Dhootha Sameer MD | ಸಮೀರ್ ವಿರುದ್ಧ ನೊಟೀಸ್‌ಗೆ ನೆಟ್ಟಿಗರಿಂದ ತಿರುಗೇಟು, ಸರ್ಕಾರದ ವಿರುದ್ಧವೂ ಆಕ್ರೋಶ
ಸೌಜನ್ಯ ಅತ್ಯಾಚಾರ ಪ್ರಕರಣ ಸಂಬಂಧ ಯೂಟ್ಯೂಬರ್ ಧೂತ ಸಮೀರ್ ಎಂ.ಡಿ. ಎಂಬಾತ ಅಪ್ಲೋಡ್ ಮಾಡಿದ್ದ ವಿಡಿಯೋ ಆರು ದಿನಗಳಲ್ಲೇ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು, ಟ್ರೋಲ್ ಆಗಿತ್ತು.;
ಪ್ರಗತಿಪರರು ಹಾಗೂ ನೆಟ್ಟಿಗರಿಂದ ಸಿಎಂ ಸಿದ್ದರಾಮಯ್ಯ ಟೀಕೆಗೆ ಒಳಗಾದ ಚಿತ್ರ.,
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸುತ್ತಿದೆ. ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಧೂತ ಸಮೀರ್ ಎಂಬುವರು ಹಾಕಿದ್ದ ವಿಡಿಯೋ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ತೀವ್ರ ಸಂಚಲನ ಸೃಷ್ಟಿಸಿದೆ.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಮೀರ್ ಅವರು ʼಊರಿಗೆ ದೊಡ್ಡವರೇ ಕೊಲೆ ಮಾಡಿದವರಾ?ʼ ಎಂಬ ಶೀರ್ಷಿಕೆಯಡಿ ವಿಡಿಯೋ ಹಾಕಿದ್ದರು. ಸೌಜನ್ಯ ಮೇಲಿನ ಅತ್ಯಾಚಾರ, ಪೊಲೀಸ್ ತನಿಖೆಯ ನಿಷ್ಕ್ರಿಯತೆ, ಮಾನಸಿಕ ಅಸ್ವಸ್ಥನಿಗೆ ಆರೋಪಿ ಪಟ್ಟ ಕಟ್ಟಿದ್ದು ಸೇರಿದಂತೆ ಧರ್ಮಸ್ಥಳದ ಪ್ರಭಾವಿ ವ್ಯಕ್ತಿಯೊಬ್ಬರ ವಿರುದ್ಧದ ಹಲವು ಪ್ರಕರಣಗಳ ಮಾಹಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು.
ವಿಡಿಯೋ ಅಪ್ಲೋಡ್ ಆಗಿ ಆರು ದಿನಗಳಲ್ಲೇ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದು, ವಿಡಿಯೋ ಹೆಚ್ಚು ಟ್ರೋಲ್ ಆಗಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಯೂಟ್ಯೂಬರ್ ಸಮೀರ್ ಅವರಿಗೆ ಬೆದರಿಕೆ ಕರೆಗಳು ಬರಲಾರಂಭಿಸಿದವು. ಪೊಲೀಸ್ ಇಲಾಖೆ ಕೂಡ ಸಮೀರ್ ಅವರಿಗೆ ನೋಟಿಸ್ ನೀಡಿ, ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿದ ನಂತರ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್
ಸಮೀರ್ ಎಂ.ಡಿ. ಅವರು ಹಾಕಿರುವ ಸೌಜನ್ಯ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರಕ್ಕೂ ಕಾರಣವಾಗಿದೆ. ಕೆಲವರು ಸಮೀರ್ ಮಾಡಿರುವ ವಿಡಿಯೋಗೆ ಧರ್ಮದ ಬಣ್ಣ ಲೇಪಿಸಲು ಆರಂಭಿಸಿದ್ದಾರೆ. ಮತ್ತೆ ಕೆಲವರು ಸಮೀರ್ ಕೆಲಸವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಜೊತೆ ಇರುವುದಾಗಿ ಧೈರ್ಯ ತುಂಬಿದ್ದಾರೆ.
