಹಾಕುವಂತಹ ಯಾವುದೇ ವರದಿ ಮಾಡಬಾರದೆಂದು ಸಾಮಾಜಿಕ ಮಾಧ್ಯಮಗಳು, ಮುದ್ರಣ, ಟಿವಿ, ಡಿಜಿಟಲ್ ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜೆಗಳ ಮಾಹಿತಿ ಹಕ್ಕಿನ ಸ್ವಾತಂತ್ರ್ಯ ವನ್ನು ಉಲ್ಲಂಘಿಸುತ್ತದೆ.

ಒಂದು ಕಡೆ ಮಾಧ್ಯಮಗಳ ಸ್ವತಂತ್ರ ವರದಿಗೆ ತಡೆಹಾಕಿಸಿರುವ ಅರ್ಜಿದಾರರು (ಎಚ್.ಡಿ.ಕುಮಾರಸ್ವಾಮಿ) ಮತ್ತೊಂದು ಕಡೆ ತಾವೇ ಈ ಹಗರಣ ಕುರಿತಾಗಿಯೇ ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ಅಪ್ರಜಾಸತ್ತಾತ್ಮಕ ನಡೆಯಾಗಿದೆ. ಕಾನೂನಿನ ಮೂಲಕ ಏಕಮುಖಿ ವರದಿಗಾರಿಕೆಯನ್ನು ಮಾಡಿಸಲಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಡೆಯಾಜ್ಞೆ ತೆರವುಗೊಳಿಸಬೇಕು. ಈ ಇಬ್ಬರು ಅರ್ಜಿದಾರರಿಗೆ ಆರೋಪಿಯು ಹತ್ತಿರದ ಸಂಬಂಧಿಯಾಗಿದ್ದು, ಅವರದೇ ಪಕ್ಷದ ಲೋಕಸಭೆ ಚುನಾವಣೆ ಅಭ್ಯರ್ಥಿಯೂ ಆಗಿದ್ದಾನೆ. ಪ್ರಜೆಗಳ ಹಕ್ಕಿನ ರಕ್ಷಕನಾಗಿರುವ (ಕಸ್ಟೋಡಿಯನ್ ಆಫ್ ಸಿಟಿಜನ್ಸ್ ರೈಟ್ಸ್) ರಾಜ್ಯ ಸರ್ಕಾರವು ಈ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

ಪ್ರಜಾಪ್ರಭುತ್ವದ ಉಳಿವಿಗೆ, ಪಿತೃಪ್ರಧಾನ ಸಮಾಜದ ನಿರ್ಮೂಲನೆಗೆ, ಸಂವಿಧಾನದತ್ತವಾದ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಕರ್ನಾಟಕ ರಾಜ್ಯ ಎಸ್‌ ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಆಗ್ರಹಗಳನ್ನು ಪರಿಗಣಿಸಬೇಕು. ಈ ಬಗ್ಗೆ ಕಾನೂನು ಕ್ರಮ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು.

ಬಹಿರಂಗ ಪತ್ರಕ್ಕೆ ಡಾ ವಿಜಯಾ, ಡಾ ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಕೆ. ಷರೀಫಾ, ಸಬಿಹಾ ಭೂಮಿಗೌಡ, ಕಾಳೇಗೌಡ ನಾಗವಾರ, ಎಂ ಎಸ್‌ ಆಶಾದೇವಿ, ಎಂ ಡಿ ಪಲ್ಲವಿ, ಕುಂ ವೀರಭದ್ರಪ್ಪ, ನಾಗೇಶ್‌ ಹೆಗಡೆ, ಮೀನಾಕ್ಷಿ ಬಾಳಿ, ಕೆ ನೀಲಾ, ಕೆ ಎಸ್‌ ವಿಮಲಾ, ಮುಜಫರ್‌ ಅಸ್ಸಾದಿ, ನಾ ದಿವಾಕರ, ಅಗ್ರಹಾರ ಕೃಷ್ಣಮೂರ್ತಿ, ಎಂ ಆರ್‌ ಕಮಲ, ಲೀಲಾ ಸಂಪಿಗೆ, ಕೆ ಫಣಿರಾಜ್‌, ನರೇಂದ್ರ ನಾಯಕ್‌, ಗೀತಾ ಸುರತ್ಕಲ್‌, ಶ್ರೀಪಾದ್‌ ಭಟ್‌, ಗುಲಾಬಿ ಬಿಳಿಮಲೆ, ಪ್ರಭಾ ಬೆಳವಂಗಲ, ಸತ್ಯಾ ಎಸ್.‌, ಪ್ರಕಾಶ್‌ ರಾಜ್‌, ದು ಸರಸ್ವತಿ, ಎನ್‌ ಎಸ್‌ ಶಂಕರ್, ಬಾನು ಮುಷ್ತಾಕ್‌, ರೂಪಾ ಹಾಸನ, ಟಿ ಆರ್.‌ ವಿಜಯಕುಮಾರ್‌, ಮಾವಳ್ಳಿ ಶಂಕರ್‌, ಜಿ ಸಿ ಬಯ್ಯಾರೆಡ್ಡಿ, ಸುನಂದಾ ಜಯರಾಂ, ಕ್ಲಿಫ್ಟನ್‌ ಡಿ ರೊಜಾರಿಯೊ, ಶ್ರೀನಿವಾಸ ಕಾರ್ಕಳ, ಸಿ ಬಸವಲಿಂಗಯ್ಯ ಮತ್ತಿತರ ಇನ್ನೂರಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ.

ʻದ ಫೆಡರಲ್‌ ಕರ್ನಾಟಕʼ ಕಳಕಳಿ

ಸಂತ್ರಸ್ತರು ಹಾಗೂ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ, ಪ್ರತ್ಯೇಕ ಸಹಾಯವಾಣಿ ತೆರೆದಿದ್ದು, ಸಹಾಯವಾಣಿ ಸಂಖ್ಯೆ 6360938947 ಸಂಪರ್ಕಿಸಬಹುದು. ಸಂತ್ರಸ್ತರು ಅಥವಾ ಬಾತ್ಮೀದಾರರ ಹೆಸರುಗಳನ್ನು ಗೌಪ್ಯವಾಗಿಡಲಾಗುತ್ತದೆ. ಹಾಗಾಗಿ ಸಂತ್ರಸ್ತರು ಹಾಗೂ ಮಾಹಿತಿ ತಿಳಿದವರು ಯಾವುದೇ ಹೆದರಿಕೆ ಇಲ್ಲದೆ ಸಹಾಯವಾಣಿ ಮೂಲಕ ಎಸ್‌ಐಟಿ ತಂಡವನ್ನು ಸಂಪರ್ಕಿಸಬಹುದು ಎಂದು ಎಸ್‌ಐಟಿ ಮುಖ್ಯಸ್ಥರಾದ ಎಡಿಜಿಪಿ ಬಿ ಕೆ ಸಿಂಗ್‌ ಕೋರಿದ್ದಾರೆ.

Tags:    

Similar News