ಆಂತರಿಕ ಪ್ರತಿರೋಧ; ಚಲನಚಿತ್ರ ವಾಣಿಜ್ಯ ಮಂಡಳಿ ರಚಿಸಿದ ಮಹಿಳಾ ದೌರ್ಜನ್ಯ ತಡೆ ಸಮಿತಿ ಕೆಲವೇ ಗಂಟೆಗಳಲ್ಲಿ ಬರ್ಖಾಸ್ತು!
ಡಿಸೆಂಬರ್ 2ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪ್ರಸ್ತಾಪದ ಆಧಾರದಲ್ಲಿ ಚಲನಚಿತ್ರ ಮಂಡಳಿ ಸಮಿತಿ ರಚನೆ ಮಾಡುತ್ತದೆ. ಅದಾದ ಕೆಲವೇ ಗಂಟೆಗಳಲ್ಲಿಆಂತರಿಕ ಸಮಿತಿ ರಚನೆ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ.;
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ (Prevention of Sexual Harassment) ತನಿಖೆಗಾಗಿ ಆಂತರಿಕ ಸಮಿತಿ ರಚನೆ ಮಾಡಿದ ಕೆಲವೇ ಗಂಟೆಗಳಲ್ಲಿ ಬರ್ಖಾಸ್ತಾಗಿದೆ! ಸಮಿತಿ ರಚನೆಗೆ ಬಗ್ಗೆ ಮಂಡಳಿಯೊಳಗೆ ಎದ್ದ ತೀವ್ರ ಪ್ರತಿರೋಧ ಈ ಸೃಷ್ಟಿ ಮತ್ತು ಲಯಕ್ಕೆ ಕಾರಣ. ಈ ನಿರ್ಧಾರಕ್ಕೆ ಪಿಳ್ಳೆ ನೆಪವೊಂದನ್ನೂ ನೀಡಿದ್ದಾರೆ. ಅದುವೇ ವಾಣಿಜ್ಯ ಮಂಡಳಿಯ ಚುನಾವಣೆಯ ''ನೀತಿ ಸಂಹಿತೆ''
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ನಿರ್ದೇಶನದ (ಸತತ ಒತ್ತಾಯ) ಮೇರೆಗೆ ಈ ಸಮಿತಿ ರಚನೆ ಮಾಡಲಾಗಿತ್ತು. ಚಲನಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್, ನಟಿ ಪ್ರಮೀಳಾ ಜೋಷಾಯ್, ಮಹಿಳಾ ಹೋರಾಟಗಾರ್ತಿ ಕೆ.ಎಸ್.ವಿಮಲಾ, ತೃತೀಯ ಲಿಂಗಿಗಳ ಹೋರಾಟಗಾರ ಮಲ್ಲು ಕಂಬಾರ್, ನಟಿ ಶೃತಿ ಹರಿಹರನ್, ಹಿರಿಯ ಪತ್ರಕರ್ತ ಮುರಳೀಧರ ಖಜಾನೆ, ನಿರ್ಮಾಪಕ ಮತ್ತು ಮಂಡಳಿಯ ಹಾಲಿ ಅಧ್ಯಕ್ಷ ಎಂ.ಸುರೇಶ್ ಮತ್ತು ನಿರ್ಮಾಪಕ ಸಾ.ರಾ.ಗೋವಿಂದು ಅವರು ಹೆಸರನ್ನುಪ್ರಕಟಿಸಲಾಗಿತ್ತು. ಅಂದ ಹಾಗೆ, ಸಾರಾ ಗೋವಿಂದು ಅವರೇ ಈ ಸಮಿತಿ ರಚನೆಗೆ ಬಗ್ಗೆ ಈ ಹಿಂದೆ ಸತತವಾಗಿ ವಿರೋಧ ವ್ಯಕ್ತಪಡಿಸಿದ್ದರು.
