Ustad Zakir Hussain | ತಬಲಾ ಮಾಂತ್ರಿಕ ಮಾತ್ರವಲ್ಲ, ಸಿನಿಮಾ, ಜಾಹೀರಾತಿನಲ್ಲೂ ಮೋಡಿ ಮಾಡಿದ್ದ ಉಸ್ತಾದ್
2016 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ʻಆಲ್ ಸ್ಟಾರ್ ಗ್ಲೋಬಲ್ ಕನ್ಸರ್ಟ್ʼ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಾಕಿರ್ ಹುಸೇನ್ ಅವರನ್ನು ವೈಟ್ ಹೌಸ್‌ಗೆ ಆಹ್ವಾನಿಸಿದ್ದರು. ಅಂತಹ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ಸಂಗೀತಗಾರ ಜಾಕಿರ್ ಹುಸೇನ್.
ಸದಾ ನಾದದ ಅಲೆಯಲ್ಲಿ ಮಿಂದೇಳುವ ಸಂಗೀತ ಲೋಕದಲ್ಲಿ ಸದ್ಯ ಮೌನ ಮತ್ತು ದುಃಖ ಆವರಿಸಿದೆ.
ಶ್ರೇಷ್ಠ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ದೈಹಿಕವಾಗಿ ಜಗತ್ತಿನಿಂದ ನಿರ್ಗಮಿಸಿದ್ದಾರೆ. ತಮ್ಮ 73ನೇ ವಯಸ್ಸಿನಲ್ಲಿ ಸಂಗೀತ ಲೋಕದ ದಂತಕಥೆ ಜಾಕೀರ್ ಹುಸೇನ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ತಮ್ಮ ಸಂಗೀತದ ಮಾಂತ್ರಿಕತೆಯಿಂದ ಇಡೀ ವಿಶ್ವವನ್ನೇ ಮಂತ್ರಮುಗ್ಧರನ್ನಾಗಿಸಿದ್ದ ಜಾಕೀರ್ ಹುಸೇನ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಕಾಯಿಲೆಗಳಿಂದಾಗಿ ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಸುಮಾರು 6 ದಶಕಗಳ ಕಾಲದ ತಮ್ಮ ವೃತ್ತಿ ಜೀವನದಲ್ಲಿ ಜಾಕೀರ್ ಹುಸೇನ್ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಭಾರತ ಸರ್ಕಾರವು ಜಾಕಿರ್‌ಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಮೂರು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಜಾಕೀರ್ ಹುಸೇನ್ ಕೇವಲ ತಬಲಾ ವಾದಕ ಮಾತ್ರವಲ್ಲ; ಒಬ್ಬ ಸಿನಿಮಾ ನಟ, ಸಂಗೀತ ಸಂಯೋಜಕರೂ ಆಗಿದ್ದರು.
ಪಂಡಿತ್ ರವಿಶಂಕರ್ ಅವರಂತಹ ಅನೇಕ ಭಾರತೀಯ ಕಲಾವಿದರು ಮತ್ತು ಜಾನ್ ಮೆಕ್ಲಾಲಿನ್ ಮತ್ತು ಚಾರ್ಲ್ಸ್ ಲಾಯ್ಡ್ ಅವರಂತಹ ಪಾಶ್ಚಿಮಾತ್ಯ ಸಂಗೀತಗಾರರೊಂದಿಗೆ ಗುರುತಿಸಿಕೊಂಡಿದ್ದ ಜಾಕೀರ್ ಹುಸೇನ್ ಭಾರತೀಯ ಚಲನಚಿತ್ರೋದ್ಯಮದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದರು. ಸಿನಿಮಾಗಳಿಗೆ ಸಂಗೀತ ಸಂಯೋಜನೆ ಜೊತೆಗೆ ಕೆಲ ಸಿನಿಮಾಗಳಲ್ಲಿ ನಟನೆಯೊಂದಿಗೂ ಅವರು ಸಿನಿಮಾ ಜಗತ್ತಿನಲ್ಲೂ ಗುರುತಿಸಿಕೊಂಡಿದ್ದರು. ಹಾಗೆ ತಮ್ಮ ಜೀವಕ್ಕಿಂತ ಹೆಚ್ಚು ಹಚ್ಚಿಕೊಂಡಿದ್ದ ತಬಲಾ ಹೊರತಾಗಿಯೂ ಗುರುತಿಸಿಕೊಂಡಿದ್ದ ಸಿನಿಮಾ ರಂಗದ ಅವರ ಹೆಜ್ಜೆಗುರುತುಗಳು ಇಲ್ಲಿವೆ..
