ನುಡಿ ನಮನ| ವಿರೋಧಿಗಳೂ ಹೊರಮನಸ್ಸಿನಿಂದ ಒಪ್ಪದಿದ್ದರೂ ಒಳಮನಸಿನಿಂದ ಒಪ್ಪಿಕೊಂಡಿದ್ದಾರೆ...
"ವೈಯಕ್ತಿಕ ತಾರತಮ್ಯಗಳಿದ್ದರೂ ಯಾವುದೇ ಸಾಹಿತಿಗಳು ಅವರನ್ನು ಕನ್ನಡ ಕಾದಂಬರಿ ಲೋಕದಿಂದ ಬದಿಗಿಟ್ಟಿಲ್ಲ. ಬದಿಗಿಡುವುದು ಸಾಧ್ಯವೂ ಇಲ್ಲ.." ಭೈರಪ್ಪ ಅವರಿಗೆ ನುಡಿನಮನ.. ಬರಹಗಾರ ಡಾ. ನಾ. ದಾ. ಶೆಟ್ಟಿ ಅವರ ಲೇಖನ.
ಕನ್ನಡ ಸಾರಸ್ವತ ಲೋಕದಲ್ಲಿ ಕಾದಂಬರಿಗಳನ್ನಷ್ಟೇ ಬರೆದು ಈ ಮಟ್ಟಕ್ಕೆ ಜನಪ್ರಿಯತೆ ಗಳಿಸಿಕೊಂಡಂತಹ ಮತ್ತೊಬ್ಬ ಕಾದಂಬರಿಕಾರ ಇಲ್ಲ. ಬಹಳ ಕಡಿಮೆ ಎಂಬಂತೆ ಅವರು ಸಾಹಿತ್ಯ ವಿಮರ್ಶೆ, ಆತ್ಮ ಕಥನ (ಭಿತ್ತಿ), ಅನುವಾದಗಳನ್ನು ಮಾಡಿದ್ದಾರೆ. ಆದರೆ ಅವರು ಬರೆದ ಕಾದಂಬರಿಗಳನ್ನು ಸಂಖ್ಯೆ ಹಾಗೂ ಗುಣಮಟ್ಟವನ್ನು ಗಮನಿಸಿದರೆ ಅವು ಗೌಣ. ಭೈರಪ್ಪನವರ ಒಂದೊಂದು ಕಾದಂಬರಿಯು ಪ್ರಕಟಗೊಂಡಾಗ ಓದುಗರು ಸಾಲುಗಟ್ಟಿ ನಿಲ್ಲುವ ಕಾಲವೊಂದಿತ್ತು. ಅವರ ಬರವಣಿಗೆಯಲ್ಲಿ ತೇಲು ಬರವಣಿಗೆ ಎಂಬುದಿಲ್ಲ. ಪ್ರತಿಯೊಂದು ಬರವಣಿಗೆ ಹಿನ್ನೆಲೆಯಲ್ಲಿಯೂ ಒಂದು ಅಧ್ಯಯನ ಇರುತ್ತದೆ. ಒಂದು ಕ್ಷೇತ್ರ ಕಾರ್ಯ ಇರುತ್ತದೆ. ಅಲ್ಲದೇ, ಸಂಸ್ಕೃತಿಯ ಗಾಢವಾದ ಪರಿಶೀಲನೆ ಇರುತ್ತದೆ.
ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಅವರ ತಮ್ಮ ಬರವಣಿಗೆಯನ್ನು ಮಾಡುತ್ತಾರೆ. ʼಪರ್ವʼದಂತಹ ಕೃತಿಯಲ್ಲಿ ಅವರ ಗಾಢವಾದ ಪೌರಾಣಿಕ, ಸಾಮಾಜಿಕ ಅಧ್ಯಯನವನ್ನು ಮಿಳಿತಗೊಳಿಸಿರುವುದನ್ನು ನೋಡಬಹುದು. ಇದೊಂದು ಕೇವಲ ಉದಾಹರಣೆ ಅಷ್ಟೇ. ಅವರ ಪ್ರತಿ ಕಾದಂಬರಿಯಲ್ಲಿಯೂ ವಿಶಿಷ್ಟವಾದ ಕ್ರಿಯಾತ್ಮಕ ಶಕ್ತಿ ಅಳವಟ್ಟಿರುತ್ತದೆ. ಹಾಗಾಗಿಯೇ ಸಿನಿಮಾ ನಿರ್ದೇಶಕರು, ಧಾರಾವಾಹಿ ನಿರ್ದೇಶಕರು ಅವರ ಅನೇಕ ಕಾದಂಬರಿಗಳನ್ನು ತಮ್ಮ ಚಿತ್ರಕ್ಕೆ, ಧಾರಾವಾಹಿಗೆ ಬಳಸಿಕೊಂಡಿದ್ದಾರೆ. ಅದು ʼಗೃಹಭಂಗʼ ಇರಬಹುದು, ʼತಬ್ಬಲಿ ನೀನಾದೆ ಮಗನೆʼ ಇರಬಹುದು, ʼವಂಶವೃಕ್ಷʼ ಇರಬಹುದು, ʼನಾಯಿ ನೆರಳುʼ ಇರಬಹುದು. ಒಂದೊಂದು ಕೃತಿಯೂ ಬದುಕಿನ ಒಂದೊಂದು ಆಯಾಮಗಳನ್ನು ಕಂಡರಿಸಿಕೊಂಡು ಹೋಗುವುದರಿಂದ ಅವರ ಯಾವುದೇ ಕಾದಂಬರಿಯಲ್ಲಿ ಪುನಾರವರ್ತನೆ ಕಾಣಿಸಿಕೊಳ್ಳುವುದಿಲ್ಲ. ಹೆಚ್ಚಿನ ಕಾದಂಬರಿಗಳು ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯವಾಗಿವೆ ಎಂಬುದು ಅವರ ಬರವಣಿಗೆಯ ಗುಣಮಟ್ಟವನ್ನು ತಿಳಿಸುತ್ತದೆ.
ಎಸ್.ಎಲ್. ಭೈರಪ್ಪ ಅವರ ಅನೇಕ ಕಾದಂಬರಿಗಳು ಹೊಸ ತರ್ಕಗಳನ್ನು, ಚರ್ಚೆಗಳನ್ನು ಹುಟ್ಟುಹಾಕಿವೆ. ಅವರ ಕೆಲವು ಕೃತಿಗಳಿಗೆ ಸಾವಿರಗಟ್ಟಲೆ ಪುಟಗಳ ವಿಮರ್ಶೆ ನಿರ್ಮಾಣಗೊಂಡದ್ದೂ ಉಂಟು. ಯಾವುದೇ ಕೃತಿಯನ್ನು ಇದು ಭೈರಪ್ಪನವರ ಬರವಣಿಗೆಯ ಮಟ್ಟಕ್ಕೆ ಇಲ್ಲ ಎಂದು ಹೇಳಿ ನಿರಾಕರಿಸುವಂತಿಲ್ಲ. 'ಮಂದ್ರ'ದಂತಹ ಕಾದಂಬರಿಯಲ್ಲಿ ಸಂಗೀತವನ್ನು ತನಗೆ ಗೊತ್ತಿರುವುದಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಕಲಿತು ಅಳವಡಿಸಿಕೊಂಡಿದ್ದು ನೋಡಿದಾಗ ಭೈರಪ್ಪನವರು ಪೂರ್ವತಯಾರಿ ಇಲ್ಲದೆ ಬರವಣಿಗೆ ಮಾಡುವವರಲ್ಲ ಎಂಬುದು ಶ್ರುತಗೊಳ್ಳುತ್ತದೆ. ತಮ್ಮ ಬದುಕಿನ ಒಂದೊಂದು ನಿಮಿಷವನ್ನೂ ವ್ಯರ್ಥಮಾಡದೆ ಅವರು ಬರವಣಿಗೆಗೆ ಬಳಸಿಕೊಂಡಿದ್ದಾರೆ. ಹೊಸ ಕಾದಂಬರಿಯನ್ನು ಬರವಣಿಗೆಗೆ ಕೈಗೆತ್ತಿಕೊಳ್ಳುವಾಗ ಅದರ ಹಿನ್ನೆಲೆ-ಮುನ್ನೆಲೆಗಳನ್ನು ಅಧ್ಯಯನ ಮಾಡುವುದಕ್ಕಾಗಿಯೇ ಒಂದಷ್ಟು ಸಮಯ ವಿನಿಯೋಗಿಸುತ್ತಾರೆ.
