ವೈಎಸ್‌ಆರ್‌ಸಿಪಿ ಮುಖ್ಯಸ್ಥ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ 21 ದಿನಗಳ ರಾಜ್ಯಾದ್ಯಂತ ಬಸ್ ಯಾತ್ರೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದಾರೆ.
ಮಂಗಳವಾರ (ಮಾರ್ಚ್ 19) ಪ್ರಯಾಣದ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಯಾತ್ರೆ ಮಾರ್ಚ್ 26 ಅಥವಾ 27 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ಸಿದ್ದತೆ ಸಭೆ ನಡೆದ ಜಿಲ್ಲೆಗಳನ್ನು ಹೊರತುಪಡಿಸಿ ಎಲ್ಲಾ ಸಂಸದೀಯ ಕ್ಷೇತ್ರಗಳಲ್ಲಿ ಯಾತ್ರೆ ಹಾದುಹೋಗಲಿದೆ.
ʻಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಪ್ರಚಾರಕ್ಕೆ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಬಸ್ ಯಾತ್ರೆ ಪ್ರಾರಂಭಿಸಲಿದ್ದಾರೆ. ಪ್ರವಾಸದ ವೇಳೆ ಬೆಳಗ್ಗೆ ಸಂವಾದ ಮತ್ತು ಮಧ್ಯಾಹ್ನ ಸಾರ್ವಜನಿಕ ಸಭೆಗಳು ಇರುತ್ತವೆ. ಸರ್ಕಾರದ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಜನರಿಂದ ಸಲಹೆ ಸ್ವೀಕರಿಸಲಾಗುವುದುʼ ಎಂದು ಸಿಎಂಒ ಪ್ರಕಟಣೆ ತಿಳಿಸಿದೆ. ವೈಎಸ್‌ಆರ್‌ಸಿಪಿ ನಾಯಕರೊಬ್ಬರ ಪ್ರಕಾರ, ಸಿಎಂ ಪ್ರವಾಸದ ವೇಳೆ ಜನರೊಂದಿಗೆ ಸಮಯ ಕಳೆಯುತ್ತಾರೆ. ಪಕ್ಷ ಎಲ್ಲಾ ಪ್ರದೇಶಗಳಲ್ಲಿ ಸಭೆ ನಡೆಸಲು ನಿರ್ಧರಿಸಿದೆ ಎಂದು ಹೇಳಿದರು.
ಆಂಧ್ರಪ್ರದೇಶದಲ್ಲಿ ಮೇ 13 ರಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.