ಆರ್‌ಎಸ್‌ಎಸ್‌ ಕಚೇರಿ ಬಳಿ ಯುವ ಕಾಂಗ್ರೆಸ್‌ ಪ್ರತಿಭಟನೆ, ಸರ್ಕಾರದ ವಿರುದ್ಧ ಬಿಜೆಪಿ ಪತ್ರ ಸಮರ

ಪೋಲೀಸ್ ಇಲಾಖೆ ಸ್ವತಂತ್ರವಾಗಿ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಬೇಕು. ಆದರೆ ಇಲಾಖೆ ಯಾವ ಮುಂಜಾಗ್ರತೆ ವಹಿಸದೇ ನಿರ್ಲಕ್ಷ ತೋರಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

Update: 2025-10-17 15:51 GMT

ಯುವ ಕಾಂಗ್ರೆಸ್‌ ಕಾರ್ಯಕರ್ತರು ಆರ್‌ಎಸ್‌ಎಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Click the Play button to listen to article

ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಹೆಸರಿನಲ್ಲಿ ಕಿಡಿಗೇಡಿಗಳ ಗುಂಪೊಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ರಾಜ್ಯ ಕಚೇರಿ ಕೇಶವ ಕೃಪಾ ಎದುರು ಪ್ರತಿಭಟನೆ ನಡೆಸಿದೆ. ಇದನ್ನು ತಡೆಯುವಲ್ಲಿ ಪೊಲೀಸ್‌ ಇಲಾಖೆ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ನಗರ ಪೊಲೀಸ್‌ ಕಮಿಷನರ್‌ಗೆ ಪತ್ರ ಬರೆದಿರುವ ಬಿಜೆಪಿ ನಾಯಕರು, ಪೋಲೀಸ್ ಇಲಾಖೆ ಸ್ವತಂತ್ರವಾಗಿ, ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಬೇಕು. ಆದರೆ, ಇಲಾಖೆ ಯಾವ ಮುಂಜಾಗ್ರತೆ ವಹಿಸದೇ ನಿರ್ಲಕ್ಷ ತೋರಿದೆ. ರಾಜ್ಯ ಸರ್ಕಾರ ಇಲಾಖೆಗಳ ಕಾರ್ಯವ್ಯಾಪ್ತಿಯಲ್ಲಿ ಅನಗತ್ಯ ಹಸ್ತಕ್ಷೇಪ ನಡೆಸುತ್ತಿರುವುದು ಈ ಘಟನೆಗೆ ಕಾರಣವಾಗಿದೆ ಎಂದಿದ್ದಾರೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈ ಬಗ್ಗೆ ತುರ್ತು ನಿಗಾ ವಹಿಸಬೇಕು. ಸ್ವಾತಂತ್ರ್ಯ ಉದ್ಯಾನ ಬಿಟ್ಟು ಬೇರೆಡೆ ಪ್ರತಿಭಟನೆ ನಡೆಸಬಾರದು ಎಂಬ ಸರ್ಕಾರದ ಆದೇಶವನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಉಲ್ಲಂಘಿಸಿದ್ದಾರೆ. ಆಮಾಯಕ ಯುವಕರನ್ನು ಕರೆತಂದು ಮಾಧ್ಯಮ ಕಾರ್ಯಕ್ರಮ ಮಾಡಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಮೌನ ಪ್ರೇಕ್ಷಕರಾಗಿರುವುದು ಇಲಾಖೆಯ ಘನತೆಯನ್ನು ಮಣ್ಣುಪಾಲು ಮಾಡಿದೆ ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಶತಮಾನೋತ್ಸವದ ಸಂಭ್ರಮದಲ್ಲಿ ವರ್ಷವಿಡೀ ನೂರಾರು ಸಮಾಜಮುಖಿ ಕಾರ್ಯಕ್ರಮಗಳ ಯೋಜನೆ ರೂಪಿಸುತ್ತಿದೆ. ಈ ಐತಿಹಾಸಿಕ ಸಂಘಟನೆಯ ಎದುರು ಕಿಡಿಗೇಡಿತನಕ್ಕೆ ಪೋಲೀಸ್ ಇಲಾಖೆ ಅವಕಾಶ ಕೊಡಬಾರದು. ಆರ್‌ಎಸ್‌ಎಸ್‌ ಬಗ್ಗೆ ತಕರಾರುಗಳಿದ್ದರೆ ಮಾಧ್ಯಮಗಳಲ್ಲಿ ಚರ್ಚಿಸಲು ಮುಕ್ತ ಅವಕಾಶವಿದೆ. ಪ್ರತಿಭಟನೆಯೇ ಮಾಡುವುದಿದ್ದರೆ ಸರ್ಕಾರದ ವ್ಯವಸ್ಥೆಯೊಳಗೆ ಮಾಡಬಹುದು.

ರಾಜ್ಯ ಸರ್ಕಾರ ಈ ಬಗ್ಗೆ ತುರ್ತು ಗಮನ ಕೊಟ್ಟು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಮತ್ತೊಮ್ಮೆ ಈ ರೀತಿ ಘಟನೆಗಳು ಮರುಕಳಿಸಿದರೆ ಸರ್ಕಾರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಏನಿದು ಪ್ರತಿಭಟನೆ ?

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರ ಹೇಳಿಕೆಗಳ ವಿರುದ್ಧ ಮತ್ತು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸರ್ಕಾರ ನಿಷೇಧಿಸಿರುವ ನಿಲುವಿಗೆ ಬೆಂಬಲವಾಗಿ. ರಾಜ್ಯ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ನಗರದ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌ ಕಚೇರಿಗೆ ಮುತ್ತಿಗೆ ಹಾಕಲು ಶುಕ್ರವಾರ(ಅ.17) ಯತ್ನಿಸಿದ್ದರು. 

ಕಲಬುರಗಿಯಲ್ಲೂ ಪ್ರತಿಭಟನೆ

ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಿ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಇದನ್ನು ವಿರೋಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ಘಟಕವು ಇತ್ತೀಚೆಗೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಪ್ರತಿಭಟನಾಕಾರರು 'ಆರ್‌ಎಸ್‌ಎಸ್‌ ನಿಷೇಧಿಸಿ' ಎಂದು ಘೋಷಣೆಗಳನ್ನು ಕೂಗುತ್ತಾ, ಅದರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿದ್ದರು.

Tags:    

Similar News