ಹೀಟ್ ಅಂಡ್ ಡಸ್ಟ್
1983 ರಲ್ಲಿ ತೆರೆಕಂಡ ಬ್ರಿಟಿಷ್ ಸಿನಿಮಾ 'ಹೀಟ್ ಅಂಡ್ ಡಸ್ಟ್' ನಲ್ಲಿ ಶಶಿ ಕಪೂರ್ ಅವರೊಂದಿಗೆ ಕೆಲಸ ಮಾಡಿದರು. ಈ ಚಿತ್ರದ ಮೂಲಕ ಜಾಕಿರ್ ನಟನೆಗೆ ಪಾದಾರ್ಪಣೆ ಮಾಡಿದರು. ಜಾಕೀರ್ ಹುಸೇನ್ ಮತ್ತು ಶಶಿ ಕಪೂರ್ ಅವರ ನಟನೆಯ ʻಹೀಟ್ ಅಂಡ್ ಡಸ್ಟ್ʼ 1983 ರಲ್ಲಿ ಬಿಡುಗಡೆಯಾಯಿತು. ಇದರ ಬಳಿಕ ಅವರು 1998 ರಲ್ಲಿ ಬಿಡುಗಡೆಯಾದ 'ಸಾಜ್' ಚಿತ್ರದಲ್ಲಿ ಕಾಣಿಸಿಕೊಂಡರು.
ಸಾಸ್ ( Saaz (1988)
ಜಾಕೀರ್ ಹುಸೇನ್ ಸಾಯಿ ಪರಾಂಜಪೆ ನಿರ್ದೇಶನದ ʻಸಾಜ್ʼ ಸಿನಿಮಾದಲ್ಲಿ ಕೆಲಸ ಮಾಡಿದರು. 1998 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಜಾಕೀರ್ ಹುಸೇನ್ ಶಬಾನಾ ಆಜ್ಮಿಯ ಪ್ರೇಮಿಯಾಗಿ ನಟಿಸಿದ್ದರು. ಆದರೆ ಈ ಸಿನಿಮಾ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಏಕೆಂದರೆ ಈ ಸಿನಿಮಾದ ಕಥೆಯು ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಅವರಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿತ್ತು. ಈ ಸಿನಿಮಾದಿಂದ ಲತಾ ಮಂಗೇಶ್ಕರ್ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
12 ಸಿನಿಮಾಗಳಲ್ಲಿ ನಟನೆ
ಉಸ್ತಾದ್ ಜಾಕೀರ್ ಹುಸೇನ್ ತಮ್ಮ ವೃತ್ತಿ ಜೀವನದಲ್ಲಿ ಒಂದಲ್ಲ ಎರಡಲ್ಲ 12 ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಹೀಟ್ ಅಂಡ್ ಡಸ್ಟ್ ಮತ್ತು ಸಾಜ್ ಹೊರತುಪಡಿಸಿ, ಜಾಕಿರ್ ಹುಸೇನ್ ಅವರು ದಿ ಪರ್ಫೆಕ್ಟ್ ಮರ್ಡರ್ (1988), ತಂದುವಿಟ್ಟೆನ್ ಎನ್ನೈ (1991 -ತಮಿಳು ಚಲನಚಿತ್ರ, ಅತಿಥಿ ಪಾತ್ರ), ಮಿಸ್ ಬೀಟೀಸ್ ಚಿಲ್ಡ್ರನ್ (1992), ಜಾಕಿರ್ ಅಂಡ್ ಹಿಸ್ ಫ್ರೆಂಡ್ಸ್ (1998), ಟಾರ್ (2018), ಮಂಕಿ ಮ್ಯಾನ್ (2024) ಚಾಲಿಸ್ ಚೌರಾಸಿ, ಮಾಂಟೋ, ಮಿಸ್ ಡಾಟರ್ಸ್ ಚಿಲ್ಡ್ರನ್ ಸೇರಿದಂತೆ ಸುಮಾರು 12 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
‘ಮೊಘಲ್-ಎ-ಆಜಂ’ ಸಿನಿಮಾದಲ್ಲಿ ನಟಿಸುವ ಆಫರ್
