ಕೇಂದ್ರದಿಂದ 5.8 ಕೋಟಿ ಬಿಪಿಎಲ್ ಕಾರ್ಡ್ ರದ್ದತಿ: ಬಿಜೆಪಿ ಮೌನವೇಕೆ ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್
ಕೇಂದ್ರ ಸರ್ಕಾರವು ದೇಶದಾದ್ಯಂತ 5.80 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ ಬಗ್ಗೆ ಏಕೆ ಮಾತನಾಡುತ್ತಿಲ್ಲ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.;
'ರಾಜ್ಯ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಿದ ಬಗ್ಗೆ ಪ್ರಶ್ನಿಸುವ ಬಿಜೆಪಿಯವರು, ಕೇಂದ್ರ ಸರ್ಕಾರವು ದೇಶದಾದ್ಯಂತ 5.80 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ ಬಗ್ಗೆ ಏಕೆ ಮಾತನಾಡುತ್ತಿಲ್ಲ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೆಲವು ಕಡೆ ಶೇ 80ರಷ್ಟು ಇನ್ನು ಕೆಲವೆಡೆ ಶೇ 90ರಷ್ಟು ಮಂದಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ವೈಜ್ಞಾನಿಕವಾಗಿ ನೋಡಿದಾಗ ಅದು ಸಾಧ್ಯವಿಲ್ಲ. ಹಾಗಾಗಿ ಅನರ್ಹ ಕಾರ್ಡ್ ತೆಗೆದು ಹಾಕಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವಂತೆ ಮಾನದಂಡ ರೂಪಿಸಲಾಗಿದೆ. ಸಾವಿರಾರು ಅನರ್ಹ ಕಾರ್ಡ್‌ಗಳು ರದ್ದಾದಾಗ, ಅವುಗಳಲ್ಲಿ ಐದು- ಹತ್ತು ಕಾರ್ಡ್‌ಗಳು ತಪ್ಪಾಗಿ ರದ್ದಾಗಿರಬಹುದು. ವ್ಯವಸ್ಥೆಯನ್ನು ಸುಧಾರಣೆಗೆ ಒಳಪಡಿಸುವಾಗ ಆಗಿರುವ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ಸರ್ಕಾರದ್ದು. ಅರ್ಹರ ಕಾರ್ಡ್ ರದ್ದಾಗಿದ್ದರೆ, ಅಂತಹ ಕುಟುಂಬಗಳಿಗೆ ಮರಳಿ ಬಿಪಿಎಲ್ ಕಾರ್ಡ್ ಕೊಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸರ್ಕಾರದ ಸವಲತ್ತು ಅರ್ಹರಿಗೆ ಮಾತ್ರ ತಲುಪಬೇಕು. ತಪ್ಪನ್ನು ಸರಿಪಡಿಸಲೇ ಬಾರದು ಎಂಬುದು ಸರಿಯಲ್ಲ ಎಂದರು. '
ಗೃಹಲಕ್ಷ್ಮೀ ಅಡಿ ನೀಡುವ 2 ಸಾವಿರಕ್ಕೂ ಪಡಿತರಕ್ಕೂ ಸಂಬಂಧ ಇಲ್ಲ. ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳೆರಡಕ್ಕೂ ಈ ಸವಲತ್ತು ಸಿಗುತ್ತಿದೆ. ಆದರೂ ಗೃಹಲಕ್ಷ್ಮೀ ಯೋಜನೆಗೆ ಕಂಟಕ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದಾಯ ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮೀ ಯೋಜನೆ ರದ್ದುಪಡಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ. ವಿರೋಧ ಪಕ್ಷದವರ ಕುಮ್ಮಕ್ಕಿನಿಂದ ಗೊಂದಲ ಸೃಷ್ಟಿಸಲಾಗುತ್ತಿದೆ' ಎಂದರು.
ಉಪ ಚುನಾವಣೆಯ ಫಲಿತಾಂಶ ವಿಚಾರದ ಬಗ್ಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ಫಲಿತಾಂಶ ಗಂಭೀರವಾಗಿ ಪರಿಗಣಿಸುದಿಲ್ಲ. ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.