ಸೌಹಾರ್ದವಿಲ್ಲದೆ ತುಳುನಾಡಿನ ಸತ್ವ ಉಳಿಯದು: ನಟ ನವೀನ್ ಡಿ. ಪಡೀಲ್

ನವೀನ್ ಡಿ. ಪಡೀಲ್ ಅವರು ಮಂಗಳೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮುದ್ವೇಷ, ಗಲಾಟೆ, ಕೊಲೆಗಳು ಮತ್ತು ಅಮಾಯಕರ ಸಾವಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು.;

Update: 2025-05-28 06:17 GMT

ಬ್ರಹ್ಮಕಲಶೋತ್ಸವ, ಉರೂಸ್, ಸಾಂತ್‌ಮಾರಿಯಂತಹ ಪವಿತ್ರ ಹಬ್ಬಗಳನ್ನು ಒಗ್ಗೂಡಿ ಆಚರಿಸುವ ಜಿಲ್ಲೆ ನಮ್ಮದು. ಸೌಹಾರ್ದ ಕದಡಿ ಇಲ್ಲಿನ ಸಾಮರಸ್ಯದ ಸಂಸ್ಕೃತಿಗೆ ಧಕ್ಕೆ ತರಬಾರದು. ಸೌಹಾರ್ದ ಇಲ್ಲದೆ ಹೋದರೆ ತುಳುನಾಡಿನ ಸತ್ವ ಉಳಿಯದು" ಎಂದು ಖ್ಯಾತ ನಟ ನವೀನ್ ಡಿ. ಪಡೀಲ್ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಪ್ರೆಸ್ ಕ್ಲಬ್ ಗೌರವ' ಸ್ವೀಕರಿಸಿದ ಬಳಿಕ ಅವರು ಸಂವಾದದಲ್ಲಿ ಮನ ಬಿಚ್ಚಿ ಮಾತನಾಡಿದರು.

ನವೀನ್ ಡಿ. ಪಡೀಲ್ ಅವರು ಮಂಗಳೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮುದ್ವೇಷ, ಗಲಾಟೆ, ಕೊಲೆಗಳು ಮತ್ತು ಅಮಾಯಕರ ಸಾವಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರು. "ಇಲ್ಲಿ ಕೋಮು ದ್ವೇಷ ಏಕೆ ಹೆಚ್ಚುತ್ತಿದೆ, ಗಲಾಟೆ, ಕೊಲೆಗಳು ಏಕೆ ನಡೆಯುತ್ತಿವೆ. ಅಮಾಯಕರು ಏಕೆ ಸಾಯುತ್ತಿದ್ದಾರೆ. ಗಲಾಟೆಗಳ ಮೂಲಕ ಸುಮ್ಮನೆ ಮನಃಶಾಂತಿ ಕಳೆದುಕೊಳ್ಳುವ ಬದಲು ಎಲ್ಲರೂ ಒಗ್ಗಟ್ಟಿನಿಂದ ಬದುಕಬಹುದಲ್ಲವೇ. ಈಶ್ವರ, ಅಲ್ಲಾ, ಯೇಸು ಮೊದಲಾದ ದೇವರು ಬಲಾಢ್ಯರಲ್ಲವೇ, ಅವರೇಕೆ ನಮ್ಮ ಜನರಿಗೆ ಬುದ್ಧಿ ಕೊಡುತ್ತಿಲ್ಲ. ನಾವು ಯಾರಿಗೋ ಮತ ಹಾಕುತ್ತೇವೆ ಎಂಬ ಕಾರಣಕ್ಕೆ ಇನ್ನು ಯಾರೊ ಏಕೆ ಸಾಯಬೇಕು" ಎಂದು ಅವರು ಸಮಾಜಕ್ಕೆ ನೇರ ಪ್ರಶ್ನೆಗಳನ್ನು ಎಸೆದರು.

ನೆರೆಕರೆ' ಸಿನಿಮಾ ನಿರ್ದೇಶನ ಮತ್ತು ಚಿತ್ರರಂಗದ ಬದಲಾವಣೆ

ಸೌಹಾರ್ದತೆಯನ್ನು ಕಾಪಾಡುವ ಉದ್ದೇಶದಿಂದ ಮನುಷ್ಯತ್ವಕ್ಕೆ ಬೆಲೆ ನೀಡುವ ಸಂದೇಶ ಸಾರುವ 'ನೆರೆಕರೆ' ಎಂಬ ತುಳು ಸಿನಿಮಾ ನಿರ್ಮಿಸುತ್ತಿರುವುದಾಗಿ ನವೀನ್ ಡಿ. ಪಡೀಲ್ ತಿಳಿಸಿದರು. ಈ ಚಿತ್ರಕ್ಕೆ ಶಶಿರಾಜ್ ಕಾವೂರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ನವೀನ್ ಅವರೇ ನಿರ್ದೇಶಿಸುತ್ತಿದ್ದಾರೆ. "ಹಿಂದೂಗಳು ಮಾತ್ರ ನೋಡುತ್ತಾರೆ ಎಂದು ಸಿನಿಮಾ ಮಾಡಲಾಗದು. ಎಲ್ಲ ಧರ್ಮದವರನ್ನೂ ಚಿತ್ರಮಂದಿರಗಳಿಗೆ ಸೆಳೆಯುವಂತಹ ಸಿನಿಮಾ ಮಾಡುವ ಅಗತ್ಯವಿದೆ" ಎಂದು ಅವರು ಅಭಿಪ್ರಾಯಪಟ್ಟರು.

ತುಳು ಸಿನಿಮಾ ರಂಗದಲ್ಲಿ ಬದಲಾವಣೆಯ ಅಗತ್ಯವನ್ನು ಪ್ರತಿಪಾದಿಸಿದ ನವೀನ್, ಮಲಯಾಳಂ ಚಿತ್ರರಂಗವನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಸಿನಿಮಾದಲ್ಲಿ ನಾಟಕೀಯತೆಗಿಂತ ವಾಸ್ತವಕ್ಕೆ ಆದ್ಯತೆ ನೀಡಬೇಕು ಮತ್ತು ಕಾಮಿಡಿ ಕೂಡ ಪಾತ್ರಗಳಿಗೆ ಸಹಜವಾಗಿ ಹೊಂದುವಂತಿರಬೇಕು ಎಂದರು.

ವೈಯಕ್ತಿಕ ನೋವು ಮತ್ತು ಬಾಲ್ಯದ ನೆನಪುಗಳು

'ಕರಿಯಜ್ಜ ಕೊರಗಜ್ಜ' ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿ ಹಾಸಿಗೆ ಹಿಡಿದಿದ್ದರೂ ನಿರ್ಮಾಪಕರು ನೋಡಲು ಬಾರದ ಬಗ್ಗೆ ಅವರು ಬೇಸರ ತೋಡಿಕೊಂಡರು. ತಮ್ಮ ಬಾಲ್ಯದ ಕಷ್ಟಗಳನ್ನು ಹಂಚಿಕೊಂಡ ನವೀನ್, ರಂಗಭೂಮಿಯ ದಿನಗಳನ್ನೂ ಮೆಲುಕು ಹಾಕಿದರು. "ಚಿತ್ರೀಕರಣವೊಂದರ ಸಂದರ್ಭದಲ್ಲಿ ಕಾಲಿನ ಮೂಳೆ ಮುರಿದಿದ್ದರಿಂದ ಸಮಸ್ಯೆ ಆಗುತ್ತಿದೆ. ಮೂಳೆ ಕಸಿ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಮುಂದಿನ ತಿಂಗಳು ಈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದೇನೆ" ಎಂದು ಅವರು ಮಾಹಿತಿ ನೀಡಿದರು.

ದೈವಾರಾಧನೆ ಮತ್ತು ಸಿನಿಮಾ

"ದೈವಾರಾಧನೆಯನ್ನು ಸಿನಿಮಾದಲ್ಲಿ ತೋರಿಸಲೇ ಬಾರದು ಎನ್ನುವುದು ತಪ್ಪು. ಅದನ್ನು ಹೇಗೆ ತೋರಿಸಲಾಗುತ್ತದೆ ಎಂಬುದು ಮುಖ್ಯ. ಸಿನಿಮಾದಲ್ಲಿ ತೋರಿಸುವ ದೈವಾರಾಧನೆಯೂ ಭಕ್ತಿ ಹುಟ್ಟುವುದಕ್ಕೆ ಪ್ರೇರಣೆ ಆಗುತ್ತದೆ. ಕಾಂತಾರ ಸಿನಿಮಾ ಬಂದ ಬಳಿಕ ದೈವಾರಾಧನೆ ಬಗ್ಗೆ ಅನೇಕರಲ್ಲಿ ಜಾಗೃತಿ ಮೂಡಿದೆ. ಅದನ್ನು ವಿಕೃತವಾಗಿ ತೋರಿಸಬಾರದು" ಎಂದು ನವೀನ್ ಡಿ. ಪಡೀಲ್ ದೈವಾರಾಧನೆಯ ಚಿತ್ರಣದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

Similar News