ಜಾಕಿರ್ ಹುಸೇನ್‌ಗೆ ಭಾರತೀಯ ಚಿತ್ರರಂಗದ ಐತಿಹಾಸಿಕ ಚಿತ್ರ ‘ಮುಘಲ್-ಎ-ಆಜಂ’ನಲ್ಲಿ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿತ್ತು. ಈ ಸಿನಿಮಾದಲ್ಲಿ ದಿಲೀಪ್ ಕುಮಾರ್ ಸಲೀಂ ಪಾತ್ರವನ್ನು ನಿರ್ವಹಿಸಿದರೆ, ಜಾಕಿರ್ ಹುಸೇನ್ ಸಲೀಂ ಅವರ ಕಿರಿಯ ಸಹೋದರನ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಈ ಸಿನಿಮಾದಲ್ಲಿ ನಟಿಸಲು ಆಗ ಅವರು ನಿರಾಕರಿಸಿದ್ದರು. ಕಾರಣ ಅವರ ತಂದೆ ಅಲ್ಲಾ ರಖಾ ಅವರಿಗೆ, ಜಾಕಿರ್ ಹುಸೇನ್ ಸಿನಿಮಾಗಳಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಅವರು ತಮ್ಮ ಮಗ ಸಂಗೀತದಲ್ಲಿ ಮಾತ್ರ ಗಮನಹರಿಸಬೇಕೆಂದು ಬಯಸಿದ್ದರು.
ಸಂಗೀತ ಸಂಯೋಜನೆ
ಜಾಕೀರ್ ಹುಸೇನ್ ಹಲವು ಸಿನಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ತಬಲಾ ಮಾಂತ್ರಿಕ ಸಂಗೀತ ಸಂಯೋಜನೆ ಮಾಡಿದ ಸಿನಿಮಾಗಳು ಇಂತಿವೆ;
ವಾನಪ್ರಸ್ಥಂ (Vanaprastham (1999)
ವಾನಪ್ರಸ್ಥಂ ಇದು 1999 ರ ಇಂಡೋ-ಫ್ರೆಂಚ್ ಸೈಕಲಾಜಿಕಲ್ ಡ್ರಾಮಾ ಅವಧಿಯ ಚಲನಚಿತ್ರವಾಗಿದ್ದು, ಇದನ್ನು ಮಲಯಾಳಂ ಭಾಷೆಯಲ್ಲಿ ಶಾಜಿ ಎನ್. ಕರುಣ್ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಹಾಸಿನಿ ಮಣಿರತ್ನಂ, ಮಟ್ಟನ್ನೂರ್ ಶಂಕರನ್‌ಕುಟ್ಟಿ ಮಾರಾರ್, ಕಲಾಮಂಡಲಂ ಗೋಪಿ, ವೆಣ್ಮಣಿ ಹರಿದಾಸ್ ಮತ್ತು ಕುಕ್ಕು ಪರಮೇಶ್ವರಂ ಪೋಷಕ ಪಾತ್ರಗಳಲ್ಲಿದ್ದಾರೆ. ಮೋಹನ್ ಲಾಲ್ ಅವರ ಕಥಕ್ಕಳಿ ಪಾತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಗಮನ ಸೆಳೆದ ಶಾಜಿ ಎನ್ ಕರುಣ್ ಅವರ ‘ವಾನಪ್ರಸ್ಥಂ’ ಚಿತ್ರಕ್ಕೆ ಉಸ್ತಾದ್ ಜಾಕೀರ್ ಹುಸೇನ್ ಸಂಗೀತ ಸಂಯೋಜಿಸಿದ್ದರು.
ದಿ ಮಿಸ್ಟಿಕ್ ಮಸ್ಸರ್ (2001) (The Mystic Masseur (2001)
ಜಾಕೀರ್ ಹುಸೇನ್ ಭಾರತೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಿನಿಮಾದಲ್ಲಿ ಯಶಸ್ಸನ್ನು ಕಂಡವರು. 2001ರಲ್ಲಿ ತೆರೆಕಂಡ ಇಸ್ಮಾಯಿಲ್ ಮರ್ಚೆಂಟ್ ನಿರ್ದೇಶನದ ʻದಿ ಮಿಸ್ಟಿಕ್ ಮಸ್ಸರ್ʼ ಸಿನಿಮಾ ಜಾಕಿರ್ ಹುಸೇನ್ ಅವರ ಮೂಲ ಸಂಗೀತವನ್ನು ಒಳಗೊಂಡಿದೆ.
