ಬೆಟ್ಟದಲಸೂರು ನಿಲ್ದಾಣಕ್ಕೆ ನೀವೇ ಹಣ ಕೊಡಿ, 'ಮುನಿರತ್ನ & ಕಂಪನಿ' ಅಂತ ಹೆಸರಿಡೋಣ: ಡಿಕೆಶಿ

"ಎಂಬೆಸಿ ಸಂಸ್ಥೆಯು ಹಣ ನೀಡದ ಕಾರಣಕ್ಕೆ ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣವನ್ನು ಕೈಬಿಟ್ಟಿರುವುದು ಎಷ್ಟು ಸರಿ?" ಎಂದು ಶಾಸಕ ಮುನಿರತ್ನ ಸರ್ಕಾರವನ್ನು ಪ್ರಶ್ನಿಸಿದರು.;

Update: 2025-08-12 14:44 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕ ಮುನಿರತ್ನ

ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣ ವಿಚಾರ ವಿಧಾನಸಭೆಯಲ್ಲಿ ಮಂಗಳವಾರ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ನಿಲ್ದಾಣ ನಿರ್ಮಾಣಕ್ಕೆ ಶಾಸಕ ಮುನಿರತ್ನ ಅವರೇ ಹಣ ನೀಡಿದರೆ, ಅದಕ್ಕೆ "ಮುನಿರತ್ನ ಆ್ಯಂಡ್ ಕಂಪನಿ" ಎಂದು ಹೆಸರಿಡಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೇವಡಿ ಮಾಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಮುನಿರತ್ನ, "ಎಂಬೆಸಿ ಸಂಸ್ಥೆಯು ಹಣ ನೀಡದ ಕಾರಣಕ್ಕೆ ಬೆಟ್ಟದಲಸೂರು ಮೆಟ್ರೋ ನಿಲ್ದಾಣ ನಿರ್ಮಾಣವನ್ನು ಕೈಬಿಟ್ಟಿರುವುದು ಎಷ್ಟು ಸರಿ?" ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, "ಸಿಎಸ್ಆರ್ ನಿಧಿಯಡಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವ ಪರಿಕಲ್ಪನೆಯನ್ನು ಪ್ರಧಾನಿ ಮೋದಿ ಅವರೇ ಶ್ಲಾಘಿಸಿದ್ದಾರೆ. ಇನ್ಫೋಸಿಸ್, ಡೆಲ್ಟಾ ಸೇರಿದಂತೆ ಹಲವು ಕಂಪನಿಗಳು ಈ ರೀತಿ ಸಹಕರಿಸಿವೆ. ಪಾಪ, ಮುನಿರತ್ನ ಅವರಿಗೆ ಆ ಭಾಗದಲ್ಲಿ 70ರಿಂದ 80 ಎಕರೆ ಜಮೀನಿದ್ದು, ಅವರ ಜಮೀನಿನ ಪಕ್ಕ ನಿಲ್ದಾಣ ಬೇಕಾಗಿದೆ. ಅದಕ್ಕಾಗಿಯೇ ಈ ಪ್ರಶ್ನೆ ಕೇಳುತ್ತಿದ್ದಾರೆ" ಎಂದು ಕುಟುಕಿದರು.

