ಅಸ್ನೋಟಿಕರ್ ಶೂಟೌಟ್ ಪ್ರಕರಣ | ಆರೋಪಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌

2000ನೇ ಇಸವಿಯ ಫೆಬ್ರವರಿ 19 ರಂದು ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ವಸಂತ ಅಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.

Update: 2024-04-17 08:40 GMT
ಕಾರವಾರ ಶಾಸಕರಾಗಿದ್ದ ವಸಂತ ಅಸ್ಪೋಟಿಕರ್
Click the Play button to listen to article

ಬೆಂಗಳೂರು: 24 ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಉತ್ತರಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಶೂಟೌಟ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಂಬೈ ಮೂಲದ ಶಾರ್ಪ್ ಶೂಟರ್ ರಾಜನ್ ಅಲಿಯಾಸ್ ಸಂಜಯ್ ಕಿಶನ್ ಮೊಹಿತೆಗೆ ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಪ್ರಕರಣದ ಆರನೇ ಆರೋಪಿಯಾಗಿದ್ದ ಸಂಜಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ ಅವರಿದ್ದ ಧಾರವಾಡದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಘಟನೆ ಸಂಬಂಧ ಹಲವು ಪ್ರತ್ಯಕ್ಷ ಸಾಕ್ಷಿಗಳು ಕೃತ್ಯ ನಡೆಸಿದವರನ್ನು ಗುರುತಿಸಿದ್ದಾರೆ. ವಿಚಾರಣಾ ನ್ಯಾಯಾಲಯಕ್ಕೆ ಸಾಕ್ಷ್ಯ ಮತ್ತು ಹೇಳಿಕೆಗಳನ್ನು ನೀಡಿದ್ದಾರೆ. ಕೆಲ ಸಾಕ್ಷ್ಯಾಧಾರಗಳಲ್ಲಿ ವಿರೋಧಾಭಾಸವಿರಬಹುದು. ಆದರೆ, ಅದಕ್ಕೆಲ್ಲಾ ಖಚಿತ ಆಧಾರಗಳಿವೆ. ಪ್ರತ್ಯಕ್ಷ ಸಾಕ್ಷಿಗಳು ಆರೋಪಕ್ಕೆ ಪೂರಕವಾಗಿದ್ದಾಗ ಇತರೆ ಸಾಕ್ಷಿಗಳನ್ನು ನಂಬಬೇಕಾಗುತ್ತದೆ ಎಂದು ತಿಳಿಸಿದೆ. ಅಲ್ಲದೇ ಗುಂಡಿನ ದಾಳಿ ಅಸಾಮಾನ್ಯವಾಗಿತ್ತು. ಕಾರವಾರದಂತಹ ನಗರಗಳಲ್ಲಿ ಈ ರೀತಿಯ ಘಟನೆ, ಚಲನಚಿತ್ರಗಳಲ್ಲಿಯೂ ಕಾಣದಂತಹ ಘಟನೆಯಾಗಿದ್ದರ ಪರಿಣಾಮ ಪ್ರತ್ಯಕ್ಷ ಸಾಕ್ಷ್ಯಗಳಿಗೆ ನೆನಪಿನಲ್ಲಿ ಉಳಿಯುವಂತೆ ಆಗಿದೆ ಎಂದು ಪೀಠ ತಿಳಿಸಿದೆ.

ಪ್ರಕರಣವೇನು?

2000ನೇ ಇಸವಿಯ ಫೆಬ್ರವರಿ 19 ರಂದು ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಮ್ಮ ಮಗಳ ವಿವಾಹದ ಆರತಕ್ಷತೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ವಸಂತ ಅಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಘಟನೆಯಲ್ಲಿ ಗಣಪತಿ ಉಳವೇಕ‌ರ್ ಗಾಯಗೊಂಡಿದ್ದರು.

ಪ್ರಕರಣದ ಮೊದಲ ಆರೋಪಿ ದಿಲೀಪ್ ಅರ್ಜುನ್ ನಾಯ್ಕ್‌ ಸೇರಿದಂತೆ ಅಂಟೋನಿ ಅಲಿಯಾಸ್ ಟೋನಿ ರೊಜಾರಿಯೊ ಮತ್ತು ಓಂ ಪ್ರಕಾಶ್ ಗಿರಿ ಅಲಿಯಾಸ್ ಪಕ್ಕಾ ಅಲಿಯಾಸ್ ಬಾಬು ವಿಚಾರಣೆ ಹಂತದಲ್ಲಿಯೇ ಮೃತಪಟ್ಟಿದ್ದರು. ಹೀಗಾಗಿ, ಇವರ ವಿರುದ್ಧದ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಉತ್ತರ ಕನ್ನಡ ಜಿಲ್ಲೆಯ ೧ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಕೊಲೆ, ಕೊಲೆಯತ್ನ, ಪಿತೂರಿ, ಸಾಕ್ಷ್ಯನಾಶ, ಶಸ್ತ್ರಾಸ್ತ್ರ ಕಾಯಿದೆ ಉಲ್ಲಂಘನೆ ಆರೋಪದಲ್ಲಿ ಸಂಜಯ್ ಮೊಹಿತೆ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ೬೮ ಸಾವಿರ ರೂ ದಂಡ ವಿಧಿಸಿ ಆದೇಶಿಸಿತ್ತು.

Tags:    

Similar News