ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾದ ಮಂಡಳಿಯಲ್ಲಿ ಹಲವು ಲೋಪ; ಸಿಎಜಿ ವರದಿ ಆರೋಪ

ಕಾರ್ಮಿಕರ ಕಲ್ಯಾಣ ಮಂಡಳಿಯು ನಿಮಯಗಳ ಅನುಸರಣೆ ಮತ್ತು ದಾಖಲೆಗಳ ಪುಸ್ತಕಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಆಂತರಿಕ ಆಡಿಟ್‌ ವಿಭಾಗ ಸ್ಥಾಪನೆ ಮಾಡದಿಲ್ಲ ಎಂದು ಸಿಎಜಿ ಹೇಳಿದೆ.;

Update: 2025-08-20 12:15 GMT

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಿಮಯಗಳ ಅನುಸರಣೆ ಮತ್ತು ದಾಖಲೆಗಳ ಪುಸ್ತಕಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಆಂತರಿಕ ಆಡಿಟ್‌ ವಿಭಾಗ ಸ್ಥಾಪನೆ ಮಾಡದಿರುವುದು ಸೇರಿದಂತೆ ಹಲವು ಲೋಪಗಳನ್ನು ಹೊಂದಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ (ಸಿಎಜಿ) ತಿಳಿಸಿದೆ. 

ವಿಧಾನಸಭೆಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣದ ಕುರಿತು ವರದಿಯನ್ನು ಮಂಡಿಸಲಾಯಿತು. ವರದಿಯಲ್ಲಿ ಸುಪ್ರೀಂಕೋರ್ಟ್‌ನಿಂದ ನಿರ್ದೇಶನಗಳನ್ನು ಹೊರಡಿಸಿದರೂ ಯಾವುದೇ ಸಾಮಾಜಿಕ ಲೆಕ್ಕಪರಿಶೋಧನಾ ಚಟುವಟಿಕೆಗಳನ್ನು ಪ್ರಾರಂಭಿಸಿಲ್ಲ. ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿಯು ಸ್ಥಾಪನೆಯಾದ ನಂತರ ಒಂದೇ ಒಂದು ಸಭೆಯನ್ನು ಕರೆದಿಲ್ಲ. ಇದು ಸುಪ್ರೀಂಕೋರ್ಟ್‌ ಮತ್ತು ಕರ್ನಾಟಕ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ತಿಳಿಸಲಾಗಿದೆ. 

ಕಾರ್ಮಿಕ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಮಂಡಳಿಯು ಪ್ರತಿವರ್ಷ ಕನಿಷ್ಠ ನಾಲ್ಕು ಬಾರಿ ಸಭೆಗಳನ್ನು ಕರೆಯುವ ಕಡ್ಡಾಯ ಅಗತ್ಯವನ್ನು ಪೂರೈಸಿಲ್ಲ. ಪರಿಣಾಮ ಪ್ರಮುಖ ವಿಷಯಗಳ ಚರ್ಚೆ, ತೀರ್ಮಾನ ತೆಗೆದುಕೊಳ್ಳುವುದು ಮತ್ತು ಕಲ್ಯಾಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ವಿಳಂಬಕ್ಕೆ ಕಾರಣವಾಗಿದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5.27 ಕೋಟಿ ರೂ. ಜಮಾವಣೆಯನ್ನು ಮಂಡಳಿಯು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದು ಹೇಳಿದೆ. 

ಮಂಡಳಿಯು 2007-08ರಿಂದ 18.12 ಕೋಟಿ ರೂ. ಮೊತ್ತದ ಒಟ್ಟು 9,654 ದೋಷಪೂರಿತ ಚೆಕ್‌ಗಳು/ಡಿಮಾಂಡ್‌ ಡ್ರಾಫ್ಟ್‌ಗಳನ್ನು ಹಿಂದಿರುಗಿದೆ. ಈ ಚೆಕ್‌ಗಳು ಮತ್ತು ಡಿಮ್ಯಾಂಡ್‌ ಡ್ರಾಫ್ಟ್‌ಗಳನ್ನು ಪತ್ತೆ ಹಚ್ಚಲು ಸಿಎಜಿ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ. 2018-19ರಿಂದ 2022-23ರ ಅವಧಿಯಲ್ಲಿ ಮಂಡಳಿ ರವಾನೆ ಮಾಡಿರುವ ಮೊತ್ತ ಮತ್ತು ಮಂಡಳಿಯಿಂದ ಪಡೆದ ಮೊತ್ತಗಳ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ. ಬಿಎಂಟಿಸಿಯಿಂದ 6.06 ಕೋಟಿ ರೂ. ಕಾರ್ಮಿಕರ ಉಪಕರ ಸಂಗ್ರಹಿಸಲಾಗಿದ್ದರೂ, ಅದನ್ನು ಜಮೆ ಮಾಡಿಲ್ಲ. ಎರಡು ವರ್ಷಗಳ ಹೆಚ್ಚು ಕಾಲ ಬಿಎಂಟಿಸಿ ಸಂಪೂರ್ಣವಾಗಿ ಉಳಿಸಿಕೊಂಡಿದೆ ಎಂಬುದು ದಾಖಲೆಗಳ ಪರಿಶೀಲನೆಯಿಂದ ಗೊತ್ತಾಗಿದೆ. 

