ಇಂದು ಗ್ರಾಮೀಣ ಭಾರತ್‌ ಬಂದ್:‌ ರಾಷ್ಟ್ರ ರಾಜಧಾನಿ ಅಸ್ತವ್ಯಸ್ತ

ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಭಾರತದಾದ್ಯಂತ ಪ್ರಮುಖ ರಸ್ತೆಗಳಲ್ಲಿ ವ್ಯಾಪಕ ರಸ್ತೆ ತಡೆ ನಡೆಸಲು ರೈತರು ಮುಂದಾಗಿದ್ದಾರೆ;

Update: 2024-02-16 05:04 GMT
Photo: Amock/X

ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ದಮನಕಾರಿ ಕ್ರಮಗಳನ್ನು ಕೈಗೊಂಡಿರುವುದನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ ಕೆಎಂ) ಸೇರಿದಂತೆ ವಿವಿಧ ರೈತ ಸಂಘಟನೆಗಳು ಇಂದು (ಫೆಬ್ರವರಿ 16) ದೇಶವ್ಯಾಪಿ ಗ್ರಾಮೀಣ ಭಾರತ್ ಬಂದ್‌ಗೆ ಕರೆ ನೀಡಿವೆ. 

ದೆಹಲಿ ಚಲೋ ಅಂಗವಾಗಿ ಹರಿಯಾಣ, ಪಂಜಾಬ್‌ನಿಂದ ಮೆರವಣಿಗೆ ಹೊರಟು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಅಂಬಾಲಾ ಗಡಿಯಲ್ಲಿ ನೂರಾರು ರೈತರು ಮೊಕ್ಕಾಂ ಹೂಡಿರುವ ನಡುವೆಯೇ ಗ್ರಾಮೀಣ ಭಾರತ್‌ ಬಂದ್‌ ಕರೆ ಬಂದಿದೆ. ಮುಷ್ಕರ ನಿರತ ರೈತರನ್ನು ಚದುರಿಸಲು ಹರ್ಯಾಣ ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸುತ್ತಿದ್ದು, ಇನ್ನೂ 30 ಸಾವಿರ ಆಶ್ರುವಾಯು ಸೆಲ್‌ ಖರೀದಿಗೆ ಆದೇಶಿಸಿದೆ. ಸರ್ಕಾರದ ಇಂತಹ ಕ್ರಮಗಳ ವಿರುದ್ಧ ರೈತರು ಸಿಡಿದೆದ್ದಿದ್ದಾರೆ.

ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಭಾರತದಾದ್ಯಂತ ಪ್ರಮುಖ ರಸ್ತೆಗಳಲ್ಲಿ ವ್ಯಾಪಕ ರಸ್ತೆ ತಡೆ ನಡೆಸಲು ರೈತರು ಮುಂದಾಗಿದ್ದಾರೆ. ಪಂಜಾಬ್‌ನಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬಹುತೇಕ ಭಾಗವನ್ನು ಕನಿಷ್ಠ ನಾಲ್ಕು ಗಂಟೆಗಳ ಕಾಲ ಮುಚ್ಚಲು ರೈತರು ನಿರ್ಧರಿಸಿದ್ದಾರೆ. ಎಲ್ಲಾ ಸಮಾನ ಮನಸ್ಕ ರೈತ ಸಂಘಟನೆಗಳು ಮುಂದೆ ಬಂದು ಭಾರತ್ ಬಂದ್‌ನಲ್ಲಿ ಭಾಗವಹಿಸುವಂತೆ ಎಸ್‌ ಕೆಎಂ (ರಾಜಕೀಯೇತರ) ಸಂಘಟನೆಯು ಕೇಳಿಕೊಂಡಿದೆ

