Work Hour Extension Part 3 | ಹೋಟೆಲ್‌ ಕಾರ್ಮಿಕರಿಗೆ ಕೆಲಸದ ಅವಧಿ ಹೆಚ್ಚಳ ವರವೋ -ಶಾಪವೋ?

ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆ ಜಾರಿಯು ಹೋಟೆಲ್‌ ಕಾರ್ಮಿಕರ ಮೇಲೆ ನೇರ ಪರಿಣಾಮ ಬೀರಲಿದೆ. ಈಗಾಗಲೇ ಅಧಿಕ ಅವಧಿಯ ಕೆಲಸದಿಂದಾಗಿ ಕಂಗಾಲಾಗಿರುವ ಹೋಟೆಲ್‌ ಕಾರ್ಮಿಕರು ತಿದ್ದುಪಡಿ ಕಾಯ್ದೆಯಿಂದ ಮತ್ತಷ್ಟು ಬವಣೆ ಅನುಭವಿಸಬೇಕಾಗಿದೆ.;

Update: 2025-07-02 01:30 GMT

ಸೂರ್ಯೋದಯಕ್ಕೂ ಮುನ್ನವೇ ಕಾಯಕ ಆರಂಭಿಸಿ, ತಡರಾತ್ರಿ ಮನೆ ಸೇರುವ ಹೋಟೆಲ್ ಕಾರ್ಮಿಕರ ಬವಣೆಗೆ 'ಕೆಲಸದ ಅವಧಿ ಹೆಚ್ಚಳ'ದ ಸರ್ಕಾರದ ಹೊಸ ವರಸೆ ವರದಾನಕ್ಕಿಂತ ಹೆಚ್ಚು ಶಾಪವಾಗಿ ಬದಲಾಗುವ ಆತಂಕ ಎದುರಾಗಿದೆ.

ಸಮಯದ ಅರಿವಿಲ್ಲದೇ ಗ್ರಾಹಕರ ಹಸಿವು ನೀಗಿಸುವ ಹೋಟೆಲ್  ಕಾರ್ಮಿಕರಿಗೆ ಉದ್ದೇಶಿತ 'ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆ'ಯು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಸ್ತುತ, ಚಾಲ್ತಿಯಲ್ಲಿರುವ ಕಾಯ್ದೆಯಡಿ ಹೋಟೆಲ್ ಕಾರ್ಮಿಕರು ದಿನಕ್ಕೆ ಗರಿಷ್ಠ  9 ಗಂಟೆ ಕೆಲಸ ಮಾಡಬೇಕು. ಆದರೆ, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ತಿದ್ದುಪಡಿ ಕಾಯ್ದೆಯಲ್ಲಿ ಕನಿಷ್ಠ ಕೆಲಸದ ಅವಧಿಯನ್ನು 10 ಗಂಟೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಗರಿಷ್ಠ ಕೆಲಸದ ಅವಧಿ 12 ಗಂಟೆ ಇರಲಿದೆ. 

ತಿದ್ದುಪಡಿ ಕಾಯ್ದೆಯಡಿ ಕಾರ್ಮಿಕರಿಗೆ ವಾರದಲ್ಲಿ ಎರಡು ದಿನ ಕಡ್ಡಾಯ ರಜೆ ಪ್ರಸ್ತಾಪಿಸಲಾಗಿದೆ.  ಒಂದು ವೇಳೆ ರಜೆ ಕೊಡಲಾಗದಿದ್ದರೆ ಹೆಚ್ಚುವರಿ ವೇತನ ಕೊಡಬೇಕು.

ಕಾರ್ಮಿಕರಿಗೆ ಕೆಲಸದ ಹೊರೆ 

ಉದ್ದೇಶಿತ ತಿದ್ದುಪಡಿ ಕಾಯ್ದೆಗೆ ಹೋಟೆಲ್ ಕಾರ್ಮಿಕರಿಂದ ಮಾತ್ರ ವಿರೋಧ ವ್ಯಕ್ತವಾಗಿದೆ. ಆದರೆ, ಮಾಲೀಕರು ವಿರೋಧ ಇಲ್ಲ.

