Delay in Recruitment Part -1| ನೇಮಕಾತಿ ಪ್ರಕ್ರಿಯೆ ಕಗ್ಗಂಟು ; ರಾಜ್ಯವ್ಯಾಪಿ ಹಬ್ಬಲಿದೆಯೇ ವಯೋಮಿತಿ ಬಾಧಿತ ಸ್ಪರ್ಧಾರ್ಥಿಗಳ ಹೋರಾಟದ ಕಿಚ್ಚು?

ತಡೆ ಹಿಡಿದಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮುಂಗಾರು ಅಧಿವೇಶನದಲ್ಲಿ ತಿಳಿಸಿದ್ದರು. ಅವರ ಹೇಳಿಕೆ ಇನ್ನೂ ಕಾರ್ಯರೂಪಕ್ಕೆ ಬರದಿರುವುದು ಸ್ಪರ್ಧಾರ್ಥಿಗಳಲ್ಲಿ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ.

Update: 2025-10-02 03:30 GMT
Click the Play button to listen to article

ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬದಿಂದಾಗಿ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಲ್ಲಿ ವಯೋಮಿತಿ ದಾಟುವ ಆತಂಕವು ಅಸಹನೆಗೆ ಕಾರಣವಾಗಿದೆ. 

ಒಳ ಮೀಸಲಾತಿ ಜಾರಿಯಾದರೂ ನೇಮಕಾತಿ ಪ್ರಕ್ರಿಯೆ ಆರಂಭಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಮೂರು ವರ್ಷ ವಯೋಮಿತಿ ಏರಿಕೆ ಮಾಡಿದ್ದರೂ ಸ್ಪರ್ಧಾರ್ಥಿಗಳಿಗೆ ಸರ್ಕಾರದ ಆದೇಶ ತೃಪ್ತಿ ತಂದಿಲ್ಲ. ಏಕೆಂದರೆ ಕೋವಿಡ್ ಆರಂಭದಿಂದ ಅಂದರೆ ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ಈ ಐದು ವರ್ಷದಲ್ಲಿ ವಯೋಮಿತಿ ದಾಟಿದವರಿಗೆ ಮೂರು ವರ್ಷ ಸಡಿಲಿಕೆ ಯಾವುದೇ ಅನುಕೂಲಸಿಂಧುವಾಗಿಲ್ಲ. ಹಾಗಾಗಿ ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಸಬೇಕು ಎಂಬುದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಆಗ್ರಹವಾಗಿದೆ.

ರಾಜ್ಯದಲ್ಲಿ ನೇಮಕಾತಿ ವಿಳಂಬದಿಂದ ಸ್ಪರ್ಧಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರದ ವಿಳಂಬ ಧೋರಣೆ, ಮೀಸಲಾತಿ ವಿರುದ್ಧದ ಕಾನೂನು ಸಂಘರ್ಷವು ನೇಮಕಾತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ತಂದೊಡ್ಡಿದೆ. ಈ ಕುರಿತಂತೆ 'ದ ಫೆಡರಲ್ ಕರ್ನಾಟಕ' ಇಂದಿನಿಂದ ಸರಣಿ ವರ್ಇ ಪ್ರಕಟಿಸಲಿದೆ.

ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಉದ್ದೇಶದಿಂದ ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಿರಲಿಲ್ಲ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗ ಈಗಾಗಲೇ ಸರ್ಕಾರಕ್ಕೆ ಒಳಮೀಸಲಾತಿ ವರದಿ ನೀಡಿದ್ದು, ಸರ್ಕಾರ ಮೂರು ಪ್ರವರ್ಗಗಳನ್ನು ಸೃಷ್ಠಿಸಿದೆ. ವರದಿ ಜಾರಿಯಾಗಿ ತಿಂಗಳು ಕಳೆದರೂ ನೇಮಕಾತಿ ಪ್ರಕ್ರಿಯೆ ಅರಂಭಿಸದೇ ಇರುವುದು ಸ್ಪರ್ಧಾರ್ಥಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. 

