ಕನ್ನಡ ನಾಮಫಲಕ ಅಳವಡಿಕೆಗೆ ಗಡುವು: ಇಂದೇ ಕೊನೆ
ಸರ್ಕಾರ ಹಾಗೂ ಬಿಬಿಎಂಪಿಯಿಂದ ಎರಡು ಬಾರಿ ಗಡುವು | ಗಡುವು ಬಳಿಕ ಏನಾಗಲಿದೆ ಎನ್ನುವ ಕುತೂಹಲ;
ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳಲು ಸರ್ಕಾರ ಎರಡನೇ ಬಾರಿ ನೀಡಿದ್ದ ಗಡುವು; ಮಾರ್ಚ್ 13ರಂದು ಮುಗಿಯಲಿದೆ. ಹೀಗಾಗಿ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಪ್ರಾರಂಭವಾಗಿದೆ.
ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳಲು ನೀಡಿದ್ದ ಗಡುವನ್ನು ವಿಸ್ತರಿಸಿದ್ದಕ್ಕೆ ಕನ್ನಡಪರ ಸಂಘಟನೆಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ, ಮತ್ತೆ ಈಗ ಯಾವ ಆದೇಶ ಹೊರಬೀಳಲಿದೆ ಎನ್ನುವ ಕೌತುಕ ಪ್ರಾರಂಭವಾಗಿದೆ. ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳುವುದಕ್ಕೆ ಮೊದಲು ಫೆಬ್ರವರಿ 28ರ ವರೆಗೆ ಗಡುವು ನೀಡಲಾಗಿತ್ತು. ಇದಾದ ನಂತರ ಬಿಬಿಎಂಪಿಯ ಆದೇಶವನ್ನು ತಡೆಹಿಡಿದಿದ್ದ ರಾಜ್ಯ ಸರ್ಕಾರವು ಕಡ್ಡಾಯ ನಾಮಫಲಕ ಅಳವಡಿಸಿಕೊಳ್ಳುವುದಕ್ಕೆ ಮಾರ್ಚ್ 13ರ ವರೆಗೆ ಗಡುವು ವಿಸ್ತರಿಸಿತ್ತು.
ಫೆಬ್ರವರಿ 29ರಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಬೆಂಗಳೂರಿನ ಎಲ್ಲ ಅಂಗಡಿ ಹಾಗೂ ವಾಣಿಜ್ಯ ಉದ್ದಿಮೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವುದಕ್ಕೆ ಹೆಚ್ಚಿನ ಸಮಯದ ಅವಶ್ಯಕತೆ ಇರುವುದನ್ನು ಪರಿಗಣಿಸಿ, ಇನ್ನೂ ಎರಡು ವಾರ ಗಡುವು ವಿಸ್ತರಿಸಲಾಗಿದೆ ಎಂದಿದ್ದರು. 2 ವಾರಗಳ ನಂತರ ಎಲ್ಲರೂ ಕಾನೂನು ಪಾಲನೆ ಮಾಡಲಿದ್ದಾರೆ ಎಂದು ನಿರೀಕ್ಷಿಸುತ್ತೇವೆ ಎಂದೂ ಹೇಳಿದ್ದರು.
ಗಡುವು ವಿಸ್ತರಿಸುವ ಬಗ್ಗೆ ಮಾಹಿತಿ ಇಲ್ಲ
ಬೆಂಗಳೂರಿನ ವಾಣಿಜ್ಯ ಉದ್ದಿಮೆಗಳ ನಾಮಫಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳಲು ನೀಡಿರುವ ಗಡುವನ್ನು ವಿಸ್ತರಿಸುವ ಬಗ್ಗೆ ಮಾಹಿತಿ ಇಲ್ಲ. ನಾಳೆ ನಾವು ನೋಟಿಫಿಕೇಷನ್ ಹೊರಡಿಸಲಿದ್ದೇವೆ.ಆದರೆ, ಗಡುವು ವಿಸ್ತರಣೆ ಆಗಲಿದೆಯೇ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಕಳೆದ ಬಾರಿ ಸರ್ಕಾರ ಗಡುವು ವಿಸ್ತರಿಸಿದ್ದರಿಂದ ನಾವು (ಬಿಬಿಎಂಪಿ) ನೀಡಿದ್ದ ಆದೇಶವನ್ನು ಹಿಂಪಡೆದಿದ್ದೆವು ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.