ಉತ್ತರಾಖಂಡ ಚಾರಣ ದರಂತ | ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ
ಉತ್ತರಾಖಂಡದ ಸಹಸ್ರ ತಾಲ್ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಲುಕಿ ಮೃತಪಟ್ಟ ಒಂಬತ್ತು ಚಾರಣಿಗರ ಮೃತದೇಹಗಳು ಶುಕ್ರವಾರ ಬೆಂಗಳೂರಿಗೆ ತಲುಪಿವೆ.;
ಉತ್ತರಾಖಂಡದ ಸಹಸ್ರ ತಾಲ್ ಚಾರಣದಲ್ಲಿ ಮೃತಪಟ್ಟ ಒಂಬತ್ತು ಚಾರಣಿಗರ ಮೃತದೇಹಗಳನ್ನು ಶನಿವಾರ (ಜೂ.8) ಬೆಂಗಳೂರಿನಲ್ಲಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ಒಂಬತ್ತು ಮೃತದೇಹಗಳನ್ನು ಗುರುವಾರ ಡೆಹ್ರಾಡೂನ್‌ನಿಂದ ದೆಹಲಿಗೆ ಮತ್ತು ಮೂರು ವಿಭಿನ್ನ ವಿಮಾನಗಳ ಮೂಲಕ ಬೆಂಗಳೂರಿಗೆ ತರಲಾಗಿತ್ತು. ರಾಜ್ಯ ಸರ್ಕಾರವು ಗುರುವಾರವೇ ಮೃತದೇಹಗಳನ್ನು ವಾಪಸ್ ಪಡೆಯಲು ಯೋಜಿಸುತ್ತಿದ್ದರೂ, ಕಾಗದಪತ್ರಗಳ ವಿಳಂಬ ಮತ್ತು ಲಾಜಿಸ್ಟಿಕ್ ಸಮಸ್ಯೆಗಳ ಪ್ರಕ್ರಿಯೆಯಿಂದಾಗಿ ಮೃತದೇಹಗಳು ರಾಜ್ಯಕ್ಕೆ ಬರುವುದು ಒಂದು ದಿನ ವಿಳಂಬವಾಗಿತ್ತು.
ಪದ್ಮನಿ ಹೆಗಡೆ, ವೆಂಕಟೇಶ್ ಪ್ರಸಾದ್, ಆಶಾ ಸುಧಾಕರ್, ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ, ಸಿಂಧು ವಕೆಲಂ, ವಿನಾಯಕ್ ಮುಂಗುರವಾಡಿ, ಸುಜಾತಾ ಮುಂಗುರವಾಡಿ, ಚಿತ್ರಾ ಪ್ರಣೀತ್, ಅನಿತಾ ರಂಗಪ್ಪ ಅವರು ದುರಂತದಲ್ಲಿ ಮೃತಪಟ್ಟಿದ್ದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಖುದ್ದು ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಮೃತರಿಗೆ ಸಾಂತ್ವನ ಹೇಳಿದ್ದಾರೆ.
"ಎಲ್ಲಾ ಒಂಬತ್ತು ಮೃತದೇಹಗಳು ನಗರಕ್ಕೆ ಆಗಮಿಸಿದ್ದು, ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸಲು ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ" ಎಂದು ಅವರು ಹೇಳಿದ್ದಾರೆ.
ಮೇ 29 ರಂದು ಕರ್ನಾಟಕ ಹಾಗೂ ಮಹಾರಾಷ್ಟ್ರದ ಚಾರಣಿಗರು, ಟೂರ್ ಗೈಡ್‌ಗಳು ಸೇರಿ 22 ಮಂದಿ ತಂಡವೊಂದು ಉತ್ತರಕಾಶಿಯ ಎತ್ತರದ ಸಹಸ್ರ ತಾಲ್ ಪ್ರದೇಶಕ್ಕೆ ಚಾರಣಕ್ಕೆ ತೆರಳಿದ್ದರು. ಪ್ರತಿಕೂಲ ಹವಾಮಾನದಿಂದ ಆ ತಂಡ ಅಪಾಯಕ್ಕೆ ಸಿಲುಕಿತ್ತು. ಚಾರಣದಿಂದ ಹಿಂತಿರುಗುವಾಗ ಅಪಾಯಕ್ಕೆ ಸಿಲುಕಿದ್ದ 22 ಮಂದಿ ಪೈಕಿ 9 ಮಂದಿ ಮೃತಪಟ್ಟಿದ್ದಾರೆ. ಹಿಮಬಿರುಗಾಳಿಗೆ ಸಿಲುಕಿ ಬದುಕುಳಿದ 13 ಜನರು ಶುಕ್ರವಾರ (ಜೂ.7) ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.
ಇನ್ನು ಮೃತದೇಹಗಳನ್ನು ಉತ್ತರಕಾಶಿಯಿಂದ ನೇರವಾಗಿ ಬೆಂಗಳೂರಿಗೆ ತರಲು ಸಾಧ್ಯವಾಗಿರಲಿಲ್ಲ. ಆಂಬುಲೆನ್ಸ್‌ಗಳಲ್ಲಿ ರಸ್ತೆ ಮಾರ್ಗದ ಮೂಲಕ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ದು ಅಲ್ಲಿಂದ ಮೂರು ಪ್ರತ್ಯೇಕ ವಿಮಾನಗಳಲ್ಲಿ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತರಲಾಯಿತು.