ಸೌಜನ್ಯ ಕೇಸ್‌ಗೆ ಟ್ವಿಸ್ಟ್ | ಸೌಜನ್ಯ ಅಪಹರಣಕ್ಕೆ ಸಾಕ್ಷಿ ಹೇಳುವುದಾಗಿ ಎಸ್‌ಐಟಿಗೆ ಪತ್ರ ಬರೆದ ಮಹಿಳೆ
ಸೌಜನ್ಯ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು. ನಾನು ಆ ದಿನ ನೋಡಿದ ವ್ಯಕ್ತಿಗಳನ್ನು ಗುರುತಿಸಬಲ್ಲೆ, ಸೌಜನ್ಯಗೆ ನ್ಯಾಯ ಕೊಡಿಸುವ ಧೈರ್ಯದಿಂದ ಸಾಕ್ಷಿ ಹೇಳಲು ಮುಂದೆ ಬಂದಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.;
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಕುರಿತ ಎಸ್‌ಐಟಿ ತನಿಖೆಗೆ ಹೊಸದೊಂದು ತಿರುವು ಸಿಕ್ಕಿದೆ. ೨೦೧೨ ರಲ್ಲಿ ನಡೆದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ 62 ವರ್ಷದ ಮಹಿಳೆಯೊಬ್ಬರು ಸಾಕ್ಷಿ ನುಡಿಯುವುದಾಗಿ ಎಸ್‌ಐಟಿಗೆ ಪತ್ರ ಬರೆದಿರುವುದು ಸಂಚಲನ ಮೂಡಿಸಿದೆ.
ಕೆಲ ದಿನಗಳ ಹಿಂದೆ ಸೌಜನ್ಯ ಅಪಹರಿಸಿದ ಘಟನೆಯನ್ನು ಕಣ್ಣಾರೆ ಕಂಡಿದ್ದಾಗಿ ಮಹಿಳೆಯೊಬ್ಬರು ಯೂಟ್ಯೂಬರ್ ಜೊತೆ ಮಾತನಾಡಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ಆ ಮಹಿಳೆಯೇ ತಾನು ಘಟನೆಯನ್ನು ನೋಡಿದ್ದು, ಸಾಕ್ಷಿ ಹೇಳುವುದಾಗಿ ಎಸ್‌ಐಟಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2012ರ ಅ.9ರಂದು ಧರ್ಮಸ್ಥಳದ ಶಾಂತಿವನ ಸಮೀಪ 16 ವರ್ಷದ ಯುವತಿಯನ್ನು ಬಲವಂತವಾಗಿ ಅಪಹರಿಸಿದ ಘಟನೆಯನ್ನು ಕಣ್ಣಾರೆ ಕಂಡಿದ್ದೇನೆ. ಆ ನಂತರ ಅಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಯುವತಿ ಸೌಜನ್ಯ ಎಂಬುದು ತಿಳಿಯಿತು ಎಂದಿದ್ದಾರೆ.
2012 ಅ.8 ರಂದು ನಾನು ಮತ್ತು ಇನ್ನೊಬ್ಬ ಮಹಿಳೆ(ಅವರು ಈಗ ಮೃತಪಟ್ಟಿದ್ದಾರೆ) ಮಂಡ್ಯದಿಂದ ಧರ್ಮಸ್ಥಳಕ್ಕೆ ತೆರಳಿದ್ದೆವು. ಅ.9ರಂದು ಮಧ್ಯಾಹ್ನ ಶಾಂತಿವನದ ಬಳಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಗಳು ಸಂಚರಿಸುತ್ತಿದ್ದರು. ನಾವು ಬಸ್ ನಿಲ್ದಾಣದಲ್ಲಿ ಕುಳಿತು ಗಮನಿಸುತ್ತಿದ್ದೆವು. ಸುಮಾರು 16 ವರ್ಷದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಲಾಯಿತು. ಆಕೆ ಜೋರಾಗಿ ಸಹಾಯಕ್ಕಾಗಿ ಕೂಗಿಕೊಂಡಳು. ಆಗ ನಾವಿದ್ದಲ್ಲಿಗೆ ಬಂದ ಸ್ಥಳೀಯ ಕೆಲ ವ್ಯಕ್ತಿಗಳು ಅದು ʼಮನೆಯ ವಿಚಾರʼ. ನೀವು ಇಲ್ಲಿಂದ ಹೊರಡಿ ಎಂದು ನಮ್ಮನ್ನು ಅಲ್ಲಿಂದ ಕಳುಹಿಸಿದರು ಎಂದು ಘಟನೆಯನ್ನು ಮೆಲುಕು ಹಾಕಿದ್ದಾರೆ.
ಸೌಜನ್ಯ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು. ನಾನು ಆ ದಿನ ನೋಡಿದ ವ್ಯಕ್ತಿಗಳನ್ನು ಗುರುತಿಸಬಲ್ಲೆ, ಸೌಜನ್ಯಗೆ ನ್ಯಾಯ ಕೊಡಿಸುವ ಧೈರ್ಯದಿಂದ ಸಾಕ್ಷಿ ಹೇಳಲು ಮುಂದೆ ಬಂದಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸೌಜನ್ಯ ಪ್ರಕರಣ ಮರು ತನಿಖೆ ಸಾಧ್ಯತೆ
ಸಾಕ್ಷಿದಾರ ಮಹಿಳೆ ಎಸ್‌ಐಟಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ 2012ರಲ್ಲಿ ನಡೆದ ಸೌಜನ್ಯ ಅಪಹರಣ ಹಾಗೂ ಕೊಲೆ ಪ್ರಕರಣದ ಮರು ತನಿಖೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಅಸಹಜ ಸಾವುಗಳ ಕುರಿತು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ತಿಳಿದು ಬಂದಿದೆ.
ಸಾಕ್ಷಿದಾರ ಮಹಿಳೆಯ ಹೇಳಿಕೆಯು ಪ್ರಾಥಮಿಕ ಹಂತದಲ್ಲಿ ವಿಶ್ವಾಸಾರ್ಹವಾಗಿದ್ದು, ಮುಂದಿನ ಹಂತದಲ್ಲಿ ಅವರಿಂದ ನೇರ ಹೇಳಿಕೆ ದಾಖಲಿಸಲಾಗುವುದು. ನಂತರ ಆರೋಪಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಲು ಎಸ್‌ಐಟಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.