Karnataka By-Election | ಸಾಯುವ ಮುನ್ನ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸ್ತೀನಿ: ದೇವೇಗೌಡ ವಾಗ್ದಾನ
ಮೇಕೆದಾಟು ಯೋಜನೆಯ ಅನುಷ್ಠಾನ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು.;
ಚನ್ನಪಟ್ಟಣದ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ 91ರ ಇಳಿವಯಸ್ಸಿನಲ್ಲೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ತಾಲೂಕಿನ ಹೊಡಿಕೆ ಹೊಸಹಳ್ಳಿ ಗ್ರಾಮದಲ್ಲಿ ನಿಖಿಲ್ ಪರ ಮತಯಾಚನೆ ಮಾಡಿದ ಅವರು, ನಾನು ಕೊನೆಯುಸಿರು ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಪ್ಪಿಗೆ ಕೊಡಿಸಿಯೇ ತೀರುತ್ತೇನೆ ಎಂದು ವಾಗ್ದಾನ ನೀಡಿದರು.
ಮೇಕೆದಾಟು ಯೋಜನೆಯ ಅನುಷ್ಠಾನ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ ತಮಿಳುನಾಡಿನವರು ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಅವಧಿಯಲ್ಲಿ ಇಗ್ಗಲೂರು ಅಣೆಕಟ್ಟು ಕಟ್ಟಿದ್ದು ದೊಡ್ಡ ವಿಷಯವಲ್ಲ. ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುವುದು ದೊಡ್ಡ ವಿಷಯ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಮನವಿ ಮಾಡುತ್ತೇನೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಮೋದಿ ಅವರು ಹಲವು ಬಾರಿ ನನ್ನ ಮನವಿಗಳಿಗೆ ಸ್ಪಂದಿಸಿದ್ದಾರೆ ಎಂದರು.
ನಾನು ಬರೀ ಇಗ್ಗಲೂರು ಡ್ಯಾಂ ಅಷ್ಟೇ ನಿರ್ಮಿಸಿಲ್ಲ. ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು ಕಟ್ಟಿದವರು ಯಾರೆಂದು ವಿಚಾರಿಸಿ ಎಂದು ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.