ಪಂಜಾಬ್‌ನಲ್ಲಿ ತೀವ್ರ ಕಾವು ಪಡೆದ ಬಂದ್ 

ಪಂಜಾಬ್ ನಗರದಲ್ಲಿ ಶಾಲಾ-ಕಾಲೇಜುಗಳು, ಮಾರುಕಟ್ಟೆಗಳು ತೆರೆದಿದ್ದರೂ ಬಸ್ ಸಂಚಾರ ಸ್ಥಗಿತಗೊಂಡಿದೆ. ರೈತರು ವಿವಿಧೆಡೆ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಬಹುತೇಕ ಎಲ್ಲಾ ಮಾರ್ಗಗಳನ್ನು ರೈತರು ನಿರ್ಬಂಧಿಸಿದ್ದು, ಇದರಿಂದಾಗಿ ಎಲ್ಲಾ ಬಸ್ ಮಾರ್ಗಗಳನ್ನು ರದ್ದುಗೊಳಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಕೂಡಾ ಯಾವುದೇ ಪ್ರಯಾಣಿಕರಿಲ್ಲ ಎಂದು ಪಂಜಾಬ್ ರೋಡ್‌ವೇಸ್ ಜಿಎಂ ರಂಜಿತ್ ಸಿಂಗ್ ಬಗ್ಗಾ ತಿಳಿಸಿದ್ದಾರೆ.

ಅದಾಗ್ಯೂ, ಪಂಜಾಬ್‌ನಲ್ಲಿ ಶುಕ್ರವಾರ ಸುಮಾರು 3,000 ಸರ್ಕಾರಿ ಬಸ್‌ಗಳು ಸ್ಥಗಿತಗೊಂಡಿರುವುದರಿಂದ ಸಾವಿರಾರು ಪ್ರಯಾಣಿಕರು ಅಡಚಣೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ ರೋಡ್‌ವೇಸ್ ಮತ್ತು PRTCಯ ಚಾಲಕ ಮತ್ತು ಕಂಡಕ್ಟರ್ ಯೂನಿಯನ್‌ಗಳು ರಾಷ್ಟ್ರವ್ಯಾಪಿ ಭಾರತ್ ಬಂದ್‌ನಲ್ಲಿ ಭಾಗವಹಿಸುತ್ತಿದ್ದು, ಕೇಂದ್ರ ಜಾರಿಗೆ ತರಲು ಉದ್ದೇಶಿಸಿರುವ ಹಿಟ್-ಅಂಡ್-ರನ್ ಕಾನೂನಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿವೆ.

ಪಂಜಾಬ್‌ನಲ್ಲಿ ಗುರುವಾರ ಮಧ್ಯಾಹ್ನ 12 ಕ್ಕೆ ಆರಂಭವಾದ ರೈಲು ತಡೆಯೊಂದಿಗೆ ಪ್ರತಿಭಟನೆ ತೀವ್ರಗೊಂಡಿತು. ಅದಾಗ್ಯೂ, ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ.

ಹರಿಯಾಣದಲ್ಲೂ ತೀವ್ರ ಪ್ರತಿಭಟನೆ

ಶುಕ್ರವಾರ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹರ್ಯಾಣ ರಾಜ್ಯದ ಎಲ್ಲಾ ಟೋಲ್ ಪ್ಲಾಜಾಗಳನ್ನು ರೈತರು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದು ಹರ್ಯಾಣದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)-ಚಾರುಣಿ ರಾಷ್ಟ್ರೀಯ ಅಧ್ಯಕ್ಷ, ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುಣಿ ತಿಳಿಸಿದ್ದಾರೆ.