ಈಗಾಗಲೇ ದರ್ಶಿನಿಗಳಂತಹ ಹೊಟೇಲ್‌ಗಳಲ್ಲಿ ಕಾರ್ಮಿಕರ ಕೆಲಸದ ಅವಧಿ 12 ಗಂಟೆಯನ್ನೂ ಮೀರಲಿದೆ. ಈಗ ಸರ್ಕಾರವೇ ಹೆಚ್ಚುವರಿ ಕೆಲಸದ ಅವಧಿಯನ್ನು ಕಾನೂನುಬದ್ಧಗೊಳಿಸಲು ಮುಂದಾಗಿರುವ ಕಾರಣ ಕಾರ್ಮಿಕರಿಗೆ ಇನ್ನಷ್ಟು ಹೊರೆಯಾಗಲಿದೆ.  ಇದು ಹೋಟೆಲ್ ಮಾಲೀಕರಿಂದ ಕಾರ್ಮಿಕರ ಶೋಷಣೆಗೂ ಅವಕಾಶ ಒದಗಿಸಲಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

"ಬೆಳಿಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಬರುತ್ತೇವೆ. ರಾತ್ರಿ 10 ಗಂಟೆ ಅಥವಾ 11 ರವರೆಗೂ ಕೆಲಸ‌ ಮಾಡುತ್ತೇವೆ. ಕಂಪೆನಿಗಳಂತೆ ಇಲ್ಲಿ ರಜೆಯೂ ಸಿಗುವುದಿಲ್ಲ. ಜೊತೆಗೆ ಪಿಎಫ್, ಇಎಸ್ ಐ ನಂತಹ ಯಾವುದೇ ಸೌಲಭ್ಯಗಳೂ ಇಲ್ಲ. ಹೀಗಿರುವಾಗ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಯಿಂದ ಯಾವುದೇ ಅನುಕೂಲ ಇಲ್ಲ. ನಮ್ಮ ಕೆಲಸದ ಅವಧಿಯಲ್ಲೂ ವ್ಯತ್ಯಾಸ ಕಾಣಿಸಲ್ಲ. ಜೀವನ ನಡೆಸಬೇಕಾದರೆ ಅವಧಿ ಲೆಕ್ಕಿಸದೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ" ಎಂದು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದು ಹೋಟೆಲ್ ನಲ್ಲಿ ಪಾತ್ರೆ ತೊಳೆಯುವ ಕೆಲಸ‌ ಮಾಡುತ್ತಿರುವ  ನೀಲಮ್ಮ ದ ಫೆಡರಲ್ ಕರ್ನಾಟಕದ ಬಳಿ ಅಳಲು ತೋಡಿಕೊಂಡರು.

ಹೊಟೇಲ್‌ ಕಾರ್ಮಿಕರ ಸಮಸ್ಯೆಗಳೇನು?

ಹೊಟೇಲ್‌ ಕಾರ್ಮಿಕರು ಸಮರ್ಪಕ ವೇತನ, ವಸತಿ, ಸ್ವಚ್ಛತೆ ಸೇರಿದಂತೆ ಹಲವಾರು ಸಮಸ್ಯೆಗಳ ಜೊತೆಯಲ್ಲೇ ಸಾಗುತ್ತಿದ್ದಾರೆ.

ಕೆಲಸದ ಅವಧಿಯ ಅವ್ಯವಸ್ಥೆಯಿಂದಾಗಿ ನಿಯಮಿತವಾಗಿ ಆಹಾರ ಸೇವಿಸುವ ಅವಕಾಶ ಕಾರ್ಮಿಕರಿಗೆ ಇರುವುದಿಲ್ಲ. ಇದರಿಂದ ಆರೋಗ್ಯದ ಮೇಲೆ  ಪರಿಣಾಮ ಬೀರುವ ಸಾಧ್ಯತೆಗಳೂ ಹೆಚ್ಚಿವೆ.