ಬದುಕಿನ ಕೊನೆಯ ಹಂತದವರೆಗೂ ಬರವಣಿಗೆ...
ಬದುಕಿನ ಕೊನೆಯ ಹಂತದವರೆಗೆ ಅವರು ಬರವಣಿಗೆ ಮಾಡಿದ್ದಾರೆ. ಅವರ ಮಾತಾದರೂ ಅಷ್ಟೇ ಬಹಳ ನಿಖರ. ಅವರ ಊರಾದ ಸಂತೆಶಿವರದಲ್ಲಿ ಬಹು ಸುಂದರವಾದ ಒಂದು ಕೆರೆಯನ್ನು ನಿರ್ಮಾಣ ಮಾಡಿ ಊರಿನವರಿಗೆ ನೀರುಣಿಸಿ ಸಾರ್ವಜನಿಕ ಸೇವೆ ಮಾಡಿದ್ದಾರೆ. ಅಂದರೆ ತಾವು ಕೇವಲ ಬರವಣಿಗೆ ಮಾಡುವುದು ಅಷ್ಟೇ ಅಲ್ಲ, ಸಾರ್ವಜನಿಕ ಬದುಕಿನಲ್ಲಿಯೂ ತಮ್ಮ ಕೈಲಾದ ಕೆಲಸವನ್ನು ಮಾಡುತ್ತಾರೆ ಎಂಬುದನ್ನು ತೋರಿಸಿದ್ದಾರೆ.
ಎಷ್ಟೋ ಸಂದರ್ಭಗಳಲ್ಲಿ ಬರವಣಿಗೆ ಬಹಳ ನಿಖರವಾಗಿರುತ್ತಿದ್ದರೂ ಅವರೊಬ್ಬ ʼಬಲಪಂಥೀಯ ಬರಹಗಾರʼ ಎಂದು ಹೀಗೆಳೆದವರು ಇದ್ದಾರೆ. ಏನೇ ಆದರೂ ತಾನು ನಂಬಿಕೊಂಡ ಬಂದ ಬದುಕಿನ ಮಾರ್ಗವನ್ನು ಹಾಗೂ ತಮ್ಮ ಅನಿಸಿಕೆಗಳನ್ನು ನೇರ ಮತ್ತು ದಿಟ್ಟವಾಗಿ ಹೇಳುವುದು ಅವರ ಜಾಯಾಮಾನ. ಅಂದಿನಿಂದ ಇಂದಿನ ತನಕ ಅವರು ನಂಬಿಕೊಂಡು ಬಂದಿದ್ದರಲ್ಲಿ ಯಾವುದೇ ಅನಗತ್ಯ ಬದಲಾವಣೆ ಮಾಡಿಕೊಂಡವರಲ್ಲ.