ಈ ಮಧ್ಯೆ, ಸೌಜನ್ಯ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ಹಲವರು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಸೌಜನ್ಯ ಅತ್ಯಾಚಾರ ಪ್ರಕರಣದ ನಿಜವಾದ ಆರೋಪಿಗಳನ್ನು ಶಿಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಯೂಟ್ಯೂಬರ್ ಸಮೀರ್ ಎಂ.ಡಿ. ಅವರಿಗೆ ನೋಟಿಸ್ ನೀಡಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರ ಕ್ರಮವನ್ನೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜನರು ಸೌಜನ್ಯ ಅತ್ಯಾಚಾರ ಪ್ರಕರಣದ ಕುರಿತು ವಿಡಿಯೋ ಮಾಡಿರುವ ಸಮೀರ್ ಅವರಿಗೆ ಧನ್ಯವಾದ ಅರ್ಪಿಸಿದ್ದು, ತುಳು ನಾಡಿನ ದೈವಗಳ ಆಶೀರ್ವಾದ ನಿಮಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಸಿಎಂ ವಿರುದ್ಧ ನೆಟ್ಟಿಗರ ಕಿಡಿ
ಧರ್ಮಸ್ಥಳದಲ್ಲಿ ಶರ್ಟ್ ತೆಗೆದು ದರ್ಶನಕ್ಕೆ ತೆರಳಿದ್ದ ಫೋಟೊ ಹಾಕಿ ನೆಟ್ಟಿಗರ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿದ್ದರೂ ಸಮರ್ಪಕ ತನಿಖೆ ನಡೆಸದ ಸಿದ್ದರಾಮಯ್ಯ ಅವರು ಆರೋಪಿಗಳ ಎದುರು ಶರಣಾದವರಂತೆ ನಡೆದುಕೊಂಡಿದ್ದಾರೆ. ಹೆಣ್ಣು ಮಗಳಿಗೆ ಆಗಿರುವ ಅನ್ಯಾಯಕ್ಕೆ ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸೌಜನ್ಯ ಪ್ರಕರಣದ ಪರ ನಿಂತ ಎನ್‌ಎಸ್‌ಎಂ
ದಕ್ಷಿಣ ಕನ್ನಡ ಜಿಲ್ಲೆಯ 17 ವರ್ಷದ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ನಿಜವಾದ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕ್ರಮಕ್ಕೆ ನ್ಯಾಷನಲ್ ಕಮಿಷನ್ ಫಾರ್ ಮೆನ್ ಎಂಬ ಸಂಘಟನೆ ಕೂಡ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣದಲ್ಲಿ ಪೊಲೀಸರು ಅಮಾಯಕ ಸಂತೋಷ್ ರಾವ್ ಎಂಬಾತನನ್ನು ಬಂಧಿಸಿ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಿದರು. ಆದರೆ, ಸಿಬಿಐ ನ್ಯಾಯಾಲಯವು ಸಂತೋಷ್ ರಾವ್ ಅವರನ್ನು ನಿರ್ದೋಷಿ ಎಂದು ಘೋಷಿಸಿತು. ಅಮಾಯಕ ಸಂತೋಷ್ ರಾವ್ ಮಾಡದ ತಪ್ಪಿಗೆ 11 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ನಿಜವಾದ ಅಪರಾಧಿಗಳು ಇನ್ನೂ ಮುಕ್ತವಾಗಿ ತಿರುಗಾಡುತ್ತಿದ್ದಾರ. ಸೌಜನ್ಯಾಳ ಆತ್ಮ ಮತ್ತು ಅವರ ಕುಟುಂಬ ಇನ್ನೂ ನ್ಯಾಯಕ್ಕಾಗಿ ಪರಿತಪಿಸುತ್ತಿದೆ ಎಂದು ಪೋಸ್ಟ್ ಹಾಕಿದ್ದಾರೆ.
ಒಂದೆಡೆ ಸಾವಿರಾರು ಅಮಾಯಕ ಪುರುಷರು ಅತ್ಯಾಚಾರ ಪ್ರಕರಣಗಳಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದರೆ, ಅತ್ಯಾಚಾರ ಮತ್ತು ಕೊಲೆಯ ಭೀಕರ ಘಟನೆಯ ಬಲಿಪಶುಗಳಿಗೆ ಎಂದಿಗೂ ನ್ಯಾಯ ಸಿಗುವುದಿಲ್ಲ. ಕಠಿಣ ಮತ್ತು ಕ್ರೂರ ಕಾನೂನುಗಳನ್ನು ರೂಪಿಸುವುದರಿಂದ ಬಲಿಪಶುಗಳಿಗೆ ಎಂದಿಗೂ ನ್ಯಾಯ ಸಿಗುವುದಿಲ್ಲ, ಬದಲಿಗೆ ಅದರ ಅನುಷ್ಠಾನದ ವಿಷಯಗಳು ಮುಖ್ಯ. ಪ್ರತಿಯೊಂದು ನಕಲಿ ಅತ್ಯಾಚಾರ ಪ್ರಕರಣವು ನಿಜವಾದ ಬಲಿಪಶುಗಳಿಗೆ ನ್ಯಾಯದ ಹಾದಿಯನ್ನು ಕಠಿಣಗೊಳಿಸುತ್ತದೆ ಎಂದು ದೂರಿದೆ.