ರಾಜ್ಯದಲ್ಲಿ ಒಟ್ಟು  7.76 ಲಕ್ಷ ಮಂಜೂರಾತಿ ಹುದ್ದೆಗಳಿವೆ. 4.91 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದ 2.84 ಲಕ್ಷಕ್ಕಿಂತಲೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಹೊರಗುತ್ತಿಗೆ ಆಧಾರದ ಮೇಲೆ ಸುಮಾರು 80ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಸರ್ಕಾರಿ ಉದ್ಯೋಗದ ಕನಸು ಹೊತ್ತು ಲಕ್ಷಾಂತರ ಸ್ಪರ್ಧಾರ್ಥಿಗಳು ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ವಿಳಂಬ ನೀತಿಯಿಂದ ಸ್ಪರ್ಧಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.   

ಧಾರವಾಡದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಸ್ಪರ್ಧಾರ್ಥಿಗಳು

ರಾಜ್ಯ ಸರ್ಕಾರದ ವಿಳಂಬ ನೀತಿಗೆ ಬೇಸತ್ತ ಸ್ಪರ್ಧಾರ್ಥಿಗಳು ಶಿಕ್ಷಣ ಕಾಶಿ ಧಾರವಾಡದಲ್ಲಿ ಸೆ.25 ರಂದು ಬೃಹತ್‌ ಹೋರಾಟ ನಡೆಸಿದ್ದರು. ನಗರದ ಕಲ್ಯಾಣ ನಗರ, ನವುಲೆ, ಶ್ರೀನಗರ, ಸಪ್ತಾಪುರ, ಶಿವಗಿರಿ ಹಾಗೂ ನೆಹರೂ ನಗರ ಸೇರಿದಂತೆ ನಗರದಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸುಮಾರು 25 ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.8 ಲಕ್ಷ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಬೇಕು. ವಯೋಮಿತಿ ಹೆಚ್ಚಳ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

ವಿಜಯಪುರದಲ್ಲೂ ಸರ್ಕಾರದ ವಿರುದ್ಧ ಹೋರಾಟ

ದಲಿತ ವಿದ್ಯಾರ್ಥಿ ಪರಿಷತ್‌ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ (ಸೆ.30) ವಿಜಯಪುರದಲ್ಲಿ ಸಾವಿರಾರು ಸ್ಪರ್ಧಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯಬೇಕು. ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಆಶ್ವಾಸನೆಯಂತೆ ಕನಿಷ್ಠ ಒಂದು ಲಕ್ಷ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಬೇಕು.  ಐದು ವರ್ಷ ವಯೋಮಿತಿ ಹೆಚ್ಚಿಸಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗಿದೆ. ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಹೆಚ್ಚು ಖಾಲಿ ಇರುವುದರಿಂದ ಸರ್ಕಾರದ ಯೋಜನೆಗಳೂ ಜನಸಾಮಾನ್ಯರಿಗೆ ತಲುಪುತ್ತಿಲ್ಲ ಎಂದು ಸ್ಪರ್ಧಾರ್ಥಿಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ವಯೋಮಿತಿ ಹೆಚ್ಚಿಸದಿದ್ದರೆ ರಾಜ್ಯಾದ್ಯಂತ ಹೋರಾಟ

ಪೊಲೀಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಶಿವು ಪಾಟೀಲ್‌ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಪೊಲೀಸ್‌ ಇಲಾಖೆಯಲ್ಲಿ ಸಾಮಾನ್ಯ ವರ್ಗದವರಿಗೆ 25 ವರ್ಷ ಹಾಗೂ ಹಿಂದುಳಿದ ವರ್ಗ ಹಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 27 ವರ್ಷ ವಯೋಮಿತಿ ನಿಗದಿಪಡಿಸಿ ನೇಮಕಾತಿಗಳನ್ನು ನಡೆಸುತ್ತಿದೆ. ಆದರೆ ಕೋವಿಡ್‌ ಕಾರಣದಿಂದ ಯಾವುದೇ ನೇಮಕಾತಿ ನಡೆಯದ ಕಾರಣ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಿತ್ತು. ಆದರೆ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಉದ್ದೇಶದಿಂದ ಕಳೆದ ಒಂದು ವರ್ಷದಿಂದ ಯಾವುದೇ ನೇಮಕಾತಿ ನಡೆದಿಲ್ಲ. ಆದ್ದರಿಂದ ಸರ್ಕಾರ ಮುಂದಿನ ನೇಮಕಾತಿಗೆ ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು. ಮಹಾರಾಷ್ಟ್ರ, ತೆಲಂಗಾಣ ಹಾಗೂ ಉತ್ತರ ಪ್ರದೇಶದಲ್ಲಿರುವಂತೆ ಗರಿಷ್ಠ ವಯೋಮಿತಿಯನ್ನು ಸಾಮನ್ಯ ವರ್ಗದವರಿಗೆ 30 ವರ್ಷ ಹಾಗೂ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸ್ಪರ್ಧಾರ್ಥಿಗಳಿಗೆ 33 ವರ್ಷ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ವಯೋಮಿತಿ ಹೆಚ್ಚಳ ಮಾಡುವಂತೆ ಸರ್ಕಾರದ ವಿರುದ್ಧ ಧಾರವಾಡದಲ್ಲಿ ನಡೆದ ಪ್ರತಿಭಟನೆ ಕೇವಲ ಆರಂಭವಷ್ಟೇ, ಸ್ಪರ್ಧಾರ್ಥಿಗಳ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 