ಹರ್ಯಾಣದ ಕುರುಕ್ಷೇತ್ರದ ಚಾರುಣಿ ಗ್ರಾಮದಲ್ಲಿ ನಡೆದ ರೈತ ಸಂಘಟನೆಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರೈತರ ಪ್ರತಿರೋಧವನ್ನು ತಣಿಸುವ ಸಲುವಾಗಿ, ಹರಿಯಾಣದ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು, ಎಸ್‌ ಎಂಎಸ್ ಮತ್ತು ಮೊಬೈಲ್ ನೆಟ್‌ವರ್ಕ್‌ಗಳಲ್ಲಿ ಬಳಸುವ ಡಾಂಗಲ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ದೆಹಲಿಯಲ್ಲಿ ಟ್ರಾಫಿಕ್‌ ಜಾಮ್‌, ನೋಯ್ಡಾದಲ್ಲಿ ಸೆಕ್ಷನ್‌ 144
ರಾಷ್ಟ್ರ ರಾಜಧಾನಿ ದೆಹಲಿಯ ಗಡಿ ಭಾಗದಲ್ಲಿ ರೈತರನ್ನು ತಡೆಯಲು ಭಾರೀ ಪ್ರಮಾಣದ ತಡೆಗಳನ್ನು ಸರ್ಕಾರ ನಿರ್ಮಿಸಿರುವುದರಿಂದ ದೆಹಲಿಯನ್ನು ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್‌ ಉಂಟಾಗಿದೆ. ಅಹಿತಕರ ಘಟನೆ ಉಂಟಾಗುವುದನ್ನು ತಪ್ಪಿಸಲು ನೋಯ್ಡಾದಲ್ಲಿ ಸೆಕ್ಷನ್‌ 144 ವಿಧಿಸಲಾಗಿದೆ. ಇದರನ್ವಯ, ರಾಜಕೀಯ ಅಥವಾ ಧಾರ್ಮಿಕ ಸೇರಿದಂತೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಕಾನೂನುಬಾಹಿರ ಸಭೆ, ಅನಧಿಕೃತ ಮೆರವಣಿಗೆಗಳು ಅಥವಾ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಸರ್ಕಾರಿ ಸಂಸ್ಥೆಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಖಾಸಗಿ ಡ್ರೋನ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೋಲುಗಳು, ರಾಡ್‌ಗಳು, ತ್ರಿಶೂಲಗಳು, ಕತ್ತಿಗಳು, ಬಂದೂಕುಗಳು ಮತ್ತು ಮುಂತಾದವುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.

ಕೃಷಿ ಸಚಿವರ ಸಂಧಾನ ವಿಫಲ

ಪ್ರತಿಭಟನಾನಿರತ ರೈತ ಸಂಘಗಳ ಮುಖಂಡರು ಹಾಗೂ ಮೂವರು ಕೇಂದ್ರ ಸಚಿವರ ಸಮಿತಿಯ ನಡುವಿನ ಸಭೆಗಳು ಗುರುವಾರ ತಡರಾತ್ರಿ ಯಾವುದೇ ತಾರ್ಕಿಕ ಅಂತ್ಯ ದೊರೆಯದೆ ಮುಕ್ತಾಯಗೊಂಡಿದೆ. ಅದಾಗ್ಯೂ, ಮಾತುಕತೆ ಸಕರಾತ್ಮಕವಾಗಿ ನಡೆದಿದೆ ಎಂದು ಕೇಂದ್ರ ಸಚಿವ ಅರ್ಜುನ್ ಮುಂಡಾ ಪ್ರತಿಪಾದಿಸಿದ್ದಾರೆ. ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

ರೈತರ ಬೇಡಿಕೆಗಳೇನು?

ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನಿಗೆ ರೈತರು ಆಗ್ರಹಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಖಾತರಿ ಮಾತ್ರವಲ್ಲದೆ, ಖರೀದಿಗೆ ಕಾನೂನು ಬದ್ಧ ಖಾತ್ರಿ, ಸಾಲ ಮನ್ನಾ ಹಾಗೂ ವಿದ್ಯುತ್ ಹೆಚ್ಚಳ ಮಾಡದಂತೆ ಬೇಡಿಕೆ ಇಡಲಾಗಿದೆ. ಇದಲ್ಲದೇ ಗೃಹ ಬಳಕೆ, ಅಂಗಡಿ, ಬೇಸಾಯಕ್ಕೆ 300 ಯೂನಿಟ್ ಉಚಿತ ವಿದ್ಯುತ್ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಸಮಗ್ರ ಬೆಳೆ ವಿಮೆ ಹಾಗೂ ತಿಂಗಳಿಗೆ 10 ಸಾವಿರ ಪಿಂಚಣಿ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಬಂದಿದೆ. ಮತ್ತೊಂದೆಡೆ, ಕೃಷಿ ಕಾನೂನಿನ ರದ್ದತಿ ಬಗ್ಗೆ ನಮಗೆ ನೀಡಿದ ಭರವಸೆಗಳನ್ನು ಸರ್ಕಾರವು ಈಡೇರಿಸುತ್ತಿಲ್ಲ, ಆದ್ದರಿಂದ ನಾವು ಈ ಚಳವಳಿಯನ್ನು ಮಾಡುತ್ತಿದ್ದೇವೆ ಎಂದು ರೈತರು ಹೇಳಿದ್ದಾರೆ.

Tags:    

Similar News