Sowjanya Case | ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ವಿಡಿಯೊ ಬ್ಲಾಕ್‌; ಹೈಕೋರ್ಟ್‌ ಆದೇಶ

ಧರ್ಮಸ್ಥಳದ ಎ ಎಸ್‌ ಸುಖೇಶ್‌ ಮತ್ತು ಶೀನಪ್ಪ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎಸ್‌ ನಟರಾಜ್‌ ವಿಚಾರಣೆ ನಡೆಸಿ, ಆದೇಶ ಮಾಡಿದ್ದಾರೆ.;

Update: 2025-03-21 14:27 GMT
Sowjanya Case | ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ವಿಡಿಯೊ ಬ್ಲಾಕ್‌; ಹೈಕೋರ್ಟ್‌ ಆದೇಶ

ಸೌಜನ್ಯ ಪ್ರಕರಣದ ಕುರಿತಂತೆ ಧೂತ ಸಮೀರ್‌ ಧೂತ ಮತ್ತೊಂದು ವಿಡಿಯೋ ರಿಲೀಸ್‌ ಮಾಡಿದ್ದಾರೆ. 

ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿರುವ ಸೌಜನ್ಯ ಪ್ರಕರಣ ಸಂಬಂಧ ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ಎಂಬ ಹೆಸರಿನಲ್ಲಿ ಎಂ ಡಿ ಸಮೀರ್‌ ತನ್ನ ʼಧೂತʼ ಯೂಟ್ಯೂಬ್‌ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೊವನ್ನು ತೆಗೆಯಲು ಬೆಂಗಳೂರಿನ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ, ವಿಡಿಯೊವನ್ನು ಯೂಟ್ಯೂಬ್‌ನಿಂದ ತೆಗೆಯಲಾಗಿದೆ.

ಧರ್ಮಸ್ಥಳದ ಎ ಎಸ್‌ ಸುಖೇಶ್‌ ಮತ್ತು ಶೀನಪ್ಪ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎಸ್‌ ನಟರಾಜ್‌ ವಿಚಾರಣೆ ನಡೆಸಿ, ಆದೇಶ ಮಾಡಿದ್ದಾರೆ.

ಎಂ ಡಿ ಸಮೀರ್‌, ಧೂತ ಸಮೀರ್‌ ಎಂ ಡಿ ಯೂಟ್ಯೂಬ್‌ ಚಾನಲ್‌, ಸಮೀರ್‌ ಎಂ ಡಿ ಯೂಟ್ಯೂಬ್‌ ಚಾನಲ್‌ ಮತ್ತು ಅವರ ಹಿಂಬಾಲಕರು ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದ ಯಾವುದೇ ರೀತಿಯಾದ ಆಧಾರರಹಿತ ಸುದ್ದಿ/ಮಾಹಿತಿ/ವಿಚಾರ ಪ್ರಸಾರ/ಹಂಚಿಕೆ ಮಾಡಬಾರದು ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಯೂಟ್ಯೂಬ್‌ ಎಲ್‌ಎಲ್‌ಸಿ, ಇನ್‌ಸ್ಟಾಗ್ರಾಂ ಎಲ್‌ಎಲ್‌ಸಿ, ಫೇಸ್‌ಬುಕ್‌, ಗೂಗಲ್‌, ಮೆಟಾದಲ್ಲಿ ಮಾಡಿರುವ ಆಧಾರರಹಿತ ಆರೋಪಗಳನ್ನು ಉಲ್ಲೇಖಿತ ಯುಆರ್‌ಎಲ್‌ಗಳನ್ನು ತೆಗೆದುಹಾಕಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.

ಸುಖೇಶ್‌ ಮತ್ತು ಶೀನಪ್ಪ ಅವರನ್ನು ಪ್ರತಿನಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ಸಮೀರ್‌ ಮಾಡಿರುವ ವಿಡಿಯೊವನ್ನು ವೀರೇಂದ್ರ ಹೆಗ್ಗಡೆ ಅವರ ವಿರುದ್ಧವಾಗಿರುವವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಮೀರ್‌ ಅವರು ಹೆಗ್ಗೆಡೆ ಕುಟುಂಬದ ವಿರುದ್ಧ ಹಗೆತನ ಹೊಂದಿರುವವರ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಸಂವಿಧಾನದ 19(1)(ಎ) ವಿಧಿಯಡಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಭ್ಯವಿದ್ದರೂ ಸಂವಿಧಾನದ 19(2)ನೇ ವಿಧಿ ಅಡಿ ಪರಿಪೂರ್ಣವಲ್ಲ. ಸಕಾರಣಗಳಿದ್ದಾಗ ಅದನ್ನು ನಿರ್ಬಂಧಿಸಬಹುದಾಗಿದ್ದು, ಮಾನಹಾನಿಯಂಥ ಸಂದರ್ಭದಲ್ಲಿ ನಿರ್ಬಂಧಿಸಬಹುದಾಗಿದೆ. ಸಮೀರ್‌ ವಿಡಿಯೊದಲ್ಲಿನ ವಿಷಯವು ಸುಳ್ಳಾಗಿದ್ದು, ಅದು ಮಾನಹಾನಿಯಾಗಿದೆ” ಎಂದು ಆಕ್ಷೇಪಿಸಿದ್ದರು.

ಈ ಹಿನ್ನೆಲೆಯಲ್ಲಿ ಸಮೀರ್‌ ಯೂಟ್ಯೂಬ್‌ ಚಾನಲ್‌ನಿಂದ ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ವಿಡಿಯೊವನ್ನು ತೆಗೆದು ಹಾಕಲಾಗಿದ್ದು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿಡಿಯೊ ತೆಗೆಯಲಾಗಿದೆ ಎಂಬ ಒಕ್ಕಣೆ ಬರುತ್ತಿದೆ. 27-02-2025ರಂದು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದ್ದ‌ ಈ ವಿಡಿಯೊವನ್ನು ಸರಿಸುಮಾರು 2 ಕೋಟಿ ಮಂದಿ ವೀಕ್ಷಿಸಿದ್ದಾರೆ.

Tags:    

Similar News