ಮುಂದಿನ ಪೀಳಿಗೆಯಲ್ಲಿ ಇಂತಹ ಒಬ್ಬ ಬರಹಗಾರನನ್ನು ಕಂಡುಕೊಳ್ಳುವುದು ಕಷ್ಟಕರ. ಒಂದು ಕಾಲ ಇತ್ತು, ಸಾಹಿತಿ ಶಿವರಾಮ ಕಾರಂತ ಅವರನ್ನು, ಎಸ್.ಎಲ್. ಭೈರಪ್ಪ ಅವರನ್ನು ಓದದಿರುವ ವಿದ್ಯಾವಂತರು ಈ ನಾಡಿನಲ್ಲಿ ಇರಲಿಲ್ಲ. ಇವತ್ತಿನ ಯುವಜನತೆ ಭೈರಪ್ಪ ಅವರನ್ನು ಮರು ಅಧ್ಯಯನಕ್ಕೆ ಹಚ್ಚಬೇಕಾದ ಅಗತ್ಯ ಇದೆ. ಅವರು ಹೇಳಿದ ಅದೆಷ್ಟೋ ನಿಷ್ಠುರ ವಿಚಾರಗಳನ್ನು ಒರೆಗೆ ಹಚ್ಚಿ ಸತ್ಯಾಂಶವನ್ನು ಕಂಡುಕೊಳ್ಳುವ ಕೆಲಸವನ್ನು ಯುವಜನತೆ ಮಾಡಬೇಕಾಗಿದೆ. ಅವರ ಬದುಕು ಸಾಹಿತ್ಯ ಲೋಕದ ಪಾಲಿಗೆ ಚಿರಂತನ ಆದರ್ಶಮಯ.
ನಾಡಿನಲ್ಲಿ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಕೊಡುವ ಎಲ್ಲಾ ಪ್ರಶಸ್ತಿಗಳು ಅವರಿಗೆ ದೊರಕಿವೆ. ಪ್ರಶಸ್ತಿ ಒಂದೇ ಅವರ ಬರವಣಿಗೆಯ ಮಾನದಂಡವಲ್ಲ. ಜನರ ಹೃದಯದಲ್ಲಿ ಅವರು ಹೇಗೆ ನೆಲೆಗೊಂಡಿದ್ದಾರೆ ಎಂಬುದು ಮುಖ್ಯ. ಯಾವುದೇ ವೈಯಕ್ತಿಕ ತಾರತಮ್ಯಗಳಿದ್ದರೂ ಯಾವುದೇ ಸಾಹಿತಿಗಳು ಭೈರಪ್ಪ ಅವರನ್ನು ಕನ್ನಡ ಕಾದಂಬರಿ ಲೋಕದಿಂದ ಬದಿಗಿಟ್ಟಿಲ್ಲ. ಹಾಗೆ ಬದಿಗಿಡುವುದು ಸಾಧ್ಯವೂ ಇಲ್ಲ. ಅವರ ವಿರೋಧಿಗಳು ಎಂದು ಕರೆಯಿಸಲ್ಪಡುವ ಅನೇಕರು ಅವರನ್ನು ಹೊರಮನಸ್ಸಿನಿಂದ ಒಪ್ಪದಿದ್ದರೂ ಒಳಮನಸಿನಿಂದ ಒಪ್ಪಿಕೊಂಡಿದ್ದಾರೆ. ಅವರು ಶತಾಯುಷಿಯಾಗಬಹುದೆಂದು ಕನಸು ಕಾಣುತ್ತಿದ್ದ ನಾವೆಲ್ಲರೂ ಎಸ್.ಎಲ್. ಭೈರಪ್ಪನವರು ಅದನ್ನು ಅಲ್ಪದರಲ್ಲಿಯೇ ಕೈ ಚೆಲ್ಲಿ ನಮ್ಮಿಂದ ಮರೆಯಾದದ್ದು ದುಃಖದ ವಿಚಾರ.
ಆದರೆ, ಕವಿಯೊಬ್ಬರು ಹೇಳಿದರಂತೆ ʼಅಳಿದರೇನು ದೇಹವಿಂದು, ದಾರಿದೀಪ ಉರಿಯುವುದು ಯುವಜನಾಂಗ ನೆಗೆದು ಬಂದು ತೈಲವದಕೆ ಸುರಿಯುವುದುʼ ಎಂಬಂತೆ ಭೈರಪ್ಪನವರ ಸಂದೇಶಗಳನ್ನು ನಮ್ಮ ಯುವಜನತೆ ನಿರಂತರವಾಗಿ ಮುಂದಕ್ಕೆ ಕೊಂಡೊಯ್ಯಲಿ ಎಂದು ಹಾರೈಸುವೆ.