ಹೊಟೇಲ್‌ಗಳಲ್ಲಿ ನೀಡುವ ವಸತಿಯು ಸರಿಯಾಗಿ ಇರುವುದಿಲ್ಲ.  ಒಂದೇ ಕೋಣೆಯಲ್ಲಿ ಸಾಕಷ್ಟು ಮಂದಿಯನ್ನು ಇರಿಸುವುದು, ಸ್ನಾನದ ಕೋಣೆ, ಶೌಚಾಲಯ ಅವ್ಯವಸ್ಥೆಗಳಿಂದ ಕಾರ್ಮಿಕರ ದೈನಂದಿನ ಬದುಕು ಹೀನಾಯವಾಗಿರುತ್ತದೆ.

ಹೊಟೇಲ್‌ಗಳು ಆಫೀಸ್‌ಗಳಂತೆ ಅಲ್ಲ

ಅಂಗಡಿ‌ ಮತ್ತು ವಾಣಿಜ್ಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆ ಕುರಿತು ಹೆಸರು ಹೇಳಲು ಇಚ್ಛಿಸದ ಹೊಟೇಲ್‌ ಮಾಲೀಕರೊಬ್ಬರು ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಸರ್ಕಾರದ ನಿಯಮ- ನಿಬಂದನೆಗಳು ಕೇವಲ ಹಾಳೆಗಳಿಗೆ ಮಾತ್ರ ಸೀಮಿತ. ಹೊಟೇಲ್‌ಗಳಲ್ಲಿ ಕಚೇರಿಗಳಂತೆ ಕೆಲಸ ಮಾಡಲು ಸಾಧ್ಯವಿಲ್ಲ. ಹೊಟೇಲ್‌ಗಳಲ್ಲಿ 24 ಗಂಟೆ ಕೆಲಸ ಅನಿವಾರ್ಯ. ಇಷ್ಟೇ ಗಂಟೆ ಕೆಲಸ ಅಂದರೆ ಹೊಟೇಲ್‌ ವ್ಯವಹಾರ ಕೈ ಹಿಡಿಯುವುದಿಲ್ಲ ಹೇಳಿದರು.

ಎರಡು ದಿನ ರಜೆಯೂ ಅಸಾಧ್ಯ 

ಹೊಟೇಲ್‌, ರೆಸ್ಟೋರೆಂಟ್‌ಗಳಲ್ಲಿ ಎರಡು ದಿನ ರಜೆ ಕೊಡುವುದು ಕಾರ್ಯಸಾಧುವಾದ‌ ಮಾತಲ್ಲ. ಈಗಾಗಲೇ ನಮ್ಮ ಹೊಟೇಲ್‌ಗಳಲ್ಲಿರುವ ಸಿಬ್ಬಂದಿ 9 ರಿಂದ 10 ಗಂಟೆ ಕೆಲಸ ಮಾಡುತ್ತಾರೆ. ಅವರಿಗೆ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ಭತ್ಯೆ ನೀಡಲಾಗುತ್ತದೆ. ಸರ್ಕಾರ ಈ ಕಾಯಿದೆ ತಿದ್ದುಪಡಿ ತಂದರೂ ಹೊಟೇಲ್‌ಗಳಿಗೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬೆಂಗಳೂರಿನ ʻಮಸಾಲೆಧಾರ್‌ ರಸೋಯಿʼ ರೆಸ್ಟೋರೆಂಟ್‌ನ ಮಾಲೀಕ ವೆಂಕಟ್‌ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ರಾಜ್ಯದಲ್ಲಿ ಇರುವ ಹೋಟೆಲ್ ಎಷ್ಟು, ಕಾರ್ಮಿಕರು ಎಷ್ಟು?