ಇನ್ ಕಸ್ಟಡಿ (1993)
ಶಶಿ ಕಪೂರ್, ಓಂ ಪುರಿ, ಶಬಾನಾ ಅಜ್ಮಿ, ನಿನಾ ಗುಪ್ತಾ ಮುಂತಾದವರ ತಾರಾಂಗಣವಿರುವ ʻಇನ್ ಕಸ್ಟಡಿʼ ಸಿನಿಮಾಗೆ ಜಾಕೀರ್ ಹುಸೇನ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾವು 1993ರಲ್ಲಿ ತೆರೆಕಂಡಿತು. ಈ ಸಿನಿಮಾಕ್ಕೂ ಜಾಕೀರ್ ಹುಸೇನ್ ಮೂಲ ಸಂಗೀತವನ್ನು ಸಂಯೋಜಿಸಿದ್ದಾರೆ.
ಮಿಸ್ ಬೀಟೀಸ್ ಚಿಲ್ಡ್ರನ್ ( Miss Beatty's Children (1992)
ಮಿಸ್ ಬೀಟೀಸ್ ಚಿಲ್ಡ್ರನ್ 1992 ರ ಇಂಗ್ಲಿಷ್-ಭಾಷೆಯ ಭಾರತೀಯ ಚಲನಚಿತ್ರವಾಗಿದ್ದು, ಪಮೇಲಾ ರೂಕ್ಸ್ ಅವರ ನಿರ್ದೇಶನದ ಚೊಚ್ಚಲ ನಿರ್ದೇಶನದಲ್ಲಿ, ಜೆನ್ನಿ ಸೀಗ್ರೋವ್, ಫೇಯ್ತ್ ಬ್ರೂಕ್ ಮತ್ತು ಪ್ರತಿಮಾ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೂ ಜಾಕೀರ್ ಹುಸೇನ್ ಅವರ ಸಂಗೀತ ಸಂಯೋಜನೆಯಿದೆ.
ಜಾಹೀರಾತಿನಲ್ಲೂ ಮೋಡಿ ಮಾಡಿದ ಜಾಕೀರ್
1966ರಲ್ಲಿ ಕೋಲ್ಕತ್ತಾದಲ್ಲಿ ಆರಂಭವಾದ ʻಬ್ರೂಕ್ ಬಾಂಡ್ ತಾಜ್ ಮಹಲ್ ಟೀʼ ಬ್ರ್ಯಾಂಡ್ ಅನ್ನು ಪ್ರತಿ ಮನೆಗೆ ಕೊಂಡೊಯ್ದ ಕೀರ್ತಿ ಜಾಕೀರ್ ಹುಸೇನ್ ಅವರಿಗೆ ಸಲ್ಲುತ್ತದೆ. ಆರಂಭದಲ್ಲಿ ಬ್ರ್ಯಾಂಡ್ 'ಆಹ್ ತಾಜ್' ಎಂಬ ಅಡಿಬರಹದ ಮೇಲೆ ಕೇಂದ್ರೀಕರಿಸಿತು. ಆದರೆ ಭಾರತೀಯ ಸಂಸ್ಕೃತಿಯೊಂದಿಗೆ ಇದು ಅಷ್ಟೊಂದು ಬೆರೆಯಲಿಲ್ಲ. ಹೀಗಾಗಿ ಹಿಂದೂಸ್ತಾನ್ ಯೂನಿಲಿವರ್ (HUL) ಅದನ್ನು ಮರುಬ್ರಾಂಡ್ ಮಾಡಲು ನಿರ್ಧರಿಸಿ ಜಾಕಿರ್ ಹುಸೇನ್ ಅವರನ್ನು ಅದರ ರಾಯಭಾರಿಯಾಗಿ ಆಯ್ಕೆ ಮಾಡಿತು. 90 ರ ದಶಕದಲ್ಲಿ, ಉಸ್ತಾದ್ ಜಾಕಿರ್ ಹುಸೇನ್ ಅವರ ʻತಾಜ್ ಮಹಲ್ ಚಹಾʼ ಜಾಹೀರಾತು ಬಹಳ ಜನಪ್ರಿಯವಾಗಿತ್ತು. ಈ ಜಾಹೀರಾತನ್ನು ಉಸ್ತಾದ್ ಜಾಕಿರ್ ಹುಸೇನ್ ಅವರೇ ಸಂಗೀತ ಸಂಯೋಜನೆ ಮಾಡಿ ಅವರೇ ಆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿನ ‘ವಾಹ್ ತಾಜ್’ ಎಂಬ ಘೋಷವಾಕ್ಯ ಬಹಳ ಪ್ರಸಿದ್ಧವಾಯಿತು.
