ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ

ಶೇಖ್ ಹಸೀನಾ ಅವರೊಂದಿಗೆ, ಅವರ ಆಪ್ತ ಸಹಾಯಕರೂ ಆಗಿದ್ದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೂ ಮರಣದಂಡನೆ ವಿಧಿಸಲಾಗಿದೆ.

Update: 2025-11-17 09:34 GMT
Click the Play button to listen to article

ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತೀರ್ಪೊಂದು ಪ್ರಕಟವಾಗಿದ್ದು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ಗಲ್ಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ದೇಶಾದ್ಯಂತ ನಡೆದ ವಿದ್ಯಾರ್ಥಿ ದಂಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಹಸೀನಾ ಅವರೇ ಹೊಣೆಗಾರರು ಎಂದು ನ್ಯಾಯಮಂಡಳಿ ತೀರ್ಪು ನೀಡಿದೆ

ನ್ಯಾಯಮೂರ್ತಿ ಎಂಡಿ ಗೋಲಮ್ ಮೊರ್ತುಜಾ ಮಜುಂದಾರ್ ನೇತೃತ್ವದ ತ್ರಿಸದಸ್ಯ ಪೀಠವು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಶೇಖ್ ಹಸೀನಾ ಅವರೊಂದಿಗೆ, ಅವರ ಆಪ್ತ ಸಹಾಯಕರೂ ಆಗಿದ್ದ ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ ಚೌಧುರಿ ಅಬ್ದುಲ್ಲಾ ಅಲ್-ಮಾಮುನ್ ಅವರಿಗೂ ಮರಣದಂಡನೆ ವಿಧಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಮತ್ತು ಕಮಾಲ್ ಅವರನ್ನು 'ಪರಾರಿಯಾಗಿರುವ ಅಪರಾಧಿಗಳು' ಎಂದು ಘೋಷಿಸಿ, ಅವರ ಗೈರುಹಾಜರಿಯಲ್ಲೇ ವಿಚಾರಣೆ ನಡೆಸಿ ಈ ತೀರ್ಪು ನೀಡಲಾಗಿದೆ.

ಹಸೀನಾ ವಿರುದ್ಧದ ಆರೋಪಗಳೇನು?

ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ದಂಗೆಯು ತೀವ್ರ ಹಿಂಸಾಚಾರಕ್ಕೆ ತಿರುಗಿ, 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ದಂಗೆಯನ್ನು ಹತ್ತಿಕ್ಕಲು ಶೇಖ್ ಹಸೀನಾ ಅವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ, ಭದ್ರತಾ ಪಡೆಗಳಿಗೆ ಮಾರಕಾಸ್ತ್ರಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಲು ಆದೇಶಿಸಿದ್ದರು ಎಂಬ ಗಂಭೀರ ಆರೋಪ ಅವರ ಮೇಲಿತ್ತು.

ಕಾನೂನು ಜಾರಿ ಸಿಬ್ಬಂದಿ ಮತ್ತು ಆಡಳಿತಾರೂಢ ಅವಾಮಿ ಲೀಗ್‌ನ ಸಶಸ್ತ್ರ ಗುಂಪುಗಳು ನಾಗರಿಕರ ವಿರುದ್ಧ ನಡೆಸಿದ ಕೊಲೆ, ಕೊಲೆ ಯತ್ನ, ಚಿತ್ರಹಿಂಸೆ ಮತ್ತು ಇತರ ಅಮಾನವೀಯ ಕೃತ್ಯಗಳಿಗೆ ಪ್ರಚೋದನೆ ನೀಡಿದ ಆರೋಪ. ಬೇಗಂ ರೊಕೆಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಅಬು ಸಯೀದ್ ಮತ್ತು ಚಂಖರ್‌ಪುಲ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಆರು ನಿರಾಯುಧ ಪ್ರತಿಭಟನಾಕಾರರ ಹತ್ಯೆಗೆ ಆದೇಶ ನೀಡಿದ ಆರೋಪ.ಪ್ರತಿಭಟನಾಕಾರರನ್ನು ಹತ್ತಿಕ್ಕಲು ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಲು ಆದೇಶ ನೀಡಿದ್ದು.

ದೇಶಾದ್ಯಂತ ಕಟ್ಟೆಚ್ಚರ

ಈ ತೀರ್ಪಿನ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಶೇಖ್ ಹಸೀನಾ ಅವರು 2024ರ ಆಗಸ್ಟ್‌ನಲ್ಲಿ ನಡೆದ ದಂಗೆಯ ನಂತರ ಪ್ರಧಾನಿ ಸ್ಥಾನದಿಂದ ಪದಚ್ಯುತಗೊಂಡು ದೇಶವನ್ನು ತೊರೆದಿದ್ದರು. ವಿಪರ್ಯಾಸವೆಂದರೆ, 1971ರ ವಿಮೋಚನಾ ಯುದ್ಧದ ಅಪರಾಧಿಗಳ ವಿಚಾರಣೆಗಾಗಿ ಇದೇ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯನ್ನು ಶೇಖ್ ಹಸೀನಾ ಅವರೇ 2008ರಲ್ಲಿ ಸ್ಥಾಪಿಸಿದ್ದರು.

Tags:    

Similar News