ಸಮಿತಿ ರಚನೆ ಬಳಿಕ ಹಿಂದಕ್ಕೆ ಸರಿದ ಮಂಡಳಿ
ಡಿಸೆಂಬರ್ 2ರಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಪ್ರಸ್ತಾಪದ ಆಧಾರದಲ್ಲಿ ಚಲನಚಿತ್ರ ಮಂಡಳಿ ಸಮಿತಿ ರಚನೆ ಮಾಡುತ್ತದೆ. ಅದಾದ ಕೆಲವೇ ಗಂಟೆಗಳಲ್ಲಿಆಂತರಿಕ ಸಮಿತಿ ರಚನೆ ನಿರ್ಧಾರದಿಂದ ಹಿಂದಕ್ಕೆ ಸರಿದಿದೆ. ಡಿಸೆಂಬರ್ 12ರಂದು ನಡೆಯಲಿರುವ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಮಿತಿಯ ರಚನೆಯನ್ನು ತಡೆ ಹಿಡಿಯಲಾಗಿದೆ ಎಂದು ವಾಣಿಜ್ಯ ಮಂಡಳಿ ಕಾರಣ ಕೊಟ್ಟಿದೆ. ಆದರೆ, ಮೂಲಗಳ ಪ್ರಕಾರ ಆಂತರಿಕ ಸಮಿತಿಗೆ ಅಂತರ್ಯದಲ್ಲಿ ಬಲವಾದ ವಿರೋಧ ವ್ಯಕ್ತಗೊಂಡಿತ್ತ . ಹೀಗಾಗಿ ಏಕಾಏಕಿ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ನಿಲುವು ಬದಲಿಸಿದೆ.
ಕೆಎಫ್ಸಿಸಿಯ ನಿರ್ಧಾರದ ಬಗ್ಗೆ ಮಹಿಳಾ ದೌರ್ಜನ್ಯ ತಡೆ ಸಮಿತಿಯ ನೂತನ ಅಧ್ಯಕ್ಷೆ ಕವಿತಾ ಲಂಕೇಶ್ ಸಹ ಸದಸ್ಯರಿಗೆ ಸಂದೇಶವೊಂದನ್ನು ಕಳುಹಿಸಿದ್ದರು. "ಕ್ಷಮಿಸಿ ಸ್ನೇಹಿತರೇ. ಒಂದು ಹೊಸ ಬೆಳವಣಿಗೆ ನಡೆದಿದೆ. ಸಮಿತಿ ಸೃಷ್ಟಿಯಾಗುತ್ತಲೇ ಇಲ್ಲವಾಗಿದೆ. ಕೆಎಫ್ಸಿಸಿ ಚುನಾವಣೆ ನಡೆಯಲಿರುವ ಕಾರಣ ನೀತಿ ಸಂಹಿತೆ ಚಾಲನೆಯಲ್ಲಿದೆ. ಹೀಗಾಗಿ ಸಮಿತಿ ರಚನೆಯಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಂಡಳಿಯು ನಿರ್ಧಾರವನ್ನು ಡಿಸೆಂಬರ್ 15ರವರೆಗೆ ಮುಂದೂಡಿದ್ದಾರೆ. ಈ ವಿಷಯದ ಕುರಿತು ಮಂಡಳಿಯಲ್ಲಿ ಜೋರು ವಾಗ್ವಾದ ನಡೆಯಿತು,''ಎಂದು ಹೇಳಿದ್ದಾರೆ .
ಮುಂದುವರಿದ ಕವಿತಾ ಅವರು, ಡಿಸೆಂಬರ್ 15ರ ನಂತರ ನಿರ್ಧಾರ ಕೈಗೊಳ್ಳೋಣ. ಸ್ವತಂತ್ರವಾಗಿ ಈ ಕೆಲಸವನ್ನು ಮಾಡೋಣ. ಅಗತ್ಯವಿದ್ದರೆ ನ್ಯಾಯಾಲಯದ ಮೆಟ್ಟಿಲೇರೋಣ. ಕೆಲವು ಸದಸ್ಯರು ಸಮಿತಿ ಪರವಾಗಿದ್ದಾರೆ, ಕೆಲವರು ತೀವ್ರವಾಗಿ ವಿರೋಧಿಸುತ್ತಾರೆ. ಸಕಾರಾತ್ಮಕ ಫಲಿತಾಂಶ ಬರುತ್ತದೆ ಎಂದು ನಾನು ಭಾವಿಸಿದ್ದೇನೆ. ಹೋರಾಟದಲ್ಲಿ ಒಗ್ಗಟ್ಟಾಗಿರಬೇಕು ಮತ್ತು ಬಲಗೊಳ್ಳಬೇಕು,'' ಎಂದು ಹೇಳಿದ್ದಾರೆ.
ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಕೊಟ್ಟಿರುವ ಕಾರಣಕ್ಕೆ ಸಮ್ಮತಿ ಕೊಟ್ಟಿಲ್ಲ. "ಚುನಾವಣಾ ನೀತಿ ಸಂಹಿತೆ ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ. ಕೆಎಫ್ಸಿಸಿ ಅಧ್ಯಕ್ಷ ಎಂ.ಎನ್.ಸುರೇಶ್ ಅವರು ಶೇ.50ರಷ್ಟು ಮಹಿಳಾ ಸದಸ್ಯರು, ವಕೀಲರು, ಹಿರಿಯ ಸದಸ್ಯರು ಮತ್ತು ಕಾರ್ಯಕರ್ತರನ್ನು ಒಳಗೊಂಡ ಸಮಿತಿ ರಚಿಸಿದ್ದಾರೆ. ಕಾನೂನಿನ ಪ್ರಕಾರ ಎಲ್ಲವೂ ಸರಿಯಾಗಿತ್ತು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕೆಎಫ್ಸಿಸಿ ಸಮಿತಿ ರಚನೆಗೆ ಬದ್ಧವಾಗಿರಬೇಕು. ಇದು ಪ್ರತಿಯೊಬ್ಬ ಮಹಿಳೆಯ ಕಾನೂನು ಮತ್ತು ಹಕ್ಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಿರಾಕರಿಸಿದರೆ ನೋಂದಣಿ ರದ್ದುಗೊಳಿಸಬಹುದು. ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಹಿತಾಸಕ್ತಿ ರಕ್ಷಿಸಲು ಸಮಿತಿ ರಚಿಸುವಲ್ಲಿ ಕೆಎಫ್ಸಿಸಿಗೆ ಎದುರಾಗುವ ಸಮಸ್ಯೆ ಏನೆಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ಅವರು ಯಾಕೆ ಹೆದರುತ್ತಿದ್ದಾರೆ" ಎಂದು ನಾಗಲಕ್ಷ್ಮೀ ಅವರು ಪ್ರಶ್ನಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರದ ವಿರುದ್ಧಸರ್ಕಾರಕ್ಕೆ ಪತ್ರ ಬರೆಯುವುದಾಗಿ ಅವರು ಇದೇ ವೇಳೆ ಹೇಳಿದ್ದಾರೆ. "ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆಯು ಸಕಾರಾತ್ಮಕ ವಿಷಯವಾಗಿತ್ತು, ದುರದೃಷ್ಟವಶಾತ್ ಮಂಡಳಿಯ ನಿಲುವು ಬದಲಿಸಿತು,'' ಎಂದು ಅವರು ವ್ಯಂಗ್ಯವಾಡಿದ್ದಾರೆ.
ಗಡುವು ವಿಸ್ತರಣೆಗೆ ಕೋರಿಕೆ
ಕೆಎಫ್ಸಿಸಿ ಸೆಪ್ಟೆಂಬರ್ 18, 2024ರ ಪತ್ರ ಸೇರಿದಂತೆ ಹಲವು ಬಾರಿ ಸಮಿತಿ ರಚನೆಗೆ ಗಡುವು ವಿಸ್ತರಣೆಗೆ ಮನವಿ ಮಾಡಿತ್ತು. ಆದಾಗ್ಯೂ ಕನ್ನಡ ಚಿತ್ರರಂಗದಲ್ಲಿ ವೃತ್ತಿಪರ ಮಹಿಳೆಯರಿಗೆ ಕೆಲಸದ ಸ್ಥಳದ ಸುರಕ್ಷತೆ ಮತ್ತು ಮಹಿಳೆಯರ ಕಲ್ಯಾಣದಂತಹ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಇನ್ನೂ ಹೊಂದಿಲ್ಲ.
