ಡಿ ಕೆ ಶಿವಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ: ಜೆಡಿಎಸ್– ಬಿಜೆಪಿ

ಕರ್ನಾಟಕದಲ್ಲಿ ಮುಕ್ತ ಹಾಗೂ ನಿರ್ಭೀತಿಯ ಚುನಾವಣೆ ನಡೆಸಲು ಸಮಸ್ಯೆ ಆಗುತ್ತಿದೆ. ಡಿಕೆಶಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಜೆಡಿಎಸ್‌ - ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.;

Update: 2024-04-17 06:17 GMT
ಡಿ.ಕೆ ಶಿವಕುಮಾರ್‌

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಭದ್ರತಾ ಲೋಪವಾಗಿದೆ ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ತುಮಕೂರಿನಲ್ಲಿ ಸೋಮವಾರ ಎಚ್.ಡಿ ದೇವೇಗೌಡ ಅವರು ಭಾಗಿಯಾಗಿದ್ದ ಚುನಾವಣಾ ಪ್ರಚಾರ ಸಭೆಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತೆಯರು ಸಭಾಂಗಣಕ್ಕೆ ನುಗ್ಗಿ, ದಾಂಧಲೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತೆಯರು, ಎಚ್.ಡಿ ದೇವೇಗೌಡ ಅವರು ಹಾಜರಿದ್ದ ಸಭಾಂಗಣಕ್ಕೆ ನುಗ್ಗಿ ಗಲಭೆ ಎಬ್ಬಿಸಿದ ಸಂದರ್ಭದಲ್ಲಿ ಸ್ಥಳೀಯ ಪೋಲೀಸರು ಅವರನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ. ಇದು ಗಂಭೀರ ಭದ್ರತಾ ಲೋಪವಾಗಿದೆ. ಹೀಗಾಗಿ, ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಈ ದಾಂಧಲೆ ನಡೆಸಿದ್ದಾರೆ. ತಮ್ಮ ಬೆಂಬಲಿಗರಿಗೆ ಅವರೇ ಕುಮ್ಮಕ್ಕು ನೀಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕು. ಈ ರೀತಿಯ ಘಟನೆಗಳಿಂದ ಕರ್ನಾಟಕದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ದೊಡ್ಡ ಬೆದರಿಕೆ ಎದುರಾಗಿದೆ. ಡಿ.ಕೆ ಶಿವಕುಮಾರ್ ಅವರು ಮತದಾರರಲ್ಲಿ ದ್ವೇಷ ಭಾವನೆ ಕೆರಳಿಸಿ, ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ನಿರ್ಭೀತಿಯಿಂದ ಚುನಾವಣೆ ಪ್ರಚಾರ ನಡೆಸುವುದು ಕಷ್ಟವಾಗುತ್ತಿದೆ. ಅಲ್ಲದೇ ಅವರ ಜೀವಕ್ಕೂ ಅಪಾಯವಿದೆ. ಚುನಾವಣೆ ಘೋಷಣೆಯಾದ ಸಂದರ್ಭದಿಂದ ಡಿಕೆಶಿ ಅವರು ಪ್ರಚೋದನಾತ್ಮಕ ಹಾಗೂ ದ್ವೇಷ ಕೆರಳಿಸುವ ಭಾಷಣಗಳನ್ನು ಮಾಡುತ್ತಿದ್ದಾರೆ. ಶಾಂತಿಯುತ ಚುನಾವಣೆಯನ್ನು ಹಾಳು ಮಾಡುವ ಷಡ್ಯಂತ್ರ್ಯ ರೂಪಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಧಿಕಾರಿಗಳು ಸಹ ಡಿ.ಕೆ.ಶಿವಕುಮಾರ್ ಅವರ ಮರ್ಜಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದು, ಯಾವುದೇ ತನಿಖೆ, ಕ್ರಮ ತೆಗೆದುಕೊಳ್ಳುತ್ತಿಲ್ಲ. ಭದ್ರತಾ ಲೋಪಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಜೆಡಿಎಸ್ – ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್, ತುಮಕೂರು ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಬಿಜೆಪಿ ಕಾನೂನು ಘಟಕದ ಅಧ್ಯಕ್ಷ ವಸಂತ್ ಕುಮಾರ್, ಮುಖಂಡರಾದ ಹಿಮಾನಂದ, ದೇವರಾಜ್ ಇದ್ದರು.

ಘಟನೆಯ ಹಿನ್ನೆಲೆ

ಏ.15ರಂದು ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಪರವಾಗಿ ಪ್ರಚಾರ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಸಭಾಂಗಣದ ಒಳಗೆ ನುಗ್ಗಲು ಪ್ರಯತ್ನಿದ್ದ ಆರೋಪವೂ ಕೇಳಿಬಂದಿತ್ತು.

ಮಹಿಳಾ ಆಯೋಗಕ್ಕೆ ಮತ್ತೆರಡು ದೂರು

ಅನುಚಿತ ಹೇಳಿಕೆ ನೀಡಿದ ಆರೋಪದ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೀವಾಲ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ಮತ್ತೆ ಎರಡು ದೂರುಗಳು ಸಲ್ಲಿಕೆಯಾಗಿವೆ.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಜಾತ ಗೌಡ ಹಾಗೂ ನಮ್ಮ ಕರ್ನಾಟಕ ರಾಜ್ಯದ ಕಟ್ಟಡ ಕಾರ್ಮಿಕರ ಸೇವಾ ಸಂಘದ ಸದಸ್ಯೆ ಎಂ.ದೇವಿ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Tags:    

Similar News