ರಾಜ್ಯದಾದ್ಯಂತ 2024 ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 65,328 ಕ್ಕೂ ಹೆಚ್ಚು ಹೋಟೆಲ್‌ಗಳು ಹಾಗೂ ಅಂದಾಜು 22,000 ರೆಸ್ಟೋರೆಂಟ್‌ಗಳು ಇವೆ. ಹೋಟೆಲ್ ಗಳ ಒಟ್ಟಾರೆ ಸಂಖ್ಯೆ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 3.17 ರಷ್ಟು ಹೆಚ್ಚಳವಾಗಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 1,822 ಹೋಟೆಲ್‌ಗಳು ಇವೆ. ಅದೇ ರೀತಿ ರೆಸ್ಟೋರೆಂಟ್‌ಗಳ ಒಟ್ಟು 4,443 ಇದೆ. ಬೆಂಗಳೂರು ನಂತರ ಮೈಸೂರಿನಲ್ಲಿ 930,  ಮಂಗಳೂರು 753 ರೆಸ್ಟೋರೆಂಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇಡೀ ರಾಜ್ಯದಲ್ಲಿ ರೆಸ್ಟೋರೆಂಟ್‌ಗಳ ಸಂಖ್ಯೆ ಸುಮಾರು 21,600 ರಿಂದ 22,000 ಇವೆ ಎಂದು ಅಂದಾಜಿಸಲಾಗಿದೆ. ಹೋಟೆಲ್ ಉದ್ಯಮದಲ್ಲಿ ಅಂದಾಜು 3 .50 ಲಕ್ಷ ಕಾರ್ಮಿಕರು ಕೆಲಸ‌ ಮಾಡುತ್ತಿದ್ದಾರೆ.

ವಲಸೆ ಕಾರ್ಮಿಕರೇ ಹೆಚ್ಚು 

ಕರ್ನಾಟಕದಲ್ಲಿ ಹೋಟೇಲ್‌ ಉದ್ಯಮವು ಬಹಳಷ್ಟು ವಲಸೆ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯಲ್ಲಿ ಶೇ 80ರಿಂದ 90 ರಷ್ಟು ಹೋಟೆಲ್ ಸಿಬ್ಬಂದಿ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದಿಂದ ವಲಸೆ ಬಂದವರಾಗಿದ್ದಾರೆ.  ಈ ಕಾರ್ಮಿಕರಲ್ಲಿ ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್, ಒಡಿಶಾ, ರಾಜಸ್ಥಾನದವರಿದ್ದಾರೆ. ಇಂತಹ ವಲಸೆ ಕಾರ್ಮಿಕರು ಹೋಟೇಲ್‌ಗಳಲ್ಲಿ ಅಡುಗೆ, ಹೌಸ್‌ ಕೀಪಿಂಗ್‌ ಮುಂತಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಂಗಳೂರು ನಗರದ ಒಂದರಲ್ಲೇ ಸುಮಾರು 42 ಲಕ್ಷ ವಲಸೆ ಕಾರ್ಮಿಕರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಹೋಟೆಲ್ ಕಾರ್ಮಿಕರಾಗಿದ್ದಾರೆ.

ಪಾಳಿ ಪದ್ದತಿ

ರೆಸ್ಟೋರೆಂಟ್‌ಗಳ (ಉಪಹಾರ ಗೃಹ/ಹೋಟೆಲ್) ಉದ್ಯಮದಲ್ಲಿ ಕೆಲಸದ ಪಾಳಿ ಪದ್ಧತಿ (Shift System) ಸಾಮಾನ್ಯವಾಗಿದೆ. ಗ್ರಾಹಕರ ನಿರಂತರ ಭೇಟಿ, ವಿಭಿನ್ನ ಭೋಜನಾ ಸಮಯಗಳು (ಬೆಳಿಗ್ಗೆ, ಮಧ್ಯಾಹ್ನ, ಸಂಜೆ), ಹಾಗೂ 12-16 ಗಂಟೆಗಳ ವಹಿವಾಟು ಸಮಯ ಇರಲಿದೆ. ಈ ಹಿನ್ನೆಲೆಯಲ್ಲಿ ಹೊಟೇಲ್‌ಗಳಲ್ಲಿ ಪಾಳಿ ವ್ಯವಸ್ಥೆಯಲ್ಲಿ ಕೆಲಸ ಮಾಡಲಾಗುತ್ತಿದೆ.

