Na D'Souza | ಜೀವಮಿಡಿತ ನಿಲ್ಲಿಸಿದ ಮಲೆನಾಡಿನ ದನಿ; ನಾಡೋಜ 'ನಾಡಿ' ಇನ್ನಿಲ್ಲ

ಹಿರಿಯ ಸಾಹಿತಿ, ನಾಡಿನ ಸಾಕ್ಷಿಪ್ರಜ್ಞೆ ನಾಡೋಜ ನಾ ಡಿಸೋಜ ಅವರು ನಿಧನರಾಗಿದ್ದಾರೆ.;

Update: 2025-01-05 16:51 GMT

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಾಡಿನ ಹಿರಿಯ ಸಾಹಿತಿ ನಾಡೋಜ ಡಾ.ನಾ ಡಿಸೋಜ (87) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದ್ದಾರೆ.

ಇತ್ತೀಚೆಗೆ ನಾ.‌(ನಾರ್ಬರ್ಟ್)  ಡಿಸೋಜ ಅವರು ತಮ್ಮ  ಪುತ್ರಿಯ ಜತೆ  ಮಂಗಳೂರಿನಲ್ಲಿ ವಾಸವಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು, ಮಡಿಕೇರಿಯಲ್ಲಿ ನಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಸೋಮವಾರ ಸಂಜೆ ಸಾಗರದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಂಗಳವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಡಿಸೋಜಾ ಅವರು 1937ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಜನಿಸಿದ್ದರು. ನಾ. ಡಿಸೋಜಾ ಅವರು ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.

ಇವರ ಕಥೆಗಳು ಸುರೇಶ್ ಹೆಬ್ಳೀಕರ್ ನಿರ್ದೇಶನದಲ್ಲಿ ‘ಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ‘ದ್ವೀಪ’ ಚಲನಚಿತ್ರವಾಗಿದೆ. ‘ಕಾಡಿನ ಬೆಂಕಿ’ ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ , ‘ದ್ವೀಪ’ ಚಿತ್ರ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ.

ಮುಳುಗಡೆ, ದ್ವೀಪ, ಕೊಳಗ, ಕೆಂಜಾಲು ಕಣಿವೆಯ ಹೂ, ಕಾಡಿನ ಬೆಂಕಿ, ಒಡ್ಡು, ನಡುವೆ ನಿಂತ ಜನ, ಮುಂತಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಹೆಜ್ಜೆಗುರುತುಗಳನ್ನು ಮೂಡಿಸಿರುವ ನಾಡೋಜ ನಾ ಡಿಸೋಜ ಅವರು ತಮ್ಮ ಜನಪರ ಕಾಳಜಿ, ಪರಿಸರಪರ ಧೋರಣೆ ಹಾಗೂ ಶರಾವತಿ ಮುಳುಗಡೆ ಸಂತ್ರಸ್ತರ ಪರ ದನಿಯ ಕಾರಣಕ್ಕೆ ಜನಸಾಮಾನ್ಯರ ಲೇಖಕನಾಗಿ, ಮಲೆನಾಡಿನ ಜೀವ ದನಿಯಾಗಿ 'ನಾಡಿ' ಎಂದೇ ಜನಪ್ರಿಯರಾಗಿದ್ದರು.

ಮಲೆನಾಡಿನ ಮಹತ್ವದ ಶರಾವತಿ ಉಳಿಸಿ ಹೋರಾಟ, ತುಂಗಾ ಮೂಲ ಉಳಿಸಿ ಹೋರಾಟ ಸೇರಿದಂತೆ ಹಲವು ಚಾರಿತ್ರಿಕ ಹೋರಾಟಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು ನಾಡಿನ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡಿದ್ದರು.

Tags:    

Similar News