ಮಾನಸಿಕವಾಗಿ ಜರ್ಜರಿತರಾದ ಸ್ಪರ್ಧಾರ್ಥಿಗಳು

"ಕೋವಿಡ್‌ ಕಾರಣದಿಂದ ರಾಜ್ಯ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸಿರಲಿಲ್ಲ. ನಂತರ ಕೇವಲ 1 ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಹಾಗೂ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಆದರೆ ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಸ್‌ಡಿಎ, ಎಫ್‌ಡಿಎ ಹುದ್ದೆ ಸೇರಿದಂತೆ ಸಾವಿರಾರು ಗ್ರೂಪ್‌-ಸಿ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಬೆಂಗಳೂರಿನಲ್ಲಿ ಲಕ್ಷಾಂತರ ಸ್ಪರ್ಧಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ಧಾರೆ. ಒಂದು ತಿಂಗಳಿಗೆ ಕನಿಷ್ಠ 10 ಸಾವಿರ ರೂ. ಖರ್ಚಾಗುತ್ತಿದೆ. ಎಲ್ಲರೂ ಮಧ್ಯಮ ಹಾಗೂ ಬಡ ಕುಟುಂಬದಿಂದ ಬಂದಿರುವುದರಿಂದ ಪ್ರತಿ ತಿಂಗಳೂ ಮನೆಯವರ ಬಳಿ ಹಣ ಕೇಳಲು ಸಾಧ್ಯವಿಲ್ಲ. ಹಲವಾರು ವಿದ್ಯಾರ್ಥಿಗಳು ಅರೆಕಾಲಿಕ ಉದ್ಯೋಗ ಮಾಡಿಕೊಂಡು ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸದಿರುವುದರಿಂದ ಸ್ಪರ್ಧಾರ್ಥಿಗಳು ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ" ಎಂದು ಸ್ಪರ್ಧಾರ್ಥಿ ದೇವರಾಜ ಸಿದ್ದಾಪುರ ʼದ ಫೆಡರಲ್‌ ಕರ್ನಾಟಕಕ್ಕೆʼ ತಿಳಿಸಿದರು.

ಎಲ್ಲೆಲ್ಲಿ ಹೋರಾಟಕ್ಕೆ ಸಿದ್ದತೆ?

ಧಾರವಾಡದಲ್ಲಿ ಸುಮಾರು 15ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕೇಂದ್ರಗಳು ಹಾಗೂ ಸುಮಾರು 200 ಕ್ಕೂ ಅಧಿಕ ಗ್ರಂಥಾಲಯಗಳಿದ್ದು ಲಕ್ಷಾಂತರ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ವಯೋಮಿತಿ ಹೆಚ್ಚಳ ಹಾಗೂ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ವಿದ್ಯಾರ್ಥಿ ಸಂಘಟನೆಗಳು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರ ಶೀಘ್ರವಾಗಿ ನೇಮಕಾತಿ ಅಧಿಸೂಚನೆ ಹೊರಡಿಸದಿದ್ದರೆ ಬೆಳಗಾವಿ, ಕಲಬುರಗಿ, ಕೊಪ್ಪಳ ಹಾಗೂ ಬೆಂಗಳೂರಿನಲ್ಲೂ ಬೃಹತ್‌ ಹೋರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿವೆ.

Tags:    

Similar News