ಶಿವಕುಮಾರ್ ಅವರ ಮಾತಿನಿಂದ ಕೆರಳಿದ ಮುನಿರತ್ನ, "ಬೆಂಗಳೂರಿನಲ್ಲಿ ಬಿಲ್ಡರ್​ಗಳು ನಿಮ್ಮ ಮಾತನ್ನು ಮಾತ್ರ ಕೇಳುತ್ತಾರೆ. ನೀವು ಎಂಬೆಸಿ ಸಂಸ್ಥೆಗೆ ಕರೆ ಮಾಡಿ 24 ಗಂಟೆಯಲ್ಲಿ ಹಣ ಕಟ್ಟುತ್ತೀರಾ ಇಲ್ಲವೋ ಎಂದು ಕೇಳಿದರೆ ಸಾಕು, ಅವರು ಹಣ ಕಟ್ಟುತ್ತಾರೆ" ಎಂದು ತಿರುಗೇಟು ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಡಿಕೆಶಿ, "ಮನುಷ್ಯನಿಗೆ ಸ್ವಾರ್ಥ ಸಹಜ. ಎಂಬೆಸಿ ಸಂಸ್ಥೆಯು 140 ಕೋಟಿ ರೂ. ವೆಚ್ಚದ ನಿಲ್ದಾಣಕ್ಕೆ 120 ಕೋಟಿ ನೀಡುವುದಾಗಿ ಹೇಳಿ, ಕೇವಲ 1 ಕೋಟಿ ನೀಡಿದೆ. ಮುನಿರತ್ನ ಅವರದ್ದೇ 70ರಿಂದ 80 ಎಕರೆ ಜಮೀನು ಅಲ್ಲಿದೆ. ಬೇಕಿದ್ದರೆ ಅವರೇ ಹಣ ಕೊಡಲಿ, ನಿಲ್ದಾಣಕ್ಕೆ 'ಮುನಿರತ್ನ ಆ್ಯಂಡ್​ ಕಂಪನಿ' ಎಂದು ಹೆಸರಿಡೋಣ" ಎಂದು ಹೇಳಿದರು.

ಎಂಬೆಸಿಗೆ ಧಮ್ಕಿ ಹಾಕಿ

ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, "ಈಗಾಗಲೇ ಒಪ್ಪಂದ ಆಗಿರುವುದರಿಂದ, ಬಾಕಿ ಹಣ ವಸೂಲಿ ಮಾಡಲು ಡಿಸಿಎಂ ಅವರು ಎಂಬೆಸಿಗೆ ಧಮ್ಕಿ ಹಾಕಲಿ ಎಂಬುದಷ್ಟೇ ಮುನಿರತ್ನರ ಉದ್ದೇಶ" ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, "ನಾನೇಕೆ ಧಮ್ಕಿ ಹಾಕಲಿ? ಬೇಕಿದ್ದರೆ ಒಪ್ಪಂದವನ್ನೇ ರದ್ದು ಮಾಡೋಣ" ಎಂದರು.

"ಈ ನಿಲ್ದಾಣದ ಕುರಿತು ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡರು ನನ್ನೊಂದಿಗೆ ಚರ್ಚಿಸಿದ್ದಾರೆ. ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇಷ್ಟೇ ವ್ಯತ್ಯಾಸ" ಎಂದು ಹೇಳುವ ಮೂಲಕ ಶಿವಕುಮಾರ್ ಚರ್ಚೆಗೆ ಅಂತ್ಯ ಹಾಡಿದರು.

ಅಶ್ವತ್ಥ್ ನಾರಾಯಣರ ಸಲಹೆಗೆ ಸ್ವಾಗತ

ಇದೇ ವೇಳೆ, ಬೆಂಗಳೂರಿನ ಮಳೆನೀರು ನಿರ್ವಹಣೆ ಕುರಿತು ಮಾತನಾಡಿದ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ, "ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಿ, ಮಳೆನೀರು ಇಂಗುಬಾವಿಗಳನ್ನು ನಿರ್ಮಿಸಬೇಕು" ಎಂದು ಸಲಹೆ ನೀಡಿದರು. ಅವರ ಸಲಹೆಯನ್ನು ಸ್ವಾಗತಿಸಿದ ಡಿ.ಕೆ. ಶಿವಕುಮಾರ್, "ಅಶ್ವತ್ಥ ನಾರಾಯಣ ಅವರು ಅನುಭವಿಗಳು. ಅವರ ಸಲಹೆಗಳನ್ನು ಸ್ವೀಕರಿಸಲು ಸಿದ್ಧ. ಮಳೆನೀರು ಇಂಗಿಸುವಿಕೆ ಮತ್ತು ಒತ್ತುವರಿ ತೆರವು ಕುರಿತು ನಾವು ಚರ್ಚಿಸಿ ಸೂಕ್ತ ನೀತಿ ರೂಪಿಸೋಣ" ಎಂದು ಭರವಸೆ ನೀಡಿದರು.

Tags:    

Similar News