ತಾಜ್ ಮಹಲ್ ಚಹಾದ ಮೊದಲ ಐತಿಹಾಸಿಕ ಜಾಹೀರಾತನ್ನು ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಮುಂದೆ ಚಿತ್ರೀಕರಿಸಲಾಗಿತ್ತು. ಜಾಕಿರ್ ಹುಸೇನ್ ತಮ್ಮ ತಬಲಾ ಬಡಿತದೊಂದಿಗೆ ಚಹಾವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅವರ ಕಲೆಯನ್ನು ಹೊಗಳಿ 'ವಾವ್, ಉಸ್ತಾದ್ ವಾಹ್!' ಎನ್ನುತ್ತಾರೆ. ಆಗ 'ಹೇ ಉಸ್ತಾದ್, ವಾವ್ ತಾಜ್ʼ ಎಂದು ಹೇಳಿ ಎನ್ನುವ ವಾಕ್ಯವು ಭಾರತೀಯ ಚಹಾ ಪ್ರಿಯರಲ್ಲಿ ಎಷ್ಟು ಜನಪ್ರಿಯವಾಯಿತು ಎಂದರೆ ಆ ವಾವ್ ತಾಜ್ ಪದ ತಾಜ್ ಮಹಲ್ ಚಹಾದ ಸಂಕೇತವಾಯಿತು.
ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಉಸ್ತಾದ್ ಸಂಗೀತ
1996 ರ ಅಟ್ಲಾಂಟಾ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭಕ್ಕೆ ಜಾಕಿರ್ ಹುಸೇನ್ ಸಂಗೀತ ಸಂಯೋಜಿಸಿದ್ದಾರೆ. ಸಿತಾರ್ ದಂತಕಥೆ ಪಂಡಿತ್ ರವಿಶಂಕರ್ ಮತ್ತು ಪ್ರಸಿದ್ಧ ಬ್ಯಾಂಡ್ ಬೀಟಲ್ಸ್‌ನ ಜಾರ್ಜ್ ಹ್ಯಾರಿಸನ್ ಅವರೊಂದಿಗೆ ಸಹ ಪ್ರದರ್ಶನ ನೀಡಿರುವ ಖ್ಯಾತಿ ಜಾಕೀರ್ ಹುಸೇನ್‌ಗಿದೆ.
ಜಾಕಿರ್ ಹುಸೇನ್ ಅವರು ಕೇವಲ 11 ನೇ ವಯಸ್ಸಿನಲ್ಲಿ ಅಮೆರಿಕಾದಲ್ಲಿ ತಮ್ಮ ಮೊದಲ ಸಂಗೀತ ಕಛೇರಿಯನ್ನು ನೀಡಿದ್ದರು. ತಬಲಾದಲ್ಲಿ ಪುಟ್ಟ ಮಗುವಿನ ಮಾಂತ್ರಿಕ ಕಲಾತ್ಮಕತೆಯನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. 2016 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ʻಆಲ್ ಸ್ಟಾರ್ ಗ್ಲೋಬಲ್ ಕನ್ಸರ್ಟ್ʼ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಾಕಿರ್ ಹುಸೇನ್ ಅವರನ್ನು ವೈಟ್ ಹೌಸ್‌ಗೆ ಆಹ್ವಾನಿಸಿದ್ದರು. ಅಂತಹ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಕಲಾವಿದ ಎಂಬ ಹೆಗ್ಗಳಿಕೆ ಕೂಡ ಜಾಕಿರ್ ಹುಸೇನ್ ಅರದ್ದಾಗಿದೆ.