ಮುಕ್ತ ವಿವಿ ಯಡವಟ್ಟು | ಪಿ.ಹೆಚ್.ಡಿ ಪರೀಕ್ಷೆಯ ಶೇ 90 ರಷ್ಟು ಕೀ-ಉತ್ತರ ತಪ್ಪು!

ಕೆ.ಎಸ್.ಒ.ಯು ಅಂತರ್ಜಾಲದಲ್ಲಿ ತಪ್ಪಾಗಿ ಪ್ರಕಟಿಸಿರುವ ಕೀ-ಉತ್ತರಗಳನ್ನು ದೂರುದಾರ ಹರೀಶ್‌, ಪ್ರಶ್ನೆ ಸಂಖ್ಯೆ ಸಮೇತ ಪಟ್ಟಿ ಮಾಡಿ ವಿವರ ಸಹಿತ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ.

Update: 2024-03-26 12:13 GMT
ಕೆಎಸ್‌ಒಯು
Click the Play button to listen to article

ಮೈಸೂರು: 2023-24ನೇ ಸಾಲಿನ (ಜನವರಿ ಆವೃತ್ತಿ) ಪತ್ರಿಕೋದ್ಯಮ ವಿಷಯದ ಪಿ.ಹೆಚ್.ಡಿ ಪರೀಕ್ಷೆಯ CET Series-D ಪ್ರಶ್ನೆಪತ್ರಿಕೆಗೆ ಸಂಬಂಧಿಸಿದಂತೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಎನ್ ಹರೀಶ್ ಕುಮಾರ್ ಎಂಬುವವರು ಮುಕ್ತ ವಿವಿಗೆ ಪತ್ರ ಬರೆದು ಎಳೆಎಳೆಯಾಗಿ ಲೋಪವನ್ನು ಬಿಚ್ಚಿಟ್ಟಿದ್ದಾರೆ.

ಇದೇ ಮಾ.17 ರಂದು ಪತ್ರಿಕೋದ್ಯಮ ವಿಷಯದಲ್ಲಿ ಪಿ.ಹೆಚ್.ಡಿ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಈ ಪರೀಕ್ಷೆಯ ಕೀ ಉತ್ತರಗಳನ್ನು KSOU ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಆದರೆ ಪ್ರಕಟಿಸಿರುವ CET Series-D (ಪತ್ರಿಕೋದ್ಯಮ ವಿಷಯ) ಕೀ-ಉತ್ತರಗಳು ತಪ್ಪಾಗಿರುವುದು ಕಂಡು ಬಂದಿದೆ.

ಕೆ.ಎಸ್.ಒ.ಯು ಅಂತರ್ಜಾಲದಲ್ಲಿ ತಪ್ಪಾಗಿ ಪ್ರಕಟಿಸಿರುವ ಕೀ-ಉತ್ತರಗಳನ್ನು ದೂರುದಾರ ಹರೀಶ್‌, ಪ್ರಶ್ನೆ ಸಂಖ್ಯೆ ಸಮೇತ ಪಟ್ಟಿ ಮಾಡಿ ವಿವರ ಸಹಿತ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯಂತ ಉನ್ನತ ಸಂಸ್ಥೆಯೇ ಈ ರೀತಿ ಪ್ರಶ್ನೆಗಳಿಗೆ ತಪ್ಪು ಕೀ-ಉತ್ತರಗಳನ್ನು ಪ್ರಕಟ ಮಾಡಿರುವುದು ದಿಗ್ಧಮೆ ತಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸ್ಪರ್ಧಾತ್ಮಕ ಯುಗದಲ್ಲಿ 1 ಅಥವಾ 2 ಅಂಕಗಳ ವ್ಯತ್ಯಾಸದಲ್ಲಿ ಸೀಟುಗಳು ಕೈತಪ್ಪಿದ ನಿದರ್ಶನಗಳಿವೆ. ಇಂಥ ಸಂದರ್ಭಗಳಲ್ಲಿ ಇಷ್ಟೊಂದು ಪ್ರಶ್ನೆಗಳಿಗೆ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿರುವುದನ್ನು ನೋಡಿದರೆ ದೊಡ್ಡ ಪ್ರಮಾದವೇ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆದ್ದರಿಂದ ತಪ್ಪು ಕೀ-ಉತ್ತರಗಳನ್ನು ಪ್ರಕಟಿಸಿ ಬೇಜಾವಾಬ್ದಾರಿ ತೋರಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಸರಿ ಕೀ-ಉತ್ತರಗಳನ್ನು ಪ್ರಕಟಿಸಿ ನಂತರ ಪ್ರವೇಶಾತಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಬೇಕು ಅಥವಾ ಮರು ಸಿ.ಇ.ಟಿ ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ವಿವಿ ಅಂತರ್ಜಾಲದಲ್ಲಿ ಪ್ರಕಟಿಸಿರುವ ಕೀ – ಉತ್ತರಗಳು ಲೋಪದಿಂದ ಕೂಡಿರುವ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ತಪ್ಪೆಸಗಿರುವುದು ಕಂಡು ಬಂದಲ್ಲಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಜತೆಗೆ ಅಗತ್ಯವಿದ್ದಲ್ಲಿ ಮರು ಪ್ರವೇಶ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಹೇಳಿದ್ದಾರೆ. 

Tags:    

Similar News