ಇದಲ್ಲದೇ, ಮಂಡಳಿಯು ಉಪಕರ-ಸಂಗ್ರಹಿಸುವ, ಜಮೆ ಮಾಡುವ ಏಜೆನ್ಸಿಗಳ ಸಮಗ್ರ ದತ್ತಾಂಶವನ್ನು ಹೊಂದಿಲ್ಲ. ಅದಕ್ಕೆ ನಿಜವಾದ ಉಪಕರ ಮೊತ್ತ, ಸಂಗ್ರಹಿಸಿದ ಮತ್ತು ಜಮಾವಣೆಯಾದ ಮೊತ್ತದ ಬಗ್ಗೆ ತಿಳಿದಿರಲಿಲ್ಲ. ಸಂಗ್ರಹಿಸಲಾದ ಉಪಕರವನ್ನು ನಿರ್ಣಯಿಸಲು ಮಂಡಳಿಯು ಯಾವುದೇ ಅಧಿಕಾರಿಯನ್ನು ನೇಮಿಸಿಲ್ಲ42,50,122 ನೋಂದಾಯಿತ ಫಲಾನುಭವಿಗಳನ್ನು ಒಳಗೊಂಡಿರುವ ಸೇವಾಸಿಂಧು ಪೋರ್ಟಲ್‌ನಿಂದ ದತ್ತಾಂಶವನ್ನು ನಮೂದಿಸುವ ಮೊದಲು ಅಸಮರ್ಪಕವಾಗಿ ಮೌಲ್ಯೀಕರಿಸಲಾಗಿದೆ. ಸೇವಾಸಿಂಧು ಪೋರ್ಟ್‌ನಲ್ಲಿ ಫಲಾನುಭವಿಗಳ ನೋಂದಣಿ ಮತ್ತು ನವೀಕರಣಕ್ಕಾಗಿ ಸಲ್ಲಿಸಲಾದ ಅರ್ಜಿಯು ಉದ್ಯೋಗ ಪ್ರಮಾಣಪತ್ರದಲ್ಲಿ ಉದ್ಯೋಗದ ವಿವರಗಳ ಕೊರತೆ ಇದ್ದರೂ ಸ್ವೀಕರಿಸಲಾಗಿದೆ. ಪರಿಣಾಮ ಗುಮಾಸ್ತ, ನೇಕಾರ ಮತ್ತು ಇತರ ವೃತ್ತಿಯಂತಹ ಅನರ್ಹ ಕಾರ್ಮಿಕರು ಕಟ್ಟಡ ಕಾರ್ಮಿಕರಾಗಿ ನೋಂದಾಯಿಲ್ಪಟ್ಟು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದೆ. 

ಮಂಡಳಿಯು ಪ್ರತಿ ಯೋಜನೆಯ ಅರ್ಹತೆಗೆ ಅನುಗುಣವಾಗಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ನಿವೃತ್ತ ವೇತನ, ಕುಟುಂಬ ಪಿಂಚಣಿ, ಅಂಗವಿಕಲ ಪಿಂಚಣಿ, ವೈದ್ಯಕೀಯ ನೆರವು, ಶೈಕ್ಷಣಿಕ ನೆರವು, ವಸತಿ ಯೋಜನೆ ಇತ್ಯಾದಿಗಳನ್ನು ಒಳಗೊಂಡ 25 ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ನಿವೃತ್ತಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಕಾರ್ಮಿಕರು ನಿಧನರಾದರೆ ಪಿಂಚಣಿಯನ್ನು ನಿಯಂತ್ರಿಸಲು ನಿಯಮಗಳಲ್ಲಿ ಯಾವುದೇ ಅವಕಾಶ ಇಲ್ಲ ಎಂದು ಹೇಳಿದೆ. 

ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲನುಭವಿಗಳಾಗಿ ನೊಂದಣಿ ಮಾಡುವುದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯವಾಗಿದೆ.

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಮಂಡಳಿಯು ಶ್ರಮಿಸುತ್ತದೆ. ಮಂಡಳಿ ಜಾರಿಗೆ ತಂದಿರುವ ಯೋಜನೆಗಳಡಿ ದೊರಕುವ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಸಮರ್ಪಕ ವಿತರಣೆ ಮಾಡಲಿದೆ. ಕಟ್ಟಡ ಕಾರ್ಮಿಕರನ್ನು ನೋಂದಾಯಿಸುವುದು ಮತ್ತು ಅವರ ನೋಂದಣಿಯನ್ನು ಕಾಲಕಾಲಕ್ಕೆ ನವೀಕರಿಸಲಿದೆ. ಹೆರಿಗೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಭರಿಸಲು ಸಹಾಯಧನ, ಶೈಕ್ಷಣಿಕ ಸಹಾಯಧನ ಮತ್ತು ವೈದ್ಯಕೀಯ ಸಹಾಯಧನ ಮುಂತಾದವುಗಳನ್ನು ನೀಡಲಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನ ನೀಡುವುದು ಮತ್ತು ವೃತ್ತಿಪರ ತರಬೇತಿ ನೀಡುವ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅಲ್ಲದೇ, ಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ವಿವಿಧ ಆರೋಗ್ಯ ಯೋಜನೆಗಳನ್ನು ಜಾರಿ ಮಾಡಲಿದೆ. 

Tags:    

Similar News