ಕಾನೂನಿಗಿಂತ ಯಾರೂ ದೊಡ್ಡವರಲ್ಲ; ಚಿತ್ರನಟಿ ರಮ್ಯಾ
ದರ್ಶನ್ ಮಾಡಿದ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರಿಗೂ ಟ್ರೋಲ್ ಕಾಟ ಎದುರಾಗಿತ್ತು. ಆ ಸಂದರ್ಭದಲ್ಲಿ ತಾವು ನಡೆದುಕೊಂಡ ರೀತಿ ಎಂಥದ್ದು ಎಂಬುದನ್ನು ಅವರು ತಿಳಿಸಿದ್ದಾರೆ.;
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಆರೋಪ ನಟ ದರ್ಶನ್‌ಗೆ ಎದುರಾಗಿದ್ದು, ಈ ಆರೋಪದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ದರ್ಶನ್ ಮಾಡಿದ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರಿಗೂ ಟ್ರೋಲ್ ಕಾಟ ಎದುರಾಗಿತ್ತು. ಆ ಸಂದರ್ಭದಲ್ಲಿ ತಾವು ನಡೆದುಕೊಂಡ ರೀತಿ ಎಂಥದ್ದು ಎಂಬುದನ್ನು ಅವರು ತಿಳಿಸಿದ್ದಾರೆ.
‘ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮಾಡುವ ಆಯ್ಕೆ ಇದೆ. ಒಂದು ವೇಳೆ ಟ್ರೋಲ್ ಮುಂದುವರಿದರೆ ನೀವು ದೂರು ನೀಡಬಹುದು. ನನ್ನನ್ನು ಕೂಡ ಕೆಟ್ಟ ಪದಗಳಿಂದ ಟ್ರೋಲ್ ಮಾಡಿದ್ದರು. ನನ್ನನ್ನು ಮಾತ್ರವಲ್ಲದೇ ಅನೇಕರನ್ನು ಟ್ರೋಲ್ ಮಾಡಿದ್ದಾರೆ. ಬೇರೆಯವರ ಹೆಂಡತಿ, ಮಕ್ಕಳನ್ನೂ ಬಿಡದೇ ಟ್ರೋಲ್ ಮಾಡಿದ್ದಾರೆ. ಎಂಥ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ರಮ್ಯಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
‘ಕಾನೂನು ಪಾಲಿಸುವ ಯಾವುದೇ ಪ್ರಜೆಯ ರೀತಿ ನಾನು ಕೂಡ ದೂರು ನೀಡಿದ್ದೇನೆ. ಅಂಥವರಿಗೆ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪಾಪ ಅಂತ ನಾನು ಕೇಸ್ ವಾಪಸ್ ತೆಗೆದುಕೊಂಡಿದ್ದೇನೆ. ಟ್ರೋಲ್ ಮಾಡಿದ ವ್ಯಕ್ತಿಗಳು ಇನ್ನೂ ಚಿಕ್ಕವರು. ಅವರಿಗೂ ಭವಿಷ್ಯ ಇದೆ. ಯಾವುದೋ ಅನಾಮಧೇಯ ಖಾತೆಗಳ ಮೂಲಕ ಅವರು ಟ್ರೋಲ್ ಮಾಡುತ್ತ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ರಮ್ಯಾ.
‘ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಕಾನೂನನ್ನು ಯಾರೂ ತಮ್ಮ ಕೈಗೆ ತೆಗೆದುಕೊಳ್ಳಬಾರದು. ನೀವು ಹೋಗಿ ಜನರನ್ನು ಹೊಡೆದು ಕೊಲ್ಲುವುದಲ್ಲ. ಒಂದು ಸರಳವಾದ ದೂರು ಸಾಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ನಾನು ಮೆಚ್ಚುಗೆ ಮತ್ತು ಗೌರವ ಸಲ್ಲಿಸುತ್ತೇನೆ. ಅವರದ್ದು ಕೃತಜ್ಞತೆ ಇಲ್ಲದ ಕೆಲಸ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಅವರು ಮಣಿಯುವುದಿಲ್ಲ ಹಾಗೂ ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಅಂತ ನಾನು ನಂಬಿದ್ದೇನೆ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ಜಸ್ಟೀಸ್ ಫಾರ್ ರೇಣುಕಾಸ್ವಾಮಿ, ದರ್ಶನ್, ಯಡಿಯೂರಪ್ಪ ಹಾಗೂ ಪಜ್ವಲ್ ರೇವಣ್ಣ ಹ್ಯಾಶ್‌ಟ್ಯಾಗ್‌ಅನ್ನು ಅವರು ಬಳಸಿದ್ದಾರೆ.