ಕನಕಪುರದಲ್ಲಿ ಗಮನಸೆಳೆದ ಹಸಿರು ಮತಗಟ್ಟೆ
ಕನಕಪುರ ಮತಗಟ್ಟೆಯಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ಅರಣ್ಯ ಥೀಮ್‌ನೊಂದಿಗೆ ವಿಶೇಷ ಮತಗಟ್ಟೆ ಸ್ಥಾಪಿಸಿದ್ದರು.;
ಕನಕಪುರ: ಲೋಕಸಭೆ ಚುನಾವಣೆ 2024ರ ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕನಕಪುರ ಮತಗಟ್ಟೆಯಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆ ಸಹಯೋಗದಲ್ಲಿ ಅರಣ್ಯ ಥೀಮ್‌ನೊಂದಿಗೆ ವಿಶೇಷ ಮತಗಟ್ಟೆ ಸ್ಥಾಪಿಸಿದ್ದರು.
ಹಸಿರು ಉಳಿಸಿ ಅಭಿಯಾನದಲ್ಲಿ ಮತದಾರರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕನಕಪುರ ಅರಣ್ಯ ಇಲಾಖೆಯು, 'ಅಡವಿ' ಎಂದು ಹೆಸರಿಸಲಾದ ವಿಶೇಷ ಮತದಾನ ಕೇಂದ್ರ ಸ್ಥಾಪನೆ ಮಾಡಿತ್ತು. ಮಾತ್ರವಲ್ಲದೇ ಇಲ್ಲಿ ಮತಗಟ್ಟೆಯಲ್ಲಿ ಮತದಾನ ಮಾಡುವ ಪ್ರತೀ ಮತದಾರರಿಗೂ ಸಸಿಗಳನ್ನು ನೀಡಲಾಯಿತು.
ಕನಕಪುರದ ಜಿಟಿಟಿಸಿ ಮತಗಟ್ಟೆ ಸಂಖ್ಯೆ-79 ರಲ್ಲಿ ಈ ವಿಶೇಷ ಮತಗಟ್ಟೆ ನಿರ್ಮಾಣ ಮಾಡಲಾಗಿದ್ದು, ಅರಣ್ಯ ಥೀಮ್ ನಲ್ಲಿ ಈ ಮತಗಟ್ಟೆ ನಿರ್ಮಿಸಲಾಗಿದೆ. ಇದು ಹಚ್ಚ ಹಸಿರಿನ ನಡುವೆ ಇರುವಂತಹ ಅಪೂರ್ವ ಅನುಭವವನ್ನು ಮತದಾರರಿಗೆ ನೀಡಿತು. ಸಾಂಪ್ರದಾಯಿಕ ಮತಗಟ್ಟೆಯನ್ನು ಸ್ಥಳೀಯ ಸಸ್ಯ ಮತ್ತು ವಿಷಯಾಧಾರಿತ ಅಲಂಕಾರಗಳೊಂದಿಗೆ ಸಂಪೂರ್ಣವಾದ ಪ್ರಶಾಂತ ಅರಣ್ಯ ವ್ಯವಸ್ಥೆಯಾಗಿ ಪರಿವರ್ತಿಸಲಾಗಿತ್ತು.