ಗಲ್ಲು ಎದುರಿಸುತ್ತಿರುವ 561 ಕೈದಿಗಳು; ಎರಡು ದಶಕಗಳಲ್ಲಿ ಅತ್ಯಧಿಕ ಏರಿಕೆ: ವರದಿ

ದೇಶದಲ್ಲಿ ಒಟ್ಟು 561 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದು, ಇದು 2 ದಶಕಗಳಲ್ಲಿಯೇ ಅತ್ಯಂತ ಅಧಿಕವಾಗಿದೆ. 2015 ರಿಂದ ಈ ಸಂಖ್ಯೆಯಲ್ಲಿ ಶೇಕಡಾ 45.71 ರಷ್ಟು ಏರಿಕೆಯಾಗಿದೆ

Update: 2024-02-11 06:00 GMT
Representative image by iStock

ಹೊಸದಿಲ್ಲಿ: ದೇಶದಲ್ಲಿ ಒಟ್ಟು 561 ಕೈದಿಗಳು ಮರಣದಂಡನೆಗೆ ಗುರಿಯಾಗಿದ್ದು, ಇದು ಎರಡು ದಶಕಗಳಲ್ಲಿಯೇ ಅತ್ಯಂತ ಅಧಿಕವಾಗಿದೆ. ಮರಣದಂಡನೆಗೆ ಒಳಗಾದ ಕೈದಿಗಳ ಸಂಖ್ಯೆಯಲ್ಲಿ 2015 ರಿಂದ ಶೇಕಡಾ 45.71 ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪ್ರಾಜೆಕ್ಟ್ 39A ಪ್ರಕಟಿಸಿದ 'ಭಾರತದಲ್ಲಿ ಮರಣದಂಡನೆ: ವಾರ್ಷಿಕ ಅಂಕಿಅಂಶಗಳ ವರದಿ' ಎಂಟನೇ ಆವೃತ್ತಿಯು ವಿಚಾರಣಾ ನ್ಯಾಯಾಲಯಗಳು 2023 ರಲ್ಲಿ 120 ಮರಣದಂಡನೆಗಳನ್ನು ವಿಧಿಸಿವೆ ಎನ್ನುವುದನ್ನು ಗಮನಿಸಿದೆ.

"2023 ರಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಮರಣದಂಡನೆಯನ್ನು ದೃಢೀಕರಿಸಲಿಲ್ಲ. ಹೈಕೋರ್ಟ್‌ಗಳಲ್ಲಿ, ಕರ್ನಾಟಕ ಹೈಕೋರ್ಟ್ ಕೇವಲ ಒಂದು ಮರಣದಂಡನೆಯನ್ನು ದೃಢಪಡಿಸಿದೆ. ಇದು 2000 ನೇ ಇಸವಿಯಿಂದ ಮೇಲ್ಮನವಿ ನ್ಯಾಯಾಲಯಗಳಲ್ಲಿ ಮರಣ ದಂಡನೆ ದೃಢೀಕರಣದ ಅತ್ಯಂತ ಕಡಿಮೆ ದರವನ್ನು ಸೂಚಿಸುತ್ತದೆ. " ಎಂದು ವರದಿ ಹೇಳಿದೆ.

2008 ರಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕೈದಿಯ ಕ್ಷಮಾದಾನ ಅರ್ಜಿಯನ್ನು ಮಾರ್ಚ್ 2023 ರಲ್ಲಿ ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಒಟ್ಟು 488 ಮರಣದಂಡನೆ ಕೈದಿಗಳು ಉಚ್ಚ ನ್ಯಾಯಾಲಯಗಳಿಂದ ತೀರ್ಪಿಗೆ ಕಾಯುತ್ತಿದ್ದಾರೆ ಎಂದು ವರದಿ ಹೇಳಿದೆ.

ಮೂರು ಮರಣದಂಡನೆ ಮೇಲ್ಮನವಿಗಳಲ್ಲಿ ನಾಲ್ವರು ಕೈದಿಗಳನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ, ಎರಡು ಮರಣದಂಡನೆ ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ಗೆ ರಿಮಾಂಡ್ ಮಾಡಿದೆ. ಕ್ರಿಮಿನಲ್ ಮೇಲ್ಮನವಿಗಳಲ್ಲಿ ಮೂವರು ಮರಣದಂಡನೆ ಕೈದಿಗಳ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಅದು ಹೇಳಿದೆ.

ಎರಡು ಮರಣದಂಡನೆ ಪ್ರಕರಣಗಳಲ್ಲಿ ಇಬ್ಬರು ಖೈದಿಗಳು ಅಪರಾಧದ ಸಮಯದಲ್ಲಿ ಕಾನೂನು ಸಂಘರ್ಷದಲ್ಲಿದ್ದ ಮಕ್ಕಳೆಂದು ಕಂಡುಹಿಡಿದ ನಂತರ ಬಿಡುಗಡೆ ಮಾಡಲಾಗಿದೆ.

"2023 ರ ಕೊನೆಯಲ್ಲಿ, ವಿಚಾರಣಾ ನ್ಯಾಯಾಲಯಗಳಿಂದ 120 ಮರಣದಂಡನೆಗಳನ್ನು ವಿಧಿಸಲಾಗಿದ್ದು, ಭಾರತದಲ್ಲಿ ಒಟ್ಟು 561 ಕೈದಿಗಳು ಮರಣದಂಡನೆಯ ಅಡಿಯಲ್ಲಿ ಜೀವಿಸುತ್ತಿದ್ದಾರೆ.

"ಆ ಮೂಲಕ, 2023 ಸುಮಾರು ಎರಡು ದಶಕಗಳಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಅತಿ ಹೆಚ್ಚು ಕೈದಿಗಳನ್ನು ಹೊಂದಿರುವ ವರ್ಷವಾಗಿದೆ. 2015 ರಿಂದ ಮರಣದಂಡನೆ ಜನಸಂಖ್ಯೆಯಲ್ಲಿ 45.71% ಹೆಚ್ಚಳವಾಗಿದೆ. " ಎಂದು ವರದಿ ಹೇಳಿದೆ.

ಮಾಹಿತಿಯ ಪ್ರಕಾರ, 2022 ಮತ್ತು 2021 ರ ಕೊನೆಯಲ್ಲಿ ಮರಣದಂಡನೆಯನ್ನು ಎದುರಿಸುವ 541 ಮತ್ತು 490 ಕೈದಿಗಳಿದ್ದರು. 2022 ಮತ್ತು 2021 ರಲ್ಲಿ ಕ್ರಮವಾಗಿ 167 ಮತ್ತು 146 ಮರಣದಂಡನೆಗಳನ್ನು ಜಾರಿಗೊಳಿಸಲಾಗಿತ್ತು.

ವರದಿಯ ಪ್ರಕಾರ, ಕಳೆದ ವರ್ಷ ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯಗಳು 33, ಜಾರ್ಖಂಡ್‌ನಲ್ಲಿ 12 ಮತ್ತು ಗುಜರಾತ್, ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ತಲಾ 11 ಮತ್ತು ಪಶ್ಚಿಮ ಬಂಗಾಳದಲ್ಲಿ 10 ಮರಣದಂಡನೆಗಳನ್ನು ನೀಡಲಾಗಿದೆ. ಮಣಿಪುರ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಯಾವುದೇ ಅಂತಹ ತೀರ್ಪು ನೀಡಲಾಗಿಲ್ಲ.

Tags:    

Similar News