ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯೇ ನಡೆಸದ ಬೆಳಗಾವಿ ಅಧಿವೇಶನ ಯಾಕೆ ಬೇಕು?

2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಸಲ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಆವರಣದಲ್ಲಿ ಅಧಿವೇಶನ ಮಾಡಲಾಗಿತ್ತು. 2012ರಿಂದ ಸತತವಾಗಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆದಿವೆ.

By :  Anil Basur
Update: 2024-12-08 11:37 GMT
ಬೆಳಗಾವಿ ಸುವರ್ಣಸೌಧ

ಯಾವ ಉದ್ದೇಶ ಇಟ್ಟುಕೊಂಡು ಸರ್ಕಾರ ಸುವರ್ಣಸೌಧವನ್ನು ಬೆಳಗಾವಿಯಲ್ಲಿ ಕಟ್ಟಲಾಗಿದೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ ಎಂದು ಬೆಳಗಾವಿಯ ಕನ್ನಪರ ಹೋರಾಟಗಾರ ಅಶೋಕ ಚಂದರಗಿ ಹೇಳಿದ್ದಾರೆ. ಸೋಮವಾರ (ಡಿಸೆಂಬರ್​ 9ರಂದು) ಬೆಳಗಾವಿ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯೇ ನಡೆಸದ ಈ ಅಧಿವೇಶನ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ. 



‘ದ ಫೆಡರಲ್ ಕರ್ನಾಟಕ‘ದ ಜೊತೆಗೆ ಮಾತನಾಡಿದ ಅವರು, ‘ಈವರೆಗೆ ಒಟ್ಟು 12 ಅಧಿವೇಶನಗಳು ಬೆಳಗಾವಿಯಲ್ಲಿ ನಡೆದಿವೆ. ಆದರೆ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಮಾತ್ರ ಚರ್ಚೆ ಆಗಬೇಕು ಎಂದು ನಾವು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಕೊಟ್ಟಿದ್ದೇವೆ,'' ಎಂದು ಹೇಳಿದ್ದಾರೆ.

ಸ್ಪೀಕರ್ ಮತ್ತು ಸಭಾಪತಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಭಾಗದ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಆದರೆ ಭಾನುವಾರ ಬೆಳಗಿನಿಂದ ಆಗುತ್ತಿರುವ ಬೆಳವಣಿಗೆಗಳೇ ಬೇರೆ ಕಾಣಿಸುತ್ತಿವೆ. ಮುಡಾ, ವಕ್ಫ್, ವಾಲ್ಮೀಕಿ ನಿಗಮ ಹಗರಣದ ಸಮಸ್ಯೆಗಳನ್ನು ಇಟ್ಟುಕೊಂಡು ಹೋರಾಟ ಮಾಡಲು ಬಿಜೆಪಿ ತೀರ್ಮಾನಿಸಿದೆ ಎಂಬ ಮಾಹಿತಿ ಬಂದಿದೆ. ಮೊದಲ 3 ದಿನಗಳ ಕಾಲ ಇದನ್ನೇ ಮಾಡಿ, ಮುಂದಿನ 2 ದಿನ ಕಾಟಾಚಾರಕ್ಕೆ ಎಂಬಂತೆ ಈ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಿ ಕಣ್ಣೊರೆಸುವ ತಂತ್ರ ಜನಪ್ರತಿನಿಧಿಗಳು ಮಾಡುತ್ತಾರೆ’ ಎಂದು ಅಶೋಕ್ ಚಂದರಗಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಭಾಗದ ಸಮಸ್ಯೆಗಳನ್ನು ಚರ್ಚೆ ಮಾಡಲು ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದಾರೆ. ಆದರೆ ಬೆಳಗಾವಿ ಪ್ರವಾಸಕ್ಕೆ ಬಂದಂತೆ ಆಡುತ್ತಾರೆ. ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ, ಗೋವಾ ಪ್ರವಾಸಕ್ಕೆ ಹೋಗುವುದಕ್ಕೆ ಮಹತ್ವವನ್ನು ಕೊಡುತ್ತಾರೆಯೇ ಹೊರತು ಸಮಸ್ಯೆಗಳನ್ನು ಚರ್ಚೆ ಮಾಡಲು ಅಲ್ಲ. ಈ ಸಲ ಸರ್ಕಾರವೇ ಹೇಳಿದಂತೆ 25 ಕೋಟಿ ರೂಪಾಯಿಗಳನ್ನು ಅಧಿವೇಶನಕ್ಕಾಗಿ ವ್ಯಯಿಸಲಾಗುತ್ತಿದೆ. ಖರ್ಚು ಮಾಡುವ ಹಣದಷ್ಟಾದರೂ ನಮ್ಮ ಭಾಗದ ಸಮಸ್ಯೆ ಕುರಿತು ಚರ್ಚೆ ಮಾಡಬೇಕು’ ಎಂದು ಚಂದರಗಿ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಇದು 13 ನೇ ಅಧಿವೇಶನ

ಬೆಳಗಾವಿಯಲ್ಲಿ ನಡೆಯುತ್ತಿರುವ 13ನೇ ಅಧಿವೇಶನ ಇದಾಗಿದೆ. ಡಿಸೆಂಬರ್​ 9 ರಿಂದ 19ರವರೆಗೆ 9 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಸಲ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಆವರಣದಲ್ಲಿ ಅಧಿವೇಶನ ಮಾಡಲಾಗಿತ್ತು. ನಂತರ 2012ರಲ್ಲಿ ಸುವರ್ಣಸೌಧ ಉದ್ಘಾಟನೆ ಆದ ಬಳಿಕ ಕೋವಿಡ್ ಕಾಲದಲ್ಲಿ ಹೊರತು ಪಡಿಸಿ ಸತತವಾಗಿ ಚಳಿಗಾಲದ ವಿಧಾನ ಮಂಡಲ ಅಧಿವೇಶನ ಬೆಳಗಾವಿಯಲ್ಲಿ ನಡೆದಿವೆ. ಆದರೆ ಇಲ್ಲಿನ ಭಾಗದ ಸಮಸ್ಯೆಗಳು ಮಾತ್ರ ಚರ್ಚೆ ಆಗುತ್ತಿಲ್ಲ. ಬರೀ ಬೆಂಗಳೂರಿನ ರಾಜಕೀಯ ಮೇಲಾಟವನ್ನು ಇಲ್ಲೂ ಮುಂದುವರಿಸುತ್ತಿದ್ದಾರೆ ಎಂಬುದು ಆ ಭಾಗದ ಜನರ ಅಭಿಪ್ರಾಯವಾಗಿದೆ.

ಸರ್ಕಾರದ ಮೇಲೆ ಭರವಸೆ ಇಟ್ಟಿವೆ 60 ಸಂಘಟನೆಗಳು

ತಮ್ಮ ಸಮಸ್ಯೆಗಳನ್ನು ಸರ್ಕಾರ ಈ ಸಲವಾದರೂ ಆಲಿಸಿ ಪರಿಹರಿಸುತ್ತದೆ ಎಂಬ ಭರವಸೆಯನ್ನಿಟ್ಟುಕೊಂಡು 60 ವಿವಿಧ ಸಂಘಟನೆಗಳು ಧರಣಿ ಸತ್ಯಾಗ್ರಹ ಮಾಡಲು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿವೆ. ಜೊತೆಗೆ ವಿವಿಧ 50 ಸಂಘಟನೆಗಳು ಸರ್ಕಾರಕ್ಕೆ ಮನವಿ ಕೊಡಲು ಅವಕಾಶ ಕೇಳಿವೆ. ಹೀಗಾಗಿ ಈ ಸಲ ಮತ್ತೆ ಹೋರಾಟಗಾರರ ಹೋರಾಟದ ಕಿಚ್ಚು ಜೋರಾಗುವ ಸಾಧ್ಯತೆಯಿದೆ.

