ಪೋಲೆಂಡ್‌ ಪ್ರಧಾನಿಯಾಗಿ ಡೊನಾಲ್ಡ್ ಟಸ್ಕ್ ಅಧಿಕಾರ ಸ್ವೀಕಾರ

ಸಂಪ್ರದಾಯವಾದಿ ಪಕ್ಷವಾದ ಲಾ ಆಂಡ್‌ ಜಸ್ಟೀಸ್‌ ಪಕ್ಷದ ಎಂಟು ವರ್ಷಗಳ ದುರಾಡಳಿತ ಕೊನೆಗೊಂಡಿದೆ..

Update: 2024-02-05 06:30 GMT

ವಾರ್ಸಾ, ಡಿ.13 (ಎಪಿ) ಪೋಲೆಂಡ್‌ನ ಹೊಸ ಪ್ರಧಾನಿಯಾಗಿ ಡೊನಾಲ್ಡ್ ಟಸ್ಕ್ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಅಧ್ಯಕ್ಷರಿಂದ ಪ್ರಮಾಣ ವಚನ ಸ್ವೀಕರಿಸಿದರು. ಈಮೂಲಕ ಸಂಪ್ರದಾಯವಾದಿ ಪಕ್ಷವಾದ ಲಾ ಆಂಡ್‌ ಜಸ್ಟೀಸ್‌ ಪಕ್ಷದ ಎಂಟು ವರ್ಷಗಳ ದುರಾಡಳಿತ ಕೊನೆಗೊಂಡಿದೆ.

ವಾರ್ಸಾದ ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಟಸ್ಕ್(67) ಒಂಬತ್ತು ವರ್ಷಗಳ ನಂತರ ಪ್ರಧಾನಿ ಹುದ್ದೆ ಗೆ ಹಿಂದಿರುಗುತ್ತಿದ್ದಾರೆ. ಮಧ್ಯಂತರ ಅವಧಿಯಲ್ಲಿ ಅವರು ಯುರೋಪಿಯನ್‌ ಯೂನಿಯನ್‌ ನಲ್ಲಿ ಉನ್ನತ ಸ್ಥಾನ ಹೊಂದಿದ್ದರು ಮತ್ತು ಪೋಲಿಷ್ ವಿರೋಧ ಪಕ್ಷದ ನಾಯಕರಾಗಿದ್ದರು. ಅಕ್ಟೋಬರ್ 15 ರಂದು ನಡೆದ ಚುನಾವಣೆಯಲ್ಲಿ ಟಸ್ಕ್ ನೇತೃತ್ವದ ನಾಗರಿಕ ವೇದಿಕೆ ಗೆದ್ದಿದೆ.

ಪ್ರಜಾಸತ್ತಾತ್ಮಕ ವಿಧಾನಗಳನ್ನು ಪುನಃಸ್ಥಾಪಿಸಲು ಮತ್ತು ವಿದೇಶಿ ಮಿತ್ರರಾಷ್ಟ್ರಗಳೊಂದಿಗೆ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸು ವುದಾಗಿ, ಪಶ್ಚಿಮ ದೇಶಗಳು ಉಕ್ರೇನ್‌ಗೆ ಬೆಂಬಲವನ್ನು ಮುಂದುವರಿಸಬೇಕೆಂದು ಒತ್ತಾಯಿಸುವುದಾಗಿ ಪ್ರತಿಜ್ಞೆ ಮಾಡಿದರು.

ಹಿಂದಿನ ಆಡಳಿತದ ಮಿತ್ರರಾಗಿದ್ದ ಅಧ್ಯಕ್ಷ ಆಂಡ್ರೆಜ್ ಡುಡಾ, ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪೋಲೆಂಡ್‌ನ ಭದ್ರತೆ ಮತ್ತು ನಾಗರಿಕರ ಯೋಗಕ್ಷೇಮದಂಥ ಪ್ರಮುಖ ವಿಷಯಗಳ ಬಗ್ಗೆ ಟಸ್ಕ್‌ ಅವರೊಂದಿಗೆ ಸಹಕರಿಸುವುದಾಗಿ ಹೇಳಿದರು.

ಟಸ್ಕ್‌ 2007-2014ರಲ್ಲಿ ಪೋಲೆಂಡ್‌ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಜಾಪ್ರಭುತ್ವದ ಮರುಸ್ಥಾಪನೆ, ಯುರೋಪಿಯನ್‌ ಯೂನಿಯನ್‌ಗೆ ನಿಧಿ ಬಿಡುಗಡೆ ಮತ್ತಿತರ ಸವಾಲುಗಳನ್ನು ಎದುರಿಸುತ್ತಾರೆ.

ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ,ʻಪೋಲೆಂಡ್ ಯುರೋಪ್‌ಗೆ ಮರಳಿದೆ. ಇದು ನನ್ನ ರಾಜಕೀಯ ಜೀವನದ ಅತ್ಯಂತ ಪ್ರಮುಖ ಕ್ಷಣʼ ಎಂದು ಹೇಳಿದರು.

ಮಾಜಿ ವಿದೇಶಾಂಗ ಸಚಿವ ರಾಡೆಕ್ ಸಿಕೋರ್ಸ್ಕಿ, ಮಾನವ ಹಕ್ಕುಗಳ ವಕೀಲ ಆದಮ್ ಬೋಡ್ನರ್, ಕೃಷಿಕ ಪಕ್ಷದ ನಾಯಕ ವ್ಲಾಡಿಸ್ಲಾವ್ ಕೊಸಿನಿಯಾಕ್-ಕಮಿಸ್ಜ್ , ಬಾರ್ಟ್ಲೋಮಿಜ್ ಸಿಯೆನ್ಕಿವಿಚ್ ಇನ್ನಿತರರು ಸಂಪುಟದಲ್ಲಿ ಇರಲಿದ್ದಾರೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

(ಎಪಿ)

ಟ್ಯಾ‌ಗ್:‌ ಪೋಲೆಂಡ್, ಡೊನಾಲ್ಡ್ ಟಸ್ಕ್, ಪೋಲೆಂಡ್ ಹೊಸ ಪ್ರಧಾನಿ

Tags:    

Similar News