ಡಬಲ್ ಶಿಫ್ಟ್ (Double Shift) ವ್ಯವಸ್ಥೆ:  ಬೆಳಿಗ್ಗೆ ಶಿಫ್ಟ್- 6 ರಿಂದ ಮಧ್ಯಾಹ್ನ 2 ಗಂಟೆ, ಸಂಜೆ ಶಿಫ್ಟ್- ಮಧ್ಯಾಹ್ನ 2 ರಿಂದ ರಾತ್ರಿ10 ಗಂಟೆವರೆಗೆ ಇರಲಿದೆ.

24 ಗಂಟೆ ಕಾರ್ಯ ನಿರ್ವಹಿಸುವ ಹೋಟೆಲ್ ಗಳಲ್ಲಿ ರಾತ್ರಿ ಪಾಳಿಯು 10ರಿಂದ ಬೆಳಿಗ್ಗೆ 6 ರವರೆಗೆ ಇರುತ್ತದೆ. ಪ್ರತಿ 15 ದಿನಕ್ಕೊಮ್ಮೆ ಅಥವಾ ವಾರಕ್ಕೊಮ್ಮೆ ಶಿಫ್ಟ್ ಬದಲಾಯಿಸುವ ವ್ಯವಸ್ಥೆ ಜೊತೆಗೆ ಅರ್ಧ ದಿನ ಕೆಲಸದ ಅವಧಿಯೂ ಇರಲಿದೆ.

ಕೆಲ ಹೋಟೆಲ್ ಗಳಲ್ಲಿ ಮಹಿಳಾ ಉದ್ಯೋಗಿಗಳು ಅಥವಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಅಥವಾ ಸಂಜೆ ಮಾತ್ರ ಪಾಳಿ ನೀಡಲಾಗುತ್ತದೆ. ಈ ಪದ್ದತಿ ವಿಶೇಷವಾಗಿ ಚಿಕ್ಕ ಹೋಟೆಲ್‌ಗಳಲ್ಲಿ ಇದೆ.

ಹೋಟೆಲ್‌ ಕಾರ್ಮಿಕರ ವಿರೋಧ ಯಾಕೆ?

ಸರ್ಕಾರದ ಹೊಸ ಕಾನೂನು ತಿದ್ದುಪಡಿ ದಿನಕ್ಕೆ 10 ಗಂಟೆಗಳ ಕೆಲಸವನ್ನು ಜಾರಿಗೆ ತರುವ 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಿಂದ (Karnataka Shops and Establishments Act, 1961)  ಕಾರ್ಮಿಕರ ಮೇಲೆ ಹಲವು ಪರಿಣಾಮ ಬೀರಲಿದೆ. ದೀರ್ಘಕಾಲದ ಕೆಲಸದ ಸಮಯದಿಂದ ಕಾರ್ಮಿಕರು ದಣಿವು ಮತ್ತು ಒತ್ತಡಕ್ಕೆ ಒಳಗಾಗಬಹುದು.

ಹೋಟೆಲ್ ಉದ್ಯಮದಲ್ಲಿ ನಿಂತುಕೊಂಡೇ ಕೆಲಸ ಮಾಡಬೇಕಾದುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಹೆಚ್ಚು ಕೆಲಸದ ಸಮಯದಿಂದಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗುವಿದಿಲ್ಲ. ಜೀವನ ಗುಣಮಟ್ಟ ಇಳಿಕೆಯಾಗುವ ಸಾಧ್ಯತೆ ಇದೆ. ಕೆಲ ಹೊಟೇಲ್‌ಗಳಲ್ಲಿ ನಿಯಮಿತ ವೇತನ ನೀಡದೇ ಹೆಚ್ಚು ಕೆಲಸ ಮಾಡಿಸುವ ಪರಿಸ್ಥಿತಿ ಇದೆ. ಇಂತಹ ಹೊಸ ನಿಯಮವನ್ನು ಮಾಲೀಕರು ದುರುಪಯೋಗಪಡಿಸಿಕೊಳ್ಳಬಹುದು. ಹೀಗಾಗಿ ತಿದ್ದುಪಡಿ ಕಾಯ್ದೆಗೆ ಕಾರ್ಮಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Tags:    

Similar News