ಧಾರ್ಮಿಕ ಚಿಹ್ನೆ ತೆಗೆಯುವಂತೆ ಕ್ರಿಶ್ಚಿಯನ್ ಶಾಲೆಗಳಿಗೆ ಹಿಂದೂ ಸಂಘಟನೆ ಹುಕುಂ
ಕ್ರಿಶ್ಚಿಯನ್ ಮಿಷನರಿಗಳು ಶಾಲೆಗಳನ್ನು ನಿರ್ವಹಿಸುವ ನೆಪದಲ್ಲಿ ಜನರನ್ನು ಮತಾಂತರಿಸುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕುಟುಂಬ ಸುರಕ್ಷಾ ಪರಿಷತ್ತು ಹೇಳಿದೆ.;
ಶಾಲಾ ಕ್ಯಾಂಪಸ್‌ನಲ್ಲಿರುವ ಚರ್ಚ್‌ಗಳು, ಜೀಸಸ್ - ಮೇರಿ ಮೂರ್ತಿ, ಚಿತ್ರಗಳು, ಪಾದ್ರಿಗಳು ಮತ್ತು ಸನ್ಯಾಸಿನಿಯರ ಧಾರ್ಮಿಕ ಪದ್ಧತಿಗಳು ಸೇರಿದಂತೆ ಎಲ್ಲಾ ಧಾರ್ಮಿಕ ಚಿಹ್ನೆಗಳನ್ನು 15 ದಿನಗಳ ಒಳಗೆ ತೆಗೆದುಹಾಕುವಂತೆ ಅಸ್ಸಾಂನ ಹಿಂದೂ ಸಂಘಟನೆಯು ಕ್ರಿಶ್ಚಿಯನ್ ಮಿಷನರಿ ಶಾಲೆಗಳಿಗೆ ಆದೇಶ ನೀಡಿದೆ ಎಂದು ಆರೋಪಿಸಲಾಗಿದೆ.
ಕುಟುಂಬ ಸುರಕ್ಷಾ ಪರಿಷದ್ (ಕುಟುಂಬ ಸುರಕ್ಷತಾ ಮಂಡಳಿ) ಎಂದು ಕರೆಯಲ್ಪಡುವ ಗುಂಪು ಎಲ್ಲಾ ಕ್ರಿಶ್ಚಿಯನ್ ಮಿಷನರಿ ಶಾಲೆಗಳಿಗೆ ಈ ಎಚ್ಚರಿಕೆ ನೀಡಿದ್ದು, ಇಲ್ಲದೇ ಹೋದಲ್ಲಿ ಭೀಕರ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿ ಎಂದು ಬೆದರಿಕೆಯೊಡ್ಡಿದೆ. ಕ್ರಿಶ್ಚಿಯನ್ ಮುಖಂಡರು ಈ ವಿಷಯದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಸಂಪರ್ಕಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
"ಶಾಲೆಗಳನ್ನು ನಡೆಸುವ ನೆಪದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮತಾಂತರ ನಡೆಸುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಧಾರ್ಮಿಕ ಸಂಸ್ಥೆಗಳಾಗಿ ಪರಿವರ್ತಿಸುತ್ತಿದ್ದಾರೆ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಕುಟುಂಬ ಸುರಕ್ಷಾ ಪರಿಷತ್ತಿನ ಅಧ್ಯಕ್ಷ ಸತ್ಯ ರಂಜನ್ ಬೋರಾ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಪಾದ್ರಿಗಳು ಮತ್ತು ಸನ್ಯಾಸಿನಿಯರು ಶಾಲೆಗಳಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಬೋರಾ ಆರೋಪಿಸಿದ್ದಾರೆ.
ಇತ್ತೀಚೆಗೆ ತರಗತಿಯಲ್ಲಿ ʼಜೈ ಶ್ರೀ ರಾಮ್ʼ ಎಂದು ಘೋಷಣೆ ಕೂಗಿದ್ದಕ್ಕಾಗಿ 10 ವರ್ಷದ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರಾಜ್ಯದ ಕ್ರಿಶ್ಚಿಯನ್ ಮಿಷನರಿ ಶಾಲೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು.
ಗುವಾಹಟಿಯ ಆರ್ಚ್‌ಬಿಷಪ್ ಜಾನ್ ಮೂಲಚಿರಾ ಅವರು ಎಲ್ಲಾ ಪಾದ್ರಿಗಳು, ಸನ್ಯಾಸಿಗಳು ಮತ್ತು ಸಹೋದರರಿಗೆ ಮುನ್ನೆಚ್ಚರಿಕೆಯಾಗಿ ಪ್ರಸ್ತುತ ಕ್ಯಾಂಪಸ್‌ನಲ್ಲಿ ಸಿವಿಲ್ ಬಟ್ಟೆಗಳನ್ನು ಧರಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. "ಹಿಂದೂ ಸಂಘಟನೆಯ ಎಲ್ಲಾ ಆರೋಪಗಳು ಆಧಾರರಹಿತ ಎಂದು ಆರ್ಚ್‌ಬಿಷಪ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಸ್ಸಾಂ ಮತ್ತು ಇಡೀ ಈಶಾನ್ಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹಲವಾರು ದಶಕಗಳಿಂದ ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಿಷನರಿಗಳು ನಡೆಸುವ ಇಂತಹ ಹಲವು ಶಾಲೆಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಡೀ ಈಶಾನ್ಯದಲ್ಲಿ ಹಿಂದೂ ಗುಂಪುಗಳಿಂದ ಕ್ರಿಶ್ಚಿಯನ್ ಧರ್ಮ ಮತ್ತು ಮಿಷನರಿ ಚಟುವಟಿಕೆಗಳಿಗೆ ಬೆದರಿಕೆಗಳು ಹೆಚ್ಚಿವೆ ಎಂದು ಕ್ರಿಶ್ಚಿಯನ್ ಮುಖಂಡರು ಹೇಳುತ್ತಾರೆ.