ಹಿಂದಿಗಿಂತ ಈ ಸಲ ಅತಿಹೆಚ್ಚು ಪೊಲೀಸ್ ಭದ್ರತೆ

ಭದ್ರತೆ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ‘7 ಎಸ್ಪಿ ‌ದರ್ಜೆಯ ಅಧಿಕಾರಿಗಳು, 12 ಅಡಿಷನಲ್ ಎಸ್ಪಿಗಳು, 43 ಡಿವೈಎಸ್ಪಿ, 123 ಪೊಲೀಸ್ ಇನ್ಸ್ಪೆಕ್ಟರ್ಗಳು, 255 ಪಿಎಸ್ಐ, 3,515 ಪೊಲೀಸ್ ಕಾನ್‌ಸ್ಟೇಬಲ್, 200 ಮಹಿಳಾ ಪೊಲೀಸ್ ಸಿಬ್ಬಂದಿ, 53 ಕೆಎಸ್‌ಆರ್‌ಪಿ ತುಕಡಿಗಳು, 18 ಡಿಆರ್ ತುಕಡಿಗಳು, ಒಂದು ಗರುಡಾ, 300 ಬಾಡಿ ವಾರ್ನ್ ಕ್ಯಾಮರಾ ಸಿಬ್ಬಂದಿ ಸೇರಿದಂತೆ ಒಟ್ಟು ‌6023 ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದಿದ್ದಾರೆ.

ಹೋರಾಟ ಹತ್ತಿಕ್ಕಲು ಸರ್ಕಾರದ ಪ್ರಯತ್ನ?

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ‌ರಾಜ್ಯ ಸರ್ಕಾರ ಪೊಲೀಸ್ ಬಲ ಹೆಚ್ಚಿಸಿದೆ ಎಂಬ ಮಾಹಿತಿಯಿದೆ. ಪ್ರತಿಭಟನೆ ಹತ್ತಿಕ್ಕಲು ‌ಪೊಲೀಸ್ ಬಲ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮುಡಾ, ವಾಲ್ಮೀಕಿ, ವೈಫಲ್ಯಗಳ ವಿರುದ್ಧ ಸದನದೊಳಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆ ಮಾಡಲಿವೆ ಎಂಬ ಮಾಹಿತಿಯಿದೆ. ಜೊತೆಗೆ ಸದನದ ಹೊರಗೆ ಪಂಚಮಸಾಲಿ ಮೀಸಲಾತಿ, ಕಬ್ಬು ‌ಬೆಳಗಾರರು, ಪ್ರವಾಹ ಸಂತ್ರಸ್ತರ, ಆಶಾ ಕಾರ್ಯಕರ್ತೆಯರು, ರೈತ ಸಂಘಟನೆಗಳು, ವಕ್ಫ್​ ವಿರುದ್ಧ ಹಿಂದೂ ಸಂಘಟನೆಗಳು ಜೋರಾಗಿಯೇ ಪ್ರತಿಭಟನೆ ಮಾಡುವ ಸಾಧ್ಯತೆಗಳಿವೆ.

ಹೀಗಾಗಿಯೇ ಹಿಂದಿನ ಸಲಕ್ಕಿಂತ ಈ ಬಾರಿ ಅತಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕಳೆದ ಅಧಿವೇಶನಗಳ ಸಂದರ್ಭದಲ್ಲಿ ಭದ್ರತೆಗಾಗಿ ನಾಲ್ಕೂವರೆ ಸಾವಿರದಿಂದ ಐದು ಸಾವಿರ ಪೊಲೀಸರನ್ನು ‌ನಿಯುಕ್ತಿ ಮಾಡಲಾಗುತ್ತಿತ್ತು. 

Tags:    

Similar News