ಚಲನಚಿತ್ರ ವಾಣಿಜ್ಯ ಮಂಡಳಿ ಆರಂಭದಿಂದಲೂ ಸಮಿತಿ ರಚಿಸುವ ವಿಚಾರದಲ್ಲಿ ನಕಾರಾತ್ಮಕ ಭಾವನೆ ಹೊಂದಿತ್ತು. ಅಧ್ಯಕ್ಷರಾಗಿರುವ ಎಂ.ಎನ್.ಸುರೇಶ್ (ಈಗ ಪಿಒಎಸ್ಎಚ್ ಸದಸ್ಯರಾಗಿದ್ದಾರೆ) ಪತ್ರಿಕಾಗೋಷ್ಠಿಯೊಂದರಲ್ಲಿ ಫಿಲ್ಮ್ ಚೇಂಬರ್ನ ನಿಲುವು ಸ್ಪಷ್ಟಪಡಿಸಿದ್ದರು. "ಮಹಿಳೆಯರ ಕುರಿತ ಯಾವುದೇ ದೂರುಗಳನ್ನು ದಿನದ 24 ಗಂಟೆಯೂ ಆಲಿಸಲು ಮಂಡಳಿಯು ಸಿದ್ಧವಾಗಿದೆ" ಕಾನೂನಿನ ಪ್ರಕಾರ ಮಹಿಳಾ ಆಯೋಗದ ಸೂಚನೆಯಂತೆ ಸಮಿತಿ ರಚನೆ ಮಾಡಲು ಸಿದ್ಧವಿಲ್ಲ,'' ಎಂದಿದ್ದರು.
ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುರೇಶ್
ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸೇರಿದಂತೆ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಈಕ್ವಿಟಿ (ಫೈರ್) ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಕ್ಕೆ ಸುರೇಶ್ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. "ಕೆಎಫ್ಸಿಸಿ ಕನ್ನಡ ಚಿತ್ರರಂಗದಲ್ಲಿ ಸರ್ವೋಚ್ಚ ಸಂಸ್ಥೆಯಾಗಿದೆ. ಯಾವುದೇ ದೂರುಗಳಿದ್ದರೆ ಅದು ಪರಿಶೀಲಿಸುತ್ತದೆ" ಎಂದೇ ಪ್ರತಿ ಹೇಳುತ್ತಿದ್ದರು.
ಸಾ.ರಾ.ಗೋವಿಂದು (ಈಗ ಸಮಿತಿ ಸದಸ್ಯ) ಮತ್ತು ತೇಶಿ ವೆಂಕಟೇಶ್ ಸೇರಿದಂತೆ ನಿರ್ಮಾಪಕರು ಸಮಿತಿ ರಚನೆಯನ್ನು ಸತತವಾಗಿ ವಿರೋಧಿಸಿದವರು. ಇದು ಚಲನಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದರು. ಸಮಿತಿಯಲ್ಲಿ ದೂರು ದಾಖಲಾದರೆ ಯಾವುದೇ ನಿರ್ಮಾಪಕರು ಕನ್ನಡ ಚಿತ್ರಗಳಿಗೆ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಕನ್ನಡ ಚಲನಚಿತ್ರೋದ್ಯಮದ ಹಿತದೃಷ್ಟಿಯಿಂದ ನಾವು ಸಮಿತಿ ರಚನೆಯನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದರು.
ಕನ್ನಡ ಚಿತ್ರರಂಗದಲ್ಲಿ ದುಡಿಯುವ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಪಾಶ್ ಕಮಿಟಿ ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಲು ಚಲಚಿತ್ರ ವಾಣಿಜ್ಯ ಮಂಡಳಿ ವಿರೋಧ ವ್ಯಕ್ತಪಡಿಸುವುದನ್ನು ನೋಡಿದರೆ ಇಲ್ಲಿಂದ ಹೆಚ್ಚು ನಿರೀಕ್ಷೆ ಅಸಾಧ್ಯ" ಎಂದು ಸಮಿತಿಯ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.